ಗಿನಮತ್ತ್ಯಾರ ಕಾಶವ್ವ ಶಿವಾಪೂರ ಗ್ರಾಮಪಂಚಾಯ್ತಿಯೊಳಗ ವಿಷ ಕುಡ್ದು ಸತ್ತೋದಳಂತೆ. ಎಂಬ ಸುದ್ದಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೀರೆಮನಿ ಆದಿಯಾಗಿ ಎಪ್ಪತ್ತು ಯುಗಾದಿ ನೋಡಿ ದಣಿದಿದ್ದ ಬಾಳಪ್ಪ ಮಾಸ್ತರರು ಕೊನೆಯಾಗಿ ಕೇಳಿ ಕ್ಷಣ ಹತಾಶರಾದರು.ಎಡಗೈ ಅಂಗೈಯೊಳಗ ಬಲಗೈ ಮುಷ್ಠಿಮಾಡಿ ಗುದ್ದಿಕೊಳ್ಳುತ ತುಂಬ ಅಸ್ತವ್ಯಸ್ತನಾಗಿ ಹೋದ ಹೀರೆಮನಿ. ಹೆಂಡತಿ ತೌರಮನೆಂದು ಊರಾದ ಸಾವಳಿಗಿ ಪತ್ತಿನ ಸಹಕಾರಿ ಬ್ಯಾಂಕಿನಿಂದ 3 ಲಕ್ಷ ರೂಪಾಯಿ, ಗ್ರಾಮೀನ ಬ್ಯಾಂಕಿನಿಂದ 2 ಲಕ್ಚ ರೂಪಾಯಿ, 3 ಟೆಕ್ಕೆ ಸರಾ, ಒಂದ ಅವಲಕ್ಕಿ ಸರಾ, ಒಂದ ಬೋರಮಾಳ, ಹಾಗೂ ಅಳೆತನಕ್ಕೆ ಹೋದಾಗ ಗಿಟ್ಟಿಸಿಕೊಂಡಿದ್ದ ಪಾವಲಿ ತೂಕದ ಉಂಗುರವನ್ನು ಗೋಕಾವಿ ಇಳಗೇರ ಅಂಗಡ್ಯಾಗ ಒತ್ತೇ ಇಟ್ಟು ಅಷ್ಟೂ ದುಡ್ಡನ್ನು ಯಥೇಚ್ಚವಾಗಿ ಖರ್ಚುಮಾಡಿ ಪಂಚಾಯ್ತಿ ಇಲೆಕ್ಷನದಲ್ಲಿ ಈ ಬಾರಿ ಆರಿಸಿಬಂದು ಅಧ್ಯಕ್ಷನಾಗಿದ್ದ ಹೀರೆಮನಿಗೆ ಆತನ ಖುಷಿಯ ದಿನಗಳ ವ್ಯಾಲಿಡಿಟಿ ಅತ್ಯಂತ ಬೇಗನೆ ಕಳೆದುಕೊಂಡಿದ್ದು ಕದ್ದು ಸಿಗರೇಟ ಸೇದಲು ಹೋಗಿ ಅದನ್ನೆ ನುಂಗಿದಂಗಾಗಿತ್ತು. ಅಧ್ಯಕ್ಷಗಿರಿ ಅಧಿಕಾರದಿಂದ ವಂಚಿತನಾದ ಮನೋವೇದನೆಯಿಂದ ಗರಿಗರಿಯಾಗಿ ಇಸ್ತ್ರೀ ಮಾಡಿಟ್ಟಿದ್ದ ಹನ್ನೋಂದು ಜೊತೆ ಬಿಳಿ ಬಟ್ಟೇಗಳಿಗೆ ಒಮ್ಮೇ ತಾನೇ ಕ್ಯಾಕರಿಸಿ ಉಗುಳಿದ. ಸಾಲ, ಅಧಿಕಾರ, ದರ್ಪ ಅವಮಾನಗಳನ್ನು ನೆನೆಯುತ್ತ ಪಂಚಾಯ್ತಿಯತ್ತ ಬಂದನು. ಶಿವಾಪೂರಿನ ಗ್ರಾಮ ಪಂಚಾಯ್ತಿಯು ಪೇಟೆಯ ಮಧ್ಯಬಾಗದಲ್ಲಿದ್ದು, ಇಂದು ಸಂತೇಯ ದಿನವಾಗಿದ್ದರಿಂದ ಅಗತ್ಯಕ್ಕಿಂತ ಅಧಿಕವೆಂಬಂತೆ ಜನಸಂದಣಿ ಸೇರಿದ್ದರು. ಜನ ಒಳಗಡೆ ಇಣುಕಿ ಇಣುಕಿ ನೋಡುತ್ತಿದ್ದರು.ಇನ್ನು ನೋಡಕ್ಕಾಗದವರು ಅಸಹಾಯಕರಾದ ಕೆಲವರು ಪಂಚಾಯ್ತಿ ಅಧಿಕಾರಿಗಳನ್ನು ಅಧ್ಯಕ್ಷ-ಸದಸ್ಯರಗಳಾದಿಯಾಗಿ ಬಯ್ಯುತ್ತಿದ್ದರು. ಹುಚ್ಚನೊಬ್ಬ ಲಾಟಿ ಹಿಡಿದು ಎಲ್ಲರನ್ನು ಗದರಿಸುತ ಸ್ವಂತ ಮನೇಲಿ ಕುಂತವರನ್ನೇನು ನೋಡತೀರಿ.ಹೋಗಿ ಹೋಗಿ.. ಎಂದು ದರ್ಪ ತೋರಿಸುತ್ತಿದ್ದ. ಕಾಶವ್ವಳ ಗಂಡ ನಿಜಗುಣಿ ಹೆಂಡತಿ ಸತ್ತುದ್ದಕ್ಕೆ ಬೋರಾಡಿ ಅಳುತ್ತಿದ್ದ. ನಿಜಕ್ಕೂ ಅವನಿಗೆ ಹೆಂಡತಿ ಸತ್ತದಕ್ಕಿಂತ ಅವಳನ್ನು ಪಂಚಾಯ್ತಿ ಇಲೆಕ್ಷನಕ್ಕೆ ನಿಲ್ಲಿಸಿ ಗೆಲ್ಲಿಸಬೇಕೆಂದು ಹೋರಾಡಿ ಸೋತು, ಅದಕ್ಕಾಗಿ ಮಾಡಿದ ಖರ್ಚನ್ನು ಹೇಗೆ ಹಿಂಪಡೆಯುವದು