Poem

ಮಿರ್ಜಾ ಗಾಲಿಬ್ ಜೊತೆ ಒಂದು ಮಾತುಕತೆ

ಜನಾಬ್ ಅಸ್ ಸಲಾಂ ಆಲೈಕುಂ,  
ಚಾಂದನಿ ಚೌಕ್ ದಾಟಿಕೊಂಡು 
ಪುರಾನಿ ದಿಲ್ಲಿಯೊಳಗೆ ನಿಮ್ಮನ್ನು 
ನೋಡುವುದೇ ಒಂದು ಸೌಭಾಗ್ಯ.  
ದೊಡ್ಡ ಹಜಾರ, ಕೈಯೊಳಗೆ ಹುಕ್ಕಾ 
ಉದ್ದ ನಿಲುವಂಗಿ, ಅಫ್ಘಾನಿ ಪೇಟಾ. 
ಕಣ್ಣಿಗೆ ಸುರಮಾ, ಇರಾನಿ ಇತ್ರ್ 
ಸದಾ ಶೇರೊ ಶಾಯಿರಿಯ ಫಿತ್ರ್. 
ಸುಳ್ಳಲ್ಲ ಗಾಲಿಬ್ ನೀವು ದಿಲ್ಲಿಯ ಶಾನೆ ಶೊಹರತ್ 
ನೀವು ದೊಡ್ಡವರೊ ನಿಮ್ಮ ಶಾಯಿರಿ ದೊಡ್ಡದೊ 
ಇದರ ಬೆಲೆ ಕಟ್ಟಲಾಗಲಿಲ್ಲ ನಮಗೆ ಇದು ಹಕೀಕತ್ 

  

ಏ ಸೂಫಿ ಮಲಂಗ್, ಏ ದಿವಾನೆ ಖಾಸ್  
ಕತ್ತಲಲ್ಲಿ ಬೇಕಂತಲೆ ಕುಳಿತಿರಿ, 
ಬೆಳಕಿನಲ್ಲಿ ನಿಮ್ಮವರದೇ ಅಸಲಿ ಮುಖಗಳ  
ನೋಡುವುದು ತಪ್ಪಿಸಿಕೊಂಡಿರಿ. 
ಕೈಯೊಳಗಿನ ರೇಖೆ ನೋಡಿ  ಬದುಕುವುದು 
ಹೇಡಿಗಳ ಲೆಕ್ಕಾಚಾರವದು. ಸುಳ್ಳಲ್ಲ ನೀವು ಹೇಳಿದ್ದು 
ಕೈಯಿಲ್ಲದವರಿಗೂ ಇಲ್ಲೊಂದು ಭವಿಷ್ಯವಿರುವುದು. 
ಗಾಯಗೊಂಡಾಗ ಅಷ್ಟು ನೋವಾಗಿರಲಿಲ್ಲ 
ಗಾಯ ಮಾಡಿದವರು ನನ್ನವರೇ ಎಂದಾಗ 
ನರಳಿದ್ದು ಅಷ್ಟಿಷ್ಟಲ್ಲ ಗಾಲಿಬ್. ನಮ್ಮ ದುಃಖ 
ನಮ್ಮ ಶತ್ರುವಿಗೂ ಬೇಡ. 

  

ನೀವು ಹೇಳಿದರೂ ಮತ್ತೆ ಮತ್ತೆ ಕನ್ನಡಿಯ 
ಧೂಳನ್ನೆ ಒರೆಸಿದೆವು, ಮುಖದ ಮೇಲಿರುವ ಧೂಳಿನ 
ಅರಿವಾಗಿದೆ ಈಗ. ಒರೆಸಬೇಕೆಂದರೂ ಸಾಧ್ಯವಿಲ್ಲ; 
ಧೂಳು ಒರೆಸಬೇಕಾದ ಕೈಯಲ್ಲೀಗ ರಕ್ತವಂಟಿದೆ. 
ಧೂಳೇ ಇರಲಿ ಬಿಡಿ ಮುಖದ ಮೇಲೆ  
ರಕ್ತಕ್ಕಿಂತ ಧೂಳೇ ವಾಸಿ ಈಗ. 

