Poem

ಸಂಸ್ಕಾರಹೀನ ಅವ್ವ

ಸೂರ್ಯೋದಯಕೂ ಮುನ್ನವೇ ಎದ್ದು,
ಮನೆಗೇ ಬೆಂಕಿ ಬಿದ್ದಿದೆಯೇನೋ
ಎಂದು ನೋಡುವವರಿಗನಿಸುವಂತೆ,
ರಾತ್ರಿ ತಂಡಿಗೆ ಶೀತವಿಡಿದ
ಬೆರಣಿ ತರಗುಗಗಳ ಬುಡದ,
ಅರೆಜೀವ ಚೆಲ್ಲಿ ಅಸುನೀಗಲನುವಾದಗ್ನಿಗೆ
ಪುಸ್ ಪುಸ್ ಎಂದು
ಕೃತಕ ಉಸಿರಾಟ ನೀಡಿ,
ಮಂದ ಹೊಗೆ ಮಿಶ್ರಿತ
ಅರೆ ಕಪ್ಪು ಜ್ವಾಲೆಯೊರಡಿಸಿ,
ಕರೆಹಿಡಿದ ಮಡಿಕೆಯಲಿ
ಅಂಬಲಿ ಕಾಸಿ,
ತನ್ನ ಗೊಗ್ಗರು ದ್ವನಿಯಲ್ಲಿ
'ಏಳೋ ಮಗ ಏಳೋ ಮಗ'
ಎಂದು ಅರಚಿದ್ದೂ ಸಾಲದೆಂಬಂತೆ,
ಮಲಗಿದ್ದವನು ಕಣ್ಣು ಬಿಡುವ ಮುನ್ನವೇ
ತನ್ನ ಅಕರಾಳ ಮುಖವನ್ನು
ನನ್ನ ಮುಖದೆದುರಿಗಿಡಿದು,
'ಇವತ್ತಾರ ಉಂಡ್ಕಂಡ್ ಹೋಗು ಮಗ'
ಎಂದ 'ಸಂಸ್ಕಾರ'ಹೀನ ಅವ್ವಗೆ,
'ಬೆಳಗೆದ್ದು ದೇವರ ಮುಖ
ನೋಡುವ ಹಾಗಿಲ್ಲ ನಿನ್ನಿಂದ,
ದಿನವೂ ಇದೇ ಆಯಿತಲ್ಲ,
ಬಲದ ಮಗ್ಗುಲಲಲೆದ್ದರೂ,
ಎಡದ ಮಗ್ಗುಲೇ ಆಯ್ತಲ್ಲ,
ಪೂರ್ವಾರ್ಜಿತ ಕರ್ಮವಿದೆಲ್ಲ'
ಎಂದೆನ್ನ ದುರದೃಷ್ಟವ ಅಳಿದು
ಕ್ರೋದವ ತಹಬದಿಗೆ ತಂದುಕೊಂಡು,
ಆಚಾರವ ಮರೆಯದೆ
ಅಂಗೈಗಳ ಒಂದಕ್ಕೊಂದು
ಗಸಗಸನೆ ತಿಕ್ಕಿ ಬಿಸಿಮಾಡಿ,
ಕಣ್ಣಿಗೊತ್ತಿಕೊಂಡು ದಿಟ್ಟಿಸಿ,
ಕರಾಗ್ರೇ... ಶ್ಲೋಕವ ಗುನುಗುತ,
ಹಸ್ತದ ತುದಿ, ಮಧ್ಯ,
ಮೂಲದಲೆಲ್ಲ ಸ್ಥಿತರಾಗಿಹ
ಲಕ್ಷ್ಮಿ ಸರಸ್ವತಿ ಗೌರಿ ಯರ
ಸುಂದರವದನಗಳ ಕಣ್ತುಂಬಿಕೊಂಡೆ,
ಅವರು 'ಕಂದಾ' ಎಂದುದ ಆಲಿಸಿದೆ,
ಅವರು ಹರಸಿದುದ ಬಸಿದುಕೊಂಡೆ,
ಆಚಾರವರಿಯದವ್ವಗೆ ಕ್ಷಮೆಯಿರಲೆಂದೆ,
ಪರಮ ಪಾವನನಾದೆ.

ನಟರಾಜ್. ಎಸ್

ಲೇಖಕ ನಟರಾಜ್. ಎಸ್ ಅವರು ಮೂಲತಃ ಹಾಸನ ಜಿಲ್ಲೆಯ ಬೇಲೂರಿನವರು. ಎಂ.ಎ(ಇಂಗ್ಲಿಷ್) ಮತ್ತು ಬಿ.ಎಡ್ ಪದವೀಧರರಾಗಿರುವ ಅವರು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರಾಂಕ್ ಮತ್ತು ಚಿನ್ನದ ಪದಕ ವಿಜೇತರು. ಸಾಹಿತ್ಯ, ಕಲೆ, ವಿಜ್ಞಾನ ಅವರ ಆಸಕ್ತಿಕರ ವಿಚಾರವಾಗಿದ್ದು ಕತೆ, ಕವನ, ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕನ್ನಡ ಮತ್ತು ಇಂಗ್ಲಿಷ್ ಅನುವಾದ ಕಾರ್ಯದಲ್ಲೂ ತೊಡಗಿಸಿಕೊಂಡಿರುವ ಅವರ ಕೆಲವು ಕವಿತೆಗಳು, ಕತೆಗಳು, ಬರಹಗಳು ವಿವಿಧ ಪತ್ರಿಕೆಗಳು ಹಾಗು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಮೈಸೂರಿನಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

More About Author