ಬದುಕು ಕಟ್ಟಿಕೊಳ್ಳಲು ನಾನು ವೈಜಯಂತಿಪುರವನ್ನು ಬಿಟ್ಟು ಮುಂಬೈ ಸೇರಿ ಅನೇಕ ವರ್ಷಗಳಾದರೂ, ಪ್ರತಿಬಾರಿ ಊರಿಗೆ ಹೋದಾಗ ಕುದುರೆಹೊಂಡದ ಬಯಲನ್ನು ಮಾತ್ರ ನೋಡದೇ ವಾಪಸ್ ಹೋಗುತ್ತಿರಲಿಲ್ಲ. ಅಮ್ಮನಿಗೆ ನಾನು ಅಲ್ಲಿಗೆ ಹೋಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಪ್ರತಿಸಾರಿ ಹೋಗುವಾಗ ಒಂದಲ್ಲ ಒಂದು ಮಾತು ಹೇಳುತ್ತಲೇ ಇದ್ದಳು.
ಮಗು... ನೀ ಊರಲ್ಲಿ ಎಲ್ಲಿಗೆ ಬೇಕಾದ್ರು ಹೋಗು... ಆದ್ರೆ ಕುದುರೆಹೊಂಡದ ಬಯಲ ಕಡೆ ಮಾತ್ರ ಹೋಗ್ಲೇಬೇಡ ಕಣೋ... ಜನ ಮಾತಾಡೋದು ಸರಿ ಇಲ್ಲ... ಅಲ್ಲಿಗೆ ಹೋದೋರು ಒಂದಲ್ಲ ಒಂದು ರೀತಿ ತೊಂದ್ರೆ ಮಾಡ್ಕೊಂಡು ಬರ್ತಿದಾರೆ, ಮೊನ್ನೆ ಕೂಡ ಆ ದಾರೀಲಿ ಬರುವಾಗ ಬೈಕ್ ಆಕ್ಸಿಡೆಂಟ್ ಆಗಿ ಇಬ್ರನ್ನೂ ಹುಬ್ಬಳ್ಳಿ ಕಿಮ್ಸ್ಗೆ ಸೇರಿಸಿದ್ದಾರಂತೆ ಕಣೋ...ಇದ್ನ ಹೊರ್ತಾಗಿ ಎರಡು ವಾರದ ಹಿಂದೆ ಗೋವಾದ ಕಡೆಯವ್ರು ಶಿವಮೊಗ್ಗ ಕಡೆ ಹೋಗುವಾಗ ರಾತ್ರಿ ಹೊತ್ತು ಅದೇ ದಾರೀಲಿ ಆಕ್ಸಿಡೆಂಟ್ ಮಾಡ್ಕೊಂಡಿದ್ದಾರೆ. ಕಾರಲ್ಲಿರೋ ಜೀವ ಉಳಿದ್ರೂ ಕಾರ್ ಮಾತ್ರ ಚೂರು ಬಿಡ್ದಂಗೆ ಹಾಳಾಗಿತಂತೆ ಕಣೋ... ಜನ ಈ ತರ ಮಾತಾಡದಕ್ಕೂ ವಾರಕ್ಕೊಂದ್ಸಲ ಏನಾದ್ರೂ ಈ ತರ ಆಗೋದಕ್ಕೂ ನನಗ್ಯಾಕೋ ಒಂಥರಾ ಬೇಡ ಅನ್ಸುತ್ತೆ ಮಗಾ... ದಯವಿಟ್ಟು ನಾ ಹೇಳೋದ ಒಂದ್ಸಲ ಕೇಳ...
ಅಮ್ಮಾ... ಜನ ಈ ರೀತಿ ಸಾಯೋದಕ್ಕೂ ಆ ಜಾಗಕ್ಕೂ ಒಂದಕ್ಕೊಂದು ಲಿಂಕ್ ಯಾಕಮ್ಮ ಮಾಡ್ತೀಯಾ... ಆ ಬೈಕು ಕಾರಿನವ್ರು ಕುಡಿದು ಗಾಡಿ ಓಡಿಸಿರ್ಬೋದು. ಅದ್ಕೆ ಏನಾದ್ರೂ ತೊಂದ್ರೆ ಮಾಡ್ಕೊಂಡಿರ್ಬೋದು. ದಿನಾ ಅದೇ ರೀತಿ ಎಷ್ಟೊಂದು ಗಾಡಿ ಓಡಾಡುತ್ತೆ. ಆದ್ರೆ ಎಲ್ಲಾ ಗಾಡೀನೂ ಹಂಗೆ ಆಗುತ್ತಾ... ಹಂಗೆಲ್ಲಾ ಆಗಲ್ಲ ಬಿಡಮ್ಮ... ನಾನು ಸುಮ್ಮನೆ ಹೋಗಿ ಬರ್ತೀನಿ. ಅಲ್ಲಿರೋ ಬೀರಪ್ಪ ದ್ಯಾವ್ರ ದರ್ಶನ ಮಾಡ್ಕೊಂಡು ಬರ್ತೀನಿ...
ನೀ ಬೀರಪ್ಪನ ದರ್ಶನ ಮಾಡ್ಬೇಕು ಅನ್ನೋದಾದ್ರೆ... ಅದೇ ಮೂಲಿಮನಿ ಜಮೀನ್ ಕಡೆಯಿಂದ ನೋಡಿದ್ರು ಆ ದ್ಯಾವ್ರು ನಿಂಗ ಕಾಣ್ತಾನೆ. ಅಲ್ಲಿಂದಾನೇ ಕೈ ಮುಗಿದು ಬಾರಪ್ಪ... ನಾವು ನಿತ್ಯ ಇಲ್ಲೇ ಇರೋರು... ನೀನೋ ಯಾವಾಗ್ಲೋ ಒಂದು ಸಲ ಊರಿಗೆ ಬಂದು ಹೋಗೋನು... ಸುಮ್ಮನೆ ಇಲ್ಲಿಗೆ ಬಂದು ತೊಂದ್ರೆ ಮಾಡ್ಕೊಂಡು ಹೋದ ಅನ್ನೋ ರೀತಿ ಮಾತು ಬರಬಾರ್ದು ಅಲ್ವಾ...?
...ಅಮ್ಮ ಬಿಡಮ್ಮ. ನಂಗೇನು ಆಗೊಲ್ಲ, ಹೆದ್ರಬೇಡ... ಕೇಡು ಬಯಸೋ ಜನರಿಗೆ ಕೆಟ್ಟದ್ದೇ ಆಗುತ್ತೆ... ಹಂಗಂತ ನಾವು ಒಳ್ಳೆ ಕೆಲಸ ಮಾಡ್ದೆ ಇರೋಕೆ ಆಗುತ್ತಾ... ನೀ ಸುಮ್ನೀರು... ನಾನೇನು ಇದುವರ್ಗೂ ಯಾರಿಗೇ ತೊಂದ್ರೆ ಮಾಡಿಲ್ಲ, ಮಾಡೋದು ಇಲ್ಲ. ನಂಗೇನು ಆಗೊಲ್ಲ ಬಿಡಮ್ಮ...
ಬೇಡ ಕಣ್ಮಗ... ನಾ ಹೇಳೋದನ್ನ ಸ್ವಲ್ಪ ಕಿವಿಗೊಟ್ಟು ಕೇಳೋ... ನಿನ್ ಮಾವಂದ್ರು ಆ ಜಮೀನನ್ನ ಯಾಕ ಮಾರಿದ್ರೂಂತ ನಿಂಗೆ ಗೊತ್ತೇ ಇಲ್ಲ. ಅದು ಇರೋವರ್ಗೂ ನಮ್ಗೆಲ್ಲಾ ಎಷ್ಟು ತೊಂದ್ರೆ ಆಯ್ತು... ಎಷ್ಟು ಜನ ನಮ್ಮ ಕಣ್ಮುಂದೆ ಸತ್ರು ಅನ್ನೋದು ನಿಂಗೆ ಗೊತ್ತಿಲ್ದೆ ಇರ್ಬೋದು. ಅದನ್ನು ಮಾರಿದ್ಮೇಲೆ ನಮ್ಗೆ ಅಂಟಿರೋ ಅನಿಷ್ಟ ತಪ್ಪಿದ್ದು. ನಮ್ಗೂ ನಿನ್ನ ಮಾವಾರ ಮನಿಗೂ ಒಳ್ಳೆದಾಗಿದ್ದು... ಏನೋ ಆ ಕುದುರೆಹೊಂಡದ ಬೀರಪ್ಪನ ಕೃಪೆ ನಮ್ ಮ್ಯಾಲ ಇರೋದ್ದಕ್ಕ ನಾವೆಲ್ಲ ಬದುಕಿ ಉಳ್ದವಿ... ಇಲ್ಲಾಂದ್ರೆ ನಾವು ಮನಿಮಠ ಬಿಟ್ಟು ಊರು ಬಿಡೋ ಪರಿಸ್ಥಿತಿ ಬರ್ತಿತ್ತು...
