ನುಣ್ಣನೆಯ ನೆನಪುಗಳು
ತಣ್ಣಗಾಗುವದಿಲ್ಲ.
ಕಣ್ಣಿನಲೆ ಹಣ್ಣಾಗಿ ಹದನುಗೊಂಡು
ಸಣ್ಣಗೇ ಮಿಡಿಯುತ್ತ
ಬಣ್ಣಗಳ ಪಡೆಯುತ್ತ
ಟಣ್ಣನೇ ಜಿಗಿಯುವವವು
ರೂಪಗೊಂಡು
ನಮ್ಮದೇ ಗಳಿಗೆಗಳ
ನೆಮ್ಮದಿಯ ಮನಸುಗಳ
ಸುಮ್ಮಾನದಲಿ ಕಾದು ಒಪ್ಪವಿಟ್ಟು
ಸುಮ್ಮನೇ ಕುಳಿತಾಗ
ಘಮ್ಮೆಂದು ಹೊರಬಂದು
'ಮಮ್ಮು' ಉಣಿಸುವ ರೀತಿ ಉಣಿಸಿಬಿಟ್ಟು
ಬಾಲ್ಯ 'ಕಟ್ಟು'ವ ಸಮಯ
ಮೌಲ್ಯ ತಿಳಿಯುವುದಿಲ್ಲ
ಆ ಗಳಿಗೆಗಳೇ 'ನೆನಪಾ’ಗಿ
ಬರುವವೆಂದು
ಕಳೆದ ಮುತ್ತಿನ ಬೆಲೆಯು
ತಿಳಿಯುವದೆ ತಡವಾಗಿ
'ಪಳೆಯುಳಿಕೆ' ರೀತಿಯಲಿ ಶಿಥಿಲಗೊಂಡು
ನೆನಪುಗಳ ಬದುಕಿನಲಿ
ಬೆನ್ನಿಗೇರಿದ ಗಂಟು
ಬಾಳಪಯಣದ ದೂರ ದಾರಿಗುಂಟ
ಕಳಚಿ ಪ್ರತಿಗಳಿಗೆಗಳು
ನುಣುಚಿ ಜಾರದಹಾಗೆ.
ಅನುಗಾಲ ಅಂಟುವವು ಬಾಳಿಗುಂಟ
ನೆನಪುಗಳ ಕೊಟ್ಟವರೇ
'ನೆನಪಾಗಿ' ಉಳಿದಾಗ
ಕಣ್ಣುಗಳೆ ಕಂಬನಿಯ
ಮಡುವಿನೊಳಗೆ
ನೆನಪುಗಳೆ ಕಡುವೈರಿ
ಮೈ- ಮನಸುಗಳನೇರಿ
ಜೀವ ಹಣ್ಣಾಗುವದು ತಾಪದೊಳಗೆ
ನಾನು ಬದಲಾಗುವೆನು
‘ಸೀನು' ಬದಲಾಗುವದು
ನೆನಪುಗಳ ಜಾತ್ರೆಯಲ್ಲಿ
ಎಲ್ಲ ಹಸಿರು
ನೆನಪುಗಳೇ ಜೀವಾಳ
ನೆನಪುಗಳೇ ಬೇತಾಳ
ನೆನಪುಗಳ ಈ ಬದುಕ
ಸೋತ ಉಸಿರು
ಚಿತ್ರ : ಸಮಂತ್
ಕೃಷ್ಣಾ ಕೌಲಗಿ
ವೈಚಾರಿಕ ಬರಹಗಳಿಗೆ ಹೆಚ್ಚು ಒತ್ತು ನೀಡುವ ಬರೆಹಗಾರ್ತಿ ಕೃಷ್ಣಾ ಕೌಲಗಿ ವೃತ್ತಿಯಲ್ಲಿ ಶಿಕ್ಷಕರು. 1946 ಫೆಬ್ರುವರಿ 09 ಧಾರವಾಡದಲ್ಲಿ ಜನಿಸಿದರು. ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ವಾಸ. ಇಳಿ ವಯಸ್ಸಿನಲ್ಲೂ ಬತ್ತದ ಬರವಣಿಗೆಯ ಉತ್ಸಾಹ ಅವರನ್ನು ಸಮಾಜಮುಖಿಯನ್ನಾಗಿಸಿದೆ. ತನ್ನೊಬ್ಬ ಹಳೆಯ ವಿದ್ಯಾರ್ಥಿಯಿಂದ ಟೈಪಿಂಗ್ ಕಲಿತು ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಚಿಂತನಾ ಬರೆಹಗಳನ್ನು ಓದುಗರಿಗೆ ತಲುಪಿಸಿದರು. ‘ನೀರ ಮೇಲೆ ಅಲೆಯ ಉಂಗುರ’ ಅವರ ಅಂಕಣ ಬರಹಗಳ ಸಂಕಲನ.
More About Author