ಏನು ಉಡುಗೊರೆ ಕೊಡಲಿ
ನಿನ್ನ ಹುಟ್ಟಿದ ದಿನಕೆ
ಕೇಳುತ್ತಾನೆ ಹುಬ್ಬು ಹಾರಿಸುತ್ತ
ತುಳುಕಿಸುತ್ತ ಕಣ್ಣಲ್ಲಿ ತುಂಟತನ
ಪ್ರತಿ ವರ್ಷದಂತೆ
ಈ ವರ್ಷವೂ
ನಾನೂ ಮಾತನಾಡದೇ
ಸುಮ್ಮನೆ ಮುಗುಳ್ನಗುತ್ತೇನೆ ಯಾವತ್ತಿನಂತೆ
ಇದು ವರ್ಷ ವರ್ಷವೂ ನಡೆಯುವ
ಮಾಮೂಲಿ ಮಾತುಕತೆ
ಮದುವೆಯಾದ ವರುಷಕ್ಕೆ
ನಾನು ಹುಟ್ಟಿದ ದಿನವೇ ಜನಿಸಿದ
ಮಗನನ್ನು ಕಾಲಮೇಲೆ ಕುಳ್ಳಿರಿಸಿ
ಜೀವನಪೂರ್ತಿ ನೆನಪಿಡುವಂತಹ
ಬಹುಮೌಲ್ಯದ ಉಡುಗೊರೆ ಸಾಕಾಗದೇ
ಅವನ ಕಣ್ಣಲ್ಲಿ ಹೆಮ್ಮೆ ಸಮಾಧಾನ
ನಾನು ಅವನ ಮಾತಿಗೆ
ಗಮನ ಕೊಡದಂತೆ
ಮಗನ ಕೆನ್ನೆಗೆ ಮುತ್ತಿಡುತ್ತ
ಗಮನಿಸುತ್ತೇನೆ ಓರೆಗಣ್ಣಲ್ಲಿ
ತನ್ನ ಕೆನ್ನೆಯೇ ಹಸಿಯಾದಂತೆ
ಗಡ್ಡದ ಮೇಲೆ
ಮೆಲ್ಲಗೆ ಕೈಯ್ಯಾಡಿಸುವ
ರೀತಿಗೆ ನಾನೂ ಮೈಮರೆಯುತ್ತೇನೆ
ಅಪ್ಪ ಸುಮ್ಮಸುಮ್ಮನೆ
ಕೆನ್ನೆ ಒರೆಸಿಕೊಳ್ಳುವ ಪರಿಗೆ
ಎದೆಯೆತ್ತರಕ್ಕೆ ಬೆಳೆದ ಮಗನೂ
ಈಗೀಗ ಮುಸಿನಗುವಾಗ
ಇಬ್ಬರ ಕಣ್ಣಲ್ಲೂ ಹೊಳಪು
ಈಗ ಮಗ ನನಗಿಂತ ಮೊಳ ಎತ್ತರ
ಕಾಲ ಮೇಲೆ ಕುಳಿತು ಕೊಳ್ಳುವ ಬದಲು
ಹಿಂಬದಿಯಿಂದ ಹೆಗಲು ಬಳಸಿದ್ದಾನೆ
ಈತ ಮತ್ತದೇ ಪ್ರಶ್ನೆಯನ್ನಿಟ್ಟು
ಕಣ್ಣಲ್ಲೇ ಕಚಗುಳಿಯಿಡುವಂತೆ
ಹುಟ್ಟಿದ ದಿನಕೆ
ಉಡುಗೊರೆ ತರುವ ಮಾತನಾಡುತ್ತಿದ್ದಾನೆ
ತಬ್ಬಿದ ಮಗನೀಗ
ನನ್ನ ಕೆನ್ನೆಯ ತುಂಬ ಮುತ್ತಿಟ್ಟಿದ್ದಾನೆ
ನಾನು ಹೆಮ್ಮೆಯಿಂದ
ಅವನ ಮುಖ ನಿರೂಕಿಸಿದ್ದೇನೆ
ಕೆನ್ನೆ ಒರೆಸಿ ಕೊಳ್ಳಲು ಕೈ ಎತ್ತಿದವನು
ಮಗನ ಮುಖದೆದುರು ಕೆನ್ನೆ ಚಾಚಿದ್ದಾನೆ
ಅದೇ ಮುಸಿ ನಗೆಯಲ್ಲಿ
ಮಗ ಕೆನ್ನೆಗಿತ್ತ ಮುತ್ತನ್ನು
ಜೀವಮಾನದ ಶ್ರೇಷ್ಠ ಉಡುಗೊರೆಯೆಂಬಂತೆ ಸ್ವೀಕರಿಸಿ
ಎದೆಗೊತ್ತಿಕೊಂಡಿದ್ದಾನೆ ತನ್ಮಯತೆಯಲ್ಲಿ
ಮಾಮೂಲಿನಂತೆ ಈ ವರ್ಷವೂ
ನನ್ನ ಹುಟ್ಟಿದ ದಿನದ ಉಡುಗೊರೆ
ಮುಂದೂಡಲ್ಪಟ್ಟಿದೆ ಮುಂದಿನ ವರ್ಷಕ್ಕೆ