ನಾನು ಕುದುರೆಹೊಂಡದ ಕಡೆ ಹೋಗುವುದನ್ನು ತಪ್ಪಿಸಲು ಅಮ್ಮ ತನ್ನ ಹೊಟ್ಟೆಯಲ್ಲಿದ್ದ ಎಲ್ಲ ವಿಚಾರಗಳನ್ನು ಹೇಳುತ್ತಲೇ ಇದ್ದಳು. ಕೆಲವು ವಿಚಾರಗಳ ಸತ್ಯ ನನಗೆ ಗೊತ್ತಿದ್ದೆ ಆಗಿದ್ದರಿಂದ ಅವಳ ಮುಂದೆ ನಾನು ವಿನಾಕಾರಣ ವಾದ ಮಾಡಲು ಹೋಗಲಿಲ್ಲ. ಕುದುರೆಹೊಂಡದಲ್ಲಿ ಸಿಕ್ಕ ಸತ್ತ ಹೆಣಗಳನ್ನು ನೋಡಿದ ನೆನಪು ಈಗಲೂ ನನ್ನ ಕಣ್ಮುಂದೆ ಇದೆ. ಆದರೂ ಕುದುರೆಹೊಂಡದ ಬಯಲು ತನ್ನ ಒಡಲಿನಲ್ಲಿ ಅನೇಕ ಬಾಲ್ಯದ ನೆನಪುಗಳನ್ನು ಹೊತ್ತು ನಿಂತಿದೆ. ಆ ಸುಂದರ ನೆನಪುಗಳನ್ನು ಇನ್ನೊಮ್ಮೆ ನೆನಪು ಮಾಡಿಕೊಳ್ಳಲಿಕ್ಕಾದರೂ ನಾನು ಅಲ್ಲಿಗೆ ಹೋಗಿಬರಬೇಕು ಅಂತ ಪ್ರತಿಬಾರಿ ಊರಿಗೆ ಬಂದಾಗಲೆಲ್ಲ ಅನಿಸುತ್ತಿತ್ತು. ಹೀಗೆ ಅನಿಸಿದಾಗಲೆಲ್ಲ ಅಮ್ಮನಿಗೆ ತಿಳಿಸದೇ ಕುದುರೆಹೊಂಡದ ಕಡೆಗೆ ಹೋಗಿ ಬರುತ್ತಿದ್ದನಷ್ಟೇ! ಹೀಗೆ ನಾಲ್ಕೈದು ಬಾರಿ ಹೋಗಿ ಬಂದುದರಲ್ಲಿ ಒಂದು ಬಾರಿ ಮಾತ್ರ ನನಗೆ ಸರಿಸುಮಾರು ಸಾಯಂಕಾಲ ಏಳು ಗಂಟೆಯ ಹೊತ್ತಿಗೆ ದೇಹ ಹಿಂಡಿದಂತೆ, ಮೈಯನ್ನು ಯಾರೋ ಬಿಗಿಹಿಡಿದು ಅಪ್ಪಿಕೊಂಡಂತೆ, ಬೆನ್ನನ್ನು ಸವರಿದ ರೀತಿ ಕೆಟ್ಟ ಘಟನೆಯಾಗಿದ್ದು ಬಿಟ್ಟರೆ, ಉಳಿದ ಸಮಯದಲ್ಲಿ ನಾನು ಅದನ್ನು ಸಹಜವಾಗಿಯೇ ನೋಡಿಕೊಂಡು ಬರುತ್ತಿದ್ದೆ... ಅಮ್ಮ ಕುದುರೆಹೊಂಡದ ಕಡೆಗೆ ಅಲ್ಲಾದ ಅಪಘಾತಗಳ ಬಗ್ಗೆ ಈಗ ತುಂಬಾ ಹೆದರಿದ್ದಾಳೆ. ಕಪಗೇರಿ, ತಿಗಣಿ, ಸಂಪಗೋಡು, ನರೂರು ಕಡೆಯ ಜನರಿಗೆ ಆ ದಾರಿಯಲ್ಲಿ ಹೋಗುವಾಗ ಆಗಿರುವ ಕೆಟ್ಟ ಘಟನೆಗಳನ್ನು ಕೇಳಿಸಿಕೊಂಡಿದ್ದಾಳೆ. ಅದೇ ಕುದುರೆಹೊಂಡದಲ್ಲಿ ಆಕೆಯು ಅಜ್ಜನ ಕಾಲದಿಂದಲೂ ವಕ್ಕಲುತನದ ಕೆಲಸ ಮಾಡಿಕೊಂಡು ಬಂದವಳೇ! ಅವಳಿಗೂ ಕುದುರೆಹೊಂಡದ ಜಮೀನಿನಲ್ಲಿ ಎರಡು ಎಕರೆ ಪಾಲು ಇದ್ದರೂ ಅದನ್ನು ಆಕೆ ಯಾಕೋ ತೆಗೆದುಕೊಳ್ಳಲೇ ಇಲ್ಲ. ಅದೇ ಊರಲ್ಲಿದ್ದ ತವರುಮನೆಯ ಹಂಗನ್ನು ಅವಳು ಎಂದೋ ಮರೆತುಬಿಟ್ಟಿದ್ದಳು. ಗಂಡನ ಕಡೆಯಿಂದ ಬಂದ ಈಡೂರಿನಲ್ಲಿದ್ದ ಎರಡು ಎಕರೆ ಜಮೀನನ್ನು ಗೇಣಿಕೊಟ್ಟು ವರ್ಷಕ್ಕೆ ಬರುವ ಇಪ್ಪತ್ತು ಚೀಲ ಭತ್ತವನ್ನು ಮಾರಿಕೊಂಡು ಸುಖದಿಂದ ಇದ್ದ ಜೀವ ಆಕೆ. ಜೀವನದಲ್ಲಿ ಅತಿಯಾದ ಆಸೆಯನ್ನಿಟ್ಟುಕೊಳ್ಳದ ಆಕೆ ನನ್ನಲ್ಲೂ ಒಂದು ರೀತಿಯ ಸಂತೃಪ್ತಿಯ ಬದುಕನ್ನೇ ಕಲಿಸಿದ್ದಳು. ಆದರೂ ವಯೋಸಹಜವಾದ ಹಠ, ಹುಂಬತನ ನನ್ನಲ್ಲೂ ಮನೆ ಮಾಡಿದ್ದರಿಂದ ಒಮ್ಮೊಮ್ಮೆ ವಿವೇಚನೆಯಿಂದ ವರ್ತಿಸದೇ ಇರುವುದನ್ನು ಕಂಡು ಆಕೆ ಬೇಸರಪಟ್ಟುಕೊಳ್ಳುತ್ತಿದ್ದಳು. ಈಗ ಕುದುರೆಹೊಂಡದ ಕಡೆಗೆ ಹೋಗಬೇಡ ಅನ್ನುತ್ತಿದ್ದಾಳೆ. ನನಗೋ ನನ್ನೂರು ವೈಜಯಂತಿಪುರಕ್ಕೆ ಬಂದಾಗಲೆಲ್ಲ ಒಮ್ಮೆಯಾದರೂ ಊರದೈವ ಶ್ರೀಮಧುಕೇಶ್ವರನನ್ನು, ಕುದುರೆಹೊಂಡದ ಬೀರಪ್ಪ ದ್ಯಾವರನ್ನೂ ನೋಡದೇ ಇದ್ದರೆ ಸಮಾಧಾನವಾಗುತ್ತಿರಲಿಲ್ಲ. ಒಂದು ದಿನವಾದರೂ ಕುದುರೆಹೊಂಡದ ಬಯಲಿನ ಕಡೆಗೆ ಹೋಗಿ ಬಂದೆ ಅನ್ನೋ ಸಂತೃಪ್ತಿ ನನಗಿರುತ್ತಿತ್ತು. ಮುಂಬೈಯಲ್ಲಿರುವಾಗಲೂ ಮತ್ತೆ ಅಲ್ಲಿಗೆ ಹೋಗಿ ಎಂದಿನ ಬದುಕನ್ನು ಮುಂದುವರಿಸುವವರೆಗೂ ಅದು ಕಾಡುತ್ತಿತ್ತು. ಇದ್ದ ಊರಿನಲ್ಲಿ ಏನೂ ಮಾಡಲಾಗದೇ ಬದುಕು ರೂಪಿಸಿಕೊಳ್ಳಲು ಮೈಸೂರು-ಬೆಂಗಳೂರು ಈಗ ಮುಂಬೈವರೆಗೆ ನನ್ನ ಅಲೆಮಾರಿತನ ಮುಂದುವರಿದರೂ, ಮತ್ತೆ ಜೀವನದಲ್ಲಿ ಚೆನ್ನಾಗಿ ದುಡ್ಡು ಮಾಡಿಕೊಂಡು ಬದುಕಿಗೆ ಸ್ವಲ್ಪ ಭದ್ರತೆ ಬಂದ ಮೇಲೆ ಮರಳಿಮಣ್ಣಿಗೆ ಅನ್ನುವಂತೆ ವೈಜಯಂತಿಪುರಕ್ಕೆ ಹೋಗಿ ನೆಲೆಸಬೇಕೆಂಬ ತುಡಿತ ಮಾತ್ರ ಹಾಗೆಯೇ ಇತ್ತು. ಮುಂಬೈ ಎಂಬುದು ಕಲಾತ್ಮಕ ನಗರ, ಅಲ್ಲಿನ ವ್ಯಾವಹಾರಿಕ, ಜಾತ್ಯಾತೀತ ಮನಸುಗಳ ನಡುವೆ ಸಣ್ಣ ಸಣ್ಣದರಲ್ಲೂ ಖುಷಿಪಟ್ಟು ಸಂತೃಪ್ತಿಯನ್ನು ಕಂಡ ನನಗೆ ಯಾವತ್ತೂ ಮುಂಬೈ ಜೀವನದ ಅಂತಿಮ ನಿಲ್ದಾಣವೆಂದು ನನಗೆ ಕಾಣಲೇ ಇಲ್ಲ. ಅದೊಂದು ಮಾಯಾ ಬಜಾರು... ಬಯಸಿದ್ದೆಲ್ಲವೂ ಅಂದುಕೊಂಡಿದ್ದೆಲ್ಲವನ್ನೂ ಅಲ್ಲಿ ಸಾಧಿಸಬಹುದು. ಧರ್ಮದ ಮಾರ್ಗವೋ, ಅಧರ್ಮದ ಮಾರ್ಗವೋ, ಹಣ ಕೂಡಿ ಬರುವುದಷ್ಟೇ. ಆದರೆ ಕುದುರೆಹೊಂಡದ ಬಯಲಲ್ಲಿ ಕೂತರೆ ನನ್ನೊಳಗೆ ಆಗುವ ಖುಷಿಯ ಮುಂದೆ ಮುಂಬೈನ ಗೇಟ್ವೇ ಆಫ್ ಇಂಡಿಯಾದ ಮುಂದೆ ನಿಂತು ವಡಾಪಾವ್ ತಿನ್ನುವುದರಲ್ಲೋ, ತಾಜ್ ಹೋಟೆಲ್ನ ಕೆಫೆಟೇರಿಯಾ ಅಂಗಳದಲ್ಲಿ ನೆಮ್ಮದಿಯಿಂದ ಕೂತು ಕಾಫಿ ಹೀರುವ ಸುಂದರ ಕ್ಷಣವೂ ನನಗೆ ಸ್ವಲ್ಪ ಸಪ್ಪೆಯೇ! ವೈಜಯಂತಿಪುರ ನನ್ನ ಪಾಲಿಗೆ ಅದೊಂದು ವಿಸ್ಮಯಲೋಕ. ಬಾಂಬೆಯ ಆ ಮಾಯಾಬಜಾರಿಗಿಂತ ನನ್ನೂರ ಈ ವಿಸ್ಮಯವೇ ಬಲು ಚೆಂದ ಅಂತ ನನಗೆ ಎಷ್ಟೋ ಬಾರಿ ಅನಿಸಿದ್ದುಂಟು.