ಅಂತ ಚಿಂತಿತನಾಗಿದ್ದ. ಕಾಶವ್ವಳ ಆರು ವರ್ಷದ ಮಗ ಮುರಿಗೆಪ್ಪ ಯಾರೋ ಕೊಟ್ಟಿರುವ ಲಾಲಿಪಾಪ ತಿನ್ನುತ ಬರುವ-ಹೋಗುವ ಜನರನ್ನು ನೋಡುತ ಸುಮ್ಮನೆ ಕುಳಿತಿದ್ದ. ಕಾಶವ್ವಳ ಬೆಂಬಲಿಗರು ಅವಳೊಂದಿಗೆ ಸೇರಿ ಇಡೀ ಪಂಚಾಯ್ತಿಯನ್ನು ಬೆಳಗಿನಿಂದ ರಣರಂಗ ಮಾಡಿದ್ದರು. ಮಾತಿಗೆ ಮಾತು,ಬಯ್ಗುಳ,ಕುರ್ಚಿ ಪತ್ರಿಕೆ, ಫೈಲು ಕಿತ್ತೆಸೆಯುವುದು.ಹಿಡಿದು ಪರಿಸ್ಥಿತಿ ತಾರಕ್ಕೇರಿತ್ತು. ಕಾಶವ್ವ ತಂದಿದ್ದ ವಿಷದ ಬಾಟಲನ್ನು ಅಧ್ಯಕ್ಷರಾದಿಯಾಗಿ ಎಲ್ಲ ಸದಸ್ಯರಿಗೆ ತೋರಿಸುತ “ ನನಗೆ ನ್ಯಾಯ ಕೊಡಿಸಬೇಕು.. ಎಂದು ಧರಣಿ ಕುಳಿತಿದ್ದಳು,ಕ್ಯಾರೇ ಎನ್ನದ ಆಡಳಿತ ಪಕ್ಷದವರು ನಾವು ನಿಮ್ಮಷ್ಟೇ ದುಡ್ಡು ಖರ್ಚುಮಾಡಿ ಇಲೆಕ್ಷನ ಗೆದ್ದಿದಿವಿ ಅದನ್ನು ನಮಗ್ಯಾರಾದರು ಕೊಡತಾರಾ..? ಎಂಬ ಮಾಮೂಲ ನಿರಾಸೆಯನ್ನು ಅವಳ ಧರಣಿಯತ್ತ ಎಸೆದು ದುಡುದುಡು ಇಳಿದು ಮನೆಯತ್ತ ಹೋಗಿದ್ದರು. ಈ ನಡುವೆ ವಿಷದ ಬಾಟಲಿಯನ್ನು ಅವಳ ಸಂಗಡಿಗರು ಹೆದರಿಸಲೆಂದು ಕೊಟ್ಟಿದ್ದರೆ ಹೊರತು ಅವಳು ನಿಜವಾಗಿಯು ಕುಡಿದು ಅನಾಹುತ ಮಾಡಿಕೊಳ್ಳಲೆಂದಲ್ಲ.ಕುಡಿದದ್ದು ಅಲ್ಪವಾದರೂ ಪರಿಣಾಮ ಗಂಭೀರವಾಗಿಯೆ ಪರಿಣಮಿಸಿದ್ದು ದುರಾದುಷ್ಟಕರ. ಸದರಿ ಗ್ರಾಮ ಪಂಚಾಯ್ತಿ ವ್ಯಾಪಿಯೊಳಗಿನ ಎಲ್ಲ ನಾನ್-ಎಂಬಿಬಿಎಸ್ ವೈದ್ಯರುಗಳೆಲ್ಲ ಹೋರಾಡಿ ಕೈ ಚಲ್ಲಿದರ ಪರಿಣಾಮವಾಗಿ ಅವಳು ಸಾಯುವ ಮೂಲಕ ಶಿವಾಪೂರ ಗ್ರಾಮಪಂಚಾಯ್ತಿಗೆ ಒಂದು ಶಿರೋನಾಮೆ ಬರೆದುಬಿಟ್ಟಾಗಿತ್ತು. ಅವಳ ಬೇಡಿಕೆಯಾದರು ಎನು ಅಂತೀರಾ .? ಈ ಸಲದ ಗ್ರಾಮ ಪಂಚಾಯ್ತಿ ಇಲೆಕ್ಷನನಲ್ಲಿ ನನ್ನ ವಾರ್ಡಿನ ಜನರು ನನಗೆ ವೊಟ್ ಹಾಕುತ್ತೇನೆಂದು ಹೇಳಿ ನನ್ನಿಂದ ಹಣ ಪಡೆದು ವೋಟ ಹಾಕದೆ ಮೋಸ ಮಾಡಿದ್ದಾರೆ ಇದರಿಂದ ನನ್ನ ಪ್ರತಿಸ್ಪರ್ಧಿ ಎದುರು ನಾನು ಹೀನಾಯವಾಗಿ ಸೋಲಬೇಕಾಯ್ತು.ಮೋಸ ಮಾಡಿದ ಜನರಿಂದ ನನಗೆ ನನ್ನ ಹಣ ವಾಪಸ್ಸು ಕೊಡಿಸಬೇಕು. ನನಗೆ ನ್ಯಾಯ ಕೊಡಬೇಕು ಅಂತ. ಈ ಬೇಡಿಕೆಯನ್ನು ಕೇಳಿ ನಕ್ಕವರೆಷ್ಟೋ ನಗದವರೆಷ್ಟೋ ಅಧಿಕಾರದ ಆಸೆಗೆ ಅಲವತ್ತುಕೊಂಳ್ಳುವಂಗಾಯ್ತಲ್ಲ ಅಂತ ಬೈದವರು ಅಷ್ಟೆ ಜನ. ಹೆಣವನ್ನು ಪಂಚಾಯ್ತಿಯೊಳಗಿನಿಂದ ಹೊರತಂದು ಕಟ್ಟೇಯ ಮೇಲಿಟ್ಟು ಅವಳ ಸಂಗಡಿಗರು ಗಂಡ ಎಲ್ಲ ಸೇರಿ ಕೂಗಾಡತೊಡಗಿದರು.ಅವಳ ಬಾಯಿಂದ ಸೋರುವ ವಿಷದ ಜೊಲ್ಲು ಅತ್ಯಂತ ಕೆಟ್ಟ ವಾಸನೆಯಿಂದ ಇಡೀ ಆ ಸ್ಥಳವನ್ನು ಆಕ್ರಮಿಸಿಕೊಂಡಿತ್ತು.
