ಅದು ಕೋಟೆಯಂತೆ ಕಟ್ಟಿದ ಗೋಡೆ
ದಪ್ಪ ದಪ್ಪ ಕಪ್ಪು ಕಲ್ಲಿನ ಕೋಟೆ
ಗೋಡೆಯಾಚೆ ಸ್ವಚ್ಚಂದ ಪಾರಿವಾಳಗಳು
ಗೋಡೆಗಳ ಮಧ್ಯೆ ನಾನು ಸಮಾಧಿ
ಬದುಕು ಕಬ್ಬಿಣದ ಕಠಿಣ ಹಾದಿ
ಹಿಮಾಲಯದ ಹಿಮನೀರು ನಾನಾದರೆ
ಬಿಸಿನೀರ ಬುಗ್ಗೆಯಂತೆ ಕುದಿವ ನೀರವನು
ಕಿಲುಬುಗಟ್ಟಿದ ಸಂದುಗೊಂದುಗಳಲ್ಲಿ
ನನಗಿಲ್ಲ ರಕ್ಷಣೆಯ ಭದ್ರ ಬುನಾದಿ.
ಮೂರು ಮಡದಿಯರಿಟ್ಟು
ನಾಲ್ಕನೆಯವಳ ಮೇಲೆ ಕಣ್ಣು ನೆಟ್ಟು
ಆಕಳಿಸಿ ಕಿಟಕಿಯಲ್ಲಿ ಇಣುಕಿದರೂ ಸಾಕು
ಭಯಗೊಂಡು ಚಿಟ್ಟನೆ ಕಿರುಚುತ್ತಾನೆ
'ಬೇಗಂ ನನ್ನ ಹುಕ್ಕಾ ಎಲ್ಲಿ?
ತಲೆ ಕೆಟ್ಟಿದೆಯಾ ಪರದೆಯ ಇಳಿಬಿಡು”
ಇಣುಕಿದೆಯಾ ಜೋಕೆ, ತಲ್ಲಾಕಿನ ಕತ್ತಿ
ತೂಗುತ್ತಿದೆ ನೆತ್ತಿ ಮೇಲೆ ಗೊತ್ತಿಲ್ಲವೆ?
ಚಂದ್ರನ ಹಾಲು ಬೆಳದಿಂಗಳಿಲ್ಲ
ವಸಂತನ ಆಗಮನದ ಸಂಭ್ರಮವಿಲ್ಲ
ನಿಷೇಧದ ಗೋಡೆಗಳ ಮಧ್ಯದಿಂದ
ನಿರಾಸೆಯ ಗೂಡಿನಲಿ ಬಂಧಿಸಿ ಒಮ್ಮೆ
ಕೊಡವಿ ಕೇಳಿದಳು 'ಹೆದರಿಸದಿರು ನನಗೆ
ತಲ್ಲಾಕಿನ ಕತ್ತಿಯನ್ನು ತಿವಿದು.'
ಪಹರೆಯ ಗೋಡೆಗಳ ಕಲ್ಲು ಶಿಥಿಲವಾಯ್ತು
ಸೋತ ಕೈಗಳಲ್ಲೀಗ ಶಕ್ತಿ ಸಂಚಾರವಾಯ್ತು
ಬಂಧನ ಕಳಚಿ ತಿರುಗಿ ನಿಂತು ಕೇಳಿತು,
'ನಿನಗೆ ಜನ್ಮ ಕೊಟ್ಟ ತಾಯಿ ನಾನು
ಎದರಿಸದಿರು ತಲ್ಲಾಕಿನ ಕತ್ತಿಯಿಂದ’
ನೀನವಳ ಮಡಿಲಕೂಸು ತಾನೇ.
-ಕೆ.ಷರೀಫಾ
ಕೆ. ಷರೀಫಾ
ಲೇಖಕಿ ಕೆ.ಷರೀಫಾ ಅವರು 1957 ಮೇ 05ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ಬಾಬುಮಿಯಾ, ತಾಯಿ ಪುತಲೀಬೇಗಂ. ಬಿಡುಗಡೆಯ ಕವಿತೆಗಳು, ನೂರೇನ್‌ಳ ಅಂತರಂಗ, ಪಾಂಚಾಲಿ, ಮುಮ್ರಾಜಳ ಮಹಲು, ಬುರ್ಖಾ ಪ್ಯಾರಡೈಸ್, ಸಂವೇದನೆ (ವಿಮರ್ಶೆ), ಮಹಿಳಾ ಮಾರ್ಗ (ಸಹ ಸಂಪಾದನೆ), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನೆ), ಹೊಸ ಶತಮಾನದ ಕಾವ್ಯ (ಸಂಪಾದನೆ) ಅವರ ಪ್ರಕಟಿತ ಕೃತಿಗಳು. ಅವರಿಗೆ ಮಹಿಳೆ ಮತ್ತು ಸಮಾಜ ಪ್ರಶಸ್ತಿ, ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಶ್ರೀ ಪ್ರಶಸ್ತಿ, 2019ನೇ ಸಾಲಿನ ಕ.ಸಾ.ಪದ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ ದೊರೆತಿದೆ.
More About Author