ಬುಕ್ ಬ್ರಹ್ಮ ಆಯೋಜಿಸಿದ್ದ ಸ್ವಾತಂತ್ಯ್ರೋತ್ಸವ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿರುವ ಬೆಳಗಾವಿ ಜಿಲ್ಲೆಯ ಘೋಡಗೇರಿಯವರಾದ ಕತೆಗಾರ ಬಸವಣ್ಣೆಪ್ಪ ಕಂಬಾರ ಅವರ ‘ನೆರಳ ನರ್ತನ’ ಕತೆ ನಿಮ್ಮ ಓದಿಗಾಗಿ..
ಹುಂಚದಕಟ್ಟೆ ಗಿರಿಮಲ್ಲನ ಕರಿ ಹೆಂಚಿನ ಮನಿಯೊಳಗ ನಾಗರ ಹಾವು ಹೊಕ್ಕಿರುವ ಸುದ್ದಿ ಊರತುಂಬ ಹಬ್ಬಿದಾಗ, ಸಂಜಿ ಐದರ ಮಳಿಗಿ ಇಡೀ ಶಿವಾಪೂರ ಕೊಳೆತ ಹುಣ್ಣಿನಂಗ ರಿಜಿರಿಜಿಯನ್ನುತಿತ್ತು. ಹೆಂಗ ಹೊರಳಿದರು ಹಾಂಗ ಒಂದ ಢಾವ ಅಂತಾರಲ್ಲ ಈ ಯುಗಾದಿಯಿಂದ ಯಾಕೋ ಎನೋ ಯಾವ ಕೆಲಸಕ ಕೈ ಹಾಕಿದರು ಅಪಶಕುನ ಎದಿ ಒದೆಯತೊಡಗಿತ್ತು. ಐನೋರ ಮಠಕ್ಕ ಮೂರ ಬೆಂಟಿ ಬೆಲ್ಲ ದಾನ ಕೊಡತಿನಿ ಅಂತ ಹೇಳಿ ಮಾತ ತಪ್ಪಿಸಿದಕ್ಕೊ... ಅಥವಾ ಮಗಾ ತ್ವಾಟ ಕಾವಲಾ ಮಾಡಲು ಹೋಗಿ ಗಿಡದಾಗಿನ ಮಂಗ್ಯಾಗ ಕಲ್ಲ ಒಗೆದ ಗಾಯ ಮಾಡಿದಕ್ಕೋ ಗೊತ್ತಿಲ್ಲ ಗಣಿತದಾಗ ಕುಂದರತಿಲ್ಲ. ಯಾವುದೋ ಶಾಪವೊ ಅಥವಾ ತನ್ನ ಕರ್ಮವೋ ಎನೊ ಕಾಡಾಕತ್ತಿತ್ತು ಕೈ ಹಾಕಿದಲ್ಲೆಲ್ಲಾ ಮುಳ್ಳ ಚುಚ್ಚಾಕತ್ತಿತ್ತು ಎನ ಮಾಡಬೇಕು ಅಂತ ಚಿಂತಿ ಮನಸನ್ನು ಕಡಿಯುತ್ತಿದ್ದರು, ಹೆಂಗೋ ಬ್ಯಾಲೆನ್ಸ ಮಾಡಿಕೊಂಡು, ಬಾಳ್ವೆನ ಗ್ವಾಳೆ ಮಾಡಿ ತಂತಿಮ್ಯಾಲ ಹೊಂಟವನ ಮನೀಯೊಳಗ ನಾಗರ ಹಾವು ಬಂದುದು ಉರಿವ ಗಾಯಕ್ಕೆ ಉಪ್ಪು ಸುರುವಿದಾಂಗ ಆಗಿತ್ತು. ಊರಿನ ಹೆಣ್ಣ ಗಂಡೆಲ್ಲ ಊಟ ಬಿಟ್ಟು, ವ್ಹಾರೇ ಬಿಟ್ಟು, ಬಿಟ್ಟಿ ಸೀನೇಮಾ ನೋಡಲು ಬಂದವರತೆ, ಎಲ್ಲವನಗುಡ್ಡದ ಜಾತ್ರಿಗಿ ಬಂಡಿ ಕಟ್ಟಿಕೊಂಡು ಹೊರಟವರಂತೆ, ಗಿರಿಮಲ್ಲನ ಮನಿಮುಂದ ದಂಗದುಳ್ಯಾಕತ್ತದ್ದು ನೋಡಿ ಅವನಿಗೆ ಒಂದೊಂದ ಮೀಸೆಯನ್ನು ಉಡಾಳ ಹುಡುಗೊರ ಜಗ್ಗಿ ಜಗ್ಗಿ ಎಳೆದಂಗಾಯ್ತು. ಗಿರಿಮಲ್ಲನ ಹೆಂಡತಿ ಗಿರಿಜಾ, ಮಗಳು ಪಾರ್ವತಿ ಮಗ ಮಲ್ಲ ಎಲ್ಲ ಹೊರಗಡೆ ಬಂದ ನಿಂತಿದ್ದಾರೆ. ಎಲ್ಲರ ಮುಖದಲ್ಲೂ ಗಾಬರಿ ಆವರಿಸಿದೆ. ಹಗಲೊತ್ತು ಬಂದಿದೆ ಯಾರೋ ನೋಡಿದರು ಹೇಳಿದರು ಸರಿ. ರಾತ್ರಿ ಬಂದು ಹೋಗಿದ್ದರೆ ಎನು ಮಾಡೋದು..? ಎನ್ನುವ ಚಿಂತಿ ಗಿರಿಜಾಳದ ಆಗಿತ್ತು. ಹಾಂಟ್ಯಾನ ಹಾಂವ ಇಷ್ಟೊಂದು ಮನಿಗೊಳೆಲ್ಲ ಬಿಟ್ಟು ನಮ್ಮ ಮನಿ ಸೂರಿನಾಗ ಬರಬೇಕಾ..? ಅಂತ ವಟಗುಟ್ಟಿದಳು. ಎಲ್ಲಿಂದ ಬಂತು..? ಎಲ್ಲಿ ಹೊಯ್ತು..? ಮೊದಲ ಯಾರ ನೋಡಿದರು..? ಗುಂಪಿನಾಗ ಯಾರೊ ಕೇಳಿದ್ದಕ್ಕ ಇದಕ್ಕಾಗಿ ಅವಾಗಿನಿಂದ ತಲಿಮ್ಯಾಲ ಟವಲ ಹೊತಗೊಂಡು ತಾಳ್ಮೇಯಿಂದ ಎಲ್ಲರಿಗೂ ವಿವರಿಸಿ ಹೇಳುತ್ತಿದ್ದ ಆಯಿ ಬಾಳ್ಯಾ. ಎರಡ ಮೂರ ತಾಸಿನಿಂದ ಸಂಡಾಸಕ ಹೊಗೊದ ಬಿಟ್ಟು ಅಲ್ಲೆ ನಿಂತಿದ್ದ. ಮೊದಲು ನೋಡಿದ್ದು ಅವನೇ. ಹಾಗಾಗಿ ಪ್ರತ್ಯಕ್ಷದರ್ಶಿ ಅವನೇ ಆಗಿರೊದರಿಂದ ಅವನ ಮಾತುಗಳಿಗೆ ಅತ್ಯಂತ ಮಹತ್ವ ಬಂದಿತ್ತು.(ಜನರ ಒತ್ತಾಯದ ಮೇರೆಗೆ ಅವನಿಗೆ ಈ ಮಹತ್ವ ಅನಿವಾರ್ಯವಾಗಿ ಕೊಡಬೇಕಾಗಿದೆ ಈ ವಿಷ್ಯ ನಿಮ್ಮಲ್ಲಿ ಇರಲಿ ಯಾಕೆಂದರೆ ಆಯಿ ಬಾಳ್ಯಾಗು ಊರಾಗ ವಿರೋದಿ ಮಂದಿ ಅದಾರ) ಮುಗಳಿ ಲಸಮ ಅತ್ಯಂತ ಹರ್ಷಿತನಾಗಿ ಗಿನಮತ್ಯಾರ ಕಟ್ಟಿಮ್ಯಾಲ ನಿಂತು ಈ ಸಿಂಗಾರವನ್ನು ಕಣ್ಣಾರೆ ಕಂಡು ಉಲ್ಲಸಿತನಾದ. ಬಳುಬಾಳ ಮಾಯಿ ತನ್ನ ಎಮ್ಮಿ ರೊಕ್ಕಾ ಮುನಿಗಿಸಿದ ಕೇಸಿನಲ್ಲಿ ಗಿರಿಮಲ್ಲನ ಮ್ಯಾಲ ಹಲ್ಲ ಕಡಿಯುತ್ತಿದ್ದಾಕಿಗಿ ತಾಕತ್ತು ಪುರೊಟವಾಗದೆ ಹೇಗೆ ಹಗೇ ಸಾಧಿಸುವುದು