ಮೊಮ್ಮಗನ ನಾಮಕರಣ ಶಾಸ್ತ್ರಕ್ಕೆ ಬಿಳಿ ಪಂಚೆ,ಶರ್ಟು ಧರಿಸಿಕೊಂಡು ಅತೀ ಉತ್ಸುಕನಾಗಿ ಓಡಾಡಿಕೊಂಡಿದ್ದ ಗೋಕಾಂವಿಯ ಗ್ರಾಮ ಲೆಕ್ಕಾಧಿಕಾರಿ ಮುನಿಯಪ್ಪನಿಗೆ ಗ್ರಾಮದ ಹಳೇ ಗೆಳೆಯ ಗುಂಡಪ್ಪ ವಾಟ್ಸಪ್ ಮೂಲಕ ಕಾಶವ್ವಳ ಪೋಟೊಗಳನ್ನು ಏಕ ಕಾಲಕ್ಕೆ ಎಸ್.ಐ ಜಯಣ್ಣನಿಗು ಕಳುಹಿಸಿ ತಹಶಿಲದಾರ ಭೀಮಪ್ಪನಿಗೂ ಮಾಹಿತಿ ಒದಗಿಸಿ ಎನು ಅರಿಯದವರಂತ ಜನರೊಡನೆ ಓಡಾಡತೊಡಗಿದ್ದು ದೇವರಾಣೆಗೆ ಯಾರಿಗೂ ಗೊತ್ತಿರಲಿಲ್ಲ. ಪೋಲಿಸ ಸಬ್ ಇನ್ಸಪೆಕ್ಟರ್ ಜಯಣ್ಣ ಬೋಳು ತಲೆಯನ್ನು ಲಾಟಿಯಿಂದ ಹದವಾಗಿ ನೀವಿಕೊಳ್ಳುತ್ತಿದ್ದವನಿಗೆ ಶಿವಾಪೂರಿನ ಕಾಶವ್ವಳ ಆತ್ಮಹತ್ಯೆಯ ಕೇಸು ಉತ್ತೇಜನ ಕೊಟ್ಟಿತು. ಇಲ್ಲಾ ಉದ್ದಿಪನ ಮದ್ದಾಯಿತು. ಟೀ ಕುಡಿಯಲು ಹಾಳಾಗಿ ಹೋಗಿದ್ದ ಡ್ರೈವರನ್ನು ಕೂಗಿ “ ಎಲ್ಲಿ ಹೋದಲೆ..ಶೆರೆ ಕುಡಿಲಾಕು ಚಹಾ ಕುಡಿಲಾಕ ಒಂದ ನಮನಿ ಟೈಮ ಬೇಕು ನಿಮಗ..ನಡಿ ಶ್ಯಾಣ್ಯಾ ಅದಿ ಶಿವಾಪೂರಿಗೆ ಹೋಗಲಿ ಅಂದಾಗ ಬಾಯಿಗೆ ಹತ್ತಿಕೊಂಡಿದ್ದ ಮಿರ್ಚಿ ಬಜಿ ಗಬಾಗಬಾ ತಿಂದು ಹಾಗೇ ಬಾಯೊರಿಸಿಕೊಂಡು ಬಂದ ಜೀಪ ಎರಿದ್ದ ಶಿವಣ್ಣ ಒಂದು ಅನದೆ ಗಾಡಿ ತೆಗೆದಿದ್ದ. ಪಂಚಾಯ್ತಿ ಮುಂದ ಕೂಡಿದ ಜನರನ್ನು ಡ್ರೈವರ್ ಶಿವಣ ಸರಿಸುತ ದಾರಿ ಮಾಡಿಕೊಟ್ಟ. ಜಯಣ್ಣ ಹೆಣವಿದ್ದ ಕಡೆ ಬಂದು ಒಂದ ಸಲ ನೋಡಿ ಹೇಗೆ ಎತ್ತ ಅಂತ ವಿಚಾರಿಸುತ ಹೊರಬಂದ. ನಿಜಗುಣಿ ಅವರ ಹಿಂದೆ ಹಿಂದೆ ಬರುತ “ ಅನ್ಯಾಯವಾಗಿ ನನ್ನ ಹೆಂಡತಿನ ಕೊಂದು ಬಿಟ್ಟರು ಸರ್ ಇವರು ಅಂತ ಜೋರಾಗಿ ಅಳತೊಡಗಿದ.ಬಾಯಲ್ಲಿದ್ದ ಲಾಲಿಪಾಪ ಕೂಡ ಮುಗಿದಿದ್ದರಿಂದ ನಿಜಗುಣಿಯ ಮಗ ಕೂಡ ಅಪ್ಪನ ಜೊತಿಗಿ ಅಳಲಾರಂಭಿಸಿದ. ಮಹಜರು ಪಂಚನಾಮೆ ಎಲ್ಲ ಮುಗಿಸಿ ಹೆಣವನ್ನು ಗೌರ್ಮಮೆಂಟ ಆಸ್ಪತ್ರೆಗೆ ಸಾಗಿಸಿಲಾಯಿತು. ನಿಜಗುಣಿಯನ್ನು,ಪಂಚಾಯ್ತಿ ಅಧ್ಯಕ್ಷ ಹೀರೆಮನಿಯನ್ನು ಜೀಪಿನೊಳಗೆ ಕೂಡ್ರಿಸಿಕೊಂಡು ಸ್ಟೇಷನ್ನತ ಜೀಪು ವಾಪಸ್ಸು ಹೊಯ್ತು. ಇಲ್ಲಿಗೆ ಹರ ಹರಾ ಇಲ್ಲಿಗೆ ಶಿವ ಶಿವಾ ಎಂಬಂತೆ ಕಾಶವ್ವಳ ಜೀವನದ ಲೋಕ ರೂಢಿಗಳು ಊರ ತೊರೆದು ಹೋದವು. ಜನ ಅವಳನ್ನು ಆ ಜೀಪು ಓಡಿ ಹೋದಂತೆ ತಮ್ಮ ಮನಸ್ಸಿನಿಂದ ತೆಗೆದು ದಿನದ ಕಾರ್ಯದತ್ತ ತೊಡಗಿಕೊಂಡರು.