  

ನೀವು ಕೇಳಬಹುದು ದಿಲೇ ನಾದಾನ್ ತುಝೆ ಹುವಾ ಕ್ಯಾ ಹೈ 
ಹೇಳಿ ಗಾಲಿಬ್ ಆಖಿರ್ ಇಸ್ ದರ್ದ್ ಕಿ ದವಾ ಕ್ಯಾ ಹೈ 
ಹೊಟ್ಟೆಯಲ್ಲಿ ಸಣ್ಣ ಚೀಲವಿದೆ ಕಂಬಕ್ತ್ ತುಂಬುವುದೇ ಇಲ್ಲ.  
ಮಾಡಿದ ಪಾಪಗಳ ನೋಡಿದರೆ ಇದು ಹಸಿದವರ ಸಿಟ್ಟು ಖಂಡಿತ ಅಲ್ಲ. 

  

ಶಾಯರ್ ತೊ ಆಪ್ ಅಚ್ಛೇ ಹೈ 
ಪರ್ ಬದನಾಮ್ ಬಹೊತ್ ಹೈ 
ಶಾಯರಿ ಮತ್ತು ಬದನಾಮಿ ಒಟ್ಟಿಗೆ  
ಎರಡೂ ಆಲಮ್ ಗಜಲುಗಳ ಬುಟ್ಟಿಗೆ 
ಜಿಂದಗಿಯ ದರ್‍ಬದರ್ ಠೋಕರ್‍ನಲ್ಲಿ  
ಟೂಟೇ ಫೂಟೇ ಕಷ್ತಿಯೋ ಕೆ ಸಾಥ್ 
ಪಯಣ ಹೊರಟ ಮಿಂಯಾ ಗಾಲಿಬ್  
ನಮ್ಮ ಹಡಗಿನದೂ ಅದೇ ಕಥೆ 
ತಲುಪಬಲ್ಲೆವೆ ದಂಡೆಗೆ ಸಹಿ ಸಲಾಮತ್? 

  

ಪ್ರೇಮದ ಪಾಠ ಬೇಕಿಲ್ಲ ನಿಮಗೆ 
ತಾಜಮಲಿನ ಊರೊಳಗೆ ಹುಟ್ಟಿದವರಿಗೆ 
ಏ ದಿಲ್ಲಿಯ ಬದ್‍ನಸೀಬ್ ಇನ್ಸಾನ್  
ನಾವೀಗ ಅದೇ ದಿಲ್ಲಿಯ ನಿವಾಸಿಗಳು. 

  

ಮೈಖಾನದಲ್ಲಿ ಎಲ್ಲರೂ ಶರಾಬನ್ನೆ ಕುಡಿದರು 
ನೀವು ಸಾಕಿಯ ಕಣ್ಣ ಬೆಳಕು ಬೆರೆಸಿದಿರಿ. 
ಎಲ್ಲಿ ಕತ್ತಲು ಕರಗಿ ಬೆಳಕು ಶುರುವಾಗಿದೆ-  
ಗುರುತಿಸುವುದು ಕಷ್ಟ ಗಾಲಿಬ್.  

ಕತ್ತಲಲ್ಲಿ ಬೆಳಕು, ಬೆಳಕಿನಲ್ಲಿ ಕತ್ತಲು  
ಭೇದವೆ ಅಳಿಸಿಬಿಟ್ಟಿರಿ ಗಾಲಿಬ್. 
ಬೆಳಕಿನಲ್ಲೆ ಹುಡುಕಿದೆವು ಕತ್ತಲಿಗೆ ಹೆದರಿ 
ಎಲ್ಲೊ ಕಳಕೊಂಡದ್ದು ಇನ್ನೆಲ್ಲೊ ಹುಡುಕಿದೆವು 
ಯಾರದೋ ಪಾಪ ಇನ್ಯಾರದೊ ತಲೆಗೆ ಕಟ್ಟಿದೆವು. 
ನೀವು ಮುಸಲ್ಮಾನರೂ ಆಗಲಿಲ್ಲ, ಇತ್ತ ಕಾಫಿರರೂ ಆಗಲಿಲ್ಲ 
ಏನಾದರೊಂದು ಆಗಬೇಕಾದ ಒತ್ತಡದಲ್ಲಿ  
ನಾವೂ ನಲುಗಿದೆವು ಗಾಲಿಬ್. 