ಎಂದು ಚಿಂತಿಸುತ್ತಿದ್ದಳು ಮೂರು ವರ್ಷದಮ್ಯಾಲ ಗುಡ್ಡದ ನಿರ್ವಾಣೆಪ್ಪ ಅವನ ಮನಿಯೊಳಗ ಹಾವ ಹೊಗಿಸಿ ತನ್ನ ಸೇಡಿಗೆ ಪ್ರತಿಕಾರ ತೀರಿಸಿದ ಅಂತ ಹೊತ್ತಮುನಿಗಿ ಗುಡ್ಡದ ಕಡೀಗಿ ಉದಕಡಿ ಬೆಳಗಿ ನಮಸ್ಕಾರ ಮಾಡಿದಳು. ಮನೇ ಮುಂದೆ ಊರಿನ ಜನವೆಲ್ಲ ಜಮಾಯಿಸಿದ ಮೇಲೆ ಉಡಾಳ ಹುಡುಗೋರ ಎಲ್ಲಿ ಸುಮ್ನಿರತಾರ.. ಯಾವ ಕಡೇಯಿಂದ ಬಂದು ಒಳಹೊಯ್ತು..? ಅಂತ ದಿಟ್ಟಿಸುತ್ತ ಸೂರಿನಿಂದ, ಕಿಟಕಿಯಿಂದ, ಬಾಗಿಲ ಸಂದಿಯಿಂದ, ಕಾಣಬಹುದಾ ಅಂತ ಕಣ್ಣ ಅಗಲಿಸಿ ನೋಡತೊಡಗಿದರು. ಆಯಿ ಬಾಳ್ಯಾ ಹುಡುಗರನ್ನು ಗದರಿಸುತ್ತ “ ಲೇ ಭೀಮ್ಯಾ, ಕಾಳ್ಯಾ, ಶಿವ್ಯಾ ಹುಡಗಾಟಕಿ ಮಾಡಾಕ ಹೋಗಬ್ಯಾಡ್ರಿ ಒಳ ಹೊಗಿರೊದು ನಾಗರ ಹಾವ, ಮೂರ ಮಾರ ಉದ್ದ ಐತಿ ಎಲ್ಲಾ ಕಡಿಗಿ ನಗಚರಕಿ ಮಾಡಿದಾಂಗ ಇಲ್ಲಿ ಮಾಡಬ್ಯಾಡ್ರಿ ಹ್ವಾದ ಜೀಂವ ಯಾರು ಕೊಡೊದಿಲ್ಲ. ಸುಮ್ನ ನಿಲ್ಲರಿ ಅಂತ ಎನೋ ಪ್ರಯತ್ನ ಪಡುತ್ತಿದ್ದವರನ್ನು ತಡೆದು ನಿಲ್ಲಿಸಿದ. ಈ ಮಾತು ಕೆಲವರಿಗೆ ಸರಿ ಅನಿಸಿತು. ಹೌದು ಹಾವಿನ ಜೋಡ ಎಂತಾ ಹುಡಗಾಟಕಿ ಅಲ್ವಾ..? ಗಿರಿಮಲ್ಲನ ಮನಿಯೊಳಗ ಹಾವು ಹೊಕ್ಕ ಸುದ್ದಿ ಎಕಕಾಲಕ ರೇಡಿಯೊದೊಳಗ ಬಿತ್ತರಗೊಳ್ಳುವ ಚಿತ್ರಗೀತೆಯಂತೆ, ಮನೆಯಿಂದ ಮನೆಗೆ ಹರಡತೊಡಗಿತು. ಪರಕನಟ್ಟಿಗೆ ಎಮ್ಮಿ ಕಟ್ಟಿಸಿಕೊಂಡು ಬರಲು ಹೋಗಿದ್ದ ಗಿರಿಮಲ್ಲನಿಗೆ ಓಡೊಡಿ ಬಂದು ಸುದ್ದಿ ಮೊದಲು ಮುಟ್ಟಿಸಿದನಂದ್ರ ಅವನ ಆಳು ಗರ‍್ಯಾ. ಸತ್ತವರ ಮನಿಮುಂದ ಸೇರಿದವರಂತೆ, ತನ್ನ ಮನೆಯ ಮುಂದೆ ನಿಂತು ಮನೆಯ ಸಂದಿಗೊಂದಿ, ಬಿರುಕು, ಮುರುಕನ್ನು ದಿಟ್ಟಿಸಿ ಸಾಧ್ಯವಾದಷ್ಟು ಅಣಕಿಸಿ ಹಲ್ಲು ಕಿಸಿಯುತ್ತಿರುವ ತನ್ನ ವಯೋಮಾನದವರಿಂದ ಹಿಡಿದು ಉಡಾಳ ಹುಡುಗೊರ ತನಕ ನೆರೆದವರನ್ನ ನೋಡಿ ಹಲ್ಲು ಕಡಿದ. ಗಂಟಲ ಪೆಸೆ ಆರಿ ಬಂತು. ಉಗುಳಲು ಸಾಧ್ಯವಾಗದೆ ಒಣ ಕೆಮ್ಮು ಒತ್ತಾಯದಿಂದ ಕೆಮ್ಮಿದ. ತಲಬಾಗಲ ಚಿಲಕ ಹಾಕಿ ಹೊರಗ ಕಟ್ಟೇ ಮೇಲೆ ಹೆಂಡತಿ, ಮಗಳು ಎಬರೇಸಿ ಮಗಾ ಹಾಗು ಓಣಿಯ ಸಮಸ್ತ ಗಂಡು ಹೆಣ್ಣು ಸೇರಿದ್ದರು. ಕೆಲವರು ಮನೆ ಒಳ ಹೊಕ್ಕು ಹಾವು ಕೊಲ್ಲುವ ನೆಪದಲ್ಲಿ ಅಗತ್ಯ ಸಾಮಾನುಗಳನ್ನು ಕಳ್ಳತನ ಮಾಡುವ ಸಂಚಿನಲ್ಲಿದ್ದರೆ, ಇನ್ನು ಕೆಲವರು ಒಡೆದು ಧ್ವಂಸ ಮಾಡಿ ವಿಕೃತ ಖುಷಿ ಪಡುವ ದುಸ್ಸಾಹಸದಲ್ಲಿದ್ದರು. ಪಕ್ಕದ ಮನೆಯ ಅರವತ್ತ ಮೂರು ಯುಗಾದಿ ಕಳೆದಿರುವ ಸಾಲಹಳ್ಳಿ ಶಿವವ್ವ ಗಿರಿಮಲ್ಲನ ಕಂಡು, ಲಡದು ಎಲಿ ಅಡಿಕಿಗಿ ಮೂರ ರೂಪಾಯಿ ಕೇಳಿದರ ಮಕ್ಕಳ ಮುಂದ ಹೇಳಿ ಮಾನ ಕಳದಿದ್ದ ಇಂದ ಅವನ ಮನಿಯೊಳಗ ಹಾವ ಹೊಕ್ಕು ಇಡೀ ಊರಮುಂದ ಮಾನ ಕಳದೈತಲ್ಲ ದೇವರ ನೀ ಸತ್ಯದ ಕಡೀಗೆ ಇರತಿ ಅಂತಾರ ಸುಳ್ಳಲ್ಲ ಅಂತ ಭಕ್ತಿಯ ಪರವಶಳಾಗಿ ಇನ್ನೊಂದು ಹರಕೆ ಕಟ್ಟಿಕೊಂಡಳು. ಇದೆಲ್ಲ ಮನಸ್ಸಿನಲ್ಲಿ ನಡೆದಿತ್ತು ಅದನ್ನು ತೋರಗೊಡದೆ ಅವನ ಮುಂದೆ ಬಂದು “ಮಲ್ಲಪ್ಪಾ.. ಪಂಚಿಮ್ಯಾಗ ನಾಗಪ್ಪನ ನೈವದ್ಯ ಮರತಿರೇನ ಮತ್ತ.....? ತಪ್ಪಾಗೇತಿ ಅಂತ ಬೇಡಿಕೊ ಸ್ವಾಮಗೋಳ ಅದಾರೇನ ನೋಡಿ ಅಕ್ಕಿಕಾಳ ಮಂತ್ರಿಸಿ ಕೊಡತಾರ ಇಸಗೊಂಡ ಬರೋಗ ತಂದ ಮನಿಯೆಲ್ಲ ಒಗೆದ ಅಂದ್ರ ಕಣ್ಣ ಮರಿಯಾಗಿ ಹರದ ಹೋಕೈತಿ ಹೆದರಬ್ಯಾಡ ಅಂತ ಡಾಂಬಿಕ ಸಮಾಧಾನ ಹೇಳಿದಳು. ಇದರ ಉದ್ದೇಶ ಇನ್ನಮೇಲೆ ಎಲೆ ಅಡಿಕಿಗಿ ದುಡ್ಡ ಕೇಳಿದರೆ ತನ್ನ ಮಕ್ಕಳಿಗೆ ಹೇಳದೆ ಇರಲಿ ಅನ್ನೊದ. ಗಿರಿಮಲ್ಲನಿಗೆ ಯಾಕೋ ನಿನ್ನೆಯಿಂದಲೆ ಎಡಗಣ್ಣ ಹಾರಾಕತ್ತಿತ್ತು. ಅದರ ಹಕೀಕತ್ತ ಇದ ಅಂತ ಗೊತ್ತಾಗಿರಲಿಲ್ಲ. ಹುಬ್ಬಿನ ಮ್ಯಾಲ ಬಿಳಿ ಕೂದಲ ಹುಟ್ಟೇತಿ ಅದನ್ನ ಜಗ್ಗಿ ಕಿತ್ತಕೊಂಡದಕ್ಕ ಎಡಗಣ್ಣ ಹೊಡಕೊಳ್ಳಾತದ ಅನಕೊಂಡಿದ್ದ. ಹೆಂಡತಿ ಮಕ್ಕಳು ಗಾಬರಿ ಬಿದ್ದದ ನೋಡಿ ಸಮಾಧಾನ ಪಡಿಸಿದ.
