Poem

ಮಾಂಗಲ್ಯ ಕಳಚಿದಾಗ

ಮೋಡವೇ ಚಲಿಸದೆ ನಿಂತಿರುವೆ
ದಿನಕರ ನಿಧಾನವಾಗಿ ಚಲಿಸುತ್ತಿರುವೆ
ಸರಿಯದು ಸಮಯ, ಕಳೆಯದು ಕಾಲ
ಗಾದೆಯೊಳಗಿನ ತತ್ತ್ವ, ಅರಿಯಿತು ಸತ್ವ
ಬೀಸುವ ಗಾಳಿ ಕೆನ್ನೆಯ ಸೋಕಿದಾಗ
ನಿನ್ನಾಸೆಯ ಹೊತ್ತು ಹೃದಯದಲ್ಲಿ ಆವೇಗ
ಉಕ್ಕುತ್ತಿದೆ ಜೀವನದಿಯಂತೆ ಕಣ್ಣೀರು
ಜೊತೆಯಾಗಿದೆ ಭವಿಷ್ಯ ನೆನೆದು ಬಂದಂತಹ ಬೆವರು
ಯಾರನ್ನ ಕರೆಯಲಿ, ಯಾರನ್ನ ಕೂಗಲಿ
ಕರೆದ ಧನಿಗೆ ಇಂಪಾಗಿ ಪ್ರತಿಧ್ವನಿಯಿಲ್ಲ
ನನ್ನ ಧಮನಿಯಲೂ ಕೂಡ ಸದ್ದಿಲ್ಲ
ಸರ್ವವೂ ಮೌನ, ಮಾಂಗಲ್ಯ ಕಳಚಿದ...

ಎಲ್ಲೋ ಹುಟ್ಟಿ ಬೆಳೆದು ಬಂದು ಇಬ್ಬರೂ ಒಬ್ಬರಾದೆವು
ನೋವು ನಲಿವು ಸುಖ ದುಃಖ ಸಮವಾಗಿ ಹಂಚಿಕೊಂಡೆವು
ಅಯಸ್ಕಾಂತ ಹೊಡೆದ ಮೇಲೆ ಅದೇ ಪಥದಲಿ ಅಂಟದು
ಕಟ್ಟಿದ ತಾಳಿ ಬಿಚ್ಚಿದ ಮೇಲೆ ಮತ್ತದೇ ಬಂಧದಲಿ ಬಾರದು।

ಜನ್ಮ ಜನ್ಮಾಂತರದಲ್ಲಿ ಕಾಪಾಡುವ ಹೊಣೆ ನನ್ನದು ಈ ಜಗದಾಗ
ಈ ಮಾತು ನೀಡಿರುವೆ ನೀನು ಮಾಂಗಲ್ಯಧಾರಣೆ ಮಾಡುವಾಗ।
ಹೆಜ್ಜೆಯ ಮೇಲೆ ಹೆಜ್ಜೆ ಇರಿಸಿ ತುಳಿಸಿದರು ಸಪ್ತಪದಿ
ಬಿಡುತ್ತಿಲ್ಲ ಜನ ನಿನ್ನ ಹಿಂದೆ ಬಂದಾಗಲು ಸಮಾಧಿ।

ಬಿಚ್ಚುತ್ತಿದ್ದರೇ ನೀ ಕಟ್ಟಿದ ತಾಳಿಯ
ಕಿತ್ತಂತ್ತಾಗುತ್ತಿದೆ ನನ್ನೀ ಹೃದಯ
ಎಲ್ಲಿ ಹೊರಟು ಹೋದೆ ಮಾತು ಮುರಿದು
ಸುತ್ತಲೂ ಆವರಿಸಿದ ಕತ್ತಲು ಕವಿದು।

ಮುಳ್ಳುಗಳಿಂದ ಚುಚ್ಚಿದ್ದರು ನೋವಾಗುತ್ತಿರಲಿಲ್ಲ ನನಗೆ
ದಹಿಸುತ್ತಿದೆ ಮನ ಗಂಡನನ್ನು ತಿಂದವಳು ಎಂದ ಮಾತಿಗೆ
ನಿನ್ನಯ ನೆನಪುಗಳಲಿ ಕಣ್ಣೀರಿಡುತ್ತಿದೆ ಕುಟುಂಬ
ಅಚ್ಚೊತ್ತಿರುವೆ ಎಂದೆಂದು ಅಳಿಸದ ನಿನ್ನ ಬಿಂಬ |

ನಡೆಯುವ ದಾರಿಯು ಕೂಡ ಸಾಗುತ್ತಿಲ್ಲ
ಹೆಜ್ಜೆಹೆಜ್ಜೆಗೂ ನೆನಪಾಗುತಿದೆ ನಿನ್ನ ಮಾತೆಲ್ಲಾ
ನಾ ಮಾಡದ ತಪ್ಪಿಗೆ ನನಗೇಕೆ ಈ ಶಿಕ್ಷೆ
ನೀನಿಲ್ಲದೆ ನನಗೆ ಬಾರದು ಶ್ರೀರಕ್ಷೆ |

ಜಗದ ಮುಕ್ಕೋಟಿ ದೇವರುಗಳಿದ್ದರೇನು?
ನಿನ್ನ ಸರಿಸಮ ಯಾರ ಬಳಿಯು ನಾ ಕಾಣೇನು
ಬಿಚ್ಚಿದ ಬಳಿಕ ಆಯಸ್ಸಿನ ಗಂಟು
ಕರಗುವುದು ಶರೀರಕ್ಕೆ ಅಂಟಿದ ನಂಟು ।

ಬದುಕುವೆ ನಾನು ನೀವು ತಿಳಿಸಿದ ದಾರಿಯಲಿ
ಬರುವುದ ಸ್ವೀಕರಿಸಿ ಮುಂದೆ ನಡೆಯುವೆ ಬಾಳಿನಲಿ
ಸೇರುವೆ ಬಂದು ಮುಂದೊಂದು ದಿನ ಓ ಇನಿಯ
ತೀರಿಸಿ ಬರುವೆ ನಿನ್ನ ಋಣವ ಕಾಯುತ್ತಿರು ನನಗಾಗಿ
ಓ ನನ್ನ ಜೀವದ ಒಡೆಯ॥

- ಸಂಕಲ್ಪ

ಡಿ.ಓ. ಸದಾಶಿವ (ಸಂಕಲ್ಪ)

`ಸಂಕಲ್ಪ' ಕಾವ್ಯನಾಮದ ಮೂಲಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಡಿ.ಓ ಸದಾಶಿವ ಅವರು ಜನಿಸಿದ್ದು 1986 ಜನವರಿ 14ರಂದು. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ದೇವಿಗೆರೆಯವರು. ತಾಯಿ ಪಾರ್ವತಮ್ಮ. ತಂದೆ ಓಂಕಾರಪ್ಪ. ಹುಟ್ಟೂರಾದ ಕಂಗುವಳ್ಳಿಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಹೊಸದುರ್ಗ ಸರ್ಕಾರಿ ಪದವಿ ಕಾಲೇಜಿನಿಂದ ಕಾಮರ್ಸ್‌‌ ವಿಷಯದಲ್ಲಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಹೊಸದುರ್ಗ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅಲಂಕಾರ-ಇವರ ಮೊದಲ ಕವನ ಸಂಕಲನ. 

More About Author