****
ಒಂದೂವರೆ ಎಕರೆ ಉಸುಕಿನ ಭೂಮಿಯನ್ನು ಉಳಮೆ ಮಾಡಿಕೊಂಡಿದ್ದು ಅದರಲ್ಲಿಯೆ ಜೋಳ, ಭತ್ತ, ರಾಗಿ, ಕಬ್ಬು ಈ ಸಾಮಾನ್ಯ ಬೆಳೆಗಳನ್ನೆ ಮೆಣಸು, ಯಾಲಕ್ಕಿ ಕರ್ಜೂರು,ಬದಾಮು ರೇಂಜಿಗೆ ಬೆಳೆಯುವ ಕನಸು ಹೊತ್ತು ನೂರಕ್ಕೆ ನೂರರಷ್ಟು ಪರಿಶ್ರಮ ಪಟ್ಟು ದುಡಿಯುವ ಸಂಭಾವಿತ ಅತೀ ಸಣ್ಣ ರೈತ ನಿಜಗುಣಿ.ಊರಲ್ಲಿ ಎಲ್ಲರಿಗೂ ಪರಿಚಿತನಾದರು ಅವಶ್ಯವಾಗಿ ಎಲ್ಲರು ನೆನೆಸಿಕೊಳ್ಳಬೇಕಾದ ಆಸಾಮಿಯೆನಲ್ಲ ಆದರೆ ಅನ್ಯಾವಾಗಿಯಾದರು ಎಲ್ಲರ ಮನಸ್ಸಿನಲ್ಲಿ ಉಳಿಯಬೇಕಾಗಿ ಬಂದವ. ಊರಲ್ಲಿ ಗೌಂಟಿ ಔಷಧಿ ಕೊಡುವ ಏಕೈಕ ಗ್ರಾಮವೈದ್ಯ, ಉಳುಕು ಬಿಡಿಸುವುದರಲ್ಲಿ ಎತ್ತಿದ ಕೈ. ನರಗಳ ತೊಡಕು ಬಿಡಿಸುವುದು, ಬೆನ್ನುಮೂಳೆ ನೋವು, ಒಳಪೆಟ್ಟಿಗೆ ಔಷದಿ ಕೊಡುತ ಹೆಸರುವಾಸಿಯಾದವನು.ಮುಗಿಲು ನೋಡಿ ಮುಹೋರ್ತ ಹೇಳುವ ಏಷ್ಯಾದ ಏಕೈಕ ಪಂಡಿತ. ಹೇಳಿದ್ದು ಸುಳ್ಳಾಗಿಲ್ಲ ಅದರಲ್ಲಿ ಕಾಕತಾಳಿಯವು ಅಡಗಿದೆ ಅಂಬೊದು ಗ್ರಾಮಸ್ಥರ ಮಾತು. ಅದರೆ ತನ್ನ ಹೊಲದಲ್ಲಿ ಯಾವ ದಿನ ಯಾವ ಬೀಜ ಬಿತ್ತಬೇಕು, ಬೆಳೆಗೆ ಬಂದ ರೋಗ ಯಾವುದು..ಅದರ ನಿಯಂತ್ರಣಕ್ಕೆ ತಕ್ಕ ಉಪಾಯ ಯಾವೂದು ? ಸ್ವತಃ ಬುದ್ದಿಯಿಂದ ಕಂಡುಕೊಳ್ಳುತ್ತಿದ್ದ. ಇಂಗ್ಲೀಷ ಔಷಧ ಸಿಂಪಡಿಸುವುದನ್ನು ಸುತಾರಾಂ ಒಪ್ಪುತ್ತಿರಲಿಲ್ಲ.ಸಾವಯವ ಕೃಷಿಗೆ ಹೆಸರಾದವನು. ಇಂದಿನ ಡಿ.ಎ.ಪಿ. ಸಂಪೂರ್ಣ, ಯೂರಿಯಾ,11.11.11 ಹಾಗೂ ಕೆಲ ಪೊಷಕಾಂಶಗಳನ್ನು ಹೊಂದಿವೆ ಎನ್ನುವ ಗ್ರಾಮ ಸೇವಕನ ಮಾತನ್ನು ಕೇಳಿ ತನ್ನ ಕೃಷಿಯಲ್ಲಿ ಯಾವ ಬದಲಾವಣೆಯನ್ನು ಮಾಡದೆ ಶೆಗಣಿ ಗೊಬ್ಬರ, ಮಾತ್ರ ತಾಕತ್ತಿನದು ಎಂದು ಹೇಳುವ ಪಕ್ಕಾ ದೇಶಿ ತಳಿ. ಅದರಲ್ಲಿ ಯಶಸ್ಸು ಕಂಡ ಗ್ರಾಮದ ಪ್ರಥಮ ಪುರಷ ಅಂದರೆ ಅತಿಶಯೋಕ್ತಿ ಎನಿಲ್ಲ. ಇತ್ತೀಚಿನ ಯುವಪೀಳಿಗೆ ಇವನನ್ನು ಅನ್ಯ ಲೋಕದಿಂದ ಬಂದ ಜೀವಿಯಂತೆ ಕಾಣುತ್ತಿದ್ದರು. ಮೋಬೈಲಗಳಲಿ ಪೊಟೊ ತೆಗೆದು ತಮ್ಮಿಷ್ಟದ ಕಾಮಿಡಿ ಕಾಮೆಂಟಗಳನ್ನು ಹಾಕಿ ಖುಷಿ ಪಡುತ್ತಾ ಅದನ್ನೆ ಪಾರವರ್ಡ ಮಾಡುತ್ತಿದ್ದರು ರಂಜಿಸುತ್ತಿದ್ದರು.