“ನೋಡು ಎಲ್ಲಾದರಾಗ ಹುಂಬತಾನ ಮಾಡಿದಾಂಗ ಹಾಂವಿನ ವಿಷಯದಾಗ ಮಾತ್ರ ಮಾಡಬ್ಯಾಡ ಮಾರಾಯ ಶಿವಾಪೂರದಾಗ ದೋನಸೆ ರೂಪಾಯ ಕೊಟ್ಟರ ಹಾಂವ ಹಿಡ್ಯಾಂವ ಅದಾನಂತ ಪೋನ ನಂಬರ ಯಾರರ ಹಂತ್ಯಾಕ ಇದ್ದರ ಇಸ್ಕೋ ಪೋನ ಮಾಡಿ ಹೇಳ ಗಾಡಿ ಮ್ಯಾಲ ಬಂದ ಹಿಡಕೊಂಡ ಹೋಗತಾನಂತ ನೀ ಒಟ್ಟ ಒಳಗ ಹೋಗಬ್ಯಾಡ ನಿನಗ ನನ್ನ ಆಣಿ ಆಗೇತಿ, ಅಟ್ಟೂ ಮೀರಿ ಹೋಗತೇನಂದ್ರ ಮಕ್ಕಳಾ ಕೋಕೊಂಡ ತಿಂದಂಗ ನೋಡ ಅಂತ ರೋಶಾವೇಶ ಹಾಗೂ ಅತೀಯಾದ ಪ್ರೀತಿ ಮತ್ತು ಕಾಳಜಿಯನ್ನು ಸಮಸಮವಾಗಿ ಮಿಶ್ರಣಮಾಡಿ ಶೆರಗಿನಿಂದ ಕಣ್ಣೀರ ಒರೆಸಿಕೊಳ್ಳುತ ಹೆಂಡತಿ ತಡೆದು ಹೇಳಿದಳು. ಅದು ಅವನ ಎದಿ ಹಿಡದ ನಿಲ್ಲಿಸದಂಗ ಆಯ್ತು. ಬಾಜೂಮನಿ ಕಟ್ಟಿಮ್ಯಾಲ ಕುಂತ ವಿಚಾರ ಮಾಡಿದ. ಇಲ್ಲಿತನಕ ಆದ ಕತಿ ಎಲ್ಲರ ವಿಶದವಾಗಿ ಹೇಳಿದನ್ನು ಕೇಳಿ ಒಂದ ನಿರ್ಧಾರಕ ಬಂದ. ಎಬಡ ಮಂದಿ ಜೋಡಿ ಮಾತಾಡಿ ಚರ್ಚಾ ಮಾಡೋದರಾಗ ಹುರುಳಿಲ್ಲ ಅಂತ ಅನಿಸಿತ ಅವನಿಗೆ ನಾಲ್ಕುವರೇ ದಶಕದ ಹಿಂದೆ ಪ್ರಾಥಮಿಕ ಶಾಲೆಯೊಳ ಇದ್ದಾಗಲೆ ಗಣಿತದಲ್ಲಿ ಇಡೀ ಗ್ರಾಮದಲ್ಲೆ ಅತ್ಯಂತ ಜಾಣನೆಂದ ಶಿರಹಟ್ಟಿ ಮಾಸ್ತರಿಂದ ಶಭ್ಭಾಶ ಪಡೆದ ಏಕಮೇವ ವಿದ್ಯಾರ್ಥಿಯಾಗಿದ್ದ ಈತನಿಗೆ ಸ್ವಂತ ನಿರ್ಧರಿಸಿ ಹಾವು ಹೊರಹಾಕುವ ತಂತ್ರವ ತಲಿಯೊಳಗ ಬೆಸೆದುಕೊಂಡು ಊರ ಮಠದ ಕಡೆಗೆ ನಡೆದ. ಹಾವು ಮನೆಯೊಳಗ ಹೋದ ಮೇಲೆ ಎಲ್ಲೆಲ್ಲಿ ತಿರುಗಾಡಿರಬಹುದು..? ಹಾಸಿಗೆ, ದೇವರ ಜಗಲಿ, ಗಣಪತಿ ಮಾಡ್ನಿ, ಪಡಸಾಲೆ, ಹಳೇ ಟ್ರಂಕಿನ ಮೇಲೆ, ಎತ್ತಿನ ಜತಿಗಿ, ಹಗ್ಗ ಇಟ್ಟಿದ ಜಾಗ, ದನಗಳ ಕೋಣೆ,, ಮೇವಿನೊಳಗ ಅಡಗಿ ಕುಳಿತಿದ್ದರೆ..ಎನುಮಾಡೋದು..? ಮಂತ್ರಿಸಿದ ಅಕ್ಕಿಕಾಳು ಅದಕ್ಕೆ ಕಾಣದೆ ಹೋದರೆ. ಅಥವಾ ಅದು ಹೋಗಿದೆ ಅಂದುಕೊಂಡು ಗುದ್ದಿನೊಳು ಅವಿತುಕೊಂಡಿದ್ದರೆ, ಬಚ್ಚಲಮನೆ, ಹಿತ್ತಲಿನ ನೀರಿನ ಟ್ಯಾಂಕು ಮೊನ್ನೆ ತಂದಿಟ್ಟಿದ್ದ ಪಿವಿಸಿ ಪೈಪಿನೊಳು ಹುದುಗಿದ್ದರೆ..? ಮನಸ್ಸಿನ ಹಳಹಳಿಗಿ ಕೊನೆಯಿಲ್ಲದೆ ಒದ್ದಾಡುತ್ತ ಬೇಕೆಂದೆ ಕೆರೆದುಕೊಳ್ಳದ ಗಡ್ಡವನ್ನು ಆಸ್ರಯ ಇಲ್ಲದ ಬೆಳದ ತಲೆಗೂದಲವನ್ನು ನೇವರಿಸಿಕೊಳ್ಳುತ ಹೊರಟಿದ್ದವನಿಗೆ ಎದುರಿಗೆ ಶಿವಲಿಂಗೇಶ್ವರ ದೇವಸ್ಥಾನದ ಮುಂದಿನ ಪಾದಗಟ್ಟಿ, ಅದರ ಪಕ್ಕದಲ್ಲಿ ಪೂಜೆಗೊಂಡಿದ್ದ ಜೋಡಿ ನಾಗರಗಲ್ಲು ಈಗಷ್ಟೇ ಯಾರೋ ಭಕ್ತಾದಿಗಳು ಅಚ್ಚೇರ ಬೆಲ್ಲ, ಗ್ಲಾಸ ಹಾಲು ಎರೆದು ಹೋಗಿದ್ದರು. ಆ ಕ್ಷೀರವು ಗಗನದಿಂದ ಭೂಮಿಗೆ ಇಳಿದು ಬಂದಂತೆ ನಾಗರಗಲ್ಲುಗಳ ಪಾದವ ಸ್ಪರ್ಶಿಸಿ ಮುಂದೆ ಹರಿದು ಬಂದುದ ನಾಯಿಯೊಂದು ನೆಕ್ಕುತ್ತಿತ್ತು. ಇಂತಹ ಹಾವನ್ನು ಹೊಲ ಗದ್ದೇಗಳಲ್ಲಿ ಸಾಕಷ್ಟು ಕಂಡಿದ್ದವ ಆದರ ಕೆಲವು ಸಲ ಅಚಾನಕ್ ಆಗಿ ಕೊಂದದ್ದು ಇದೆ. ಎಲ್ಲ ಹಾವುಗಳಿಗಿಂತ ನಾಗರ ಹಾವು ತುಂಬಾ ವಿಷಕಾರಿ ಹಾಗು ವೈರತ್ವ ಇಡುವಂತದ್ದು. ಹಾವಿನ ರೋಷಾ ಹನ್ನೇರಡು ವರುಷ ರೇಡಿಯೋದಲ್ಲಿ ಆವಾಗಾವಗ ಪ್ರಸಾರವಾಗುವ ಈ ಚಿತ್ರಗೀತೆ ನೆನಪಿಗೆ ಬಂತು. ಮನೆಹೊಕ್ಕ ಹಾವು