  

ನಮಗೆ ನೀವೇ ಒಂದು ದುನಿಯಾ 
ಪ್ರಶ್ನೆಯೂ ನೀವೆ, ಉತ್ತರವೂ ನೀವೆ 
ನಮ್ಮ ಕನ್ನಡಿಯೂ ನೀವೆ,  
ದಾಟಬೇಕಾದ ಗೆರೆಯೂ ನೀವೆ. 
ಎರಡೂ ಆಲಂನಲ್ಲಿ ಜೋತುಬಿದ್ದಿರಿ ಗೆರೆ ಎಳೆಯದೆ 
ವಿಭಜಿಸುವುದು ನಿಲ್ಲಿಸಿಲ್ಲ ನಾವಿನ್ನೂ 
ಗೆರೆ ಎಳೆದೂ ಎಳೆದೂ ಈಗ ವಿಭಜಿಸಲು 
ಉಳಿದಿರುವುದೇನೆಂದು ಹುಡುಕಿದೆವು;  
ನಮ್ಮ ದೇಹದ ಹೊರತು ಮತ್ತೇನೂ ಕಾಣುತ್ತಿಲ್ಲ ಪಾಪಿ ಕಣ್ಣುಗಳಿಗೆ. 
ನಿಜ ಗಾಲಿಬ್, ಮನುಷ್ಯನ ರಕ್ತಕ್ಕೆ ಬೆಲೆಯಿಲ್ಲ ಇಲ್ಲಿ 
ಬೆಳಗಿನ ಚಹಾದ ಜೊತೆ ರಕ್ತಸಿಕ್ತ ಛಿದ್ರ ದೇಹಗಳ 
ಮುಫತ್ ಓದಿನ ವ್ಯಾಪಾರ. ಟಿ.ವಿ.ಯಲ್ಲಿ ಅಸಲಿ 
ಹೆಣಗಳದೆ ವ್ಯವಹಾರ. ಯಾರೇನೆ ಮಾತಾಡಿದರೂ 
ಕೇಳುವುದು ಕೆಲವರದೆ ದನಿ. ಖಾಮೋಶ್ ಆಗಿದ್ದರೂ 
ತುಂಬಿ ತುಳುಕುವ ಸನ್ನಾಟಾ ನಿಮ್ಮ ಅಲ್ಫಾಜಿನಲ್ಲ್ಲಿ. 

  

ಪ್ರತಿ ಬಾರಿಯೂ ಅವರದೆ ದುವಾ ಯಾಕೆ ಮುಕಮ್ಮಲ್ 
ಆಗುವುದು. ನಮ್ಮ ಇಬಾದತ್‍ನಲ್ಲಿ ಯಾವ ಕಸುರಿದೆ ಗಾಲಿಬ್? 
ಈ ಜಾಲೀಮರು ನಿರಪರಾಧಿಗಳನ್ನೆ ಹಿಂಸಿಸಿ ಕೊಲ್ಲುವರು 
ಯಾಕೆ ಮಹಮೂದ್ ಗವಾನರೆ ಮತ್ತೆ ಮತ್ತೆ ಕೊಲೆಯಾಗುವರು. 
ಬಾಚಣಿಕೆಗಳು ಈಗ ತಮ್ಮ ದೀರ್ಘ ದಾರಿ ಕಳೆದುಕೊಂಡಿವೆ 
ಕ್ಷಣಾರ್ಧದಲ್ಲಿ ಮುಗಿಸುವ ಎಷ್ಟೆಲ್ಲ ದಾರಿಗಳು ಹುಟ್ಟಿಕೊಂಡಿವೆ. 

  

ಮೋಸ ಮಾಡಿವೆ ಆಸೆಗಳು, ಬದುಕಲು ಕಲಿಸಿವೆ ಸಬ್ರ್‍ಗಳು 
ಉರಿವ ದೀಪ ಉರಿಯಲೇಬೇಕು, ಸುಟ್ಟುಕೊಳ್ಳುವ ಪರವಾನೆಗಳು 
ಸುಟ್ಟುಕೊಳ್ಳಲೇಬೇಕು. ನೋವಿಗಷ್ಟೇ ಗೊತ್ತು ಸಾವಿನ ಬಾಗಿಲು. 
ಇವತ್ತು ಅವರು ನಾಳೆ ನಾವು. ಏನೇ ತಿಪ್ಪರಲಾಗ ಹಾಕಿದರೂ 
ಖುಶಿ ಯಾವಾಗಲೂ ಮರೀಚಿಕೆ. ದು:ಖ ಆಪ್ತ ಮಿತ್ರ.  
ಇಲ್ಲಿ ಎಲ್ಲರೂ ದಿಲೇ ನಾದಾನ್  
ಅಂಧೇರೆ ಮೇ ಭಟಕತೆ ಸಭೀ ಹೈ ಪರೇಶಾನ್. 