**
ಕುದುರೆಹೊಂಡದ ಬಯಲು ಸುಮಾರು ಅರ್ಧ ಎಕ್ಕರೆಯಷ್ಟು ವಿಶಾಲವಾದ ಪುಟ್ಟ ಕೆರೆಯಾಗಿತ್ತು. ಮಳೆಗಾಲದ ಸಮಯದಲ್ಲಿ ದಿನವು ಭೋರ್ಗರೆಯುವಂತೆ ಸುರಿವ ಮಳೆಗೆ ವರದೆಯು ತುಂಬಿ ಹರಿಯುವಾಗ ಇಡೀ ನದಿಯ ಅಕ್ಕಪಕ್ಕದ ಹಳ್ಳಿಗಳೆಲ್ಲ ಮುಳುಗಡೆಯಾದಾಗ, ಗದ್ದೆ ಬಯಲುಗಳಲ್ಲಿ ತುಂಬಿಕೊಳ್ಳುವ ನೀರಿನಲ್ಲಿ ಬೊಗಸೆಯಷ್ಟು ನೀರನ್ನು ಕುದುರೆಹೊಂಡ ತನ್ನೊಳಗೆ ಯಾವಾಗಲೂ ಉಳಿಸಿಕೊಳ್ಳುತ್ತಿತ್ತು. ಹೀಗೆ ಉಳಿಸಿಕೊಂಡ ನೀರೇ ವರ್ಷಪೂರ್ತಿ ತುಂಬಿ ನಿಂತಿರುತ್ತಿತ್ತು. ಅಜ್ಜ-ಮುತ್ತಜ್ಜನ ಕಾಲದಿಂದಲೂ ಅದಕ್ಕೆ ಅದೇ ಹೆಸರು ಇದ್ದುದರಿಂದ ಹೆಚ್ಚಿನಂಶ ರಾಜರ ಕಾಲದಲ್ಲಿ ಬಾಯಾರಿದ ಕುದುರೆಗಳು ನೀರು ಕುಡಿಯಲಿಕ್ಕೆ ಏನೋ ಈ ಹೊಂಡವನ್ನು ಮಾಡಿದ್ದಿರಬೇಕು, ಅದಕ್ಕೆ ಕುದುರೆಹೊಂಡ ಎಂದು ಕರೆಯುತ್ತಿರಬಹುದು. ಬೇಸಿಗೆಯಲ್ಲಿ ಒಮ್ಮೊಮ್ಮೆ ವರದೆಯ ತಪ್ಪಲು ಬತ್ತಿಹೋದಾಗಲೂ ಈ ಹಿಂದೆ ಅವಳಿಂದ ಬೊಗಸೆಯಷ್ಟು ನೀರನ್ನು ತುಂಬಿಸಿಕೊಂಡಿರುತ್ತಿದ್ದ ಈಕೆ ಮಾತ್ರ ಎಂದಿಗೂ ಬತ್ತುತ್ತಿರಲಿಲ್ಲ. ನದಿಯ ಅಕ್ಕಪಕ್ಕದ ಕಡಿದ ಕಣಿವೆಗಳಲ್ಲಿಯೂ ಈ ಹೊಂಡಕ್ಕೆ ದಾರಿಯಿದ್ದುದರಿಂದ ಹರಿವ ನೀರು ಹೋಗಲಿಕ್ಕೆ ದಾರಿಯಾಗಿತ್ತೇ ವಿನಹ ಹೊಂಡದಿಂದ ಮತ್ತೆ ನೀರು ವಾಪಸ್ ತಪ್ಪಲಿಗೆ ಹೋಗುತ್ತಿರಲಿಲ್ಲ. ಈ ಕುದುರೆ ಹೊಂಡದ ಅಕ್ಕಪಕ್ಕವೇ ಅಜ್ಜನ ಐದಾರು ಎಕರೆ ಜಮೀನಿತ್ತು. ಅದರಂತೆ ಹೊಂಡದ ಬಯಲ ಸುತ್ತಮುತ್ತ ಚೆನ್ನಪ್ಪ ಗೌಡರ ಐದು ಎಕರೆ, ಉಪ್ಪಾರ ಬಸವಣ್ಣನ ನಾಲ್ಕು ಎಕರೆ ಗದ್ದೆ, ಇದರಾಚೆ ಸುಬ್ಬಯ್ಯ ಶಾಸ್ತ್ರಿಗಳ ಇಪ್ಪತ್ತು ಎಕರೆ ಒಣ ಬಯಲಿತ್ತು. ಈ ಹೊಂಡದ ಬಯಲಿನ ಸುತ್ತ ಇವರು ಅನ್ಯೋನ್ಯತೆಯಿರುವ ಕಾರಣದಿಂದಲೇ ಬೇಸಿಗೆಯಲ್ಲಿ ಹೊಂಡದ ನೀರನ್ನು ಇವರೆಲ್ಲರೂ ಸಮಾನವಾಗಿ ಬಳಸಿಕೊಂಡು ವ್ಯವಸಾಯ ಮಾಡುತ್ತಿದ್ದರು. ಹೊಂಡದ ಪಕ್ಕ ಇದ್ದ ದೊಡ್ಡ ಬಿದಿರುಮಟ್ಟಿ ಜೊತೆಗೆ ಆಯಾಯ ಜಮೀನುಗಳ ಭತ್ತ ಒಣಗಿಸಲು ಮಾಡಿಕೊಂಡ ಕಣ... ಎಲ್ಲರೂ ಸೇರಿ ಪೂಜೆ ಮಾಡುತ್ತಿದ್ದ ಬೀರಪ್ಪ ದ್ಯಾವ್ರು ಎಲ್ಲವೂ ಕುದುರೆಹೊಂಡದ ವಿಶೇಷತೆಗಳಾಗಿದ್ದವು. ಭತ್ತ ಕೊಯ್ಯುವಾಗ, ಪಂಪ್ಸೆಟ್ಟಿನ ನೀರು ಆನ್ ಮಾಡಿದಾಗ, ಶೇಂಗಾ ತೆರೆಯಲು ಹೋದಾಗ, ದಿನವೂ ದನಕರುಗಳನ್ನು ಮೇಯಿಸುತ್ತಿದ್ದುದು... ಭತ್ತದ ಕಣದಲ್ಲಿ ರಾತ್ರಿ ಬೆಂಕಿ ಹಾಕಿಕೊಂಡು ಮಲಗುತ್ತಿದ್ದುದು, ಬೀರಪ್ಪನಿಗೆ ವರ್ಷದಲ್ಲಿ ಕೋಳಿ ಕೊಯ್ದು ಅಲ್ಲೇ ಅನ್ನಸಾರು ನೈವೇದ್ಯ ಊಟ ಮಾಡುವುದು. ಭೂಮಿ ಹುಣ್ಣಿಮೆಯಂದು ಇಡೀ ಕೇರಿಯವರೆಲ್ಲರೂ ಎತ್ತಿನಗಾಡಿಯಲ್ಲಿ ಹೋಗಿ ಭತ್ತದ ಪೈರು, ಭೂತಾಯಿಗೆ ಪೂಜೆ ಮಾಡಿ ಚರಗ ಚೆಲ್ಲಿ, ಗ್ವಾಯಿಕಾಯಿ ಸಿಹಿ ಕಡಬು, ಎಳ್ಳು ಮೊಸರಿನ ಬುತ್ತಿಯ ಗಂಟು, ಹುಳಿಯನ್ನ, ಅಕ್ಕಿ ರೊಟ್ಟಿ, ಎಣೆಗಾಯಿ ಪಲ್ಯ ತಿಂದ ಸಂಭ್ರಮವು... ಕುದುರೆಹೊಂಡದಲ್ಲಿ ವರ್ಷಕ್ಕೆರಡು ಬಾರಿ ಇಳಿದು ಮೀನು ಸಿಗಡಿ, ಏಡಿಗಳನ್ನು ಬೇಟೆಯಾಡುವುದು. ಹೀಗೆ ಹೊಂಡದ ಈ ಬಯಲು ಇಂತಹ ಹಲವು ಸುಂದರ ನೆನಪುಗಳನ್ನು ಹೊತ್ತುನಿಂತಿದೆ...... ಆದರೂ ಕುದುರೆಹೊಂಡದ ಬಯಲಿನ ನಮ್ಮ ಜಮೀನನ್ನು ಮಾರಿಕೊಂಡು ಅಲ್ಲಿಗೆ ಹೋಗದೇ ಇರುವ ಹಾಗೆ ಬಂದ ದುಃಸ್ಥಿತಿ ಮಾತ್ರ ಅನಿರೀಕ್ಷಿತವೇ ಸರಿ!
