೧
ಅದೊಂದು ಕಾಲ
ಮಂಜುಗಡ್ಡೆಯಷ್ಟು ಬಿಗುವಾಗಿದ್ದ
ಒಳುಡುಪುಗಳಿಂದ ಇಣುಕುತ್ತಿದ್ದ
ಇರಿಯುವ ಈಟಿಯಂತಹಾ
ತೊಟ್ಟುಗಳು
ಸುಸ್ಪಷ್ಟ
ಸದಾ ಡವಗುಡುವ ಎದೆಗೆ
ಕಲಶವಿಟ್ಟಂತೆ
ಹರೆಯದ ಕನಸುಗಳಿಗೆ
ಈ ನೆಲದಲ್ಲಿ ಫಲಿಸುತ್ತೇವಲ್ಲ
ಎನ್ನುವ ಹೆಮ್ಮೆ
ಅಸಾಧ್ಯ ಹಂಬಲದ ಸಮುದ್ರವೊಂದರ
ವಿಶ್ವವನ್ನೇ ಗರ್ಭದಲ್ಲಿ ಧರಿಸಬೇಕೆನ್ನುವ
ಆಕಾಂಕ್ಷೆಯ ದೈತ್ಯ ಅಲೆಯೊಂದರ ಮುಂದೆ
ಪುಟ್ಟ ಭ್ರೂಣದಂತೆ ಉಂಡೆ ಸುತ್ತಿಕೊಡು
ಕೂತ ವಿಶ್ವದಂತೆ
ಕನಸುಗಳ ಮುಂದೆ ತಲೆ ಎತ್ತಿ
ಕಣ್ಮುಚ್ಚಿ ನಿರುಮ್ಮಳವಾಗಿ ಕೂತ
ಮೊಲೆಗಳು
ಇವನ ಒರಟು ಕೈಗಳಿಗೆ
ಅವನ್ನು ಒಪ್ಪಿಸಿ
ನಲುಗುವಾಗೆಲ್ಲಾ ಅದನ್ನು ಸುಖ
ಎಂದು ನಂಬುತ್ತಿರುವ ಅವನ ಬಗ್ಗೆ
ಕನಿಕರ ನಗು
ನೀನು ಹೀರುತ್ತಾ ಕಣ್ಮುಚ್ಚುವಾಗಲೆಲ್ಲಾ
ನನ್ನಲ್ಲಿ ತಾಯಿಯೊಬ್ಬಳು
ಕಣ್ತೆರೆದು ಕೂರುತ್ತಾಳೆ
ನಿನ್ನ ತಲೆಯ ತಬ್ಬಿ
ಕೂದಲೊಳಗೆ ಬೆರಳಾಡಿಸುವಾಗ
ಆ ತಾಯಿ ನಿನ್ನನ್ನು ಮಗುವಾಗಿಸುತ್ತಾಳೆ ಮತ್ತೆ
ನೀ ನನ್ನ ನಿತ್ಯದ ಕೂಸು
ಎಂದೆಲ್ಲಾ ಒಂದೇ ಉಸಿರಿಗೆ
ಅವನ ಕಿವಿಯೊಳಗೆ
ಉಸುರಬೇಕೆನಿಸುತ್ತದೆ
೨
ಕೂಸು ಹೊರಬಿದ್ದ ಕೂಡಲೇ
ಅವು ಒಸರತೊಡಗಿದ್ದವು
ಅರೆ ಇವು ನನ್ನ ಮೊಲೆಗಳೇ!
ಎಂದು ಬೆಚ್ಚಿಬಿದ್ದದ್ದು
ನೆನಪಾಗುತ್ತದೆ ನನಗೆ
ಮತ್ತೆ ಆ ಕೂಸು ಮಗುವಾಗಿ
ಪುಟ್ಟ ಮನುಷ್ಯನಾಗುವವರೆಗೂ
ಚೀಪುತ್ತಲೇ ಇದ್ದದ್ದೂ...
