Poem

ಮೌನದ ಮಾತು 

ಅಜ್ಜಿ
ಹೆಚ್ಚು ಮಾತಿಗೆ ಹಚ್ಚದ
ಬಹು ಆಯ್ಕೆ ಮಾದರಿಯ
ಪ್ರಶ್ನೆಗಳನ್ನೇ ಕೇಳುತ್ತಿದ್ದಳು
ತಲೆ ಅಲ್ಲಾಡಿಸುವುದ ಕಾಯುತ್ತಾ..

 

ಅಮ್ಮ
ಮೌನಕ್ಕೆ ಮಾತಾಗುತ್ತಿದ್ದಳು
ಮಾತಿಗೆ ಮೌನವಾಗುತ್ತಿದ್ದಳು
ಒಂದು ತುತ್ತು ಹೆಚ್ಚೇ ತಿನ್ನಲೆಂದು
ಬಾಳೆಲೆ ತುಂಬಿಸಿಡುತ್ತಿದ್ದಳು
ಉಣ್ಣಲು ಕುಳ್ಳಿರಿಸಿಕೊಳ್ಳುವ ಮೊದಲೇ
ಮೌನ ಮುರಿಯಲೇ ತುಸು ಹೆಚ್ಚು ತಿನ್ನಲೇ
ಆಯ್ಕೆಗೆ ಒಳಗೊಳಗೇ ಖುಷಿಪಡುತ್ತಿದ್ದಳು.

 

ಅಪ್ಪ
ಪೇಟೆಯ ಮಾರಿಕಾಂಬಾ ಜಾತ್ರೆಗೋ
ನಮ್ಮೂರ ತೇರಿನ ಬೆಂಡು ಬತ್ತಾಸಿಗೋ
ತೆಪ್ಪದ ದೀಪೋತ್ಸವಕ್ಕೋ, ಕಾಯಿ ಒಡೆಯಲು ಪಲ್ಲಕ್ಕಿಗೋ
ಬಾಯಿ ಒಡೆಯುವ ಮೊದಲು
ಕೈಗರ್ಚಿಗೆ ಕಿಸೆಗೆ ಕಾಸು ಇಟ್ಟವನು
ಕಾಯ್ದಿಟ್ಟ ಮೌನವನು

 

ಗೆಳತಿ
ಮೂಗನಾದವನ ಮಾತಿಗೆಳೆಯಲು
ಹರಸಾಹಸ ಪಟ್ಟು ಹರಿದು ಹೋದಳು
ಹನಿಹನಿ ದೂರ ಸರಿದು ಭೋರ್ಗರೆವ
ದನಿಯ ಕಡಲ ಸೇರಿದಳು
ಕಣ್ಣಹನಿ ಕೆನ್ನೆಗುಂಟ ಇಳಿದು
ಭುವಿಗೆ ಬಿದ್ದು ಸದ್ದಿಲ್ಲದೆ ಆವಿಯಾಯಿತು.

ಪತ್ನಿ
ಕ್ಯಾಲೆಂಡರಿನಲಿ ಟಿಕ್ಕಾಗುತ್ತಿದ್ದ ಬುಕ್ಕಿಂಗನ್ನು ನೋಡಿ
ಬಟ್ಟೆಬರೆಗಳನ್ನು ಪ್ಯಾಕು ಮಾಡುತ್ತಿದ್ದಳು
ನೆನಪಿಸುತ್ತಿದ್ದಳು ಪಿಸುಮಾತಿನಲಿ
ಪ್ರತಿಯೊಂದು ಪರಿಕರಗಳನು
ತೂರುತ್ತಿದ್ದಳು ಪ್ರಶ್ನೆಗಳನು
'ಹೂಂ ಯಾ ಉಹುಂ' ಉತ್ತರ ಉಳಿಸಿ!

 

ಮಗ
ಮಿಲೇನಿಯಲ್ ಕಾಲದವನು
'ಥೋ..ಮಾರಾಯಾ ಸುಮ್ನಿರಾ !'
ಎಂದು ಹೇಳಬಹುದೆಂದು ಎಂದೂ ಏನನ್ನೂ ಕೇಳಲಿಲ್ಲ ಸುಮ್ಮನೆ.
ಹಗ್ಗು, ಪಪ್ಪಿ, ಬರ್ತ್ ಡೇ ಪಾರ್ಟಿ
ಈ ಪಾಟೀ ಸದ್ದು ಮಾಡಿರಲಿಲ್ಲವಂದು
ಹೇಗೆ ಹೇಳಲಿ ನಾನಾದರೂ ಪ್ರೀತಿ ಅಟಕಾಯಿಸಿಕೊಳ್ಳುತ್ತದೆ
ಎಂದಿನಂತೆ ಗಂಟಲಿನಲ್ಲಿ!