**
ಕುರುಬರ ನಿಂಗಮ್ಮ ಉಪ್ಪಾರಕೇರಿಗೆ ಹೋಗುವ ದಾರಿಯಲ್ಲೇ ತನ್ನದೊಂದು ಕುರಿದೊಡ್ಡಿ ಮಾಡಿಕೊಂಡು ಹತ್ತಿಪ್ಪತ್ತು ಕುರಿಗಳನ್ನು ಸಾಕಿಕೊಂಡು ಅಲ್ಲೇ ವಾಸಿಸುತ್ತಿದ್ದ ಜೀವವಾಗಿತ್ತು. ಪ್ರತಿದಿನ ಕುದುರೆಹೊಂಡದ ಬಯಲಿನಲ್ಲಿ ಕಪಗೇರಿ ರಸ್ತೆಯ ಅಕ್ಕಪಕ್ಕ ತನ್ನ ಕುರಿಗಳನ್ನು ಮೇಯಿಸಿಕೊಂಡು ಕುರಿಗಳಿಗೆ ಮಧ್ಯಾಹ್ನ ಆ ಹೊಂಡದಲ್ಲೇ ನೀರು ಕುಡಿಸಿ, ನಮ್ಮ ಕಣದಲ್ಲಿದ್ದ ಬಿದಿರುಮಟ್ಟಿಯ ಜಾಗದಲ್ಲಿ ತಾನು ಕಟ್ಟಿಕೊಂಡು ಬಂದ ಬುತ್ತಿಯನ್ನು ಉಂಡು ಸಾಯಂಕಾಲದವರೆಗೂ ಕುರಿಗಳನ್ನು ಮೇಯಿಸಿಕೊಂಡು ಕತ್ತಲು ಕವಿಯುವುದರೊಳಗೆ ತನ್ನ ದೊಡ್ಡಿಯನ್ನು ಸೇರಿಕೊಳ್ಳುತ್ತಿದ್ದಳು. ನಿಂಗಮ್ಮನನ್ನು ಕಂಡರೆ ನನಗೆ ಬಲುಪ್ರೀತಿ. ಸಾಯಂಕಾಲ ನಾನು ಶಾಲೆಯಿಂದ ಬಂದು ಕೈಕಾಲು ಮುಖ ತೊಳೆದುಕೊಂಡು ದೇವರಿಗೆ ಕೈಮುಗಿದು ಹಣೆಗೆ ವಿಭೂತಿ ಹಚ್ಚಿಕೊಂಡು ಸೀದಾ ನಿಂಗಮ್ಮನ ಕುರಿಯ ದೊಡ್ಡಿಗೆ ಓಡುತ್ತಿದ್ದೆ. ಆಕೆಯ ಕುರಿದೊಡ್ಡಿಗೆ ಕರೆಂಟು ಇರಲಿಲ್ಲ. ಇದ್ದ ಚಿಮಣಿ ದೀಪದಲ್ಲಿ ಒಲೆ ಉರಿಸಿ ರಾತ್ರಿಗೆ ಬೇಕಾದ ಅನ್ನ ಮಾಡಿಕೊಳ್ಳುತ್ತಿದ್ದಳು. ಪ್ರತಿದಿನ ನನ್ನಮ್ಮ ಆಕೆಗೆ ಸಾರು, ಪಲ್ಯ ಹಪ್ಪಳ ಉಪ್ಪಿನಕಾಯಿ ಕೊಟ್ಟರೆ, ಅದಕ್ಕೆ ಪ್ರತಿಯಾಗಿ ಆಕೆ ಪ್ರತಿದಿನ ಒಂದು ಚೊಂಬು ಕುರಿಹಾಲನ್ನು ಕುದಿಸಿ ನಮ್ಮ ಮನೆಗೆ ಕೊಡುತ್ತಿದ್ದಳು. ನಮ್ಮಮ್ಮ ಮತ್ತು ನಿಂಗಮ್ಮನ ನಡುವೆ ಅಂತಹ ಬಾಂಧವ್ಯವಿತ್ತು. ಹೀಗೆ ಪ್ರತಿದಿನ ಸಾಯಂಕಾಲ ನಿಂಗಮ್ಮನ ದೊಡ್ಡಿಗೆ ಹೋದಾಗಲೆಲ್ಲಾ ಆಕೆ ಹೇಳುತ್ತಿದ್ದ ಕತೆಗಳನ್ನು ಕೇಳುವುದೆಂದರೆ ನಮಗೆ ವಿಪರೀತ ಖುಷಿ. ತಾನು ಕೇಳಿದ್ದ, ತನ್ನೊಡಲಲ್ಲಿ ಇಟ್ಟುಕೊಂಡಿದ್ದ ಎಲ್ಲ ಕತೆಗಳನ್ನು ಹೇಳುತ್ತಿದ್ದಳು. ‘ಒಂದೂರಲ್ಲಿ... ಒಂದಾನೊಂದು ಕಾಲದಲ್ಲಿ... ಎಂದು ಕತೆಯನ್ನು ಆರಂಭಿಸುತ್ತಾ ಅನೇಕ ರೋಚಕವಾದ ಸಾಹಸಮಯ ಕತೆಗಳನ್ನು ಹೇಳುತ್ತಿದ್ದಳು. ನನ್ನ ಕಲ್ಪನೆಯ ಜಗತ್ತು ವಿಸ್ತಾರಗೊಂಡಿದ್ದೆ ಅವಳ ಕತೆಗಳನ್ನು ಕೇಳುವ ಮೂಲಕ. ಒಮ್ಮೊಮ್ಮೆ ಕುದುರೆಹೊಂಡದ ಬಯಲಿನಲ್ಲಿ ತನ್ನ ಕುರಿಗಳನ್ನು ಬಿಟ್ಟು ಬಿದಿರುಮಟ್ಟಿ ಬ್ಯಾಣದ ಹತ್ತಿರ ಆಕೆ ನನ್ನ ಜೊತೆ ಗಂಟೆಗಟ್ಟಲೇ ಮಾತನಾಡುತ್ತಾ ಕೂರುತ್ತಿದ್ದಳು. ನನ್ನ ವಯಸ್ಸಿಗೆ ಅರ್ಥವಾಗದ ಅವಳ ಬದುಕಿನ ಕತೆಯನ್ನು ಕಣ್ಣೀರು ಸುರಿಸುತ್ತಾ ಹೇಳುತ್ತಿದ್ದಳು. ಅವಳು ಅಂದು ನನ್ನ ಬಾಲ್ಯದಲ್ಲಿ ತೋರುತ್ತಿದ್ದ ಪ್ರೀತಿ ಕಾಳಜಿಯನ್ನು ನಾನು ಪ್ರಸ್ತುತ ಮುಂಬೈನ ಬದುಕಿನ ನಡುವೆ ಆಗಾಗ ನೆನಪಿಸಿಕೊಳ್ಳುತ್ತಿದ್ದೆ. ಅವಳು ಮನಸಿನ ತುಂಬಾ ಆವರಿಸಿಕೊಂಡು ಗಂಟೆಗಟ್ಟಲೇ ನನ್ನನ್ನು ಮಾತನಾಡಿಸುತ್ತಿದ್ದಳು. ಹತ್ತು ಹಲವು ನೆನಪುಗಳನ್ನು ಇಟ್ಟುಕೊಂಡು ಪ್ರಶ್ನೆ ಕೇಳುತ್ತಿದ್ದಳು. ಅನೇಕ ವರ್ಷಗಳ ಅವಳ ದುರಂತ ಸಾವಿನ ನಂತರವೂ ಅವಳು ನನ್ನೊಂದಿಗೆ ಇಂದಿಗೂ ಜೀವಂತವಾಗಿದ್ದಳು. ನನ್ನೊಂದಿಗೆ ಅವಳ ದಿನನಿತ್ಯದ ನೆನಪುಗಳ ಸಾಂಗತ್ಯ ಹಾಗೆಯೇ ನಡೆಯುತ್ತಿತ್ತು.
ಕುರುಬರ ನಿಂಗಮ್ಮನ ಸಾವು ನನ್ನನ್ನು ಅನೇಕ ವರ್ಷಗಳವರೆಗೆ ಕಾಡಿತು. ಅವಳು ಬದುಕಿರುವುಳೇ? ನಿಜಕ್ಕೂ ಎಲ್ಲರೂ ಹೇಳುವಂತೆ ಸತ್ತಿರುವಳೇ? ಈ ದ್ವಂದ್ವವೇ ನನ್ನನ್ನು ಚಿಂತೆಗೀಡುಮಾಡಿತ್ತು. ಅವಳು ಸತ್ತಿದ್ದರೆ ಪ್ರತಿದಿನ ಬಂದು ನನ್ನನ್ನು ಮಾತನಾಡಿಸುತ್ತಿರುವವರು ಯಾರು? ಸತ್ತಿದ್ದರೆ ಈ ರೀತಿ ನನ್ನನ್ನು ಕಾಡುವಳೇ? ಮುಂಬೈನಲ್ಲಿದ್ದರೂ ವೈಜಯಂತಿಪುರದಲ್ಲಿಯೇ ಇದ್ದೇನೆ ಅನ್ನುವ ಅವ್ಯಕ್ತ ಭಾವ! ಅವಳ ಜೊತೆಗೆ ಕಾಡುವ ಊರ ಹಲವು ಪಾತ್ರಗಳು.