****
ಪಕ್ಕದ ಮನೆ ತಿಮ್ಮೇಶ ತನ್ನ ಹೊಲದಲ್ಲಿ ನಿನ್ನೆ ಬೊರವೆಲ್ ಹಾಕಿಸಿದ್ದರಿಂದ 3 ಇಂಚಿನಷ್ಟು ನೀರು ಸಿಕ್ಕ ಖುಷಿಗೆ, ಸಂತೋಷದಿಂದ ಊರೆಲ್ಲ ಕರೆದು ತನ್ನ ಹೊಲದಲ್ಲಿ ಬಾಡೂಟ ಹಾಕಿಸಿದ್ದನು. ಅದನ್ನು ನೋಡಲಿಕ್ಕಾದರು ಅವನ ಹೊಲಕ್ಕೆ ಹೋಗಬೇಕೆಂದು ನಿರ್ಧರಿಸಿಕೊಂಡ ನಿಜಗುಣಿ. ತಿಮ್ಮೇಶ ರೈತ ಅನ್ನೋದಕ್ಕಿಂತ ಯುವ ರಾಜಕಾರಣಿ ಅಂದರೆ ತಪ್ಪಿಲ್ಲ.ಅವನ ಗೆಳೆಯರ ಬಳಗವೆಲ್ಲ ಆ ವೃತ್ತಿಯಲ್ಲಿದ್ದವರೆ ಹಾಗಾಗಿ ಸರ್ಕಾರದ ಅನುದಾನಗಳು,ಯೋಜನೆಗಳು, ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಮೆಂಬರು, ಗ್ರಾಮ ಪಂಚಾಯ್ತಿ ಮೆಂಬರು ಆಗಿದ್ದ, ಗ್ರಾಮೀನ ಬ್ಯಾಂಕಿನ ಮೆಂಬರು ಆಗಿದ್ದು, ದಿನಾಲು ಕನ್ನಡ ದಿನಪತ್ರಿಕೆಯೊಂದನ್ನು ತರಿಸುತ್ತಿದ್ದ. ನಿಜಗುಣಿ ಅವನ ಮನೆಗೆ ಅಮವಾಸೆಗೊ ಹುಣ್ಣಿಮೆಗೊ ಹೋಗುತ್ತಿದ್ದ ಹೊರತು ಇನ್ನಾವುದೆ ವ್ಯವಹಾರಕ್ಕಲ್ಲ. ಗ್ರಹಣದ ಬಗೆಗೆ ನಿಖರವಾದ ಮಾಹಿತಿಯನ್ನು ಪೇಪರಿನಲ್ಲಿ ಕೊಡುತ್ತಾರೆಂದು ಯಾರೋ ಹೇಳಿದ್ದ ನೆನಪು ಅದನ್ನು ತಿಳಿಯುವ ಕುತೂಹಲ ಅವನಿಗೆ. ನಿಜಕ್ಕೂ ತಿಮ್ಮೇಶನಿಗೆ ಗೊತ್ತಿದ್ದಷ್ಟು ಹೆಚ್ಚಿನ ಮಾಹಿತಿ ಊರಲ್ಲಿ ಯಾರು ಪಡೆದಿಲ್ಲ.ದಿಬ್ಬದ ಗುತ್ತಿ ಹೊಲದ ಜಿಗುಟು ಮಣ್ಣಿನ ಮೂರು ಎಕರೆ ಗದ್ದೇಗೆ ಮೂರು ಇಂಚು ನೀರು ಎನೇನು ಸಾಲದು ಎಂದು ಜನರ ಮಾತು. ಆದರೆ ಒಂದು ಎಕರೆಗಾದರು ಭರಪೂರ ನೀರು ಆಗುತ್ತಲ್ಲ ಒಣ ಬೇಸಾಯಗಿಂತ ಇದು ಎಷ್ಟೊ ಮೇಲಲ್ಲವೇ..? ತಿಮ್ಮೇಶ ಮನೆಯವರು ಅವನ ಸಂಬಂದಿಕರು, ಬೀಗರು ಹಾಗು ಊರಿನ ಗ್ರಾಮಸ್ತರಿಂದ ಅವನ ಹೊಲದ ತುಂಬ ಜನವೊ ಜನ. ಊಟದ ಪಂಕ್ತಿಯಲ್ಲಿ ತನ್ನ ಓರಿಗೆಯವರ ಜೊತೆ ಊಟಕ್ಕೆ ಕುಳಿತಿದ್ದ ನಿಜಗುಣಿ ಅವರಾಡುವ ಮಾತುಗಳನ್ನು ಕೇಳುತ್ತ ಊಟ ಮಾಡತಿದ್ದ. ತಿಮ್ಮೇಶನ ಈ ಸಾಧನೆಯ ಹಿಂದೆ ಆತನ ಓದು, ಹಣ ಜನ ಬೆಂಬಲ ಹಾಗೂ ಸರ್ಕಾರದ ಯೋಜನೆಗಳು ಕೂಡ ಕಾರಣ. ಅಷ್ಟೇ ಅಲ್ಲದೆ ಆತ ಪಿಯೂಸಿವರೆಗೆ ಓದಿದ್ದರಿಂದ, ಇಂಗ್ಲಿಷ ಔಷಧಿ ಬಾಟಿಲಿಗಳ ಮೇಲಿನ ಹೆಸರನ್ನು ಸರಾಗವಾಗಿ ಓದುತ್ತಿದ್ದುರಿಂದ, ಪಂಚಾಯ್ತಿ ಮೆಂಬರು ಆಗಿದ್ದರಿಂದ ಸರ್ಕಾರದಿಂದ ರೈತರಿಗೆ ಬಂದ ಯೋಜನೆಗಳು ಯಾವವು ? ರೈತರಿಗೆ ಸರ್ಕಾರ ಯಾ ಯಾವ ಯೋಜೆಗಳನ್ನು ಹಾಕಿಕೊಂಡಿದೆ. ಕೋಳಿ,ಕುರಿ ಸಾಕಾಣಿಕೆ,ಬೆಳೆ ಸಾಲ ಮನ್ನಾ,ಇತ್ಯಾದಿಗಳ ಬಗೆಗೆ ತಿಳಿದವನಾಗಿದ್ದರಿಂದ ಈ ಯಶಸ್ಸಿಗೆ ಕಾರಣವಾಗಿರಬಹುದು ಅಂತ ಮಾತಾಡಿಕೊಂಡರು.