ಮೊದಲ ಮಳೆಯ ಆಗಮನಕೆ
ಮನಸ್ಸು ಕೊಂಚ ತಲ್ಲಣ
ಒಂದಷ್ಟು ಖುಷಿ
ಮಗದೊಂದಷ್ಟು ಗಡಿಬಿಡಿ
ಬಢಾರ್ ಬಾಗಿಲು ಬಡಿದ ಸೌಂಡ್
“ಅಯ್ಯೋ!ದೇವರೆ ಎಂತಾತು?”
ಬಡಕ್ಕನೆ ಎದ್ದು ಹೋಗೊ ಅವಸರದಲ್ಲಿ
ತಡವರಿಸಿದ ಬೆಕ್ಕು
ಮ್ಯಾವ್ ಅಂದಾಗ
ಪಾಪ! ಎಂದ್ಯಾರಿಗೆ ಹೇಳಲಿ
ಬೆಕ್ಕಿಗಾ? ಬಾಗಿಲಿಗಾ?
ಚಿಲಕ ಜಡಿದ ಮನಸ್ಸು ಕಿಸಕ್ಕೆಂದಾಗ
ಓಹೋ,ಇದಕಿನ್ನೂ ಭಯಂಕರ ಸಂತೋಷ
“ಸೆಖೆಗೆ ಹೈರಾಣಾಗಿ ಸಾಕಾತನ”
ಮೌನ ಮಾತಾಡುತ್ತದೆ
ತೆರೆದ ಬಾಗಿಲು ತನ್ನಷ್ಟಕ್ಕೇ ಮುಚ್ಚಿ
ಮೆಟ್ಟಲೇರುವ ಧಾವಂತ ತಪ್ಪಿದ್ದಕ್ಕೆ
ದೇಹ ಖುಷಿ ಪಡುತ್ತದೆ.
ಇತ್ತೀಚೆಗೆ ಹಾಗೆ
ಉತ್ಸಾಹ ಮುಗಿಲೆತ್ತರ
ಶಕ್ತಿ ಕುಂದಿ ದೇಹ ವಲ್ಲೆ ಅಂದಾಗೆಲ್ಲ
ಮನಸ್ಸೆಲ್ಲ ಮ್ಲಾನ
ಒಂದಷ್ಟು ಹುಡುಕಾಟ
ಈ ಮೊದಲ ಮಳೆಯಂತೆ ;
“ಎಷ್ಟು ಧೂಳು,ಕಸ,ಕಡ್ಡಿ ಮನೆಯೊಳಗೆ ತಂದಾಕ್ಲಿ”
ಕಾದು ಕೂತಂತೆ ದಿಢೀರ್ ಬರುವ ಮಳೆ
ಹಾಗೆ ದಿಢೀರ್ ಅಂತ ಬಂದುಬಿಡಬೇಕಪ್ಪಾ ಶಕ್ತಿ
ಅಣಿಯಾಗಿ ಬಿಡುತ್ತದೆ ಚಿತ್ತ
ಒಂದಿನ ಬಿಡದೇ ಯೋಗ,ವಾಕಿಂಗ್, ಡಯಟ್ಟು…..
ಮಣ್ಣೂ ಮಸಿ…ತೀರ್ಮಾನ.
ಅಲ್ಲಾ...ಎಲ್ಲಾ ಡಬ್ಬಾಕಿಸಿ
ಪೊಗದಸ್ತಾಗಿ ಗೊರಕೆ ಹೊಡೆಸುತ್ತದೆ
ಈ ಮೊದಲ ಮಳೆಯ ತಂಪು!
ಮಳೆ ಬಲೂ ಹುಷಾರು
ತನ್ನ ಬೇಳೆ ಬೇಯಿಸಿ ಪರಾರಿ
ಆದರೆ ನನ್ನ ತೀರ್ಮಾನ ಎಕ್ಕುಟ್ಟೋಯ್ತಲ್ಲಾ
ಅಂಡು ಸುಟ್ಟ ಬೆಕ್ಕಿನಂತೆ ವಿಲವಿಲ
ಸೆಟಗೊಂಡ ಮನ ಬರಲಿ ಮತ್ತೆ
ಗುರಾಯಿಸುತ್ತದೆ ದೊಣ್ಣೆ ಹಿಡಿದು.
ಬೆಳಗ್ಗೆ ಎದ್ದು ನೋಡಿದರೆ
ಒಂದಾ ಎರಡಾ ಥೋ^^^^^^
ಸೊಂಟಕ್ಕೆ ಸಿಕ್ಕಿಸಿದ ಸೆರಗು
ಗಂಟಾಕಿದ ಮುಡಿ
ಬಿಚ್ಚೋಕೂ ಟೈಮಿಲ್ಲ
ಮನೆಯೆಲ್ಲ ಧೂಳೋ ಧೂಳು
ಛೆ^^^^^ ಹಬ್ಬದ ಕ್ಲೀನೆಲ್ಲಾ ಎಕ್ಕುಟ್ಟೋಯ್ತಲ್ಲಾ
ಕಣ್ಣು ಕೆಂಪಾಗಿ
ಅಳೊದೊಂದು ಬಾಕಿ.
ಆದರೂ ಈ ಮೊದಲ ಮಳೆಯಲ್ಲಿ
ಒಂಥರಾ ಹಿತವಿತ್ತು
ಶಕ್ತಿ ಬಂದುಬಿಡ್ತು
ಸಣ್ಣಗೆ ನೇವರಿಸಿದ ಮಣ್ಣ ಘಮಲು
ಮೂಗೆಲ್ಲ ಎಡತಾಕಿದಾಗಾ
ನೆಟ್ಟ ಗಿಡಗಳು ಮೈ ಕೊಳೆ ತೊಳೆದು ತೊನೆದಾಡುವಾಗಾ…..
ಆಹಾ! ನೋಡೋಕೆ ಕಣ್ಣೆರಡು ಸಾಲದು!
ಬಪ್ಪರೆ ಮೊದಲ ಮಳೆಯೇ
ಮತ್ತೆ ಬಂದು ಬಿಡು
ತಣ್ಣಗಾಯಿತು ಮನ
ಉರಿ ಕೆಂಡ ಹೊತ್ತ ಹಂಡೆ ಒಲೆಗೆ
ಬುಸ್…ಎಂದು
ತಣ್ಣನೆಯ ನೀರು ಸುರಿದಂತೆ!
ಗೀತಾ ಜಿ ಹೆಗಡೆ ಕಲ್ಪನೆ
ಗೀತಾ ಜಿ ಹೆಗಡೆ ಕಲ್ಪನೆ
ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.
ಕೃತಿಗಳು: ಮನಸೆ ನಿನೇಕೆ ಹೀಗೆ (ಲೇಖನಗಳ ಸಂಗ್ರಹ)
More About Author