Poem

ನೇಮಿತ್ಯ

ನಿನ್ನ ಸಲುವಾದ ಎಲ್ಲವೂ
ನನ್ನ
ಪದಗಳೊಳಗೆ ಸುಸೂತ್ರ
ಹೊಂದಿಕೊಳ್ಳುತ್ತದೆ ನೋಡು

ಬರೆದಾದ ಮೇಲೆ
ಒತ್ತಿಬರುವ ಉಸಿರನ್ನು
ಹತ್ತಿಕ್ಕಲಾಗದೆ ನಿಟ್ಟುಸಿರು.
'ಸುಳಿಯಬಾರದು ಹಾಗೆ ಘಳಿಗೆಗೊಮ್ಮೆ'
ಗದರುತ್ತಿದ್ದ ಅಮ್ಮನ ನೆನಪಾಗಿ
ತಡೆದರೆ
ಬವಳಿ ಬರುವಂತ ಆಕಳಿಕೆ

ಆ ಉದ್ದಾನುದ್ದ ಹಾದಿಯನ್ನು
ಬದಿಯ ಬಸವನನ್ನು
ಪ್ರೇಮವಿದೆಯೆಂದು
ಅರಿವಾದ ಮೇಲೆ ಭೆಟ್ಟಿಗೂ
ಮೊದಲಿನ ದ್ವಂದ್ವವನ್ನು
ನಿನ್ನ ಸುಕ್ಕು ತುಂಬಿದ ಬೆರಳನ್ನು
ಹಳೆಯ ಪ್ರೇಯಸಿಯರ ಹೆಸರುಗಳನ್ನು
ನನ್ನೊಂದಿಗಿನ ಪ್ರೇಮ ಮೊಳೆಯುವ
ಹಂತದಲ್ಲಿ ಕೊನೆಯುಸಿರೆಳೆಯುತ್ತಿದ್ದ
ನಿನ್ನ ಆ ಇನ್ನೊಂದು ಸಂಬಂಧವನ್ನು

ಮತ್ತು

ನನ್ನ ತಬ್ಬಿದಾಗ
ಮೆಲ್ಲಗೆ ನೀನು ಅವಳ ಹೆಸರು ಕರೆದಿದ್ದನ್ನು
ಕಣ್ಣು ಮುಚ್ಚಿ ಹಾಲು ನೆಕ್ಕಿದ್ದು
ತಿಳಿಯಲಿಲ್ಲವೆಂಬಂತೆ
ವರ್ಕ್ ಪ್ರೆಶರ್ ಅಂತ ನಕ್ಕಿದ್ದನ್ನೂ
ನಿನ್ನೊಳಗಿನ
ಯುದ್ದವನ್ನೂ ವೈರುಧ್ಯವನ್ನು
ನನ್ನ ಪದಗಳು ಕವಿತೆಯ ಹೆಸರಿಟ್ಟು
ಬರೆಸಿಕೊಳ್ಳುತ್ತವೆ.

ನಿನ್ನ ತೋರುಬೆರಳು
ಮತ್ತು ಹೆಬ್ಬೆರಳು
ನನ್ನ ತುಟಿಯ ಹಿಂಡುವುದನ್ನು
ಕಲ್ಪಿಸುತ್ತಾ
ನನ್ನ ವಿಧಿಯಲ್ಲಿರದ ಕೆಲವು
ಕನಲುಗಳು ಕಳೆಗಟ್ಟಲಾರವು
ನಿನ್ನಲ್ಲಿ ಎನ್ನುವ ಸತ್ಯ‌ ತಿಳಿದೂ
ಎದೆಯ ಬೆಳಕು ಝಗ್ಗನೆ
ಹೊತ್ತಿಕೊಳ್ಳುತ್ತದೆನ್ನುವ
ಒಂದೇ ಕಾರಣಕ್ಕೆ
ಹಾದಿಯ
ಅಹವಾಲುಗಳ ಅಲಕ್ಷ್ಯಿಸಿ
ಪದ ಮೆರವಣಿಗೆಯಲ್ಲಿ
ನಿನ್ನದೇ ತೇರೆಳೆಯುತ್ತೇನೆ

ಅಂಗಾಲ‌ ಕೆಳಗಿಂದ‌
ಬ್ರಹ್ಮರಂಧ್ರದವರೆಗೆ
ನವಿರು ಜ್ವಾಲೆಯೊಂದು
ಹರಿದು ಹೋದದ್ದರ‌ ಕುರುಹು
ಬೆಳಗುತ್ತಿರುತ್ತೇನೆ
ಮತ್ತು ಆ ದಿನ‌
ಮತ್ತೆರಿಸಿಕೊಂಡು ಪದಗಳು
ಮತ್ತ ಕವಿತೆಗಳನ್ನು ಬರೆಸಿಕೊಳ್ಳುತ್ತಲೇ
ಹೋಗುತ್ತವೆ.
ಮತ್ತದನ್ನೆ ಅದನ್ನೇ ಬರೆಯುತ್ತಾಳೆ
ಎನ್ನುವ ವಿಮರ್ಶಕ ಲೋಕದ
ಮಾತಿಗೆ ಕೆಪ್ಪು ನನಗೆ