ಎಷ್ಟು ತುತ್ತು ಎನಿಸಿ ಊಟ ಮಾಡಿದನೊ ಗೊತ್ತಿಲ್ಲ ಆದರೆ ತಿಮ್ಮೇಶ ಪಂಚಾಯ್ತಿ ಮೆಂಬರು ಆಗಿಯೆ ಇಷ್ಟು ಮಾಡಿಕೊಂಡಿರಬೇಕಾದರೆ ಅಧ್ಯಕ್ಷನಾದವನು ಎಷ್ಟು ಮಾಡಿರಲಿಕ್ಕಿಲ್ಲ..? ಹಾಗಾದರೆ ನಮ್ಮ ವಾರ್ಡಿನಿಂದ ನಾ ಯಾಕೆ ಇಲೆಕ್ಷನಗೆ ನಿಲ್ಲಬಾರದು ಅನಿಸಿತು ನಿಜಗುಣಿಗೆ. ರಾತ್ರಿಯೆಲ್ಲ ವಿಚಾರಿಸಿದ. ಇಲೆಕ್ಷನ ಅಂದರೆ ಸುಮ್ಮನೇನಾ..?ಎಷ್ಟು ದುಡ್ಡ ಸುರಿಯಬೇಕಲ್ಲಿ.. ಜನ ಕೊಟ್ಟ ಮಾತಿನಂತೆ ಮತ ಹಾಕುತ್ತಾರೆಂದು ಎನು ಗ್ಯಾರೆಂಟಿ..? ಊರಿಗೆ ಸೊಕ್ಕು ಬಂದರೆ ಜಾತ್ರೇ ಮಾಡಬೇಕಂತೆ, ಮನುಷ್ಯನಿಗೆ ಸೊಕ್ಕು ಬಂದರ ಎಲೆಕ್ಷನಗೆ ನಿಲ್ಲಿಸಬೇಕಂತೆ..ಗಾದೆ ಮಾತು ನೆನಪಾಯ್ತು. ನಾನು ಗೆಲ್ಲತಿನಿ ಅನ್ನುವ ಕಾನ್ಪಿಡೆನ್ಸ್ ಇಲ್ಲ ಆದರೆ ಜನ ಯಾವ ಉಪಕಾರಕ್ಕೆ ನನಗೆ ಮತ ಹಾಕಬಹುದು ಅಂತ ಪ್ರಶ್ನೆ ಕಾಡುತ್ತಿತ್ತು. ಹೆಂಡತಿ ಕಾಶವ್ವಳ ಮುಂದೆ ಈ ಪ್ರಸ್ತಾಪ ಮಾಡಲು ಕೂಡ ಹೆದರುತಿತ್ತು ಮನಸ್ಸು. ನಮ್ಮ ಬಳಿ ಇರೋದಾದರು ಎನು..ಲಕ್ಷಗಟ್ಟಲೆ ದುಡ್ಡೇ..?, ಹತ್ತು ಹನ್ನೇರಡೆಕರೆ ಬೂಮಿ ಸೀಮೆಯೆ..? ಬಂಗಾರ ಬೆಳ್ಳಿ.. ಯಾವೂದು ಇಲ್ಲ..ಇಂದಿನ ದಿನಗಳಲಿ ಹಣವಿಲ್ಲದೆ ವೋಟ್ ಮಾಡುವವರು ಯಾರಿದ್ದಾರೆ ..? ಯಾಕೆಂದರೆ ತಾನೂ ಕೂಡ ವಿಧಾನ ಸಭೆ,ಲೋಕಸಭೆ ಇಲೆಕ್ಷನಗೆ ಯಾವ ಯಾವುದೋ ಪಕ್ಷದವರು ಬಂದು ದುಡ್ಡುಕೊಟ್ಟು ಚಿತ್ರ ತೋರಿಸಿ ಹೋದಾಗ ಹೆಚ್ಚು ದುಡ್ಡು ಕೊಟ್ಟ ಪಕ್ಷಕ್ಕೆ ಮಾತ್ರ ವೋಟ್ ಹಾಕಿದ್ದು ನೆನೆಪಾಗಿ..ತನ್ನ ದಡ್ಡ ವಿಚಾರಕ್ಕೆ ನಾಚಿದ ಆದರೆ ಮನಸ್ಸಿನಿಂದ ಅದು ಅಳಿಯಲಿಲ್ಲ. ಯಾಕೆಂದರೆ ಪಂಚಾಯ್ತಿ ವತಿಯಿಂದ, ಆಕಳು ಕೊಟ್ಟದ್ದಾರಂತೆ, ಮನೆ ಕೊಟ್ಟಿದ್ದಾರಂತೆ, ಬ್ಯಾಂಕಿನ ಸಾಲವನ್ನು ಮನ್ನಾ ಮಾಡಿದಾರಂತೆ.ಉಚಿತವಾಗಿ ರಸಗೊಬ್ಬರು ಕೊಡತಾರಂತೆ ಬೇರೆ ಬೇರೆ ಊರುಗಳಿಗೆ ಕರೆದುಕೊಂಡು ಹೋಗಿ ವಿವಿಧ ಬೇಸಾಯದ ವಿಧಾನಗಳನ್ನು ತೋರಿಸ್ತಾರಂತೆ ಇಷ್ಟೇಲ್ಲ ತನಗೆ ಗೊತ್ತಿಲ್ಲದ ಆಯುಷ್ಯ ಕಳೆದು ಹೋಯ್ತಲ್ಲ ಅಂತ ಕೊರಗು ಜೊತೆಗೆ ಎನಾದರಾಗಲಿ ಈ ಬಾರಿಯ ಗ್ರಾಮ ಪಂಚಾಯ್ತಿ ಇಲೆಕ್ಷನ್ನಿಗೆ ತಾನೂ ಇಲ್ಲ ಹೆಂಡತಿ ಕಾಶವ್ವಳನ್ನಾದರು ನಿಲ್ಲಿಸಿ ಗೆದ್ದ ಬರಲೇ ಬೇಕೆಂದು ಪಣ ತೊಟ್ಟು,, ಕೊನೆಗೆ ತನ್ನ ಬದಲಿಗೆ ಹೆಂಡತಿ ಕಾಶವ್ವಳನ್ನು ಚುನಾವಣೆಗೆ ನಿಲ್ಲಿಸಿದ.ಅವಳನ್ನು ಹೇಗೆ ಒಪ್ಪಿಸಿದನೋ ಅನ್ನೊದು ದಯವಿಟ್ಟು ಕೇಳಬೇಡಿ..