  

ನಿಜ ಹೇಳಿದರೆ ಹೊರಗೆ ಸಾಯುವಿರಿ 
ಹೇಳದಿದ್ದರೆ ಒಳಗೇ ಸಾಯುವಿರಿ 
ನಿಮ್ಮ ಕಾಲದ ಸಂಕಟ ನಮ್ಮ ಕಾಲಕ್ಕೂ ಬಂದಿದೆ. 
ವಕ್ತ್ ತೊ ಬೆಹತಾ ಹುವಾ ದರಿಯಾ ಹೈ ಗಾಲಿಬ್ 
ನ ವೋ ದುನಿಯಾ ಸಚ್ ಹೈ, ನ ಯೇ ದುನಿಯಾ ಸಚ್ ಹೈ. 

  

ನಿಜ ಗಾಲಿಬ್, ಮನುಷ್ಯ ತನ್ನದೇ ಮುರಿದ ಹೃದಯದ ದನಿ, 
ಕನಸುಗಳ ಜಂಗಲ್ಲಿನಲ್ಲಿ ಕಳೆದುಹೋದ ದುರ್ಬಲ. 
ಜಿಂದಗಿ ಶತರಂಜ್ ಕೀ ಖೇಲ್ ಹೈ ಗಾಲಿಬ್ 
ವಿಧಿಯ ಆಟ ನೋಡಿ, ಸರದಿ ನಮ್ಮದೇ ಆಗಿದ್ದರೂ 
ಕಾಯಿ ಮುನ್ನಡೆಸುವ ಹಕ್ಕು ನಮಗಿಲ್ಲ. 

  

ಜೀವನ ನಾಲ್ಕು ದಿನದ ಸಂತೆ ಎಂಬುದೇನೊ ನಿಜ 
ನಾಲ್ಕು ದಿನವೇನೂ ಕಡಿಮೆಯಲ್ಲ ಸಾವಿನ ಬಾಗಿಲಲ್ಲಿ 
ಈಗಲಾದರೂ ಒಂದು ಮಾಹೋಲ್ ಸೃಷ್ಟಿಯಾಗಬೇಕು ಗಾಲಿಬ್ 
ವಫಾದಾರಿ ಹೇಗಿರುವುದು ಅಂತ ತೋರಿಸಬೇಕು ಗಾಲಿಬ್ 
ಭಲಾ ಕರ್ ಭಲಾ ಹೋಗಾ, ನಿಮ್ಮ ಮಂತ್ರವೆ ನಮಗೆ ಆಧಾರ. 
ಹಮ್ ಖುಶ್ ನಸೀಬ್ ಹೈ ಕೀ ಆಪ್ ಹಮಾರೆ ಶಾಯರ್ ರಹೇ 
ರೋಟಿ ಕಪಡಾ ಔರ್ ಮಕಾನ್ ಸಾಥ್ ಮೇ ಆಪ್ ಕಾ ಶಾಯರಿ ರಹೇ 
ಮಿರ್ಜಾ ಅಸದುಲ್ಲಾ ಬೇಗ್ ಖಾನ್ ಗಾಲಿಬ್ ಜಿಂದಾ ರಹೇ. 

ವಿಕ್ರಮ ವಿಸಾಜಿ

ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು. 

ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಸೊಂಡೂರು, ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. 

ಕನ್ನಡ ಸಾಹಿತ್ಯ ಪರಿಷತ್ತು ಯುವ ಲೇಖಕರಿಗೆ ಶ್ರೀವಿಜಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮಾಷಾ ಕವನ ಸಂಕಲನ, ರಸಗಂಗಾಧರ ಅವರ ನಾಟಕ.

ಕೃತಿಗಳು; ತಮಾಷಾ, ಗೂಡು ಕಟ್ಟುವ ಚಿತ್ರ, ವಿಕ್ರಮ ವಿಸಾಜಿ ಕಥೆಗಳು, ಬಿಸಿಲ ಕಾಡಿನ ಹಣ್ಣು (ಕವನ ಸಂಗ್ರಹಗಳು) ಬೆಳಗಿನ ಮುಖ, ನಾದಗಳು ನುಡಿಯಾಗಲೇ, ಪಠ್ಯದ ಭವಾವಳಿ (ವಿಮರ್ಶೆ) ರಸಗಂಗಾಧರ, ರಕ್ತ ವಿಮಾಪ (ನಾಟಕ) ಕಂಬಾರರ ನಾಟಕಗಳು, ಮತ್ತೆ ಬಂತು ಶ್ರಾವಣ (ಸಂಪಾದನೆ) ಗ್ರೀಕ್‌ ಹೊಸ ಕಾವ್ಯ, ಇಂದ್ರಸಭಾ, ಸಿಮೊನ್‌ ದ ಬೋವಾ (ಅನುವಾದ).

More About Author