 

ಮೊಮ್ಮಗಳು
ಅರಳು ಹುರಿದಂತೆ ಮಾತನಾಡುವಳು
ಪಟ ಪಟ ಹುರಿದರಳು ಹಾರಿದೆ
ಮಗ ಸೊಸೆ ಮನೆ ಸೇರುವುದರೊಳಗೆ
ಮುಗಿಲು ಮುಟ್ಟುವ ಮಾತಿನ ಹೇಷಾರವ

 

'ಶ್! ಸದ್ದು ; ಅನಾಗರಿಕ ವರ್ತನೆ'
ಮಗ ನಗುತ್ತಾನೆ
ಅಪಾರ್ಟ್ಮೆಂಟಿನ ಜನರ ದೂರ
ಪುನರಾವರ್ತನೆ.
ಸಾಕ್ಷಿ ಹೇಳಬಹುದಾದ ಮೊಮ್ಮಗಳು
ತುಸು ಹೆಚ್ಚೇ ತುಂಟಿ; ಕಣ್ಣು ಮಿಟುಕಿಸುತ್ತಾಳೆ
'ತುಟಿಪಿಟಕ್ಕೆನದ ಅಜ್ಜ' ಎಂಬ ಪ್ರಮಾಣಪತ್ರದ
ಉಚ್ಛಾರಣೆಯನ್ನು ಪ್ರಯಾಸದಿಂದ ಉದ್ಘರಿಸಿ ನಿರ್ಗಮಿಸುತ್ತಾಳೆ...
ಮತ್ತೆ ಮೌನದ ಹೊದಿಕೆ ಹೊದಿಸಿ!

ಕಲಾಕೃತಿ - ಅಶೋಕ್ ಶೆಟಕಾರ

ಅಜಿತ್ ಹರೀಶಿ

ಲೇಖಕ ಡಾ. ಅಜಿತ್  ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ  ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು. 

ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು.  ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು.  ಕಥಾಭರಣ ಸಂಪಾದಿತ ಕೃತಿಯಾಗಿದೆ. ಆರೋಗ್ಯದ ಅರಿವು ಎಂಬ ಅಂಕಣ ಬರಹದ ಗುಚ್ಛ ಮತ್ತು ಕೃತಿಕರ್ಷ (ವಿಮರ್ಶಾ ಕೃತಿ) ಪುಸ್ತಕವಾಗಿ ಪ್ರಕಟಗೊಂಡಿವೆ. ಇವರ ಗಿಡ ಮರವಾದ ಕನಸು, ಸೆಲೆಕ್ಟ್ ಆಲ್ ಡಿಲೀಟ್, ಟೊಮ್ಯಾಟೊ ಕೆಚಪ್- ಇಬುಕ್ ಮತ್ತು ಆಡಿಯೋ ಬುಕ್‌ಗಳು, ಮೈಲ್ಯಾಂಗ್ ಬುಕ್ಸ್‌ನಲ್ಲಿ ಬಂದಿವೆ. ಬಸವ ಪುರಸ್ಕಾರ, ಕಾವ್ಯ ಮಾಣಿಕ್ಯ, ಗುರುಕುಲ ಸಾಹಿತ್ಯ ಶರಭ, ತರಾಸು ರತ್ನ ರಾಜ್ಯಪ್ರಶಸ್ತಿಗಳನ್ನು  ಮುಡಿಗೇರಿಸಿಕೊಂಡ ಗರಿಮೆ ಕೂಡಾ ಇವರದ್ದು. ಕನ್ನಡ ಪ್ರತಿಲಿಪಿ ರಾಷ್ಟ್ರೀಯ ಹಾಗೂ ಕಿರುಗಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಸಂಪದ ಸಾಲು ಪತ್ರಿಕೆಯ ಜಾಗತಿಕ ಕವನ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಇವರ  'ಕನ್ನಡಿಗಂಟದ ಬಿಂದಿ' ಕಥೆಗೆ ಮುಂಬೈನ ಕನ್ನಡ ಭವನ ಎಜುಕೇಷನ್ ಸೊಸೈಟಿಯವರ ರಾಷ್ಟ್ರೀಯ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿದೆ. ಇವರ ಕನಸಿನ ದನಿ ಕವನ ಸಂಕಲನಕ್ಕೆ 2021 ನೇ ಸಾಲಿನ ಸುಮನ್ ಸೋಮಶೇಖರ ಸೋಮವಾರಪೇಟೆ ಕಸಾಪ ದತ್ತಿ ಪ್ರಶಸ್ತಿ ದೊರೆತಿದೆ.

ಇವರ 'ತಿರುವು' ಕಥೆ ಹಿಂದಿ ಭಾಷೆಗೆ 'ಮೋಡ್' ಎಂಬ ಹೆಸರಿನಲ್ಲಿ  ಅನುವಾದಗೊಂಡಿದೆ. ಇವರನ್ನು  ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ೧೪ನೇ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ. ಇವರ ಕಥೆ, ಕವನ, ಅಂಕಣ ಬರಹ, ವೈದ್ಯಕೀಯ, ಸಾಮಾಜಿಕ ಮತ್ತು ಕ್ರೀಡಾ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

 

More About Author