****
ಕಾಶವ್ವಳಿಗೆ ಬಾಯಿ ಕೊಟ್ಟು ಬದುಕಿದವರುಂಟೆ. ಪುರದೊಳಗೆ..? ಎಂದು ಆಶ್ಚರ್ಯಪಡುವ ಶಿವಾಪೂರಿನ ಜನರಿಗೆ ಅವಳು ಈ ಸಲದ ಗ್ರಾಮ ಪಂಚಾಯ್ತಿ ಇಲೆಕ್ಷನಗೆ ವಾರ್ಡ ನಂಬರ ಮೂರರಿಂದ ಸ್ಫರ್ಧಿಸುತ್ತಿದ್ದಾಳೆಂದು, ಹಾಗೂ ಹಳೇ ಮೆಂಬರ ತಿಮ್ಮೇಶ ವಿರುದ್ದ ಮಹಿಳಾ ಅಭ್ಯರ್ಥಿಯಾಗಿ ನಿಂತ ಸುದ್ದಿ ಗುಲ್ಲ ಆದ್ದುದ್ದು ತಡ, ಊರ ಜನ ತಮ್ಮ ಕೈಯನ್ನು ತಾವೇ ಜಿಗುಟಿಕೊಂಡು ವಾಸ್ತವವನ್ನು ಪರೀಕ್ಷಿಸಿಕೊಂಡರು. ಯುವ ಜನರಂತು ಹುಚ್ಚೆದ್ದು ಕಾಮಿಡಿ ಮಾಡಿದ್ದೆ ಮಾಡಿದ್ದು. ಊರ ಜನ, ವಾರಿಗೆಯವರು ಇಬ್ಬರನ್ನು ವಿಚಿತ್ರವಾಗಿ ಗಮನಿಸಿದ್ದು ಹುಬ್ಬೇರಿಸುವಂತೆ ಮಾಡಿದ್ದು ಅಚ್ಚರಿಯೇನಲ್ಲ. ಆದರೆ ವೋಟ್ ಹಾಕಬೇಕಾದರೆ ಜನ ಕೇಳತಾರೆ ನಿಜಗುಣಿ ಆಗಲಿ ಕಾಶವ್ವಳಾಗಲಿ ಜನರ ಆಂತರಿಕ ನಿರೀಕ್ಷೆಯನ್ನು ಹೇಗೆ ಪೂರೈಸಬಲ್ಲರು ಎಂದು ಊರಿನ ಹಳೇ ರಾಜಕೀಯ ಧುರಿಣರು ಲೆಕ್ಕಾಚಾರ ಹಾಕಿದ್ದು ಉಂಟು. ಅದಕ್ಕಾಗಿ ನಿಜಗುಣಿ ಕಾಶವ್ವಳ ಒಂದು ಬೋರಮಾಳ ಸರ್, ಇದ್ದ ಮನೇ ಮೇಲೆ ಐವತ್ತ ಸಾವಿರ ರೂಪಾಯಿ ಸಾಲ ಮಾಡಿ. ಜನರಿಗಿ ಪ್ರೀತಿಯಿಂದ ಕಾಲಿಗೆ ಬಿದ್ದು ನಿಮ್ಮೆಲ್ಲರಿಗಾಗಿ ಕೆಲಸ ಮಾಡಲು ಒಂದು ಅವಕಾಶ ನೀಡಬೇಕೆಂದು ಕೇಳಿಕೊಂಡರು. ಯಾವದೇ ರಾಷ್ಟ್ರೀಕೃತ ಪಕ್ಷದ ಟಿಕೆಟ ಪಡೆಯಲಿಲ್ಲ, ಪ್ರಸ್ತುತ ಇರುವ ಆಡಳಿತ ಪ್ಯಾನಲ್ ಜೊತೆಗೆ ರಾಜಿಯಾಗದೆ, ಇಲೆಕ್ಷನ ಎನ್ನುವ ಗಂಧ ಗಾಳಿ ಗೊತ್ತಿಲ್ಲದ ಕಗ್ಗಾಡಿನ ಅನಕ್ಷರ್ಥ ದಂಪತಿಗಳು ಈ ಸಾಹಸವನ್ನು ಗ್ರಾಮದ ಯುವ ವಿಚಾರವಾದಿ ಮೆಚ್ಚಿ ತನ್ನ ಫೇಸಬುಕ್ ವಾಲ್‍ನಲ್ಲಿ ಬರೆದುಕೊಂಡಿದ್ದು ಬಿಟ್ಟರೆ ಇನ್ನಾವ ಪ್ರಚಾರ ಆಗಿರಲಿಲ್ಲ. ತನ್ನ ವಾರ್ಡಿನಲ್ಲಿ ಇರುವ ಏಳನೂರಾ ಐದು ಮತಗಳಿಗೆ ಇಂತಿಷ್ಟು ಎಂದು ಮನೆ ಮನೆಗೆ ಹೋಗಿ ಗಂಡ ಹೆಂಡತಿ ಇಬ್ಬರೆ ಹೋಗಿ ದುಡ್ಡು ಕೊಟ್ಟು ಇದೊಂದು ಸಲ ನಮಗೆ ಆಶೀರ್ವಾದ ಮಾಡಬೇಕೆಂದು ಕೇಳಿಕೊಂಡಾಗ. ಜನ ಆಯ್ತು ಎಂದು ಹರಸಿದ್ದು ಉಂಟು, ಇನ್ನು ಕೆಲವರು ಅವರಿಂದ ಹಣ ಪಡೆದು “ ಕಾಶವ್ವ ಇದೆಲ್ಲ ನಿಮಗ್ಯಾಕ ಬೇಕಿತ್ತ.. ಬಡವ ಮನುಶ್ಯಾಳ ನೀ ಸೋತರ ಸಾಯುತನಕ ಆಳ ಆಗಾಂಗಿಲ್ಲ ಹೆಜ್ಜಿ ತಪ್ಪ ಇಟ್ಟಿದಿರಲ್ಲ ಇದಕ್ಕ ಮೊದಲ ಯಾರನ್ನಾದರು ಒಂದಮಾತ ಕೇಳಿ ಮುಂದವರಿಬಾರದಾ..? ಅಂತ ಬುದ್ದಿ ಮಾತ ಹೇಳಿದವರು ಅಷ್ಟೇ ಜನ.ನಾಳೇನೆ ಇಲೆಕ್ಷನ್ನು ಈ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇದ್ದಿರಲಿಲ್ಲ ದೇವರ ಮೇಲೆ ಭಾರ ಹಾಕಿ ಗಂಡ ಹೆಂಡತಿ ವೋಟ ಹಾಕಿ ಬಂದರು. ಆಮೇಲೆ ಸೋಲು ಗಟ್ಟಿಯಾಗಿತ್ತು. ಬರೀ ಹತ್ತೋಂಬತ್ತು ವೋಟ ಬಿದ್ದಿದ್ದವು ಕಾಶವ್ವಳಿಗೆ ತಲೆ ಚಿಟ್ಟ ಹಿಡಿದು ಹುಚ್ಚಿಯಂತಾದಳು. ನಿಜಗುಣಿ ಮೌನಿಯಾದ.ರಾತ್ರಿ ಹಗಲು ಹೊಲದಲ್ಲಿಯೆ ಉಳಿಯಲಾರಂಭಿಸಿದ. ಕಾಶವ್ವಳಿಗೆ ಊರಲ್ಲಿ ಮುಖ ಎತ್ತಿ ತಿರುಗಲು ಆಗದೆ, ಯಾರ ಜೊತೆಗೆ ಬೆರೆಯಲು ಆಗದೆ ಒದ್ದಾಡಿದಳು ಜೊತೆಗೆ ಸಾಲದ ಬಡ್ಡಿ ಬೆಳೆಯತೊಡಗಿ ಸಂಸಾರದ ಚಿತ್ತವನ್ನೆ ಕಿತ್ತು ಒಗೆದಿತ್ತು. ಪಂಚಾಯ್ತಿಗೆ ದೂರ ನೀಡಿ ಜನರಿಂದ ತನಗಾದ ಮೋಸಕ್ಕೆ ನ್ಯಾಯ ಬೇಕೆಂದು ಹಠ ಹಿಡಿದ ಪಂಚಾಯ್ತಿ ಕಟ್ಟೆ ಹತ್ತಿದಳು.