ವರ್ಷಗಳೇ ಕಳೆದರೂ
ಅವನ್ನು ಆಸೆಗಣ್ಣಿಂದ ನೋಡುತ್ತಾ
ರವಿಕೆಯೊಳಗೆ ಕೈಹಾಕುತ್ತಿದ್ದದ್ದು
ಎಲ್ಲ ನೆನಪಾಗುತ್ತದೆ
ತುಟಿಯಂಚಿನ ನಗೆ
ಹಿಂಪುಟಗಳ ಹಿಂಬಾಲಿಸುತ್ತದೆ
ಈಗಂತೂ ಎರೆಡು ಮಕ್ಕಳ
ತಾಯಿ ಮೊಲೆ
ಕರ್ತವ್ಯ ಪೂರೈಸಿದ
ನೆಮ್ಮದಿಯಿಂದ
ಜೋತು ಬಿದ್ದಿವೆ
ಮೊಲೆತೊಟ್ಟುಗಳೂ
ಉಪ್ಪು ಬೆರೆಸಿಟ್ಟ
ಮಾವಿನ ಮಿಡಿ
ಅವಿರುವುದೇ ಹಾಗೆ
ಮೊದಲ ನೋಟಕ್ಕೆ ಆಕರ್ಷಿಸುತ್ತವೆ
ನಂತರ ಟೊಂಕ ಕಟ್ಟಿ ನಿಲ್ಲುತ್ತವೆ
ಮತ್ತು ಕರ್ತವ್ಯ ಪೂರೈಸಿಯೇ
ವಿರಮಿಸುತ್ತವೆ
೩
ಮೊನ್ನೆ ಹರೆಯದ ಹುಡುಗಿಯ
ಶಿಕ್ಷಕಿಯೊಬ್ಬಳು
ವಿದ್ಯಾರ್ಥಿನಿಯ ಮರೆಯಿಲ್ಲದ
ಎದೆಯನ್ನು ನೋಡಲಾಗದೆ
ಬಿಗಿ ಉಡುಪು ಧರಿಸಬೇಡ
ಎಂದಳು
ಅವಳ ತಾಯಿಯನ್ನೂ ಕರೆಸಿ
ಬುದ್ಧಿ ಹೇಳಿಸಿದಳು
ಮತ್ತೆ ಆ ತಾಯಿಯೂ
ಅದೇ ಮಾತನ್ನು
ಅನುಮೋದಿಸಿದಳು
ಒಂದು ವೇಳೆ ಇದನ್ನೆಲ್ಲ
ಸಾರ್ವಜನಿಕ ಸಭೆಯಲ್ಲಿ
ಪಿಸುಗುಟ್ಟಿದ್ದರೂ
ಆ ಹರೆಯದ ಹುಡುಗಿಗೆ
ಹಿಗ್ಗಾಮುಗ್ಗಾ ಬೈದು
ಜುಲ್ಮಾನೆ ವಿಧಿಸಿ
ಅವಳಂತಹ ಉಡುಪನ್ನು
ಮತ್ತೆಂದೂ ಕಣ್ಣೆತ್ತಿ ನೋಡದಂತೆ
ನಿರ್ಭಂಧಿಸುತ್ತಿದ್ದರು!!
ಅವರು
ಬೆಳದು ಬಂದ ದಾರಿಯನ್ನು
ವಿಪರೀತ ನಂಬುವ ಅವರು...
ಆದರೆ ಆ ಹುಡುಗಿ
ತನ್ನ ಇಷ್ಟದ ಉಡುಪನ್ನು
ಲಾಕರಿನಲ್ಲಿಟ್ಟು
ಉಡುವ ದಿನಕ್ಕಾಗಿ
ವರ್ಷಗಳ
ಉರುಳಿಸತೊಡಗಿದಳು
ಮುಂದೆಂದಾದರೂ
ಹಿಂದಿನ ದಾರಿಯನ್ನು ನೋಡುವ
ಪ್ರಮೇಯವೇ ಇಲ್ಲದ
ಮುಂದಿನ ದಾರಿಯೊಂದು
ತೆರೆದುಕೊಳ್ಳಬಹುದು!
೪
ಇವನ್ನು ಸದಾ ಎದೆ ಮೇಲೆ ಹೊತ್ತು
ತಿರುಗುವಾಗೆಲ್ಲಾ
ಎಂಥದೋ ಅಂಜಿಕೆಯಿಂದ
ದುಪಟ್ಟಾವನ್ನೋ
ಬಣ್ಣ ಬಣ್ಣದ ವೇಲು ಸ್ಟೋಲುಗಳನ್ನೋ
ಮೈಯನ್ನಪ್ಪಿ ಎದೆ ಉಬ್ಬಗಳ
ಮರೆ ಮಾಡುವ ಶ್ರಗ್ಗುಗಳನ್ನೋ
ಏರಿಸಿಕೊಂಡದ್ದು...
ಮುಂಬದಿ ಸೆರಗು
ಹಿಂಬದಿ ಸೆರಗು
ತಲೆ ಮೇಲಿಂದ ಇಳಿದ ಸೆರಗು
ಬೆನ್ನನ್ನೂ ಮುಚ್ಚಿ
ಭುಜದಿಂದಿಳಿದ ಸೆರಗು
ಹೀಗೆ ನಾನಾ ನಮೂನಿಯವು
ಮರೆ ಮಾಡಲು...
ಆದರೂ ಅವು ಕಾಣಿಸಿಕೊಳ್ಳುವುದನ್ನು
ಬಿಡಲಿಲ್ಲ
ಮತ್ತೆ ನಮ್ಮ ಪ್ರಯತ್ನಗಳಿಗೆ
ಸೋಲು
ಕಲಿಯಬೇಕು ನಾವು
ಎದೆಯುಬ್ಬಿಸಿ ನಡೆಯುವುದನ್ನು
ಇದೇ ನಾವು ಎಂದು
ತೋರಿಸಿಕೊಳ್ಳುವುದನ್ನೂ
ಅಷ್ಟಕ್ಕೂ ಮೊಲೆಗಳಿಲ್ಲದೆ
ಹೆಣ್ಣೊಬ್ಬಳನ್ನು ಕಲ್ಪಿಸಿಕೊಳ್ಳುವುದು
ಯಾರಿಂದ ಸಾಧ್ಯ
ಕಲೆ : ಡಿ. ಎಸ್. ಚೌಗಲೆ
ಆಶಾ ಜಗದೀಶ್
ಕವಯತ್ರಿ ಆಶಾ ಜಗದೀಶ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಲವಾರು ಕತೆ, ಲೇಖನ, ಕವಿತೆ, ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ಮೌನ ತಂಬೂರಿ’ ಅವರ ಚೊಚ್ಚಲ ಕವನ ಸಂಕಲನ.
More About Author