Poem

ತಗಾದೆ

ಕಾಡದಿರೆಂದಾಗ ಹುಸಿಮುನಿಸು ತೋರಿ
ಕಾಡದೇ ಸುಮ್ಮನಿದ್ದುಬಿಡು
ಕಾಡಿ ಬೇಡಿ, ಕಡೆಗೆ ಕೊರಳ ಪಟ್ಟಿ ಹಿಡಿದೆಳೆದುಕೊಂಡು
ಮುತ್ತೊಂದ ಪಡೆಯಬೇಕು ನಾನೂ ಒಮ್ಮೆ!

ಇಲ್ಲಿ ಅಕ್ಕರೆಯೊಳು ನೆನೆದೊಡನೆ
ಅಲ್ಲಿ ಬಿಕ್ಕು ಬಂತೆಂದು ಓಡಿ ಬರಬೇಡ
ಬಾರದಿರುವ ಕಾರಣವನ್ನೇ ಕೊಡದೆ ಇದ್ದುಬಿಡು
ಕಾದ ದಾರಿಯ ತೋಯಿಸಬೇಕು ಹಸಿ ಹಸಿಯಾಗಿ ಒಮ್ಮೆ!

ಮನ ಮುದುಡಿ ಮಾತಿಲ್ಲದೆ ಕುಳಿತಿರುವಾಗ
ಮರೆಯಲ್ಲೇ ನಿಂತು ಬಿಡು
ಮುದ್ದುಗರೆದು ಬೇಸರವೇಕೆಂದು ಕೇಳಬೇಡ
ಮೊದಲಿನಂತೆ ಪ್ರೀತಿಯಿಲ್ಲೆಂದು ಚಾಡಿ ಹೇಳಬೇಕೊಮ್ಮೆ!

ಕಣ್ಮುಚ್ಚಿದೊಡನೆ ತೊಟ್ಟು ಕಳಚಿದ
ಹೂವಿನಂಥ ಒಂದೆರಡು ಹನಿ ಬೀಳಲಿ ಬಿಡು
ಅತ್ತರೆ ನನ್ನಾಣೆಯೆಂದು, ತಡೆಯಬೇಡ
ಅತ್ತಾಗೆಲ್ಲ ಆನಂದಭಾಷ್ಪವಲ್ಲವೆಂದು ತಿಳಿ ಒಮ್ಮೆ

ಸಿಕ್ಕುಬಿಟ್ಟರೆ ನಿನ್ನ ಪ್ರೀತಿ
ಇಷ್ಟು ಅನಾಯಾಸವಾಗಿ, ತಾಕಿ
ಬಿಟ್ಟೀತು ನನ್ನದೇ ಕಣ್ಣು
ದೃಷ್ಟಿ ಬೊಟ್ಟಿಗೆ ಕನಸೊಂದನುರಿಸಿ ಕಪ್ಪಾಗಿಸು ಒಮ್ಮೆ!

- ಪೂರ್ಣಿಮಾ ಮಾಳಗಿಮನಿ

ವಿಡಿಯೋ
ವಿಡಿಯೋ

ಪೂರ್ಣಿಮಾ ಮಾಳಗಿಮನಿ

ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹನುಮಂತಪುರದವರು. ಮಂಡ್ಯ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿ, ಚಿತ್ರದುರ್ಗದ ಎಸ್.ಜೆ.ಎಂ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಪದವೀಧರೆ. 

'ಎನಿ ವನ್ ಬಟ್ ದಿ ಸ್ಪೌಸ್' ಎನ್ನುವ ಇಂಗ್ಲೀಷ್ ಕಿರುಗತೆಗಳ (2017) ಸಂಕಲನ ಪ್ರಕಟಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಹಲವಾರು ತಾಂತ್ರಿಕ ಹಾಗೂ ಸಾಹಿತ್ಯಕ  ವಿಷಯ ಕುರಿತ ಲೇಖನಗಳು ಪ್ರಕಟವಾಗಿವೆ. ಪ್ರತಿಷ್ಠಿತ ಭಾರತೀಯ ವಾಯುಸೇನೆಯಲ್ಲಿ ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಧಿಕಾರಿಯಾಗಿ ಆರು ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಜಂಟಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

ಕೃತಿಗಳು: Anyone but the Spouse- ಇಂಗ್ಲಿಷಿನಲ್ಲಿ ಬರೆದ ಸಣ್ಣ ಕಥೆಗಳ ಸಂಕಲನ, ಇಜಯಾ (ಕಾದಂಬರಿ),ಪ್ರೀತಿ ಪ್ರೇಮ: ಪುಸ್ತಕದಾಚೆಯ ಬದನೆಕಾಯಿ, ಆಗಮ್ಯ, ಡೂಡಲ್ ಕತೆಗಳು, ಲವ್ ಟುಡೆ, ಮ್ಯಾಜಿಕ್ ಸೌಟು

More About Author