ಎಷ್ಟೊಂದು ಬಟ್ಟೆಗಳು ಕುತ್ತಿಗೆಗೆ ಹಗ್ಗ
ಬಿಗಿದು ನೇತಾಡೋ ಹೆಣಗಳು!
ಎಂದೋ ಹಾಕಿ ಮತ್ತೆ ಬಿಚ್ಚಿಟ್ಟ
ಅಂಗಿ ಕಾಲರಿಗೆ ಕೊಳೆ
ಮಗು ಕಾಲಿನ ಕೆಸರು ಮುಂಬಾಗಿಲ ಹೊಸಿಲಲಿ ನಕ್ಕಂತೆ
ಅಂಟಿಸಿಕೊಂಡು ಮೂಕಾಗಿದೆ!
ಪ್ಯಾಂಟಿನ ಪಕ್ಕವೇ ಇವಳ ಪೆಟಿಕೋಟ್
ನಾಚಿ ನಾಚಿ ಸರಿದಿದೆ ಅಲ್ಲೆ,
ಸಿಲವಾರದ ಹ್ಯಾಂಗರಿಗೆ
ಮಾವ ಕೊಟ್ಟಿದ್ದ ಸಫಾರಿ
ಹಳೆಯ ಹಾಡ ಹಾಡುತಾ ಕೂತಿದೆ!
ಜರತಾರಿ ಪಂಚೆ,
ಧಾರೆಗೆಂದು ಚನ್ನಬಸಪ್ಪನ ಅಂಗಡಿ
ಯಲ್ಲಿ ಡಿಸ್ಕೌಂಟಲ್ಲಿ ತಂದಿದ್ದು; ಕಥೆಗಳ
ಮಾರುಕಟ್ಟೆಯಲ್ಲಿ ಒಂಟಿಯಾದ ಕವಿತೆಯಂತೆ
ನೇತಾಡುತ್ತಿದೆ!
ಇವಳ ರೇಷಿಮೆ ಸೀರೆ ಪಕ್ಕವೇ
ಕತ್ತಲಲಿ ಕಾಡುವ ಸಿಂಗಲ್ ಪಟ್ಟಿಯ ಬ್ರಾ ಇಣುಕುತ್ತಿದೆ
ಜೊತೆಗೆ
ಉಡದೇ ಬಿಟ್ಟ ಜುಬ್ಬಾಗಳು
ಪೋಸ್ಟ್ ಮಾರ್ಟಂಗೆ ಕಾದು ಬಾತುಕೊಂಡ ಹೆಣಗಳು
ಹ್ಯಾಂಗರಿನ ಹೊಟ್ಟೆಗೆ ಇಳೆ ಬಿದ್ದಿವೆ!
ಮದುವೆ,ಗೃಹಪ್ರವೇಶ,ಆರತಿ,ತಿಥಿ
ಗಳಿಂದ ಬಂದ ರಾಶಿ
ರವಿಕೆ ತುಂಡುಗಳು ಮತ್ತು ಒಂದಕ್ಕೊಂದು ಫ್ರೀ ಆಫರಿಗೆ
ಬಂದ ಜಾಲರಿನ ಟ್ರಾನ್ಸ್ಪರೆಂಟ್ ನೈಟಿ
ಅಪರೂಪಕೆ ಬಂದ ನೆಂಟರ ಪಡೆ
ಅಲ್ಲಾಡದೇ ಝಾಂಡಾ ಹೂಡಿದಂತೆ ಹ್ಯಾಂಗರನೇರಿವೆ!
ಮಾಯಾಬಜಾರಿನ ಮಾಯಾ
ಕೋಲು ಈ ಹ್ಯಾಂಗರು
ಉಟ್ಟ,ಉಡದ
ಯಾರಿಗೂ ಕೈ ಎತ್ತಿ ಕೊಡದ ವಸ್ತ್ರಾಗಾರ!
ಬರುವಾಗ,ಹೋಗುವಾಗ ಬೆತ್ತಲೆ ಅಂದರು ದಾಸರು;
ಬಟ್ಟೆಯೊಳಗಣ ಬೆತ್ತಲೆಗೆ ನಾಚದೇ
ಕೊಳ್ಳುಬಾಕತನಕೆ ನಾವು ಈಗ ನಿಜಕ್ಕೂ ದಾಸರು!
ಸಂತೆಬೆನ್ನೂರು ಫೈಜ್ನಟ್ರಾಜ್
ಸಂತೆಬೆನ್ನೂರು ಫೈಜ್ನಟ್ರಾಜ್
ಗೆಳೆಯ ನಟರಾಜ್ ಅವರ ಅಕಾಲಿಕ ಮರಣ ಸೈಯದ್ ಫೈಜುಲ್ಲಾ ಅವರಿಗೆ ಅರಗಿಸಿಕೊಳ್ಳಲಾಗಲೇ ಇಲ್ಲ. ಮಿತ್ರ ತನ್ನೊಂದಿಗೆ ಸದಾ ಇರಬೇಕೆಂಬ ಹಂಬಲ. ಪರಿಣಾಮ ತನ್ನ ಹೆಸರಿಗೆ ಗೆಳೆಯನ ಹೆಸರನ್ನು ಸೇರಿಸಿಕೊಂಡರು. ಸಂತೆಬೆನ್ನೂರು ಫೈಜ್ನಟ್ರಾಜ್ ಎಂದು ಬದಲಾದರು.
ಬಹುಶಃ ನಾಡಿನ ಪತ್ರಿಕೆಗಳನ್ನು ನಿಯತಕಾಲಿಕಗಳನ್ನು ನಿರಂತರ ಓದುವವರಿಗೆ ಫೈಜ್ನಟ್ರಾಜ್ ಹೆಸರು ಚಿರಪರಿಚಿತ. ಅವರ ಹೆಸರು ನಾಡಿನ ಯಾವುದಾದರೂ ಪತ್ರಿಕೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಹಾಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಲೇ ಇರುವ ನಿರಂತರತೆ ಯನ್ನು ಅವರು ಕಾಯ್ದುಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರು ಗ್ರಾಮದಲ್ಲಿ ಜನನ. ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರು. ’ಎದೆಯೊಳಗಣ ತಲ್ಲಣ’, ’ಬುದ್ಧನಾಗ ಹೊರಟು’ ಕವನ ಸಂಕಲನಗಳಾದರೆ ’ಮಂತ್ರದಂಡ, ಸ್ನೇಹದ ಕಡಲಲ್ಲ’ ಮಕ್ಕಳ ಕೃತಿಗಳು. ರೇಷು ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಾಶಿಸುತ್ತಲೂ ಇದ್ದಾರೆ.
More About Author