Poem

ತೆವಲು

ಮುಟ್ಟಿನ ಮುದ್ದೆಯಿಂದೆದ್ದ
ಪುರುಷನ ಶಿಶ್ನದಲ್ಲಿ ಶಿಷ್ಟತೆ ಇದೆಯೇ?

ಜೊಲ್ಲು ಸುರಿಸುವ ಬೀದಿ ನಾಯಿಗಳು
ತೀಟೆ ತೀರಿಸಿಕೊಳ್ಳುವ ಇರಾದೆಯಿಟ್ಟು
ಆಸೆಯ ಅಮಲಿನಲಿ ಉಂಡಿದ್ದು

ಎದೆಯುಬ್ಬಿಸಿ ನಡೆಯುವಾಗ
ಕುಪ್ಪಸದೊಳಗಿನ ಮೊಲೆಗಳು ಕಣ್ಣ ಕುಕ್ಕುತ್ತಿವೆಯೇ ?
ಹಾಲುಣಿಸಿದ ತುಟಿಯಿನ್ನು ಒಣಗಿಲ್ಲ ಆಗಲೇ ಹೊಸಕಿ ಹಾಕುವ ಹೊಂಚು

ಸ್ಯಾನಿಟರಿಯಲಿ ಸುರಿವ ರಕ್ತ ಅಸಹ್ಯವೆಂದರೆ ಹೇಗೆ?
ಹುಟ್ಟಿಸಿದವಳನೇ ಬೇನೆಯಲಿ ಬೇಯಿಸುತ್ತಿರುವ ನಾಮರ್ದರೇ ಯೋಚಿಸಿ ನೋಡಿ
ನಿಮ್ಮದೇ ಹುಟ್ಟಿನ ಗುಟ್ಟಿರುವ ಯೋನಿಯನು ಮುಟ್ಟುವ ಮರ್ಯಾದಸ್ಥರು

ಅವಿತಿರುವ ಭವಿಷ್ಯವೊಂದಕ್ಕೆ ಗರ್ಭಪಾತ ಮಾಡಿಸಿದ್ದು
ಮಾತು ಬಾರದ ಗೋಡೆಗೆ ಮಾತ್ರ ಗೊತ್ತು

ಹಾಸಿಗೆ ಹಂಚಿಕೊಂಡ ನೋವಿಗೆ ಹೆಗಲಾಗದ ಹೆಗ್ಗಣಗಳು ಮರ್ಮಾಂಗಗಳನ್ನ ಮುಟ್ಟಿ ನೋಡಿಕೊಂಡಿವೆ
ಹುಟ್ಟಿದ್ದು ಯಾರಿಂದೆಂದು ?

ತೆವಲಿಗೆ ಹುಟ್ಟಿ ನನ್ನನ್ನೇ ಗುಲಾಮಗಿರಿಗೆ ತಳ್ಳಿದವರು
ಅರ್ಥವಾಗದೇ ಅನುಭವಿಸಿದ
ನೋವನು ಕಾಮವೆಂದು ಮಾರಾಟಕ್ಕಿಡಬೇಡಿ.

- ಕವಿತಾ ಸಾಲಿಮಠ

ಕವಿತಾ ಸಾಲಿಮಠ

ಕವಿತಾ ಸಾಲಿಮಠ ಮೂಲತಃ ಬಾಗಕೋಟೆ ಜಿಲ್ಲೆಯವರು. 1983ರಲ್ಲಿ ಜನಿಸಿದ ಕವಿತಾ ಸದ್ಯ ಬಾಗಲಕೋಟೆಯಲ್ಲಿಯೇ ವಾಸವಾಗಿದ್ದಾರೆ. ಓದುವುದು, ಬರೆಯುವುದು, ಸಿನಿಮಾ ನೋಡುವುದು, ಕವನ, ಗಜಲ್ ವಾಚನ ಮಾಡುವುದನ್ನು ತಮ್ಮ ಹವ್ಯಾಸ ಮಾಡಿಕೊಂಡಿರುವ ಅವರ ಮೊದಲ ಕೃತಿ 'ದರ್ದಿಗೆ ದಾಖಲೆಗಳಿಲ್ಲ' ಮನ್ವಂತರ ಪ್ರಕಾಶನದಿಂದ ಪ್ರಕಟಗೊಂಡಿದೆ.

More About Author