ನಿನ್ನ ಉಸಿರೊಳಗೆ ಬೆರೆತು ಹೋಗಿದೆ ಮೋಸ
ಮೈಯ್ಯ ಕಣಕಣದಲ್ಲೂ ತುಂಬಿಕೊಂಡಿದೆ ಮೋಸ
ಹೀಗೆ ಬಂದು ಹಾಗೆ ಹೋಗುವ ನಿಲ್ದಾಣದಂತಾಗಿಸಿದೆ
ನಿನ್ನ ವಿಷಭರಿತ ತುಟಿಯಂಚಲಿ ನಗುತ್ತಿದೆ ಮೋಸ
ಸುರೆಯೇನೂ ಅಗ್ಗವಲ್ಲ ಮೊಗೆಮೊಗೆದುಕುಡಿಯಲು
ನಿನ್ನ ಕೆಂಪಡರಿದ ಕಣ್ಣೊಳಗೆ ನಶೆಯೇರಿದೆ ಮೋಸ
ದೇಹದ ಉಬ್ಬು ತಗ್ಗಿಗೆ ಹಾತೊರೆಯುವುದಷ್ಟೇ ಗಂಡಸುತನವಲ್ಲ
ಮೈ ಸವರಿದ ಕೈಯೊಳಗೆ ಮಂಜಂತೆ ಹೆಪ್ಪುಗಟ್ಟಿದೆ ಮೋಸ
ನಾನು ಇದ್ದರೆಷ್ಟು ಹೋದರೆಷ್ಟು ನಿನಗೇನೂ ಅನ್ನಿಸುವುದಿಲ್ಲ
ನಿನ್ನ ಮನದ ಎಳೆಎಳೆಯೊಳಗೂ ಆವರಿಸಿದೆ ಮೋಸ
ಮುಸ್ಸಂಜೆಯ ಕಡಲ ಒಡಲೂ ಕೆಂಪಾಗಿ ನಲುಗುತ್ತಿದೆ
ನಿನ್ನ ರಕ್ತದ ಪ್ರತಿ ಹನಿಯಲ್ಲೂ ಸೃವಿಸುತ್ತಿದೆ ಮೋಸ
ನನ್ನ ಹೆಸರು ಕೆಡಿಸಲು ಅದೆಷ್ಟು ಲೆಕ್ಕಾಚಾರ ಹಾಕಿದೆ ಹೇಳು
ನಿನ್ನ ಎದೆಯ ಪ್ರತಿ ಮಿಡಿತದಲ್ಲೂ ಉಕ್ಕೇರುತ್ತಿದೆ ಮೋಸ
ಪ್ರತಿಕ್ಷಣವೂ ಕೊರಗುವಂತೇಕೆ ಮಾಡಿದೆ ಹೇಳು ಸಿರಿ
ನಿನ್ನ ಕನಸುಗಳ ಮೆರವಣಿಗೆಯಲ್ಲಿ ಮೆರೆದಾಡಿದೆ ಮೋಸ
ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ
ಉತ್ತರ ಕನ್ನಡ ಜಿಲ್ಲೆ ಹಿರೇಗುತ್ತಿ ಮೂಲದ ಶ್ರೀದೇವಿ ಕೆರೆಮನೆ ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ. ಮೊದಲ ಕವನ ಸಂಕಲನ ’ನಾನು ಗೆಲ್ಲುತ್ತೇನೆ’. ಬಳಿಕ ’ಗೆಜ್ಜೆ ಕಟ್ಟದ ಕಾಲಲ್ಲಿ’,’ಮೌನದ ಮಹಾ ಕೋಟೆಯೊಳಗೆ’, ’ಮೈ ಮುಚ್ಚಲೊಂದು ತುಮಡು ಬಟ್ಟೆ’, ಕೃತಿಗಳು ಬಂದವು. ಅಂಗೈಯೊಳಗಿನ ಬೆಳಕು(ವಿಮರ್ಶಾ ಸಂಕಲನ), ’ಅಲೆಯೊಳಗಿನ ಮೌನ’, ’ನನ್ನ ದನಿಗೆ ನಿನ್ನ ದನಿಯು’ ಗಜಲ್ ಕೃತಿ. ’ಬೈಟೂ’ ಚಹಾ ಕುರಿತ ಸಂಕಲನವಾದರೆ ಬಿಕ್ಕೆಹಣ್ಣು, ಚಿತ್ತ ಚಿತ್ತಾರ ಅವರ ಕತೆಗಳ ಗುಚ್ಛ. ಗೂಡು ಕಟ್ಟುವ ಸಂಭ್ರಮದಲ್ಲಿ (ಪ್ರಬಂಧ ಬರಹ ಸಂಕಲನ).
’ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ ಈಚೆ, ಉರಿವ ಉಡಿ, ಮನದಾಳದ ಮಾತು, ವರ್ತಮಾನದ ಉಯ್ಯಾಲೆ ಇವು ಅಂಕಣ ಬರಹದ ಸಂಗ್ರಹಗಳು.
ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ, ಶ್ರೀಗಂಧ ಹಾರ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ಬೇಂದ್ರೆ ಗ್ರಂಥ ಪುರಸ್ಕಾರ, 2020ನೇ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ, ಸಾರಾ ಅಬೂಬ್ಕರ ಪ್ರಶಸ್ತಿ , ಸುಮನಾ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ , ದೇವಾಂಗನಾ ಶಾಸ್ತ್ರಿ ಕಥಾ ಪ್ರಶಸ್ತಿ , ಅಂತರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ -2021, ಹೇಮರಾಜ ದತ್ತಿ ಪ್ರಶಸ್ತಿ, ಕ್ರೈಸ್ತ ಕಾಲೇಜು ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಅವರಿಗೆ ಇದುವರೆಗೆ ಸಂದ ಗೌರವಗಳು.
More About Author