ನಾನು ನೀನಾಗಿ ನೀನು ನಾನಾಗಿ
ಒಲುಮೆಯೊಳಾಡುವುದು ಗಾಢವಾಗಿ ಬೆಸೆಯುವುದು
ನೀನಿರದೆ ನಾನಿರಲಾಗದ ಬಂಧದಲಿ
ನೂರ್ದನಿಗಳು ಮಾರ್ದನಿಸಿ ಒಂದೇ ಜೀವಾತ್ಮದಂತೆ
ಒಮ್ಮನಸ್ಸಿನಿಂದ ಕೂಡಿ ನಡೆಯುವುದು
ನಮ್ಮೊಳಗಿನ ಭಾವ ವಿನಿಮಯದೊಳು
ಮಾತು ಪುಟಗಳ ಮೀರಿ ಸಂಪುಟವಾಗುವುದು
ನಿಶೆಯ ಹಿರಿಮೆ ಗರಿಮೆಗಳ ಬಣ್ಣಿಸುವುದು
ನಾವಿರುವ ಹಾಗೆಯೇ ಅಲ್ಲೆಲ್ಲ ಸುತ್ತಿ ಬರುವುದು
ನೀನು ಘನವಾಗಿರುವ ವೇಳೆಯಲಿ
ಎದೆ ಬಾಗಿಲಲಿ ನಿಂತು ಇಣುಕಿ ನೋಡುವುದು
ಅತ್ತಿತ್ತ ಹಾಯುವ ಭಾವಗಳನು ಮೆಲುಕು ಹಾಕುವುದು
ಇನಿತಿನಿತಾಗಿ ಕರಗಿ ಲೀನವಾಗುವ ಬಗೆಯನು ಕಾಯುವುದು
ಇಷ್ಟಗಳ ಕೂಟದಲಿ ಬಿರುಕುಗಳು ಮೂಡದಂತೆ
ಕನಸಿನ ಕೂಸುಗಳು ನಿತ್ರಾಣವಾಗದಂತೆ
ಭಾಷೆ ಪರಿಭಾಷೆಗಳ ಬಲದಲಿ ಬಲಿತು
ನಿನ್ನಂತೆ ನಾನೂ ಅನುವಾಗುವುದು
ನಾವಾಗಿರುವಾಗ ಮನಸಿಗೊತ್ತಿಕೊಂಡವುಗಳ ಸಲುವಾಗಿ
ಕಾಣದ ಕೈಗಳು ನೀಡಿದ ತೀರ್ಪಿಗೆ
ಇಷ್ಟಿಷ್ಟೇ ಉಸಿರ ಕೋಶದಿಂದಿಳಿದು ಬಯಲಿಗೆ ಬಂದು
ಹೆಜ್ಜೆಗಳ ಹೆಣೆದು ಅಖಂಡವಾಗುವುದು
ಬೆಳಕಲಿ ಅರಳಿದ ಬದುಕಿನೊಳು ಅಂತರ್ಗತವಾಗುವುದು
ಅನಿತಾ ಪಿ. ತಾಕೊಡೆ
ಅನಿತಾ ಪಿ. ತಾಕೊಡೆ
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಾಕೊಡೆಯವರಾದ ಅನಿತಾ ಪೂಜಾರಿ ಅವರು ಸದ್ಯ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಕವಿ, ಕತೆಗಾರರಾಗಿರುವ ಅನಿತಾ ಅವರು ಅಂಕಣಕಾರರೂ ಆಗಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪದವೀಧರರಾಗಿರುವ ಅವರು ಮುಂಬೈ ವಿ.ವಿ.ಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕವನ ಸಂಕಲನ), ಮರಿಯಲದ ಮದಿಮಾಲ್ (ತುಳು ಕವನ ಸಂಕಲನ), ಸವ್ಯಸಾಚಿ ಸಾಹಿತಿ, ಮೋಹನ ತರಂಗ -ಇವರ ಕೃತಿಗಳು. ಸುಶೀಲ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಅಲ್ಲಮ ಸಾಹಿತ್ಯ ಪ್ರಶಸ್ತಿ, ಕವಿರತ್ನ ಪುರಸ್ಕಾರ, ಡಿ.ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ, ಡೊಂಬಿವಲಿ ತುಳುಕೂಟದ ತುಳುಸಿರಿ ಪ್ರಶಸ್ತಿ, ಕಾವ್ಯಸಿರಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
More About Author