****
ಸದಿರಿ ಪ್ರಕರಣ ಪೋಲಿಷ ಮೆಟ್ಟಿಲೇರಿದ್ದು ಅಗತ್ಯ ತನಿಖೆಯ ನಂತರವಷ್ಟೆ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದು ಸ್ಥಳೀಯ ಪತ್ರಿಕೆಯೊಂದು ನಾಲ್ಕನೇ ಪುಟದ ಅಂಚಿನಲ್ಲಿ ಸುದ್ದಿ ಪ್ರಕಟಿಸಿ ಬಿಟ್ಟಿತ್ತು.ಆದರೇ ಶಿವಾಪೂರ ಜನರು ಸತ್ಯವಂತರು ಸೃಜನಶೀಲರಾಗಿದ್ದರಿಂದ ಇಂತಹ ಆರೋಪಗಳನ್ನು ಕೇಳಿ ಸುಮ್ಮನಿರದೆ ತಳ್ಳಿಹಾಕಿದರು. ನಿಷ್ಪಪಕ್ಷಪಾತದಿಂದ ಈ ಬಾರಿಯ ಇಲೆಕ್ಷನ ನಡೆದಿದ್ದು ಮತದಾರರು ಯಾರ ಆಮಿಷಕ್ಕೆ ಒಳಗಾಗದೆ ತಮಗೆ ಬೇಕಾದ ಅಭ್ಯರ್ಥಿಗೆ ಸ್ವ ಇಚ್ಚೇಯಿಂದ ವೋಟ್ ಮಾಡಿದ್ದಾರೆ.ಹಾಗಾಗಿ ಮರುಮತದಾನವಾಗಲಿ, ಅಭ್ಯರ್ಥಿಗಳ ವಿಚಾರಣೆ ಮಾಡುವುದು ಸತ್ಯಕ್ಕೆ ಮೋಸ ಮಾಡಿದಂತೆ ಸರಿ. ಎಂದು ಗ್ರಾಮದ ಹಿರಿಯ ರಾಜಕೀಯ ಧುರಿಣರೊಬ್ಬರು ಗ್ರಾಮದೇವರ ಗುಡಿಯಲ್ಲಿ ಸಭೆ ಸೇರಿಸಿ ಜನರನ್ನು ಉದ್ದೇಶಿಸಿ ಖಡಕ್ಕಾಗಿ ಹೇಳಿದಾಗ ಜನರೆಲ್ಲ ಹೌದೌದೆಂದು ತಲೆದೂಗಿದರು. ಕಾಶವ್ವಳಾಗಲಿ,ನಿಜಗುಣಿಯಾಗಲಿ ಸೋಲಿನ ನೋವಿನಿಂದ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ಅರ್ಹ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದರಲ್ಲಿ ಯಾವೂದೇ ಮೋಸಗಳಾಗಲಿ ಲಂಚದ ಆಮಿಷವಾಗಲಿ ಯಾರು ಯಾರಿಗೆಯೂ ನೀಡಿಲ್ಲ ಎಂದು ಪೋಲಿಷರಿಗೆ ಗ್ರಾಮದ ಜನರು ಹಾಗು ಹಿರಿಯರು ಬರೆದು ಕೊಟ್ಟಿದ್ದಾರಂತೆ.
****
ಇದು ಇಷ್ಟಕ್ಕೆ ಮುಗಿದಿದ್ದರೆ ಎನೂ ಅನಿಸುತ್ತಿರಲಿಲ್ಲವೆನೋ. ಶಿವಾಪೂರ ಗ್ರಾಮದ ಮೂರನೇ ವಾರ್ಡಿನ ಜನರೆಲ್ಲ ಬರುವ ಸೋಮವಾರ ನಿಜಗುಣಿ ಹಾಗು ಕಾಶವ್ವಳ ಆರೋಪಕ್ಕೆ ಪ್ರತ್ಯುತ್ತರವಾಗಿ ಮಾನನಷ್ಟ ಮೊಕದ್ದಮೆಯೊಂದನ್ನು ಸಲ್ಲಿಸಿ ಸದರಿ ದಂಪತಿಗಳ ವಿರುದ್ದ ಹೋರಾಟವನ್ನು ಗೋಕಾಂವಿಯ ಗಾಂಧಿ ಸರ್ಕಲ್‍ನಲ್ಲಿ ಕೈಗೊಂಡಿದ್ದಾರಂತೆ..ನೀವೂ ಬನ್ನಿ ಜೊತೆಗೆ ನಿಮ್ಮ ಸ್ನೇಹಿತರನ್ನು ಕರೆದು ತನ್ನಿ.. ಪ್ರಜಾಪ್ರಭುತ್ವ ಉಳಿಸಿ ಹಾಗಂತ ಭಿತ್ತಿ ಪತ್ರವೊಂದು ಹರಿದಾಡುತಿದೆ...ಬೇಕಾದವರು ಸಂಪರ್ಕಿಸಬಹುದು.
ಕಲೆ : ಎಸ್. ವಿ. ಹೂಗಾರ
ಬಸವಣ್ಣೆಪ್ಪಾ ಕಂಬಾರ
ಬೆಳಗಾವಿ ಜಿಲ್ಲೆಯ ಘೋಡಗೇರಿಯವರಾದ ಬಸವಣ್ಣೆಪ್ಪ ಕಂಬಾರ ಅವರು ಕನ್ನಡದ ಭರವಸೆಯ ಕತೆಗಾರರಲ್ಲಿ ಒಬ್ಬರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಸವಣ್ಣೆಪ್ಪಾ ಅವರು ’ಆಟಿಕೆ’, ’ಗಾಂಧಿ ಪ್ರಸಂಗ’ ಮತ್ತು ಗರ್ದಿ ಗಮ್ಮತ್ ಎಂಬ ಮೂರು ಕತಾ ಸಂಕಲನ ಪ್ರಕಟಿಸಿದ್ದಾರೆ. ಅವರ ಆಟಿಕೆ’ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್. ಅನಂತಮೂರ್ತಿ ಕತಾ ಪ್ರಶಸ್ತಿ, ಧಾರವಾಡದ ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಬೇಂದ್ರೆ ಪುಸ್ತಕ ಬಹುಮಾನ ಸಂದಿವೆ.
More About Author