ತನ್ನ ನೆತ್ತಿಯ ಚುಂಬಿಸಿದಂತೆ ಭಾಸವಾಯಿತು. ದಾಪುಗಾಲ ಇಡುತ ನಡೆದವನಿಗೆ ಎದುರಿಗೆ ಅಂಡ ಚಂದ್ರು ಸಿಕ್ಕ. ಮಠದೊಳಗ ಸ್ವಾಮಿಗೊಳ ಅದಾರಾ..? ಎಂದು ಕೇಳಬೇಕೆನಿಸಿತು. ಯಾಕೆಂದರೆ ಪ್ರವಚನಕ್ಕೆಂದು, ಭಿಕ್ಷೆಗೆ, ಪಾದಪೂಜೆಗೆ ಹೀಗೆ ಹತ್ತಿದ ಹಳ್ಳಿಗೆ ಹೋಗಿರತಾರೆ ಅವರಿವರನ್ನು ಕೇಳಿಕೊಂತ ಹೋಗಕ್ಕಿನ್ನ ಸಮಸ್ತ ಊರಿನ ನಾಗರಿಕನಾದ ನಾನು ಶ್ರೀಮಠದ ಭಕ್ತರಲ್ಲಿ ಒಬ್ಬನಾದ ತಾನು ಕೂಡ ಹೌದು ಅನ್ನೊದರಲ್ಲಿ ತಪ್ಪೇನಿದೆ..? ಮಠಕ್ಕೆ ಬೆಲ್ಲ ದಾನ ಕೊಡತಿನಿ ಅಂದಿದ್ದೆ ಸಂಸಾರದ ಜಂಜಾಟದಲ್ಲಿ ಆಗಲಿಲ್ಲ ಸಂಸಾರಿಗಳ ತ್ರಾಸ , ಸಂತಾಪಗಳನ್ನು ಸನ್ಯಾಸಿಗಳು ಅರಿಯದ ಇರ‍್ತಾರೇನು..? ಯೋಚಿಸುತ್ತ ಗೌಡರ ಮನಿ ಹಿಂದಿನ ಕಾಲು ಹಾದಿಗಿ ತಿರಿಗಿ ಸಿಂಗ್ಯಾನ ಮನಿ ಹುಣಿಸಿ ಗಿಡದ ಹಾದಿ ಸೇರಿದ. ಕಿಲೋಮಿಟರ ಅಂತರದಲ್ಲಿ ಎತ್ತರದ ಗಿಡಗಳ ನಡುವ ಮಠದ ಕೇಸರಿ ಬಾವುಟ ಹಾರಾಡತ್ತಿರೊದು ಕಾಣಿಸಿತು ಅದರಲ್ಲಿನ ಓಂ ಅಕ್ಷರ ಓದಲು ಬಾರದಿದ್ದರು ಓದಲು ಹೆಣಗಿದ.ಅದರ ಕೆಳಗ ಊರಿಗೆ ಅಭಿಮುಖವಾಗಿ ಎರಡು ಲೌಡಸ್ಪೀಕರಗಳು. ಒಂದರ ಮೇಲೆ ಕಾಗೆ ಕುಳಿತು ಸಮಸ್ತ ಪ್ರಪಂಚವನ್ನು ಗಮನಿಸುತ್ತಿತ್ತು. ಪ್ರತಿವರ್ಷ ಪುಣ್ಯಾರಾಧನೆ, ಶ್ರಾವಣ ಮಾಸದ ಆಚರಣೆ, ಕಾರ್ತಿಕೋತ್ಸವ ಸಮಯದಲ್ಲಿ ಶ್ರೀಗಳು ಹೇಳುವ ಪ್ರವಚನ ಊರಿನ ಜನವೆಲ್ಲ ಕೇಳಿ ಉದ್ದಾರ ಆಗಿರೊದಕ್ಕಿಂತ ಉಂಡು ಉಬ್ಬಸ ಪಟ್ಟಿದ್ದೆ ಹೆಚ್ಚು. ಶ್ರೀಗಳು ಸಾತ್ವಿಕರು, ಸದಾ ತಪ ಅನುಷ್ಠಾನ, ಪ್ರವಚಣ, ಶಿಕ್ಷಣ ಹೀಗೆ ಒಂದಿಲ್ಲೊಂದು ಕೆಲಸದಲ್ಲಿ ಸದಾ ನಿರತರು. ಮುಖ್ಯದ್ವಾರದ ಒಂದೂವರೆ ಪೂಟ್ ಅಗಲದ ಕಲ್ಲಿನ ಹೊಸ್ತಿಲದಾಟಿ ಒಳಗೆ ಅಡಿಯಿಟ್ಟನು. ಸ್ವಾಮಿಜಿಗಳು ಒಳಗಡೆ ಹಸುವಿಗೆ ಮೇವು ತಿನಿಸುವ ದೃಶ್ಯ ಕಾಣಿಸಿತು. ನಳದ ಬದಿ ಪರ ಊರಿನ ಭಕ್ತರು ನಾಲ್ಕೈದು ಜನ ಕೈಕಾಲು ಮುಖ ತೊಳೆದುಕೊಳ್ಳುತ್ತಿದ್ದರು. ಅವರು ಈಗ ಬಂದಂಗಿತ್ತು. ಮಠದ ಹುಡುಗನೊಬ್ಬ ಹೂದೋಟದಲ್ಲಿ ದಾಸವಾಳ ಹೂಗಳನ್ನು ಕೀಳುತ್ತಿದ್ದ.. ಮಗನ ಜಾತಕ ಹಿಡಿದು ವೃದ್ದರೊಬ್ಬರು ಸ್ವಾಮಿಜಿಗಳ ಬಳಿನಿಂತು ಪರಿಹಾರಾರ್ಥವಾಗಿ ಚರ್ಚಿಸುತ್ತಿದ್ದರು. ಸ್ವಾಮಿಗಳು ಎಲ್ಲರ ಕಷ್ಟಕ್ಕೂ ಒಂದು ಪರಿಹಾರ ಹೇಳತಾರೆ. ನನಗು ಅಕ್ಕಿಕಾಳ ಮಂತ್ರಿಸಿ ಕೊಟ್ಟಮೇಲೆ ಅವುಗಳನ್ನು ಎಲ್ಲಿಂದ ಮೊದಲ ಎಸೆಯುತ್ತ ಹೋಗಬೇಕು..? ಮೊದಲು ಮುಂಚಿ ಬಾಗಿಲಿನಿಂದ ಹಿಡಿದು ಹಿತ್ತಲ ಮನಿಯವರೆಗೆ ಎಸಿತಾ ಹೊದರೆ ಸರಿ ಇರತದ ಎಂದು ಮನಸ್ಸಿನಲ್ಲಿ ಎಣಿಕೆ ಮಾಡಿಕೊಳ್ಳುತ ಸ್ವಾಮಿಗಳ ಬಳಿ ಬಂದು ನಡು ಬಗ್ಗಿಸಿ ನಮಸ್ಕಾರ ಮಾಡಿದ. “ಎನ ಗಿರಿಮಲ್ಲಪಾ..ಹೆಂಗದಿ..? ಬಾಳ ದಿನ ಆತ ಮಠದ ಕಡೀಗಿ ಬಂದೇ ಇಲ್ಲ..? ಕೇಳಿದರು. ಕೈ ಕೈ ಹಿಸುಕಿಕೊಳ್ಳುತ್ತ ಗಿರಿಮಲ್ಲ ಅಡಕತ್ರ‍್ಯಾಗ ಸಿಕ್ಕ ಅಡಿಕಿಯಂಗ ಒಡಮೂರಿದ. “ಇಲ್ರಿಯಪಾ.. ಗಳೇಗಾಡ ಇದ್ವಲ್ಲರಿ.. ಹೊಸಾ ನೆಲಾ ಬ್ಯಾರೇ ಕಬ್ಬಿನ ಲಾವಣಿ ಮಾಡೇಣಿ ಹಿಂಗಾಗಿ ಕೆಲಸ ಬಾಳ ಇತ್ತರೀ ಬರಾಕ ಆಗಲಿಲ್ಲರೀ… ಅಂದ. ಎಲ್ಲಿ ಮೂರ ಬೆಂಟಿ ಬೆಲ್ಲ ಕೇಳಿ ಬಿಡ್ತಾರೋ ಎನ್ನುವ ಟಕಟುಕಿ ಎದಿ ಕೊರೆಯುತ್ತಲೆ ಇತ್ತು.ಸದ್ಯ ಸ್ವಾಮಗೋಳ ಬೆಲ್ಲದ ವಿಷ್ಯ ರ‍್ತಾರ ಅಂತ ಒಳಗೊಳಗ ಖುಷಿಪಟ್ಟ.