Poem

ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬೇಕ

ತೊಟ್ಟಲಕ ಗುಳದಾಳಿ ಕಟ್ಟಿದವರ್ಯಾರ
ಕಾಣಬೇಕಂದರ ಕೊಂಚಿಗಿ ಮರಿಯಾತ
ಕೊಂಚಿಗಿಯ ದೌರ ಬಾಯಾಗ ಜಬಡೂತ
ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬೇಕ

ಕುಂಟಲಪಿ ಆಡ್ಯಾಡಿ ಅಂಡ್ಯಾಳ ತೂರ್ಯಾಡಿ
ಗಣಗಳಕಿ ತುಂಬ ಹುಂಚೀಯ ಚಿಗಳಿ
ಚಿಟಮೀರಿ ಚನ್ನಕ್ಕನ ಯಾರು ಚಿವಟಿದರೇನ
ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬೇಕ

ಕತ್ತಲಿನ ಕಂಟ್ಯಾಗ ಬೆಳಕೀನ ಹೂವ
ಕೆಂಪಾನ ಹಣ್ಣ ಉದುರುದುರಿ ಬಿದ್ದಾವ
ಎಂಥ ಘಾತಾತ ಏನೀ ಗುಣಾಚಾರ
ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬೇಕ

ನೂರೆಂಟ ಬೀಜ ದಿನದಿನಕೂ ಬಿತ್ತಾನ
ಹದಮಾಡಿ ಹೊಲವ ಹರಗುವರ ನೋಡ
ಮಡಿತುಂಬ ಮೆಳಕಿ ತಲಿತುಂಬ ಬಳಗ
ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬೇಕ

ಕುಡಿಯೊಡದ ಮಿಡಿ ಮೂಡಿ ಒಗರೊಗರ
ತ್ವಾಟೀಯ ಒಡದ ಪುಟದಾವ ಸುತ್ತೆಲ್ಲ
ಊರೆಲ್ಲಾ ಫಸಲ ಸೂರೆಲ್ಲಾ ಮಳಿನೀರ
ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬೇಕ

ಕಾಳೀನ ನಿಟ್ಟ ಕಣಕಣಜ ತುಂಬಿ ತುಂಬಿ
ಸಾರಿಸೀದ ಗಳಿಗಿ ಸ್ಯಾವಿಗಿ ಎಳಿಯ
ಸಕ್ಕರಿ ಸುರುಸುರುವಿ ಉಣುವಾಗ ಸರದಾರ
ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬೇಕ

ನೆಲಿವೀನ ಹಗ್ಗಕ್ಕ ಬಿಗದ ಕಟ್ಟಿದ ಎದಿಯ
ತಡವಲಿಲ್ಲ ಗಂಟ ಬಿಚ್ಚಿಲ್ಲ ಕಡಿತನಕ
ಕುಂತಲ್ಲಿ ಒಳ್ಳ ಕುಟ್ಟಾಕ ಒನಕಿ
ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬೇಕ

ಮನಿತುಂಬ ಕಿಡಕಿ ಹಣಕಿ ನೋಡುವರ್ಯಾರ
ಕೈತುಂಬ ಹುಣ್ಣ ಮುಟಗಿ ಬಿಚ್ಚುವರ್ಯಾರ
ಕಣ್ತುಂಬ ರಗತ ಕಿವಿತುಂಬ ಅಳ್ಳಿ
ನೆಲ್ಲಕ್ಕಿ ತುಳಿಲಾಕ ನೆದರ್ಯಾಕ ಬೇಕ

-ಭುವನಾ ಹಿರೇಮಠ

ಭುವನಾ ಹಿರೇಮಠ

ಭುವನಾ ಹಿರೇಮಠ ಅವರ ಪೂರ್ಣ ಹೆಸರು ಭುವನೇಶ್ವರಿ ರಾಚಯ್ಯ ಹಿರೇಮಠ. ಹುಟ್ಟೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಎಂಬ ಪುಟ್ಟ ಹಳ್ಳಿ. ತಂದೆ- ರಾಚಯ್ಯ (ಪ್ರವಚನಕಾರರು), ತಾಯಿ - ಶಿವಗಂಗಾ. ಸದ್ಯ ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯ ಹವ್ಯಾಸವಿರುವ ಭುವನಾ ಹಿರೇಮಠರ ಮೊದಲ ಕವನ ಸಂಕಲನ ಟ್ರಯಲ್ ರೂಮಿನ ಅಪ್ಸರೆಯರು ಕೃತಿ ಪ್ರಕಟಣೆಗೊಂಡಿದೆ. 2020ರಲ್ಲಿ  ಅವರ 'ಹಸಿರು ಪೈಠಣ ಸೀರಿ' ಕಥೆಗೆ ವಿಜಯ ಕರ್ನಾಟಕ ಯುಗಾದಿ ಕತಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ. 


 

More About Author