Poem

ನನ್ನೊಂದಿಗೆ

ನನ್ನೊಂದಿಗೆ
ನೀನಿರಲು
ನನಗಾವ ಚಿಂತೆ
ಬೊಗಸೆ ತುಂಬ
ಪ್ರೀತಿ ತುಂಬಿರಲು
ಕೊರತೆ ಎಂಬ ಶಬ್ದ
ಇನ್ನೇಕೆ?

ಕರೆದಾಗ
ಬರುವವನು
ಕರೆಯಿಲ್ಲದೆಯೂ
ಬರುವವನು
ಅಕ್ಕರೆಯ
ಸಕ್ಕರೆಯ
ನುಡಿಗಟ್ಟಿನಲಿ
ಕುಣಿಸುವವನು.

ಬಿಚ್ಚು
ಮನಸಿನ ತುಂಬ
ಚಿಂತನೆಯದೆ
ಕಲರವ
ಅಂತರಂಗವೀಗ
ನಮ್ಮಿಬ್ಬರಿಗೂ
ಸರಿದೂಗಿರಲು
ಮನಸು ಮಾಗಿ
ಕನಸುಗಳ
ಸೂರು.

ಆಗಾಗ
ತೆವಳುವ
ಹಂಬಲದ
ಒಡಲೊಳಗೆಲ್ಲ
ಉತ್ಸಾಹ
ನೂರ್ಮಡಿಗೊಂಡು
ನಾಳೆಯ ದಿನಗಳಿಗೆ
ಭರವಸೆಯ ಸಿಂಚನ
ಮನವನಾವರಿಸಿರಲು.

ದೂರಲು ನಾನಾರು
ದೂರಿದರೂ ಇನ್ನಾರು
ಧೈರ್ಯದೆಗಲಲಿ
ತಲೆಯಿಟ್ಟು
ಕಳೆಯುವ ಕಾಲಕ್ಕೆ
ಕೊನೆ ಮೊದಲಿಲ್ಲದ
ನುಡಿಗಂಟು ತೊಟ್ಟಿಲು
ಬದುಕಿನ
ಹೊಸತನದೆಡೆಗೆ
ಕೈ ಹಿಡಿದು
ನಡೆಸುತಿರಲು..

ಮನ ತಪ್ತಿಯ
ಭಾವಕ್ಕೆ
ನಾನಾದೆ ಶರಣು
ಪ್ರೀತಿಯ ಕೂಗಿಗೆ
ನೆಲೆ ಸಿಕ್ಕಿತು ನೆರಳು
ಜೀವ ಜೀವದ
ಹೊಸತನಕೆ
ಕಾಲವೆ ಸರಿದಿರಲು
ಕವನಾ ಈಗ
ನೀನಲ್ಲವೆ
ನನ್ನ ಕೂಗಿಗೆ ಒಕ್ಕೊರಳು!!

- ಗೀತಾ ಜಿ. ಹೆಗಡೆ ಕಲ್ಪನೆ

ಗೀತಾ ಜಿ ಹೆಗಡೆ ಕಲ್ಪನೆ

ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

ಕೃತಿಗಳು: ಮನಸೆ ನಿನೇಕೆ ಹೀಗೆ (ಲೇಖನಗಳ ಸಂಗ್ರಹ) 

More About Author