ಸ್ವಾಮಿಗೊಳ ಹೊಸದಾಗಿ ಊರಿಗಿ ಬಂದಾಗ ಅವರ ಜೊತಿಗಿ ಟೊಂಕಕಟ್ಟಿ ನಿಂತಿದ್ದು, ದೇವಸ್ಥಾನ ಕಟ್ಟುವ ವ್ಯಾಳೆಕ ತನ್ನ ಎತ್ತು ಬಂಡಿ ಹೂಡಿ ಕಲ್ಲು ಮಣ್ಣು ತಂದದ್ದು ನೆನಪಿಗೆ ಬಂತು ಅವರು ಪ್ರೀತಿಯಿಂದ ತಲೆ ನೇವರಿಸಿ ಆಶೀರ್ವಾದ ಮಾಡಿದ್ದು ಎಲ್ಲ ನೆನಪಿಗೆ ಬಂದವು. ಪರ ಊರಿನವರು ಬಂದು ನಮಸ್ಕಾರ ಮಾಡಿದರು. ಇನ್ನು ಇವರು ತಮ್ಮ ಪುರಾಣ ಬಿಚಗೊಂಡ ಕುಂತರ ನನ್ನ ಅಕ್ಕಿಕಾಳು ಇಲ್ಲೆ ಮೆರಿತಾವ ಅಂತ ಎಚ್ಚರಗೊಂಡ ಮನಸ್ಸಿನಲ್ಲಿ ಮಾತುಗಳನ್ನು ಸಿದ್ದಮಾಡಿಕೊಂಡು “ಬುದ್ದಿ ಮನಿಯೊಳಗ ನಾಗರ ಹಾವೊಂದು ಹೊಕ್ಕೈತ್ರಿ ಎಲ್ಲೆಲ್ಲೆ..ತಿರಿಗ್ಯಾಡೆತೋ..ಎಲ್ಲಿ ಕುಂತೈತೊ..ಗೊತ್ತಿಲ್ಲ. ಓಣ್ಯಾಗಿನ ಹುಡುಗೊರ ನೋಡಾಕ ಹೋಗಿ ಕಲ್ಲ ಒಗೆದ ಕೆಣಕಿದಾವ ಒಳಗ ಹೋಗಾಕ ಅಂಜಿಕಿರಿ..ಮನ್ಯಾಗ ಎಲ್ಲಾರು ಹೆದರ‍್ಯಾರ‍್ರೀ.. ಅಕ್ಕಿಕಾಳ ಮಂತ್ರಿಸಿ ಕೊಡ್ರೆಪಾ. ಒಯದು ಮನಿತುಂಬ ಒಗಿತಿನಿ.. ಅಂದ ನಮಸ್ಕಾರ ಮಾಡಿದವರಿಗೆ ಆಶೀರ್ವಾದ ಮಾಡುತ ಸ್ವಾಮಿಜಿಗಳು ಗಿರಿಮಲ್ಲನ ನೋಡಿ ”ಹೌಂದಾ..? ಹೊರಗ ಮಂದಿ ಗದ್ದಲಕ ಹೆದರಿ ಹೋದ್ರು ಹೋಗಿರತದ ಪಾಪ ಅದು ಮನಿಶೇರ ನೋಡಿ ಹೆದರಿರತೈತಿ ನಾವು ಅದನ ನೋಡಿ ಹೆದರತಿವಿ ಯಾವ ಪ್ರಾಣಿಗೋಳು ಮೈಮ್ಯಾಲ ಬಿದ್ದ ಕಡಿಯೊದಿಲ್ಲ. ಚನ್ನಬಸು.. ಉಗ್ರಾಣದಾಗಿನ ಅಕ್ಕಿ ಒಂದಿಷ್ಟ ತಗೊಂದ ಬಾ.. ಅಂತ ಮಠದ ಹುಡುಗನಿಗೆ ಹೇಳಿದರು. ಅವನ್ನು ಮಂತ್ರಿಸಿ ಕೊಟ್ಟರು. ಮಂತ್ರಿಸಿದ ಅಕ್ಕಿಕಾಳು ತಗೋಂದ ಮನೀಗಿ ಬರೋ ಹೊತ್ತಿಗಿ ಅಲ್ಲಿನ ಚಿತ್ರಣವೇ ಬದಲಾಗಿತ್ತು.ಅದಾಗಲೇ ಮನಿ ಬಾಗಿಲ ತೆರೆದು ಜನ ಬಡಿಗಿ, ಹಾರೇ ಹಿಡಿದು ಒಳಹೋಗಿದ್ದರು. ಸೈಕಲ್ ಟೈರಿಗೆ ಬೆಂಕಿ ಹಚ್ಚಿ ಬೆಳಕ ಹಿಡಿದು ಏಳೆಂಟು ಹುಡುಗರು ಹುಡುಕುತ್ತಿದ್ದರು. ಇನ್ನ ಕೆಲವರು ಸೀಮೆ ಎಣ್ಣೆ ಚೆಲ್ಲುತ ಮೇವಿಡುವ ಜಾಗ, ಟ್ರಂಕು, ಹಾಸಿಗೆ, ದನಗಳ ಗ್ವಾದ್ನಿ, ಪೋಟೊ ಹಿಂದಿನ ಸಾಲು ಜಗಲಿ ಕಟ್ಟೆ, ಅಡುಗೆ ಮನೆ, ಅಡ್ಡಗೋಡೆ, ಲಾಟೀನ ಗಳಾಸು ಇಡುವ ಪೌಟುಣಗಿ ಹೀಗೆ ಸುಲಭವಾಗಿ ಮುರಿದು ಹಾಳ ಮಾಡಬಹುದಾಗಿರುವ ವಸ್ತುಗಳನ್ನೆಲ್ಲ ಹಾವು ಹುಡುಕುವ ನೆಪದಲ್ಲಿ ಓಣಿಯ ಗಂಡಸರೆಲ್ಲ ಹಾರೇ ಬಡಿಗೆ ಕೋಲು ಕೊಡಲಿಯಿಂದ ತಿವಿದು ಹುಡುಕುತ್ತಿದ್ದರು. ಗಿರಿಮಲ್ಲನಿಗೆ ಇದೆಲ್ಲವ ನೋಡಿ ಜಂಘಾಬಲವೇ ಉಡುಗಿ ಹೋದಂತಾಯ್ತು. ತನ್ನ ಎದೆಯ ಮೇಲಿನ ಬಿಳಿ ಕರಿ ಮಿಶ್ರಿತ ಕೂದಲ ಹಾಗೂ ಚರ್ಮವ ಹಿಡಿದು ಎಳೆ ಎಳೆಯಾಗಿ ಬಿಚ್ಚಿದಂತೆ, ಕನ್ಣುಗುಡ್ಡೆಗಳಿಗೆ ಸಲಾಕಿ ಹಾಕಿ ಇಚೇ ಮೀಟಿ ತೆಗೆದಂತೆ ಆಯ್ತು. ಹೌಹಾರಿದ. ಅಂಗಳದಲ್ಲಿ ಭಯಭೀತಳಾಗಿ ನಿಂತಿದ್ದ ಹೆಂಡತಿ ಮಕ್ಕಳ ಈ ಹಾಳು ಸಂಭ್ರಮವನ್ನು ನೋಡುತ್ತ ಸುಮ್ಮನೆ ನಿಂತಿದ್ದು ಅವನ ಮರ್ಮಾಂಗಕ್ಕೆ ತಿವಿದಂಗಾಯ್ತು ಆವೇಶದಿಂದ ಹಂತ್ಯಾಕ ಬಂದವನ “ ಏನೆ ಲೌಡಿ ಇಷ್ಟೊಂದು ಜನಾ ಮನಿಯೊಳಗ ಹೊಕ್ಕ ಹಾಳ ಗೆಡವಾತಾರ ನಿಂತ ಡೊಂಬರಾಟ ನೋಡವರ ಹಂಗ ನೋಡಾತಿಯಲ್ಲ. ಸೆಟದ ಹೆಣಾ ಬಿಕ್ಕೊಂದು ನಿಂತದಿ ಹೇಳಾಖ ಬರಾಂಗಿಲ್ಲೆನ..? ಗುಡುಗುತ್ತ ಮನಿಯೊಳಗ ನುಗ್ಗಿದ. ಅಟ್ಟದ ಮನಿಯೊಳ ಹೆಂಚಿಗೆ ಬಿದಿರಿನಿಂದ ತಿವಿಯುತಿದ್ದ ಗವಯಗೊಳ ಗುರಸಿದ್ದನ ಗದರಿಸುತ “ ಎಯ್ ಗುರಸಿದ್ದ ಮಕಾಟ್ಯಾ ಹಾವ ಹಂಚಿನಮ್ಯಾಲ ಐತಿ..? ಬಿದಿರಿನಿಂದ ತಿವ್ಯಾತಿದಿ..ಮಂದಿ ಮನಿ ಮುರದ ಮಟಾ ಮಾಡೊದ ಅಂದ್ರ ಎನ ಟಬರಲೇ ನಿಮಗ ಎಯ್ ಬಿಡಲೇ ಬೊಸಡಿಕೆ..