ಚಿತ್ರ: ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಶ್ರೀದೇವಿ ಕೆರೆಮನೆ
ಉತ್ತರ ಕನ್ನಡ ಜಿಲ್ಲೆ ಹಿರೇಗುತ್ತಿ ಮೂಲದ ಶ್ರೀದೇವಿ ಕೆರೆಮನೆ ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ. ಮೊದಲ ಕವನ ಸಂಕಲನ ’ನಾನು ಗೆಲ್ಲುತ್ತೇನೆ’. ಬಳಿಕ ’ಗೆಜ್ಜೆ ಕಟ್ಟದ ಕಾಲಲ್ಲಿ’,’ಮೌನದ ಮಹಾ ಕೋಟೆಯೊಳಗೆ’, ’ಮೈ ಮುಚ್ಚಲೊಂದು ತುಮಡು ಬಟ್ಟೆ’, ಕೃತಿಗಳು ಬಂದವು. ಅಂಗೈಯೊಳಗಿನ ಬೆಳಕು(ವಿಮರ್ಶಾ ಸಂಕಲನ), ’ಅಲೆಯೊಳಗಿನ ಮೌನ’, ’ನನ್ನ ದನಿಗೆ ನಿನ್ನ ದನಿಯು’ ಗಜಲ್ ಕೃತಿ. ’ಬೈಟೂ’ ಚಹಾ ಕುರಿತ ಸಂಕಲನವಾದರೆ ಬಿಕ್ಕೆಹಣ್ಣು, ಚಿತ್ತ ಚಿತ್ತಾರ ಅವರ ಕತೆಗಳ ಗುಚ್ಛ. ಗೂಡು ಕಟ್ಟುವ ಸಂಭ್ರಮದಲ್ಲಿ (ಪ್ರಬಂಧ ಬರಹ ಸಂಕಲನ).
’ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ ಈಚೆ, ಉರಿವ ಉಡಿ, ಮನದಾಳದ ಮಾತು, ವರ್ತಮಾನದ ಉಯ್ಯಾಲೆ ಇವು ಅಂಕಣ ಬರಹದ ಸಂಗ್ರಹಗಳು.
ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ, ಶ್ರೀಗಂಧ ಹಾರ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ಬೇಂದ್ರೆ ಗ್ರಂಥ ಪುರಸ್ಕಾರ, 2020ನೇ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ, ಸಾರಾ ಅಬೂಬ್ಕರ ಪ್ರಶಸ್ತಿ , ಸುಮನಾ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ , ದೇವಾಂಗನಾ ಶಾಸ್ತ್ರಿ ಕಥಾ ಪ್ರಶಸ್ತಿ , ಅಂತರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ -2021, ಹೇಮರಾಜ ದತ್ತಿ ಪ್ರಶಸ್ತಿ, ಕ್ರೈಸ್ತ ಕಾಲೇಜು ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಅವರಿಗೆ ಇದುವರೆಗೆ ಸಂದ ಗೌರವಗಳು.
More About Author