ನಿಂಗಮ್ಮ ನನ್ನನ್ನು ತುಂಬಾ ಇಷ್ಟಪಡುತ್ತಿದ್ದಳು. ಕೆಲವೊಮ್ಮೆ ಆಕೆ ಅಮ್ಮ ತೋರಿದಷ್ಟೇ ಪ್ರೀತಿ, ವಾತ್ಸಲ್ಯ ಮಮತೆಯನ್ನು ನನ್ನ ಮೇಲೆ ತೋರುತ್ತಿದ್ದಳು ಅನ್ನುವುದೇ ನನಗೆ ಅರ್ಥವಾಗುತ್ತಿರಲಿಲ್ಲ. ಬುಧವಾರದ ಸಂತೆಯಲ್ಲಿ ನನಗೋಸ್ಕರ ಏನನ್ನಾದರೂ ತಿನ್ನಲು ಕಟ್ಟಿಸಿಕೊಂಡು ಬರುತ್ತಿದ್ದಳು. ಯಾವಾಗಲೋ ಒಮ್ಮೆ ಶಿರಸಿ, ಸೊರಬ ಕಡೆ ಹೋದಾಗಲೋ, ಕುರಿ ಮಾರಿದ ಹಣ ಬಂದಾಗಲೋ, ನನಗೆ ಸ್ವಲ್ಪ ಹಣ ಕೊಟ್ಟು ಅಮ್ಮನಿಗೆ ಗೊತ್ತಿಲ್ಲದೆ ಕರೆದಂಟು ಪೆಪ್ಪರ್ಮೆಂಟ್ ತಿನ್ನುವಂತೆಯೂ, ಪೆನ್ನು ನೋಟ್ಬುಕ್ಗಳನ್ನು ಕೊಳ್ಳುವಂತೆಯೂ ಹೇಳುತ್ತಿದ್ದಳು. ನಿಂಗಮ್ಮ ಕೊಡುತ್ತಿದ್ದ ಹಣದ ವಿಷಯವನ್ನು ಅಮ್ಮನಿಗೆ ಹೇಳುವಂತಿರಲಿಲ್ಲ. ಅಕಸ್ಮಾತ್ ಹೇಳಿದರೆ ಆಕೆ ನಿಂಗಮ್ಮನನ್ನು ಸೇರಿಸಿಕೊಂಡು ತನಗೂ ಬಯ್ದುಬಿಡುತ್ತಿದ್ದಳು. ‘ಆಕೆನೇ ಬಡವಿ. ಹೊಟ್ಟೆ ಬಟ್ಟೆ ಕಟ್ಟಿ ಬದುಕ್ತಾ ಇದಾಳೆ. ಅಂತವಳ ಹಣಾ ತಿಂದು ನೀನ್ ಉದ್ಧಾರ ಆಗ್ತಿಯೆನೋ? ಎಂದು ಗದರಿಸುತ್ತಿದ್ದಳು.
ನನ್ನ ಆಸೆಗಳಿಗೋಸ್ಕರ ಆ ನಿಂಗಮ್ಮನಿಗೆ ಅಮ್ಮನಿಂದ ಬಯ್ಸಿ ಆಕೆಗೆ ನೋವು ಕೊಡುವುದು ನನಗೆ ಸರಿಕಾಣಲಿಲ್ಲ. ಅದೊಂದು ಒಂಟಿ ಜೀವ. ಗಂಡನಿಲ್ಲ; ಹತ್ತಿರದ ಬಂಧುಗಳಿಲ್ಲ. ನಿಂಗಮ್ಮನನ್ನು ಲಗ್ನವಾಗುವುದಾಗಿ ನಂಬಿಸಿ ಅವಳನ್ನು ಬಸಿರು ಮಾಡಿ ಓಡಿ ಹೋದ ಆಕೆಯ ಗಂಡನಾಗಬೇಕಾದವನು ಮತ್ತೇ ತಿರುಗಿ ಬರಲೇಇಲ್ಲ. ಮದುವೆಯಾಗದೇ ಬಸುರಿಯಾದಾಗ ಆದ ಎಲ್ಲ ಕಷ್ಟ ಅವಮಾನಗಳನ್ನು ಎದುರಿಸಿ ಬದುಕನ್ನು ಗೆದ್ದವಳು. ಹೆತ್ತಮಗನನ್ನು ದುಡಿದು ಸಾಕುವುದು ಕಷ್ಟ ಅಂತ ಅರಿತು ಕಲಘಟಗಿಯಲ್ಲಿದ್ದ ತನ್ನ ಅಕ್ಕನ ಮನೆಯಲ್ಲಿ ಬಿಟ್ಟು ಬಂದು ಈಕೆ ವೈಜಯಂತಿಪುರ ಸೇರಿಕೊಂಡಿದ್ದಳು. ಮಗ ದೊಡ್ಡವನಾದಂತೆ ಹೆತ್ತವ್ವ ನಿಂಗಮ್ಮನನ್ನೇ ಮರೆತುಬಿಟ್ಟ. ಆತ ವರ್ಷಕ್ಕೊಮ್ಮೆಯಂತೆ ಮಧುಕೇಶ್ವರ ದೇವರ ಜಾತ್ರೆಗೆ ಅಂತ ಊರಿಗೆ ಬಂದಾಗ ಕುರಿ ಮಾರಿದ ಹಣವನ್ನು ಕಿತ್ತುಕೊಂಡು ಹೋಗುತ್ತಿದ್ದ. ಹೆತ್ತಮಗನೆಂಬ ಮಮಕಾರದಲ್ಲಿ ಅವನು ವೈಜಯಂತಿಪುರಕ್ಕೆ ಬಂದಾಗಲೆಲ್ಲಾ ವರ್ಷಪೂರ್ತಿ ಕೂಡಿಟ್ಟ ಹಣವನ್ನೆಲ್ಲಾ ಕೊಟ್ಟು, ಅವನ ಮುಖದಲ್ಲಿ ಕಾಣುತ್ತಿದ್ದ ಖುಷಿಯನ್ನು ಕಂಡು ಒಳಗೊಳಗೆ ಸಂತೃಪ್ತಿ ಪಡುತ್ತಿದ್ದಳು. ತಾಯಿಯೆಂಬ ಪ್ರೀತಿ ಆತನಿಗೆ ಇಲ್ಲದಿದ್ದರೂ, ಅವಳ ಕುರಿದೊಡ್ಡಿಯ ಮೇಲಿನ ಆಸೆಯನ್ನು ಹೊತ್ತು ಕಲಘಟಗಿಯಿಂದ ಆಗಾಗ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದ.
ಇಂತಹ ಕಷ್ಟದ ಬದುಕನ್ನು ಹೊತ್ತ ನಿಂಗಮ್ಮನ ಜೀವನವು, ಒಂದು ದಿನ ನನ್ನ ಕಣ್ಣ ಮುಂದೆಯೇ ಆಕೆಯನ್ನು ಕುದುರೆಹೊಂಡದಲ್ಲಿ ಹೆಣವಾಗಿ ನೋಡುವ ಪ್ರಸಂಗ ನನ್ನ ಪಾಲಿನ ಅತ್ಯಂತ ದುರಂತ ದಿನವೇ ಸರಿ. ನನ್ನ ಹೆತ್ತಮ್ಮ ತೀರಿಕೊಂಡರೂ ಅಷ್ಟು ದುಃಖಪಡುತ್ತಿದ್ದೆ ಎಂದು ನಾನು ಹೇಳಲಾರೆ. ನಿಂಗಮ್ಮ ಸತ್ತ ದಿನ ನಾನು ಅತ್ತಷ್ಟು ಮುಂದೆಂದೂ ನಾನು ಅಳಲಾರೆ ಎಂಬುದು ನನಗೆ ಖಾತ್ರಿಯಾಗಿದೆ. ಏಕೆಂದರೆ ಆಕೆ ಜೀವನದಲ್ಲಿ ನನ್ನನ್ನು ಹಚ್ಚಿಕೊಂಡು ಪ್ರೀತಿಸಿದಷ್ಟು ಬೇರೆ ಯಾರ ಜೊತೆಯೂ ಅಂತಹ ಆತ್ಮೀಯತೆಯನ್ನು ಬೆಳೆಸಿಕೊಳ್ಳಬಾರದು ಅನ್ನುವ ಪಾಠ ಕಲಿಸಿ ಹೋಗಿದ್ದಳು. ಸ್ನೇಹ, ರಕ್ತ ಸಂಬಂಧಗಳಿಗೆ ಅಂಟಿಕೊಂಡಷ್ಟು ನೋವು ಜಾಸ್ತಿ. ಕುದುರೆಹೊಂಡದ ಬಯಲು ಇಂದಿಗೂ ನನಗೆ ಅಂತಹ ನೋವು ಕೊಡುತ್ತಿದೆ. ನಾನು ಮನೆ ಕೇರಿಯನ್ನು ಬಿಟ್ಟು ಬಾಲ್ಯದ ಹೆಚ್ಚಿನ ಸಮಯವನ್ನು ಕಳೆದದ್ದು ಆಡಿದ್ದು ಕುಣಿದದ್ದು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು ಇದೇ ಬಯಲಿನಲ್ಲಿ. ಅಂದು ಕುದುರೆಹೊಂಡದಲ್ಲಿ ಈಜಿದ್ದೇನೆ, ಬಾಯಾರಿದ್ದಾಗ ಬೊಗಸೆಯಲ್ಲಿ ನೀರು ಕುಡಿದಿದ್ದೇನೆ, ಮೀನು ಏಡಿ ಹಿಡಿದು ಅಲ್ಲೇ ಸುಟ್ಟು ತಿಂದಿದ್ದೇನೆ. ಮೇಯಲು ಬಂದ ದನಕರುಗಳಿಗೆ ನೀರು ಕುಡಿಸಿದ್ದೇನೆ. ಒಮ್ಮೊಮ್ಮೆ ನನ್ನ ಪ್ರತಿಬಿಂಬವನ್ನು ಆ ತಿಳಿನೀರಿನಲ್ಲಿ ಕಂಡಿದ್ದೇನೆ. ಮಳೆಗಾಲದಲ್ಲಿ ಕುದುರೆಹೊಂಡವು ವರದೆಯ ಜೊತೆ ಸೇರಿ ಒಂದಾಗಿದ್ದನ್ನು ಕಣ್ಣು ತುಂಬಿಕೊಂಡಿದ್ದೇನೆ, ದೀಪಾವಳಿ ಹಬ್ಬದಲ್ಲಿ ಬ್ಯಾನಪ್ಪನ ಪೂಜೆಗೆ ಬೇಕಾದ ತಾವರೆ, ಕ್ಯಾದಿಗೆ ಹೂವುಗಳನ್ನು ಅಲ್ಲಿ ಕಿತ್ತು ಪೂಜೆ ಮಾಡಿದ್ದೇನೆ. ಹೀಗೆ ನೆನಪುಗಳ ಪಟ್ಟಿಯು ವೈಜಯಂತಿಪುರದಿಂದ ಕಾಶಿಯನ್ನು ಮುಟ್ಟುವಷ್ಟಿದೆ, ಉಂಡ ನೋವು ಗೌರಿಶಿಖರದಷ್ಟಿದೆ. ಊರಲ್ಲಿರುವವರೆಗೂ ಈ ನೆನಪುಗಳು ನನ್ನನ್ನು ಕಾಡುತ್ತಲೇ ಇದ್ದವು. ಇವುಗಳಿಂದ ಹೊರಬರಲು ನಾನು ಊರುಬಿಡಬೇಕಾಯಿತು. ದೂರವಿದ್ದಷ್ಟು ಆ ನೆನಪುಗಳು ನನ್ನನ್ನು ಕಾಡಲಾರವು ಎಂಬ ನಂಬಿಕೆಯಲ್ಲಿ ನನ್ನ ಮುಂದಿನ ಓದು, ಉದ್ಯೋಗವನ್ನು ಕಟ್ಟಿಕೊಳ್ಳಲು ಹೆಣಗಬೇಕಾಯಿತು. ಕುದುರೆಹೊಂಡದ ಬಯಲು ಹಾಗೂ ನಿಂಗಮ್ಮನ ನೆನಪುಗಳು ನನ್ನೊಳಗೆ ಇನ್ನೂ ಸೂಪ್ತವಾಗಿ ಅಡಗಿ ಕೂತಿವೆ. ಅದನ್ನು ಒಬ್ಬನೇ ಮುಂಬೈನ ಸಮುದ್ರ ತಟದ ಮುಂದೆ ಕೂತು ಉಕ್ಕುವ ಅಲೆಗಳ ಜೊತೆ ಮಾತನಾಡುತ್ತಾ ನೆನಪು ಮಾಡಿಕೊಳ್ಳುತ್ತಾ ಖುಷಿಪಡುತ್ತೇನೆ. ಸಂಗೀತ ಲಯದಂತೆ ಹರಿದು ಬರುವ ಆ ಅಲೆಗಳನ್ನು ಕಾಣುತ್ತಾ ಒಳಗಿನ ದುಃಖವನ್ನು ಸಂತೈಸಿಕೊಂಡಿದ್ದೇನೆ. ಮುಂಬೈನ ಯಾಂತ್ರಿಕ ಬದುಕಿನ ನಡುವೆ ನನಗೆ ಸದಾ ಸಾಂಗತ್ಯವನ್ನು ಕೊಡುತ್ತಿದ್ದುದು ಇದೇ ನೆನಪುಗಳು...
ಮುಂಬೈನ ಜುಹು ಬೀಚ್ನಲ್ಲಿ ಕುಳಿತು ಸುತ್ತಲಿನ ಸಮುದ್ರದ ಸೌಂದರ್ಯವನ್ನು ನೋಡುವಾಗ ವರದೆಯು ನನಗೆ ಸಾಗರವಾಗಿ ಕಂಡ ಕ್ಷಣಗಳು ನೆನಪಿಗೆ ಬರುತ್ತವೆ. ಅದೊಂಥರ ನದಿಯು ಮಳೆಗಾಲದಲ್ಲಿ ಮುಳುಗಡೆಗೆ ಸಿಲುಕಿ ಸಮುದ್ರವಾಗಿ ಕಾಣುವ ಪರಿಯಂತೆ. ಮಲೆನಾಡಿನ ಮಳೆಗಾಲಕ್ಕೆ ವರದೆಯು ತುಂಬಿ ಸುತ್ತಮುತ್ತಲಿನ ಸಾವಿರಾರು ಎಕರೆ ಜಮೀನುಗಳನ್ನು ತನ್ನೊಡಲಿನಲ್ಲಿ ತುಂಬಿಕೊಂಡು ಆಕೆಯನ್ನು ನೋಡುವವರಿಗೆ ಎತ್ತ ನೋಡಿದರೂ ನೀರು, ಜಲಪ್ರವಾಹ. ಅವಳ ವಿಸ್ತಾರಕ್ಕೆ ಕೊನೆಯಂತೂ ಕಾಣದೇ ಆಕೆಯೇ ಸಾಗರದ ರೂಪವನ್ನು ತಾಳಿಕೊಂಡು ಅವತರಿಸಿದಳೇ ಎಂಬಂತೆ ನಮಗೆ ಕಾಣುವುದು ಸಹಜ. ವರ್ಷದ ಮೂರು ಕಾಲದಲ್ಲಿ ಮೂರು ರೂಪದಲ್ಲಿ ಕಾಣುತ್ತಿದ್ದ ವರದೆಯ ನಯನ ಮನೋಹರ ಸೌಂದರ್ಯ ಮುಳುಗಡೆಯ ಸಂದರ್ಭದಲ್ಲಿ ವೈಜಯಂತಿಪುರದ ಸುತ್ತಲಿನ ಎಲ್ಲ ಹಳ್ಳಿಗಳು ಒಂದೇ ಎಂಬಂತೆ ಕಾಣುತ್ತಿದ್ದ ಸೌಂದರ್ಯವಂತೂ ಇನ್ನೂ ಬಲು ಚೆಂದ. ಇಂತಹ ಸೌಮ್ಯರೂಪಿಣಿ ತಾಯಿ ವರದೆಯು ನನ್ನ ನಿಂಗಮ್ಮನನ್ನು ತನ್ನೊಳಗೆ ಏಕೆ ಸೇರಿಸಿಕೊಂಡಳು? ವರದೆಯು ತುಂಬಿ ಹರಿದು ಈಕೆಯನ್ನು ಕೊಂದಳೇ? ನಿಂಗವ್ವನೇ ತನ್ನ ಜೀವವನ್ನು ಆಕೆಗೆ ಬಲಿಕೊಟ್ಟಳೇ? ಅವಳ ಆಂತರ್ಯವು ತನ್ನ ಜೀವವನ್ನು ಕಳೆದುಕೊಳ್ಳುವಷ್ಟು ಆಕೆ ಎಷ್ಟು ನೊಂದಿರಬಹುದು. ವರದೆಯ ತಪ್ಪಲಿನಲ್ಲಿ ಹೆಣವಾಗಿ ತೇಲಿ ಬಂದು ಕೊನೆಗೆ ಆಕೆ ಕುದುರೆಹೊಂಡದಲ್ಲಿ ಸೇರಿಕೊಂಡಿದ್ದು ಒಂದು ರೀತಿ ನಿಗೂಢವೆ ಸರಿ! ಹರಿಯುವ ವರದೆಯಲ್ಲಿ ನಿಂಗಮ್ಮನ ಹೆಣವು ತೇಲಿಹೋಗಿದ್ದರೆ ಅವಳ ಹೆಣ ಯಾವ ಊರನ್ನು ಮುಟ್ಟಿರುತ್ತಿತ್ತೋ...? ಆದರೆ ಆ ಬೀರಪ್ಪನ ಪವಾಡವೇನೋ ಎಂಬಂತೆ ಆಕೆ ತೇಲಿಕೊಂಡು ಬಂದು ಕುದುರೆಹೊಂಡಕ್ಕೆ ಸೇರಿದ್ದು ಮಾತ್ರ ವಿಸ್ಮಯವೇ ಸರಿ. ಮಗ ಬಂದು ಹೋದ ಎರಡು ದಿನಗಳ ನಂತರ ಆಕೆ ಜೀವವನ್ನೇಕೆ ಕಳೆದುಕೊಂಡಳು. ಬದುಕು ಅಷ್ಟು ದುಸ್ತರವೆನಿಸಿತೇ ಅವಳಿಗೆ. ಅಷ್ಟು ವರ್ಷಗಳ ಕಾಲ ಯಾರೊಬ್ಬರ ಹತ್ತಿರವೂ ಕೈ ಚಾಚದೇ ಅನಾಥೆಯಾಗಿ ಒಬ್ಬಂಟಿಯಾಗಿ ತಾನು ಸಾಕಿದ ಕುರಿಮಂದೆಯ ಜೊತೆ ಜೀವನ ಕಳೆದ ಆಕೆಯ ಬದುಕು ಇನ್ನಷ್ಟು ಮುಂದಿನ ಕೆಟ್ಟ ದಿನಗಳನ್ನು ಎದುರಿಸುವಷ್ಟು ಶಕ್ತಿಯು ಆಕೆಯಲ್ಲಿ ಕುಂದಿಹೋಗಿತ್ತೇ? ಹೆತ್ತಮಗನಿಗೆ ನೀಡಲಾಗದ ಪ್ರೀತಿಯನ್ನು ಆಕೆ ನನಗೆ ಧಾರೆ ಎರೆಯುತ್ತಿದ್ದಳೇ? ತಾನು ಸಾಕಿದ ಆ ಮೂಕ ಪ್ರಾಣಿಗಳನ್ನು ಬಿಟ್ಟು ಆಕೆ ಏಕೆ ವರದೆಗೆ ಹಾರಿದಳು. ತಮ್ಮ ಒಡತಿಯನ್ನು ಕಳೆದುಕೊಂಡು ಅವು ಕಂಗಾಲಾಗಿದ್ದವು. ಜೀವನದಲ್ಲಿ ಈಗಾಗಲೇ ಸಾಕಷ್ಟು ನೊಂದು ಬೆಂದು ಬರೀ ಕಹಿಯ ಬದುಕನ್ನೇ ಕಂಡ ಆಕೆಗೆ ಊರ ಕಾಯುವ ಮಧುಕೇಶ್ವರ ಏಕೆ ನೆಮ್ಮದಿಯನ್ನು ಕರುಣಿಸಲಿಲ್ಲ. ಜೀವನವಿಡೀ ಆಕೆಗೆ ಬರೀ ದುಃಖವನ್ನೇ ಅನುಭವಿಸಿದ ಅವಳ ಜೀವನ ಈ ರೀತಿ ಆಗಬೇಕೆಂಬುದು ಅವನಿಚ್ಚೆಯಾಗಿತ್ತೇ? ಉತ್ತರ ಗೊತ್ತಿರುವ ಊರ ಮಧುಕೇಶ್ವರ ಮಾತ್ರ ನಿಂಗಮ್ಮನ ವಿಚಾರದಲ್ಲಿ ಮೌನಿಯಾಗಿ ಬಿಟ್ಟನೇ? ಹಾಗಾಗಿ ಆಯಪ್ಪನ ಮೇಲೆ ಬೇಸರ ಬಂದಿದ್ದಂತೂ ನಿಜ. ದೇವರ ಮೇಲೆ ನಂಬಿಕೆ ಮತ್ತು ಅಪನಂಬಿಕೆಯ ಪ್ರಶ್ನೆಗಳು. ಚಿಕ್ಕವನಾಗಿದ್ದಾಗ ಪ್ರತಿಬಾರಿ ಶಾಲೆಗೆ ಹೋಗುವಾಗ ಮಧುಕೇಶ್ವರನಲ್ಲಿ ಕುರುಬರ ನಿಂಗಮ್ಮನ ನೆನಪುಗಳನ್ನು ಮರೆಯುವಷ್ಟು ಶಕ್ತಿಕೊಡು ಅಂತ ಕಣ್ಣೀರು ಹಾಕಿ ಬೇಡುತ್ತಲೇ ಇದ್ದೆ. ಅವಳ ಸಾವು ನನ್ನನ್ನು ಬಹಳ ವರ್ಷದವರೆಗೆ ಕಾಡಿತು. ಈಗಲೂ ಅದು ಮುಂಬೈ ಬದುಕಿನವರೆಗೆ ಮುಂದುವರೆದಿದೆ.
***
ಕುರುಬರ ನಿಂಗವ್ವ ಕುದುರೆ ಹೊಂಡದಲ್ಲಿ ಜೀವ ಬಿಟ್ಟ ಕ್ಷಣಗಳ ನಂತರ ಅವಳ ಆತ್ಮವು ದೆವ್ವವಾಗಿ ಕುದುರೆಹೊಂಡದ ಬಯಲಿನ ಸುತ್ತವೇ ಸುತ್ತುವರೆಯುತ್ತಿದೆ ಅನ್ನುವ ಮಾತುಗಳು ಕೇಳಲಾರಂಭಿಸಿದವು. ಮಳೆಗಾಲ ಕಳೆದು ಬೇಸಿಗೆ ಬಂದ ಮೇಲೆ ಎಂದೂ ಕಾಣದ ಬರವು ವೈಜಯಂತಿಪುರದಲ್ಲಿ ಕಾಣಿಸಿಕೊಂಡಿತು. ತುಂಬಿ ಹರಿಯುತ್ತಿದ್ದ ವರದೆಯು ಬರಿದಾದಳು. ವ್ಯವಸಾಯ, ಒಕ್ಕಲುತನ ತುಂಬಾ ಕಷ್ಟವಾಯಿತು. ನೀರಿಲ್ಲದೇ ಭತ್ತದ ಗದ್ದೆ, ಅನಾನಸ್, ಬಾಳೆಯ ತೋಟಗಳು ಒಣಗತೊಡಗಿದವು. ನನ್ನ ಕಣ್ಣ ಮುಂದೆಯೇ ಕುದುರೆಹೊಂಡದ ಬಯಲು ನೆಲಸಮವಾಗಿ ಬರಿದಾಗಿತ್ತು. ಹೊಂಡ ಬತ್ತಿರುವುದನ್ನು ಊರಲ್ಲಿದ್ದ ಎರಡ್ಮೂರು ತಲೆಮಾರಿನವರು ಕಂಡೇ ಇಲ್ಲವಂತೆ. ಬಯಲಿನಲ್ಲಿದ್ದ ಬಿದಿರುಮಟ್ಟಿ ಬ್ಯಾಣ ನೋಡ ನೋಡುತ್ತಿದ್ದಂತೆ ಮಧ್ಯಾಹ್ನದ ಉರಿಬಿಸಿಲಿಗೆ ಹೊತ್ತು ಉರಿದುಹೋಯ್ತ. ಆ ನಂತರ ಅಲ್ಲಿದ್ದ ಬಿದಿರುಮಟ್ಟಿನ ಬ್ಯಾಣ, ಹೊಂಡದಕೆರೆ ಎಲ್ಲವೂ ಸಮತಟ್ಟಾದ ನೆಲವಾಗಿ ಒಂದೇ ಜಮೀನಿನಂತೆ ಕಂಡಿತ್ತು. ಅಲ್ಲಿದ್ದ ನಮ್ಮ ಪಿತ್ರಾರ್ಜಿತ ಜಮೀನನ್ನು ಮಾರಿದ್ದ ನಮ್ಮ ದೊಡ್ಡಪ್ಪನಿಗೆ ಆ ಹಳೆಯ ಆಸ್ತಿಯ ಮೇಲೆ ಎಳ್ಳಷ್ಟು ಪ್ರೀತಿಯಂತೂ ಇರಲಿಲ್ಲ. ಅವರು ಆ ಕಡೆ ಹೋಗುವುದನ್ನು ಮರೆತೇ ಹೋದರು. ಬಂದ ಹಣದಲ್ಲಿ ಅಜ್ಜರಣಿ ರಸ್ತೆಯಲ್ಲಿ ಜಮೀನು ಹಿಡಿದು ಎಂದಿನಂತೆ ತಮ್ಮ ಒಕ್ಕಲುತನವನ್ನು ಪ್ರಾರಂಭಿಸಿದ್ದರು.
ಮೊದಮೊದಲು ಕುರುಬರ ನಿಂಗವ್ವಳು ದೆವ್ವವಾಗಿ ಕುದುರೆಹೊಂಡದ ಬಯಲಿನಲ್ಲಿ ಇದ್ದಾಳೆ, ಆಗಾಗ ಅಲ್ಲಿ ವ್ಯವಸಾಯ ಮಾಡುವ ಡಾಕಪ್ಪ, ಹುಸೇನಸಾಬರಿಗೆ ವಿಪರೀತ ಕಾಟ ಕೊಟ್ಟಿದ್ದಾಳೆ ಎಂಬ ಮಾತುಗಳು ವೈಜಯಂತಿಪುರದಲ್ಲಿ ಸಾಮಾನ್ಯವಾಗಿ ಜನರಾಡುತ್ತಿದ್ದ ಮಾತುಗಳಾಗಿದ್ದವು. ಅದೇ ಪರಸ್ಥಳದವರು ಸಾಗರ ಶಿವಮೊಗ್ಗಕ್ಕೆ ಅಂತಲೇ ಆ ದಾರಿಯಲ್ಲಿ ಓಡಾಡುವಾಗ ಅಪಘಾತಗಳಲ್ಲಿ ಒಳಗಾಗಿದ್ದುಂಟು. ವಿಪರೀತ ಪೆಟ್ಟು ಮಾಡಿಕೊಂಡವರುಂಟು. ಕೆಲವರು ಆಕ್ಸಿಡೆಂಟ್ನಲ್ಲಿ ಸತ್ತುಹೋಗಿದ್ದು ಕೂಡ ಉಂಟು. ಈ ತರಹದ ಅನೇಕ ಘಟನೆಗಳು ಅಲ್ಲಿ ಆಗಿದ್ದರಿಂದ ಅಮ್ಮ ಮಾತ್ರ ನನ್ನನ್ನು ಅಲ್ಲಿಗೆ ಹೋಗಲು ಬಿಡುತ್ತಿರಲಿಲ್ಲ. ಈ ಹಿಂದೆ ನಾನು ಒಮ್ಮೆ ಹೋದಾಗ ನನ್ನ ದೇಹವನ್ನು ಒಮ್ಮೆ ಅದರಿಸಿದ್ದು, ಮೈ ಹಿಡಿದು ಅಳ್ಳಾಡಿಸುವಂತೆ ಆಗಿದ್ದು. ಆ ನಂತರ ವಿಪರೀತ ಜ್ವರ ಬಂದು ನಾನು ಮಲಗಿಕೊಂಡಿದ್ದು ಎಲ್ಲವೂ ನಿಂಗವ್ವನ ಆತ್ಮವೇ ಮಾಡಿದ್ದಿರಬಹುದು ಅಂತ ಒಪ್ಪಿಕೊಳ್ಳಲು ನನಗೆ ತುಂಬಾ ದಿನ ಬೇಕಾಯಿತು.