ಅಂತ ಕೈಯಾಗಿನ ಬಿದಿರ ಕಸೆದು ದೂಡಿದ. ಈ ಧ್ವನಿಗೆ ಮನಿಯೊಳಗ ಅಲ್ಲಲ್ಲಿ ಇದ್ದವರೆಲ್ಲ ಕ್ಷಣ ಸ್ತಬ್ದರಾದರು ಗಿರಿಮಲ್ಲನಿಂದ ಇಂತ ಮಾತುಗಳು ಯಾರು ನಿರೀಕ್ಷಿರಲಿಲ್ಲ. ಕಂಪನಿ ರಾಮ್ಯಾ ಸೈಕಲ್ ಟೈರಿಗಿ ಬೆಂಕಿ ಹಿಡಿದು ನಿಂತಿದ್ದವ ಮುಂದೆ ಬಂದು “ ಎನ ಗಿರಿಮಲ್ಲನ್ನ ನೀ ಇಲ್ಲದಕ ನಿಮ್ಮ ಹ್ಯಾಂತಿ ಹೆದರಿದಾಳು ಅಂತ ತಿಳಿದು ಅಕೀ ಹಾವಾ ಬಡೀಬರ‍್ರೀ ಅಂತ ಕರೆದಳು ಅದಕ ಬಂದ ಹಾವಾ ಹುಡಕಾತಿವಿ ನೀ ನೋಡಿದ್ರ ಬಾಯಿಗಿ ಬಂದಂಗ ಮಾತಾಡತಿಯಲ್ಲೊ ಮಾರಾಯ ನಿನ್ನ ಮನ್ಯಾಗ ಹಾವಾರ ಹೊಗಿಸ್ಕೊ ಹದ್ದಾರ ಹೊಗಿಸ್ಕೊ ನಮಗೇನ ಆಗೋದೈತಿ..ಮನಿ ದಗದಾ ಬಿಟ್ಟ ನಿನ್ನ ಕೈಲಿ ಅನಿಸಿಕೊಳ್ಳಾಕ ನಮ್ಮ ಮನಿ ಕೂಳ ತಿಂದ ನಮಗೇನ ವ್ಹಾರೇ ಇಲ್ಲ ಅನಕೊಂಡಿಯೇನ..? ನಾಲಿಗಿ ಬಿಗಿ ಹಿಡದ ಮಾತಾಡ ಅಂತ ಕೋಪದಿಂದ ರವರವಾ ತಿರಿಗಿಬಿದ್ದ ಕೈಯಾಗಿನ ಕೊಳ್ಳಿ ಬಿಸಾಡಿ ಹಿತ್ತಲ ಮನಿಕಡಿಗಿ ಬೀಸಿ ಒಗೆದ. ಅಲ್ಲೆ ಬಿದ್ದದ್ದ ಪೇಪರಕ ಬಿಂಕಿ ತಗುಲಿ ಒಮ್ಮಿ ಭಗ್ಗನ ಹೊತ್ತಿ ಆರಿತು. ಗಿರಿಮಲ್ಲಗ ತಲಿ ಅರ್ಧಾಕೊಯ್ದ ಹೊದಂಗ ಆಗಿತ್ತು. ಯಾವುದ ಹೇಳಬೇಕು ಯಾರಿಗಿ ಹೇಳಬೇಕು ಅಂಬುವ ತಾಕಲಾಟದಾಗ ಹೆಂಡತಿ ಮಕ್ಕಳು ಹೊಂದಾಣಿಕ ಇಲ್ಲದಕ್ಕೆ ಇಡೀ ಊರ ವಿರುದ್ದು ಹಾಕೊಂಡಂಗ ಆಗಿತ್ತು. “ಹೋಗ ಹೋಗ್ರಲೇ ಅಕೀ ಕರದಳಂತ ಇಂವ ಓಡಿ ಬಂದಾನ ಮಂದಿಮನಿ ಮುರದ ಹಾಳ ಮಾಡೋದರಾಗ ಎನ ಖುಷಿಲೆ ನಿಮಗ..? ನಿಮ್ಮ ಮನ್ಯಾಗ ಹುಳಾ ಹೊಕ್ಕಿದ್ರ ಹಿಂಗ ಹಾಳ ಹಚ್ಚಿ ಹುಡಕತಿದ್ದಿರೇನ..? ಕೇಳಿದ. ಅದೇ ರೋಷಾವೇಶದಲ್ಲಿದ್ದ ಕಂಪನಿ ರಾಮ್ಯಾ “ ಈ ಬುದ್ದಿ ನಿನ್ನ ಹ್ಯಾಂತಿಗಿ ಇರಬೇಕಾಗಿತ್ತ..ಅದನ ಅಕೀಗ ಹೇಳ ನಮಗಲ್ಲ ದೀಡಶ್ಯಾಣ್ಯಾ ನಮಗ ಹೇಳಾಕ ಬಂದಾನಿಲ್ಲಿ. ಅಂತ ಗುಡುಗಿದ. ಗಿರಿಮಲ್ಲ ಸೆಣಬಿನ ಚೀಲ ತಗೊಂದ ಬೆಂಕಿ ಆರಿಸುತ್ತ “ ಸಾಕ ಹೋಗ್ರೊ ನನಗ ಗೊತ್ತದ..? ಅಂತ ಉಡಾಫೆಯಿಂದ ಮತ್ತೊಮ್ಮೆ ಅವನ ಹುಳುಕು ಮಾರಿಗಿ ಉಗಿದ. ಅಷ್ಟರೊಳಗ ಮನಿಯೊಳಗ ಧೈರ್ಯಮಾಡಿ ಒಳಗ ಬಂದ ಹೆಂಡತಿ ಗಿರಿಜಾ “ಅವರನ್ನೆಲ್ಲ ಯಾಕ ಬೈತಿದಿ ನಾನ ಕರೆದ ಹಾವ ಹುಡಕಿ ಬಡಿರಪಾ ಅಂತ ಹೇಳೆನಿ..? ಅಂದಾಗ ಅವಳ ಮಾರಿಗಿ ಸೆಣಬಿನ ಚೀಲ ಬೀಸಿ ಒಗೆದು “ನೀ ಬಾಯಿ ಮುಚ್ಚ ಬೊಸಡೆ ಈ ಹರಕ್ಕತ್ತೆಲ್ಲ ನಿನಗ್ಯಾಂವ ಮಾಡಂದಾನ..? ಇದೆಲ್ಲ ಆದದ್ದ ನಿನ್ನಿಂದನ ಮಠಕ ಹೋಗಿ ಅಕ್ಕಿಕಾಳ ತರೋತನಾ ನಿನಗ ಧೀರ ಇರಲಿಲ್ಲ. ಅಂತ ಹರಿಹಾಯ್ದ. ಅವನ ಮಾತಿಗೆ ದುಕ್ಕ ಒತ್ತರಿಸಿ ಬಂದು ಕಣ್ಣ ನೀರನ್ನು ನಿದಾನಕ ಒರೆಸಿಕೊಳ್ಳುತ ”ನಿನ್ನ ಮಾರಿ ಮನ್ನಾಗ ಅಡಗಲಿ ಎಂದು ಮನಸಾರೆ ಗಂಡನನ್ನು ಶಪಿಸಿದಳು. ಒಂದೊಂದು ಸಾಮಾನು ಕಟ್ಟಿಗೆಯಿಂದ ಬಾರಿಸಿ ಸದ್ದು ಮಾಡುತ ಹಾವು ಇಲ್ಲದುದ ಖಚಿತಪಡಿಸಿಕೊಂಡು ಹರವಿ ಹನ್ನೊಂದಾಗಿದ್ದ ಮನೆಯನ್ನು ಒಂದಕಡೆಯಿಂದ ಒಪ್ಪಮಾಡುತ ಹೊರಟ.ನಿಜಕ್ಕೂ ಮನೆಯ ಯಾವ ಸಾಮಾನು ಹಿಡಿಯೊಕು ಭಯ. ಮಗಳಂತು ಹೆದರಿ ಅಂಗಳದಲ್ಲಿ ನಿಂತವಳು ಒಳಗೆ ಬಂದಿರಲಿಲ್ಲ. ಈ ರೀತಿಯ ಗೌಜು ಗದ್ದಲಕೆ ಯಾವ ಹಾವು ತಾನೆ ನಿಂತಿತು..? ಎಲ್ಲ ಪ್ರಾಣಿಗಳಿಗೆ ಜೀವ ಭಯ ಮಾಮುಲು. ಹಂತಹಂತವಾಗಿ ಮನೆಯ ಒಂದು ಕಡೇಯಿಂದ ಹುಡುಕುತ ಹೊರಟಂತೆ ಹಾವು ಕಾಣಲಿಲ್ಲ ಮುಂಚಿ ಬಾಗಿಲಿನಿಂದ ಹಿತ್ತಲಮನಿಯವರೆಗು ಬಂದುರು ಹಾವಿನ ಸುಳಿವಿಲ್ಲ.ಸಂಜೆ ಕಳೆಯತು. ಹಾವು ಸಿಗಲಿಲ್ಲ. ಎಲ್ಲರಿಗು ದಣಿವಂತು ಆಯ್ತು. ಆದರೆ ಹಾವಿನ ಭಯಾ ಮಾತ್ರ ಹೋಗಲಿಲ್ಲ. ಗಿರಿಮಲ್ಲನಿಗೆ ನಿರಾಸೆ, ಹಸಿವು ಸಿಟ್ಟು ನುಗ್ಗಿಬಂದವು ಕುಸಿದು ಕೆಳ ಕುಳಿತ. ಆದರೆ ಬಹಳಷ್ಟು ಜನ ಅಂಗಳದಲ್ಲಿಯೆ ನಿಂತು ಕೇಳುತ್ತಿದ್ದರು.
