Poem

ಎಡ-ಬಲ ಮೀಮಾಂಸೆ

ಬಿಸಿನೀರ ಸುಡು
ಹೊಗೆ ಧಗೆ
ಎಡದಿಂದ
ನಲ್ಲಿಯಲ್ಲಿ
ಹೊಟೇಲಿನ ಹುಡುಗ
ನಸುನಗುತ್ತ ತೋರಿದ

ತಣ್ಣೀರಿನಂತಿದ್ದರೂ
ಒಳಗೇ ಬಿಸಿಯ
ಹೊಗೆಯಡಗಿಸಿದ
ನಲ್ಲಿಯಂತಿತ್ತು
ಅವನ ಮೊಗ

ಅದೇಕೆ ಎಡಕ್ಕೇ ಬಿಸಿ
ಬಲಕ್ಕೇ ತಂಪು?
ಅದೇನೋ ಗೊತ್ತಿಲ್ಲ
ಮನುಷ್ಯನ ನಿಯಮ
ಅದಲು ಬದಲಾಗುವುದು
ಒಮ್ಮೊಮ್ಮೆ
ತಪ್ಪಿದಾಗ ನಮ್ಮ ತಂತ್ರದ
ಗಣನೆ

ಎಡವೇ ಯಾಕೆ
ಕುದಿಯುತ್ತಿರಬೇಕು?
ಬಲವೆಂದರೆ ಬರಿ ತಣ್ಣಗೆ
ಹೊಟ್ಟೆ ತುಂಬಿದವರ
ಹಾಗೆ

ನೀನು ಎಡವೋ ಬಲವೋ
ಎನಲು
ಅರ್ಥವಾಗದವನಂತೆ
ನೋಡಿದ
ಮತ್ತೆ ನುಡಿದ
ನಸುನಗುತ್ತಾ
ಎಲ್ಲವೂ ಎಡದಿಂದಲೇ
ಅಲ್ಲವೇ
ಎಲ್ಲರ ಹೃದಯಗಳೂ
ಎಡದಲ್ಲಿವೆ ಬಲದಲ್ಲಲ್ಲ.

ನೋವಾಗಲು
ಬಲ ದವಡೆ
ಎಡದಲ್ಲಿ ಅಗಿಯುತ್ತೇವೆ
ಎಡ ನೋಯಲು
ಬಲದಲ್ಲಿ
ಒಮ್ಮೆ ಎಡಕ್ಕೆ, ಒಮ್ಮೆ ಬಲಕ್ಕೆ
ತಳ್ಳುವ
ನಾಲಿಗೆಯ ಚಮತ್ಕಾರ

ನಲ್ಲಿಯೂ ಹಾಗೆ
ಎಡ ಬಲಗಳಲ್ಲಿ
ಕೆಂಡ ಮಂಜುಗಳನ್ನು
ಅಡಗಿಸಿಟ್ಟಿರುತ್ತದೆ
ಬೇಕೆಂದವರಿಗೆ
ಬೇಕಾದ್ದನ್ನು ಸುರಿಯುತ್ತದೆ
ನೀಚ ನಾಲಿಗೆಯ ಹಾಗೆ

ಎರಡನ್ನೂ ಒಟ್ಟಿಗೇ
ತಿರುಗಿಸಿದರೆ
ಹೇಗೆ?
ಹುಡುಗ ತುಸುವೇ
ನಕ್ಕು ನುಡಿದ
ಹಿತವಾಗಿರುತ್ತದೆ ಸರ್
ಬದುಕಬೇಕಾದುದೇ ಹಾಗೆ.

- ಎಚ್.ಎಸ್. ಸತ್ಯನಾರಾಯಣ

ಎಚ್.ಎಸ್. ಸತ್ಯನಾರಾಯಣ

ಕನ್ನಡ ಪ್ರಾಧ್ಯಾಪಕರು ಹಾಗೂ ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತ್ಯನಾರಾಯಣ ಅವರು ಅನೇಕ ಸಾಹಿತಿಗಳೊಂದಿಗೆ ಒಡನಾಡಿದ್ದಾರೆ. ಆ ಬಗ್ಗೆ ಅತ್ಯಂತ ಆಕರ್ಷಕವಾಗಿ ಮಾತನಾಡುವ ಅವರು ಅಷ್ಟೇ ಆಕರ್ಷಕವಾಗಿ ಬರೆಯುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’, ಜೊತೆಗೆ ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ಸಂಪದ’ವನ್ನು ಸಂಪಾದಿಸಿದ್ದಾರೆ. ಕುವೆಂಪು ಕುರಿತು ಅವರು ಅಲ್ಲಲ್ಲಿ ಮಾಡಿದ ಭಾಷಣಗಳಿಗೆ ಬರಹ ರೂಪ ನೀಡಿ ‘ಕುವೆಂಪು- ಅಲಕ್ಷಿತರೆದೆಯ ದೀಪ’ ಹಾಗೂ ಕವಿಸಮಯ-ಅಂಕಣ ಬರಹಗಳ ಸಂಕಲನ ‘ಅಪೂರ್ವ ಒಡನಾಟ’ ಪ್ರಕಟಗೊಂಡಿವೆ.

ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ

 

More About Author