ಒಂದು ಚೂರು ರೊಟ್ಟಿಗಾಗಿ
ಊರ ಮರವ ತೊರೆದು
ವಲಸೆ ಬಂದ ಹಕ್ಕಿಗಳಿಗೆ
ಇಂದು ಮರಳಿ ಗೂಡು ಸೇರುವ ದಾರಿ ಕಾಣಿಸುತಿಲ್ಲ
ಹಿಡಿ ಕಾಳು ಕಡಿ ನಂಬಿ ಬಂದ ಪಕ್ಷಿಗಳಿಂದು
ನಡುಬೀದಿಯ ಬಯಲಲ್ಲಿ ಬಂಧಿಯಾಗಿವೆ
ರೆಕ್ಕೆಯ ಮೇಲೆ ಮರಿಗಳ ಹೊತ್ತು ಹಾರಿ ಹೊರಡೋಣವೆಂದರೆ
ಗಡಿಗಡಿಗಳ ತುಂಬಾ ಗೋಡೆಗಳೆದ್ದಿವೆ
ನೆಲಮನೆಯಿಂದ ಮುಗಿಲೆತ್ತರದ ಮಹಡಿಗಳ
ರಟ್ಟೆಯಿಂದಲೇ ಕಟ್ಟಿದ ಹಕ್ಕಿಗಳನು
ಕಾನೂನು ಮುರಿದರೆಂದು ಕೈಕಾಲು ಮುರಿದು
ಹಡೆಮುರಿಗೆ ಕಟ್ಟಿ ರಸ್ತೆಗೆ ಎಸೆಯಲಾಗಿದೆ
ಸಂವಿಧಾನದ ಅನುಷ್ಠಾನವೆಂದರೆ ಈಗೀಗ ಹೀಗೆಯೇ
ಬೊಗಸೆ ಕಾಳು ತಿಂದು ಬಂದ ಬಾಹುಬಲದಿಂದ
ಟನ್ನುಗಟ್ಟಲೆ ಸುಟ್ಟ ಇಟ್ಟಂಗಿಗಳ
ಹೊತ್ತು ಹಾರಿ
ಗಗನ ಚುಂಬಿ ಕಟ್ಟಡಗಳ ಕಟ್ಟಿದ ಹಕ್ಕಿಗಳನು
ಇಂದು ನಗರ ಪಂಜರದಾಚೆ
ಹಾರಲು ಬಿಡುತಿಲ್ಲ
ಟನ್ನುಗಟ್ಟಲೆ ಇಲಿ ಹೆಗ್ಗಣ ತಿಂದ
ಮುಗ್ಗಸು ಅಕ್ಕಿಗಳ ಮೂಟೆ ಮುಂದಿಟ್ಟು
ಎಷ್ಟು ಬೇಕಾದರೂ ತಿನ್ನಿ ನಗರಕ್ಕೆ ಜೈ ಎನ್ನಿ
ಎಂದವರ ಉಪಕಾರ
ಹೇಗೆ ತೀರಿಸುವುದು ತಿಳಿಯುತಿಲ್ಲ
ಹಿಂದಕ್ಕೋ ಮುಂದಕ್ಕೋ ಪಯಣ ಜಾರಿಯಲ್ಲಿದೆ
ಹಾದಿಯುದ್ದಕೂ ಬಿದ್ದಿರುವ
ಹಸಿವಿನ ಬೀಜಗಳ ಒಂದೊಂದಾಗಿ ಆಯ್ದು
ಮರಿಗಳಿಗೆ ತುತ್ತು ಮಾಡಿ ತಿನ್ನಿಸುವ ತಾಯಿ ಹಕ್ಕಿಗಳು
ಹರಿದ ಆಕಾಶದಲ್ಲಿ
ಚೂರು ಚೂರಾದ ಚಂದಿರನ ತೋರಿಸಿ
ಕಣ್ಣೀರು ಕರಗಿಸುವ ಲಾಲಿಹಾಡು ಹುಡುಕುತ್ತಿವೆ
ಸುತ್ತಮುತ್ತಲೂ ಬಂದೂಕು ಲಾಟಿ ಬಿಲ್ಲುಗಳು
ಒಟ್ಟಿಗೆ ಸೇರಿ ಬೇಟೆಯಾಡಲು ಮಾತನಾಡಿಕೊಳ್ಳುತ್ತಿವೆ
ಮತ್ತೆ ಹೇಳುತ್ತಿವೆ
ಕಾನೂನು ನಿಮ್ಮನ್ನು ರಕ್ಷಿಸುತ್ತದೆ
ನಮ್ಮುದ್ಧಾರಕೆ
ಜನ್ಮವೆತ್ತಿ ಬಂದ ಅವತಾರ ಪುರುಷರು ನೀವು
ನಿಮ್ಮ ನೆತ್ತಿಯನೆಂದೂ ಕುಕ್ಕುವುದಿಲ್ಲ ನಾವು
ಕೊಕ್ಕು ಮಾತ್ರ ಮುರಿಯಬೇಡಿ
ಹಾರುವುದನೆ ಮರೆತಿವೆ ರೆಕ್ಕೆ
ಬೆಂಕಿ ಹಚ್ಚಬೇಡಿ
ಇನ್ನುಮುಂದೆ
ನಿಮ್ಮ ಘನಚರಿತೆಯ ಹಾಡುಕಟ್ಟಿ ಹಾಡಲಾರೆವು ನಾವು