ಶಿವನೇ…
ನಿನ್ನ ಊದಾ ಬಣ್ಣದ ಮೈ
ಕೊರಳ ಹಾವು ಭಸ್ಮದ ಪರಿಮಳ
ಪ್ರೀತಿ ಒಸರುವ‌ ತುಟಿ ಕಣ್ಣು
ನಿನ್ನ ನೀಲಿ ಕೊರಳು
ನಿನ್ನ ಡೋಲು ಢಮರು
ಹೆಜ್ಜೆ ಗೆಜ್ಜೆ ಹೋರಿ ಹಾಡು
ನಿನ್ನ ರುದ್ರಾಕ್ಷಿ ನಿನ್ನ ಸಿಕ್ಕು ಜಟೆ
ಅದರೊಳಗೆ ತುಳುಕುವ‌ ಅವಳು
ಈ ಎಲ್ಲವೂ ಕವಿತೆಯಾಗಿವೆ
ಮತ್ತು
ನೀನು ಮತ್ತು ನೀನೆಂಬುದಷ್ಟೇ
ಇಲ್ಲಿ ‌ಕವಿತೆ ಎಂದಾದರೆ
ನಿನ್ನೊಂದು ಕಿರು ನೋಟ
ನುಡಿಮುತ್ತು ನನ್ನ ಹಕ್ಕಲ್ಲವೇ
ಎಂದುಹಿಸಿದರೂ ಹುಕಿಯ
ಉದಾಸೀನ ನನಗೆ

ನೀನೆಂದೂ ಓದದ ಅವಳೆದೆಯ ಕವಿತೆಗಳು
ಬಡವಾಗಿಸುತ್ತವೆ‌ ನಿನ್ನ ಎನ್ನುವ
ಗಟ್ಟಿ ನಂಬಿಕೆಗೆ ವಾರದಲ್ಲಿ
ಎರಡು ದಿನ ನೇಮದಂತೆ ಯುದ್ದ ಮುಗಿಸಿ
ಸರದಿಯಲ್ಲಿ ಸಾಯುವ ಸಂಕಟಗಳ ಪೇರಿಸಿ ಮೇಲೊಂದು
ಶ್ರೀಗಂಧದ ಕಟ್ಟಿಗೆ ಇಟ್ಟು ಸುಟ್ಟು
ಏಳುವ ನೀಲಿಜ್ವಾಲೆಯನ್ನು
ಹೊಮ್ಮುವ ಭಿನ್ನ ಗವಲನ್ನು
ನಿನ್ನ ತೋಳು ತಬ್ಬಿಯೇ ಕಾಣುತ್ತಿದ್ದೇನೆ
ಎಂದು ಕಲ್ಪಿಸಿ
ಹೊಸತೊಂದು ಕವಿತೆ ಬರೆಯುತ್ತೇನೆ
ಲೋಕದ ಮಾತುಗಳ ಹೇಗಿದ್ದರೂ
ನೀನೇ ಬಲ್ಲೆ.
ಕೈಲಾಸದಿಂದ
ಕಲ್ಯಾಣಕ್ಕೆ ಹೊರಟವನಲ್ಲವೇ ನೀನು?

ಅನುವಾದಿಸುವುದು ಮತ್ತು
ಅಲವತ್ತುಕೊಳ್ಳುವುದು
ನೇಮಿತ್ಯ ಇಲ್ಲಿ

- ನಂದಿನಿ ಹೆದ್ದುರ್ಗ

ವಿಡಿಯೋ
ವಿಡಿಯೋ

ನಂದಿನಿ ವಿಶ್ವನಾಥ ಹೆದ್ದುರ್ಗ

ಸಕಲೇಶಪುರದ ಹೆದ್ದುರ್ಗದ ಕಾಫೀ ಬೆಳೆಗಾರ್ತಿ ನಂದಿನಿ ಹೆದ್ದುರ್ಗ ಅವರು ಕೃಷಿಕ ಮಹಿಳೆ. ತಮ್ಮ 16 ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬದುಕಿನ ಸುಖ ದುಃಖಗಳನ್ನು ಕಂಡುಂಡವರು. ಕಳೆದ ಕೆಲವು ವರ್ಷಗಳಿಂದ ಕಾವ್ಯ ರಚನೆಯ ಮೂಲಕ ಕಾವ್ಯ ಲೋಕ ಪ್ರವೇಶಿಸಿದ್ದಾರೆ. ಅವರ ಎರಡು ಸಂಕಲನಗಳು ಪ್ರಕಟವಾಗಿವೆ.

ಪ್ರೀತಿ ಪ್ರೇಮಗಳೇ ಇವರ ಕಾವ್ಯದ ಪ್ರಮುಖ ವಸ್ತು. ನಿರ್ಭಿಡೆಯಿಂದ ಹೆಣ್ಣಿನ ಅಂತರಂಗದ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಹೊರ ಹಾಕುವ ನಂದಿನಿ ಅವರು ಯಾವುದೇ ಮುಲಾಜಿಲ್ಲದೇ ಅಭಿವ್ಯಕ್ತಿಸುವುದು ವಿಶೇಷ.

 

More About Author