ನಿಂಗವ್ವ ಬದುಕಿರುವಾಗ ನನ್ನನ್ನು ಅತಿಯಾಗಿ ಪ್ರೀತಿಸಿದಳು. ಮಗನಂತೆ ನೋಡಿಕೊಂಡಳು. ಅವಳು ಎಂದಿಗೂ ನನಗೆ ತೊಂದರೆ ಕೊಡಲಾರಳು. ನನ್ನ ಜೀವವನ್ನು ತೆಗೆಯಲಾರಳು ಎಂಬುದು ನನಗೆ ದೃಢವಾಗಿತ್ತು. ಈ ಸತ್ಯವನ್ನು ಅಮ್ಮನಿಗೆ ಹೇಗೆ ಹೇಳಿ ಆಕೆಯ ಮನಸ್ಸನ್ನು ಒಪ್ಪಿಸುವುದು. ಅಮ್ಮನಿಗೆ ಹೇಳದೇ ಎಷ್ಟೋ ಬಾರಿ ನಾನು ಕುದುರೆಹೊಂಡದ ಬಯಲಿನಲ್ಲಿ ಕೂತು ಒಣಗಿದ ಆ ಭೂಮಿಯನ್ನು ನೆನಪಿಸಿಕೊಂಡು ಅಲ್ಲಿದ್ದ ಬಿದಿರುಬ್ಯಾಣ, ಕುದುರೆಹೊಂಡದ ಬದಿಯಲ್ಲಿದ್ದ ಬೀರಪ್ಪ ದ್ಯಾವು, ಹಸಿರು ಭತ್ತದ ಬಯಲು ಎಲ್ಲವನ್ನೂ ಮತ್ತೆ ಮತ್ತೆ ಕಂಡು ಬರುತ್ತೇನೆ. ಡಾಕಪ್ಪ, ಹುಸೇನ ಸಾಬರು ಮಣ್ಣು ಹಾಕಿ ಮುಚ್ಚಿದ್ದ ಆ ಕುದುರೆಹೊಂಡದ ಬಯಲಿನ ಆಳದಲ್ಲಿ ಬಹಳಷ್ಟು ನೆನಪುಗಳಿವೆ. ನಿಂಗವ್ವ ಮತ್ತೆ ಮತ್ತೆ ತನ್ನ ಕುರಿಗಳೊಂದಿಗೆ ಅಲ್ಲಿ ಕಾಣಿಸಿಕೊಳ್ಳುತ್ತಾಳೆ. ನನ್ನನ್ನು ಕೂಗಿ ಕರೆಯುತ್ತಾಳೆ. ವರದೆಯ ತಪ್ಪಲಲ್ಲಿ ತೇಲುತ್ತಿದ್ದ ಅವಳ ಹೆಣಕ್ಕೆ ಜೀವ ಬಂದು ಅದು ಕುದುರೆಹೊಂಡದವರೆಗೆ ಈಜಿಕೊಂಡು ಬಂದಂತೆ ನನಗೆ ಭಾಸವಾಗುತ್ತಿತ್ತು.
ವೈಜಯಂತಿಪುರದಿಂದ ಎಳ್ನೂರು ಕಿಲೋಮೀಟರ್ ದೂರದ ಮುಂಬೈನಲ್ಲಿರುವ ನನಗೆ ಕುದುರೆಹೊಂಡವು ನೆಮ್ಮದಿಯಿಂದ ಬದುಕಲು ಅಲ್ಲಿಯೂ ಏಕೆ ಬಿಡುತ್ತಿಲ್ಲ? ಮತ್ತೇ ಊರಿಗೆ ಹೋಗಿ ಅಲ್ಲಿ ನೆಲೆ ನಿಲ್ಲುವವರೆಗೂ ಆ ಕುರುಬರ ನಿಂಗವ್ವ ನನ್ನನ್ನು ಖಂಡಿತವಾಗಿ ಬಿಡಲಾರಳು. ಮುಂಬೈನಲ್ಲಿ ಎಷ್ಟು ಆಗುತ್ತೋ ಅಷ್ಟು ದುಡಿದು ಬಂದ ಹಣವನ್ನು ಕೂಡಿಟ್ಟು ಮತ್ತೆ ಪಿತ್ರಾರ್ಜಿತ ಆಸ್ತಿಯಾದ ಆ ಕುದುರೆಹೊಂಡದ ಬಯಲಿನ ಜಮೀನನ್ನು ಮತ್ತೇ ಕೊಳ್ಳಬೇಕೆಂಬ ಅದಮ್ಯ ತುಡಿತವು ನನ್ನನ್ನು ತುಂಬಾ ಕಾಡುತ್ತಲೇ ಇದೆ. ಆ ಜಮೀನನ್ನು ನಾನು ಕೊಳ್ಳಬೇಕೆಂದುಕೊಂಡಿದ್ದೇನೆ. ಅದಕ್ಕೆ ಅಮ್ಮ ಒಪ್ಪುವಳೇ? ಮಾವ ದೊಡ್ಡಪ್ಪನಿಗೆ ಹೇಳಿದರೆ ಅವರು ನನ್ನೊಂದಿಗೆ ಆ ಜಮೀನನ್ನು ಮಾತ್ರ ಕೊಳ್ಳುವುದು ಮುದ್ದಾಂ ಬೇಡ ಎಂದು ಜಗಳವಾಡುತ್ತಾರೆ. ಅದಕ್ಕಿಂತಲೂ ಫಸ್ಟ್ಕ್ಲಾಸ್ ಆಗಿರೋ ಜಮೀನು, ಅನಾನಸ್ ಪ್ಲಾಟ್, ಬಾಳೆತೋಟವನ್ನು ಕೊಂಡರಾಯಿತು ಎಂದು ಆಸೆ ತೋರಿಸುತ್ತಾರೆ. ಅವರಾರಿಗೂ ಅರಿವಿಲ್ಲದ ಒಂದು ಬಂಧ ಆ ಕುದುರೆಹೊಂಡದ ಮಣ್ಣಿನೊಂದಿಗೆ ಸೇರಿಕೊಂಡಿದೆ. ಕೊನೆಗಾಲದಲ್ಲಾದರೂ ವರದೆಯ ತಪ್ಪಲಿನಲ್ಲೇ ನನ್ನ ದೇಹ ಸೇರಬೇಕೆಂಬ ಹಂಬಲವಂತೂ ಪ್ರತಿಕ್ಷಣವೂ ನನ್ನನ್ನು ಕಾಡುತ್ತಲೇ ಇದೆ. ಊರ ಒಡೆಯ ಮಧುಕೇಶ್ವರನ ಅನುಗ್ರಹದಿಂದ ಇದು ಸಾಧ್ಯವಾಗಬೇಕಷ್ಟೇ!
'ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ.
ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. ಶ್ರೀಧರ್ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ಮನೊರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಹಾಗೂ ಅನೇಕ ಟೀವಿ ಕಾರ್ಯಕ್ರಮಗಳು, ಜಾಹಿರಾತು ಹಾಗೂ ಸಾಕ್ಷ್ಯಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ವೆಸ್ತಾಕ್ರಾಫ್ಟ್ ಎಂಬ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ. ಆಲ್ ಇಂಡಿಯಾ ರೇಡಿಯೋ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಥಾಸಂಧಿ ಕಾರ್ಯಕ್ರಮದಲ್ಲಿ ಕಥಾವಾಚನ ಮತ್ತು ಸಂವಾದದಲ್ಲಿ ಭಾಗಿಯಾಗಿದ್ದಾರೆ.
ಇವರ ಕತೆಗಳ ಮೇಲೆ ಎಂಫಿಲ್ ಅಧ್ಯಯನವನ್ನು ಕೂಡ ಮಾಡಲಾಗಿದೆ. `ತಿಗರಿಯ ಹೂಗಳು’, `ಬಿತ್ತಿದ ಬೆಂಕಿ’ ಇವರ ಕವನ ಸಂಕಲನಗಳು. 2017ರಲ್ಲಿ ಪ್ರಕಟಗೊಂಡ ಇವರ `ಬೇರು' ಕಾದಂಬರಿಯು ಆ ವರ್ಷದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದ್ದು ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ `ಯುವ ಪುರಸ್ಕಾರ', ಕರ್ನಾಟಕ ಸಾಹಿತ್ಯ ಅಕಾಡೆಮಿಯ `ಚದುರಂಗ' ದತ್ತಿನಿಧಿ, `ಕುವೆಂಪು’ ಪ್ರಶಸ್ತಿ, ‘ಚಡಗ ಕಾದಂಬರಿ ಪ್ರಶಸ್ತಿ’, `ಶಾ ಬಾಲುರಾವ್’ ಹಾಗೂ `ಬಸವರಾಜ ಕಟ್ಟಿಮನಿ ಯುವ ಬರಹಗಾರ’ ಪ್ರಶಸ್ತಿ ಸೇರಿದಂತೆ ಸುಮಾರು 9 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಒಂದು ವಿಶೇಷ ಮತ್ತು ದಾಖಲೆಯೆಂದು ಗುರುತಿಸಲ್ಪಟ್ಟಿದೆ. ತಮಿಳಿನ ‘ಇನಿಯ ನಂದನವನಂ’ ಪತ್ರಿಕೆಯು ಇವರಿಗೆ ಕರುನಾಡ ಸಾಹಿತ್ಯ ಚಿಂತಾಮಣಿ ಪ್ರಶಸ್ತಿ ನೀಡಿ ಗೌರವಿಸಿದೆ. ಕಥೆ, ಕಾವ್ಯ, ಕಾದಂಬರಿ, ನಾಟಕ, ಜೀವನಕಥನ ಮತ್ತು ಗ್ರಂಥ ಸಂಪಾದನೆ ಸೇರಿದಂತೆ ಇದುವರೆಗೆ ಸುಮಾರು ಹನ್ನೆರಡು ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ.