Poem

ವರ್ತ-ಮಾನ

ಅಂಗಳದ ಅಡಿಕೆ ಅಟ್ಟದಡಿ ನೆಟ್ಟ ಕಂಬಕ್ಕೆ
ಒರಗಿಸಿಟ್ಟ ವಯಸ್ಸಾದ ಸೈಕಲ್ಲು
ನೋಡುತ್ತ ಕುಳಿತವಳಿಗೆ ನೆನಪಾಗುತ್ತದೆ
ತನ್ನ ಸ್ಥಿತಿ-ಗತಿ-ತೋಟ-ಮನೆ
ಉಂಡುಟ್ಟು ಬದುಕಲು ಸಾಕಷ್ಟು
ಆದರೆ ಎದುರಿಗಿನ ಊರ ರಸ್ತೆಯ ತುಂಬ
ಆಚೀಚೆ ಮನೆಯ ಹುಡುಗರ ಕಾರು-ಬೈಕು
ಆಗಾಗ – ಅವರವರ ಅನುಕೂಲಕ್ಕೆ ತಕ್ಕಂತೆ
ಪುರುಸೊತ್ತಾದಾಗ ಬಂದು – ಹೋಗುವ
ಬೆಂಗ್ಳೂರು ಸೇರಿದವರ ಠಾಕು - ಠೀಕು
ನೋಡ-ನೋಡುತ್ತಲೇ ಸೆಳೆತ ಒಳಗೆ
ತನ್ನ ಮಕ್ಕಳೂ ಹಾಗಾಗಲೆಂಬ ಹಾರೈಕೆ
ಕಾಲ ಕಳೆದಂತೆ – ಅವರು ಬೆಳೆದಂತೆ
ಹುಟ್ಟೂರ ಬಿಟ್ಟು ಹೊರಟು – ಎಲ್ಲೆಲ್ಲೋ ಸೇರಿ
ಆದಾಗ ಮನೆಯತ್ತ ಭರ್ ಎಂದು
ಬರುವ ಸಂಭ್ರಮದಲ್ಲಿ ಹಿಗ್ಗಿದವಳು
ಅವರ ಮಕ್ಕಳೂ ಹೊರಕ್ಕೆ ಹಾರಿ
ತನ್ನ ಮನೆಯಂಗಳದ ಮೇಳಣ ಆಗಸದಲ್ಲಿ
ವಿಮಾನಗಳಲ್ಲಿ ಸಂಚರಿಸುವ ಸ್ಥಿತಿ ನೆನೆದು
ಪುಳಕಗೊಳ್ಳುತ್ತಲೇ ಒಳಗೊಳಗೆ
ಅಂಗಳ ಸಾರಿಸುತ್ತಲೇ ದಿನಗಳು ಉರುಳಿ
ಎಲ್ಲರೂ ದೂರಾಗಿ – ಅಪರೂಪವಾಗಿ
ಆರೋಗ್ಯದಲ್ಲೀಗ ವಿಪರೀತವಾಗಿ
ಕಾಲು ಬುಡದಲ್ಲಿ ಇದ್ದಿದ್ದರೆಂಬ ಯೋಚನೆ
ಚಿಂತೆಯಾಗಿ ಸುಡುವ ಒಡಲಿಗೆ
ಆಡುವ ಬಾಯಿಯೇ ಬತ್ತಿಹೋಗಿದೆ
ಪ್ರಪಂಚ ಬದಲಾಗುತ್ತಲೇ ಇದೆ
ಬಯಸಿದಂತೆ – ಬಂಯಸದಂತೆ – ತನ್ನಿಷ್ಟದಂತೆ!

-ರವೀಂದ್ರ ಭಟ್ಟ ಕುಳಿಬೀಡು

ರವೀಂದ್ರ ಭಟ್ಟ ಕುಳಿಬೀಡು

ರವೀಂದ್ರ ಭಟ್ಟ ಕುಳಿಬೀಡು ಅವರು ಮೂಲತಃ ಸಾಗರದ ಅಗ್ರಹಾರದವರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ. ಅವರ ಹಲವಾರು ವಿಮರ್ಶಾ  ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಯಾವುದೇ ಕೃತಿಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬಲ್ಲ, ಹೊಸ ಹೊಳಹನ್ನು ಕೊಡಬಲ್ಲ ನೋಟ ಅವರದು. ಕವಿತೆಗಳ ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. 

More About Author