ಕುತ್ತಿಗೆಗೆ ಕುಣಿಕೆ ಹಾಕಬೇಡಿ
ಒಂದು ಹಿಡಿ ಕಾಳಿಗಾಗಿ
ವಲಸೆ ಬಂದ ಹಕ್ಕಿಗಳು ನಾವು
ಒಂದೇ ಒಂದು ಸಾರಿ ಊರ ಮಾರಿ
ನೋಡಿ ಬರುತ್ತೇವೆ ದಯಮಾಡಿ ಕರುಣೆ ತೋರಿ
ಇಲ್ಲವೇ
ನೀವೇ ಕಟ್ಟಿದ ಅರಗಿನ ಪಂಜರದೊಳಗೆ
ನಾವೇ ಒಟ್ಟಿಗೆ ಹೋಗುತ್ತೇವೆ
ತಡಮಾಡದೆ ಸುಟ್ಟುಬಿಡಿ
ದಯವಿಟ್ಟು ಗಮನಿಸಿ :
ಮಾನವ ಹಕ್ಕುಗಳ ಕಾನೂನು ವಲಸೆ ಬಂದ ಹಕ್ಕಿಗಳಿಗೆ
ಅನ್ವಯಿಸುವುದಿಲ್ಲ.
ಆಡಿಯೋ
ವಿಡಿಯೋ
ವೀರಣ್ಣ ಮಡಿವಾಳರ
ವೀರಣ್ಣ ಮಡಿವಾಳ ಅವರು ಸೆಪ್ಟೆಂಬರ್ 01, 1983ರಂದು ಜನಿಸಿದರು. ಕಲಿವಾಳ, ಕಲಕೇರಿ, ಸಿರಿಗೆರೆ, ಮುಂಡರಗಿ, ಕೊಪ್ಪಳ ಮತ್ತು ಗುಲ್ಬರ್ಗದಲ್ಲಿ ವಿದ್ಯಾಭ್ಯಾಸ. 2007 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಪ್ಲಾಟ್ ನಲ್ಲಿ ಸೇವೆ ಆರಂಭ. ಸದ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಾವಡ್ಯಾನವಾಡಿಯಲ್ಲಿ ವೃತ್ತಿ. ಗುಲ್ಬರ್ಗಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2010ರಲ್ಲಿ 'ನೆಲದ ಕರುಣೆಯ ದನಿ' ಕವನ ಸಂಕಲನ ಮತ್ತು ಆಡಿಯೋ ಬುಕ್ ಪ್ರಕಟವಾಗಿದೆ. ಚಿತ್ರ ಮತ್ತು ಫೊಟೋಗ್ರಫಿಯಲ್ಲೂ ಕವಿತೆಯನ್ನೇ ಹುಡುಕುತ್ತಿರುವ ವೀರಣ್ಣ 2013 ರಲ್ಲಿ ಗುಲ್ಬರ್ಗದಲ್ಲಿ ಸಾಂಗ್ಸ್ ಆಫ್ ಸೈಲೆನ್ಸ್ ಎಂಬ ಛಾಯಾಚಿತ್ರ ಪ್ರದರ್ಶನ ನಡೆಸಿದ್ದಾರೆ.
ಕನ್ನಡದ ಚೊಚ್ಚಲ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ , ಬೇಂದ್ರೆ ಗ್ರಂಥ ಬಹುಮಾನ, ಇಂಚಲ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಅರಳು ಪ್ರಶಸ್ತಿ, ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಮತ್ತು ಕಾವ್ಯಸ್ಪರ್ಧೆಗಳಿಂದ ಪುರಸ್ಕೃತರಾಗಿರುವ ವೀರಣ್ಣರ ಕವಿತೆ ಇತರ ಭಾಷೆಗಳಿಗೆ ಅನುವಾದಗೊಂಡಿವೆ ಮತ್ತು ಪಠ್ಯದಲ್ಲಿ ಸೇರಿವೆ.