Poem

ಕಲಾವಿದನ ಸೆರೆಗೂ ಸಿಗದ ಚಿತ್ರ

ಮುಳುಗಿ ಹೋಗಿದ್ದೇವೆ
ಇಬ್ಬರೂ
ಕಡಲು ಕಣಿವೆ ದಾಟಿ
ಸಮುದ್ರ ಮುಟ್ಟಿ

ಇಬ್ಬರಲ್ಲೂ ಜೀವ ಭಯ
ಕೈಗಳು ಸಡಿಲಗೊಳ್ಳದೆ ಬಿಗಿಯಾಗುತ್ತಲೇ ಹೋದವು
ಭಾವ ಎದೆ ತುಂಬಿ
ಮೈ ತುಂಬಾ ಕೈಯಿ ಮೂಡಿದವು

ನಿಶ್ಯಬ್ಧ ನೀಲ ನೀರಿನಲ್ಲಿ
ಮುಖದ ಚಹರೆಯಿಲ್ಲ
ತಿಮಿಂಗಿಲ ನೀರಾವು ಮೀನುಗಳ ಭಯವಿಲ್ಲ
ದಿಗಂತದ ದೂರು ಆ ನೀರಿನ ಆಳ

ಬೆತ್ತಲಾದ ದೇಹಗಳಲ್ಲಿ
ಕಾಮವಾಂಛೆಯ ಬಿಗಿತವಿಲ್ಲ
ಅಂಗಾಂಗವನ್ನೂ ಮುಟ್ಟುವಂತಿಲ್ಲ
ಬಿಡಿಸಿಕೊಳ್ಳದ ಕರಗಳಲ್ಲೂ
ನನ್ನದೆಂಬ ಸ್ವಾರ್ಥ ಬಿಂದು

ಭಾವಕಲಸಿದ ಬಿಸಿ ಕಣ್ಣೀರು
ಸಮುದ್ರದೊಳು ಸೇರಿಹೋಗುವಾಗ
ಯಾವ ಕಲಾವಿದನಿಗೂ ಕಣ್ಣು ಕಾಣಲಿಲ್ಲ
ಕವಿ ಜೋಳಿಗೆಯಲಿ
ಖಾಲಿಯಾದ ಲೇಖನಿಯ ಇಂಕು

ಒಂದು ಕೈಯಿಂದ ಗೆರೆ ಎಳೆಯುತ್ತಲೇ ಇದ್ದೇವೆ
ಮೂಡದ ಚಿತ್ರದ ಮುಂದೆ
ಮುಖಗಳು ಗಾಬರಿಗೊಳ್ಳಲಿಲ್ಲ
ಮುಳುಗಿ ಹೋಗುವ ದೇಹಗಳಿಗೆ
ಭಯದ ಬೆನ್ನಿಲ್ಲ

ಕರಗಿ ಹೋಗುತ್ತಿದೆ ನಡೆದು ಬಂದ ದಾರಿ
ಮನಸು ಬಿಸಿಯಾಗುತ
ಜೊತೆಯಾದ ಮೌನಮಾತು

ಬೆಳಗೆದ್ದು ಕಣ್ಣುಜ್ಜಿಕೊಂಡರೇ
ಆ ಕಡೆಯಿಂದ ಫೋನು
ಮುಳುಗಿ ಹೋದೆವು ನಾವು
ಸಮುದ್ರದಂಚನು ಮುಟ್ಟಿ !

ಬಿದಲೋಟಿ ರಂಗನಾಥ್

ಕವಿ ರಂಗನಾಥ ಬಿ.ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ 'ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ' ಹಾಗೂ 'ಶಾಲೀನಿ ಪುರಸ್ಕಾರ' ಲಭಿಸಿವೆ.

 

More About Author