೦ ೦ ೦
ರಾತ್ರಿ ಡುಮ್ಮಗೊಳ ಸಿದರಾಯಿ ತಲಿಗಿ ಟವಲ ಸುತ್ತಿಕೊಳ್ಳುತ್ತ ಬಂದ. ಅವನ ಜೊತೆಗೆ ಗುಡುಸಾಬ, ಬ್ಯಾಟಿಗಾರ ನಿರ‍್ಯಾ ಬೀಡಿ ಸೇದುತ ಭಯವ ಮೈಗೂಡಿಸಿಕೊಂಡು ಒಳ ಬಂದರು. ಗಿರಿಮಲ್ಲನಿಗೆ ಅವರನ್ನ ನೋಡಿ ಕ್ಷಣ ದುಕ್ಕ ಒತ್ತರಿಸಿ ಬಂದು ಕಣ್ಣು ಹನಿಗೂಡಿದವು.ಇವರೆಲ್ಲ ಗಿರಿಮಲ್ಲನ ಆಪ್ತ ಸ್ನೇಹಿತರೇ ಆಗಿದ್ದರಿಂದ ಸಮಕಾಲಿನವರಾಗಿದ್ದರು. ಎಷ್ಟ ಕಟ್ಟಿ ಹಿಡಿದರು ಗಿರಿಮಲ್ಲನಿಗೆ ದುಕ್ಕ ತಡೆಯಲಿಲ್ಲ “ ಗುಡ್ಡದ ನಿರ್ವಾಣೆಪ್ಪ..ಯವ್ವಾ ದ್ಯಾಮವ್ವಾ..ಈ ಹಾವು ನನ್ನ ಮನಿಯೊಳಗ ಹೊಕ್ಕು ಮಾನಾ ಪ್ರಾಣಾ ಹಿಂಡಿತಲ್ವಾ.. ದೇವ್ರೆ.. ಈ ಊರಾಗ ನಾನೊಬ್ನ ಪಾಪಿನಾ..? ಈ ಊರಾಗ ನಿನ್ನಬಂಗಾರ ಒಡವಿ ತುಡಗ ಮಾಡಿದಾವರ ಅದಾರ, ನಿನ್ನ ರೊಕ್ಕದ ತಿಜೋರಿ ಹೊತ್ತಕೊಂಡ ಮುನಿಗಿಸಿದವ ಅದಾರ, ಊರಗಾರಕಿ ಜಮೀನ ಉಂಡ ಉಗುಳಿದಾವರ ಅದಾರ ಅವರನ್ನೆಲ್ಲ ನೆಟ್ಟಗ ಇಟ್ಟು ನನಗ್ಯಾಕ ಹಿಂಗ ಮೋಸ ಮಾಡಿದಿ..? ಅಂತ ಬಂದವರ ಮುಂದ ದುಕ್ಕ ತೋಡಿಕೊಂಡ ಅಳಲಾರಂಭಿಸಿದ. ಅದಕ್ಕುತ್ತರವಾಗಿ ಹಾಗು ಈ ಹಿಂದೆ ಮನೇಯಲ್ಲಿಯೆ ಸಿದ್ದ ಉತ್ತರಗಳನ್ನು ತಯ್ಯಾರಿ ಮಾಡಿಕೊಂಡು ಬಂದಿದ್ದ ಮೂವರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಸಿದರಾಯಿ ಮೂವರೊಳಗ ಹಿರಿಕನಾದುದರಿಂದ ಅವನೆ ಮುಂದುವರೆದು “ ತಪ್ಪ ಮಾಡ್ದಾಂವ ಯಾಂವ ಅದಾನ್ಲೆ ಗಿರಿಮಲ್ಲಾ.. ಈ ಭೂಮಿಮ್ಯಾಗ ? ನಿಂಗ ಖರೇ ಹೇಳತಿನಿ.. ಒಬ್ಬರನ್ನ ಶ್ರೀಮಂತ ಇನ್ನೊಬ್ಬನ ಬಡವನಾಗಿ ಹುಟ್ಟಿಸಿದಾನಲ್ಲ ಆ ದೇವರೇನು ಸಾಚಾನಾ..? ಅಂವ ಮಾಡೊದು ತಪ್ಪ ಹೌದಿಲ್ಲೊ..? ಈ ಮಾತನ್ನು ತುಂಡರಿಸಿ ತನ್ನ ಮಾತುಗಳನ್ನು ಮುಂದುವರೆಸಲು ಉತ್ಸುಕನಾದ ನರ‍್ಯಾ “ನಾವ ಪಡ್ಕೊಂಡ ಬಂದಿರೋದು ಇಷ್ಟ ಗಿಂಡಿ ಒಯ್ದ ಮಿಂಡಗ ಕೊಟ್ಟಳು ಅಂತ ಗಾದಿನ ಇಲ್ಲೇನು..ಮಾತು ಸಂದರ್ಭಕ್ಕ ಸರಿ ಹೊಗಲಿಲ್ಲ ಅನ್ನೊದ ಎಲ್ಲಾರಿಗು ಗೊತ್ತಾದ್ರು ಯಾರು ತಪ್ಪಂತ ಹೇಳುವ ಗೋಜಿಗಿ ಹೊಗಲಿಲ್ಲ.” ಇದು ದೇವರ ಮಾಡಿದ ಕೆಲಸ ಅಲ್ಲ ಮಲ್ಲಣ್ಣ ನಮ್ಮ ಕರ್ಮಗೋಳ ದುಡಿಸಿಕೊಳ್ಳಾತಾವ ಅಷ್ಟ ದುಡಿಬೇಕು.. ಆಗಾಂಗಿಲ್ಲಂತ ಹೆಂಗ ಹೇಳಾಕ ಬರತೈತಿ..ಅದ ಹಂಗಿಲ್ಲ ಎಂದು ಸಮಾಧಾನ ಮಾಡುತ ಆಧ್ಯಾತ್ಮಿಕವಾಗಿ ಭಾವುಕನಾಗುವಂತ ಮಾತಾಡಿದ ಗುಡುಸಾಬ. ಆದರೂ ಹಾವ ಹೊಕ್ಕ ಮನಿ ಅಂದ್ರ ಮೈಯೆಲ್ಲ ಭಯಾ.. ಒಂದ ಕೆಲಸಾ ಮಾಡೋಣ ನನಗ ಒಬ್ಬ ಮನಿಷ್ಯಾ ಗೊತ್ತ ಅದಾನ ಅವನ ಕೈಯಾಗ ಪದ್ಮ ಐತಿ ಹಾಂವಾ ಹಿಡಿತಾನ ಅವಗ ಹಾವ ಎನು ಮಾಡುದುಲ್ಲ ಅವ ಹಿಡಿದ ಹಾವ ಕೊಲ್ಲುದ ಹಿಡಕೊಂಡ ಹೋಗಿ ದೂರ ಬಿಟ್ಟ ಬರತಾನ ಆದರ ದೀಡ ಹಜಾರ ರೂಪಾಯಿ ಕೇಳತಾನ ನೀ ಹೂಂ ಅಂದರ ಕರಿಸ್ತಿನಿ ಅಂತ ವ್ಯವಹಾರ ಮಾತಾಡಿದ ನಿರ‍್ಯಾ. ಈ ಮಾತು ಅವನ ಮನಸ್ಸಿಗೆ ಬಂದಿಲ್ಲಂತ ಅವನ ಮಾರಿಮ್ಯಾಲಿನ ಗೆರಿಗೊಳ ಹೇಳಿಬಿಟ್ಟವು. ಖರ್ಚಿಲ್ಲದ ಖೇಲ ಖತಂ ಆಗಬೇಕನ್ನುವ ಗಿರಿಮಲ್ಲನ ಬುದ್ದಿ ಇವರಿಗೇನು ಹೊಸದಲ್ಲ. ಗುಡುಸಾಬ ಮುಂದೆ ಬಂದು ಈ ಹಾವ ಮನಿಬಿಟ್ಟ ಹೊರಗ ಹೋಗಬೇಕ ಅಂದರ ಅದರ ಉಸರ ಕಟ್ಟಬೇಕು ಅದಕ್ಕ ದಟ್ಟ ಹೊಗಿ ಹಾಕಬೇಕ ನೋಡ ಗವಯಗೊಳ ಇರಪನ್ನ ಹೊಲದಾಗಿನ ಮನ್ಯಾಗ ಇದಕ್ಕಿಂತ ದೊಡ್ಡ ಹಾಂವ ದನಗೊಳ ಗ್ವಾದ್ನ್ಯಾಗೆ ಸಿಂಬ್ಯಾಗಿ ಕುಂತಿತ್ತ. ಅದನ್ನು ಹೆಂಗ ಹಿಡಿತಿರಿ ತಾನಾಗಿ ಹೋಗಬೇಕಂದರ ಒಂದ ಕಬ್ಬಿನ ಬುಟ್ಟ್ಯಾಗ ಕುಳ್ಳ ಹಾಕಿ ಬೆಂಕಿ ಮಾಡಿ ದಟ್ಟ ಹೊಗಿ ಎಬಿಸಿಬಿಟ್ಟ ನೋಡ, ಹಾವ ಹೆಂಗ ಬಂದಿತ ಹಂಗ ಬಾಗಲ ಸಂದಿ ಹಿಡಿದ ಹನ್ಯೋ.. ಹೊರಗ ಬಂದಮ್ಯಾಲ ಎಲ್ಲಾರ ಬಡೆದರ, ಅದಕ್ಕ ಇದ ಐಡಿಯಾ ಬೆಸ್ಟ ನೋಡ ಅಂತ ಹೇಳಿದಾಗ ಇವರೆಲ್ಲ ನನ್ನ ಮನಿ ಸುಡುವ ಉಪಾಯದಾಗ ಅದಾರ ಅನ್ನೊದ ಗಿರಿಮಲ್ಲಗ ತಿಳಿದಿತ್ತು. ಕೇಳಿ ಸುಮ್ಮನಾದ ಇದನ್ನ ಬಿಟ್ಟ ಇನ್ನ್ಯಾವುದಾದರ ಉಪಾಯ ಮಾಡಬಹುದು ಅಂತ ತಲಿ ಕೆರಕೊಂಡವನ ಅಂಗೈಯೊಳಗ ಏಳೆಂಟ ಬಿಳಿ ಕೂದಲ ಬಿಟ್ಟರೆ ಇನ್ನೇನು ಬರಲಿಲ್ಲ. ಆದದ್ದ ಆಗಲಿ ಅಂತ ಗಿಣಮತ್ತ್ಯಾರ ಅಂಗಡಿಗಿ ತಾನ ಖುದ್ದ ಹೋಗಿ ಅಚ್ಚೇರ ಕವಡಿ ಊದ ತಂದು ಕಟ್ಟಿಗಿ ಕೆಂಡ ಮಾಡಿದ. ಸಿದರಾಯಿ ನಿರ‍್ಯಾ, ಗುಡುಸಾಬ ಸಾತ ನೀಡಿದರು. ಗುಡುಸಾಬ ಜರ್ಮನಿ ತಾಟ ತಗೊಂದು ಕೆಂಡ ಆ ತಾಟಿನೊಳಗ ಇರಿಸಿದ. ಸಿದರಾಯಿ ಕೆಂಡದಮ್ಯಾಲ ಕವಡಿ ಊದ ಒಂದ ಮುಟಿಗಿ ಒಗೆದ. ನಿಗಿ ನಿಗಿ ಕೆಂಡದಮ್ಯಾಲ ಊದ ಬಿದ್ದದ್ದ ತಡಾ ಹೊಗಿ ದೊಪ್ಪನ ತನ್ನ ಅಸಲಿ ಘಮಲಿನೊಂದಿಗೆ ಘಾಟು ಪುಟಿದೆದ್ದಿತು. ಆ ತಾಟ ಹಿಡಕೊಂಡ ಇಡೀ ಮನೇಯನ್ನೆಲ್ಲ ತಿರಗಾಡಿ ಹೊಗಿ ತುಂಬಿಸಿದರು ಅಷ್ಟೊತ್ತಿಗಾಗಲೆ ಎಲ್ಲರಿಗೂ ಒಂದು ಸಲ ಕೆಮ್ಮು ಒತ್ತರಿಸಿ ಬಂದು ಕೊಕೊಕೊ ಅಂತ ಕೆಮ್ಮಿದ್ದು ಆಗಿತ್ತು. ಕೆಲವರ ಕಣ್ಣಾಗ ನೀರ ಬಂದರೆ ಇನ್ನ ಕೆಲವರು ಗಗ್ಗುತ್ತಲೆ ಇದ್ದರು. ಇನ್ನು ಉಳಿದಿರೊದು ಅಟ್ಟ. ಅಲ್ಲಿ ಜೋಳದ ಕಣಿಕಿ, ಶೇಂಗಾ ಹೊಟ್ಟ, ಹುರಳಿ ಹೊಟ್ಟ, ಕುರುಳು, ಕಟ್ಟಿಗಿಯಿಂದ ತುಂಬಿತ್ತು. ಅಲ್ಲಿ ಬೆಂಕಿ ಒಯ್ಯಂಗಿಲ್ಲ. ದಟ್ಟವಾಗಿ ಹೊಗೆ ಮನೆಯನ್ನೆಲ್ಲ ಆವರಿಸಿತ್ತು. ಹಿತ್ತಲಕಡೆಯಿಂದ ಬಾಗಿಲಗಳನ್ನು ಬಂದಮಾಡುತ್ತ ಬಂದು, ತೊಲಬಾಗಿಲ ಹಂತ್ಯಾಕ ಕೆಂಡದ ತಾಟ ಇಟ್ಟು ಮತ್ತಷ್ಟ ಹೊಗಿ ಎಬಿಸಿದರು. ಮುಂಚಿ ಬಾಗಿಲ ತುಸು ಎಳೆದು ಹಾವು ಹೆದರಿ ಹೊರಗೊಗಲು ದಾರಿ ಮಾಡಿದರು. ಮೂವರು ಟಲೆಗೆ ಸುತ್ತಿಕೊಂಡಿದ್ದ ಟವಲ ಬಿಚ್ಚುತ ಕೆಮ್ಮುತ ಅಂಗಳಕ ಬಂದು ಮುಂದಿನ ಮನೆಯ ಕಟ್ಟೆಮ್ಯಾಲ ಕುಳಿತರು. ಇನ್ನಮ್ಯಾಲಾದರು ಹಾಂವ ಹೊರ ಹೊಗುದುಲ್ಲೆನು..? ಅನ್ನುವ ಅನುಮಾನ ಗಿರಿಮಲ್ಲಗ ಕಾಡುತ್ತಲೆ ಇತ್ತು. ಗುಡುಸಾಬ ಬೀಡಿ ಹೊತ್ತಿಸಿದ. “ಸಿದರಾಯಿ ಹಾಂವ ಉಸರಗಟ್ಟಿ ಸಾಯಕಿಲ್ಲಾ ಇದಕ್ಕ..? ಇಂತ ಘಾಟಿನಾಗು ಬದಕಿತೇನ..? ಅಂದ. ಸಿದರಾಯಿಗೆ ಮನೆಯೊಳಗಡೆ ಇದ್ದಾಗಲೆ ನವರಂದ್ರಗಳಲೆಲ್ಲ ಹೊಗ ಅಡರಾಯಿಸಿಕೊಂಡಿದ್ದರಿಂದ ಸಣ್ಣಗ ನೀರಾಡಿತ್ತು. ಮುಖ ಮೂಗಿನಿಂದ ಒಸರುವ ದ್ರವವನ್ನು ಬಾಳಿಪಟ್ಟಿ ಚಡ್ಡಿಗಿ, ಜುಪರಾಖಾದಿ ಬನಿಯಾಕ ಒರೆಸಿಕೊಳ್ಳುತ ಒಳಗೊಳಗ ಅಸಹನೆಯಿಂದ ಕುದಿಯುತ್ತಿದ್ದ. ಮಕಾಟ್ಯಾ ಈ ಸಾಬಗ ಹೊಗಿ ಮುಕುಳ್ಯಾಗ ಸೇರಿಲೆಂಗ ಅಂತಿನಿ ಹಡ್ಸಿಮಗಾ ಮ್ಯಾಲ ಬೀಡಿಬ್ಯಾರೆ ಹೊತ್ತಸಿದಾನ..ಅಂತ ಅಂದಾಜು ಮಾಡುತ ಅವುಡುಗಚ್ಚುತ ಹಲ್ಲುಕಡಿದ. “ ಲೇ ಸಾಬಿ ಇಂತಾ ಹೊಗಿಗಿ ಮನಿಷ್ಯಾನಂತ ಮನಿಷ್ಯಾನ ಸಾಯ್ತಾನಂತ ಹಾಂವ ಯಾವ ಲೆಕ್ಕಲೇ..? ಎಂದು ಭರವಸೆಯ ಮಾತಾಡಿದ. ಗಿರಿಮಲ್ಲನಿಗೆ ಆದರೂ ನಿರಾಸೆಯಾಯ್ತು. “ಮಲ್ಲಪ್ಪ ಇಂದ ರಾತ್ರಿ ನೀ ಗುಡಿಶ್ಯಾರ ಮನಿ ಕಟ್ಟಿಮ್ಯಾಲ ಮಲಗ, ಬೆಳಿಗ್ಗೆದ್ದ ನೀಧಾನಕ ಎಲ್ಲಾರ ಕೂಡಿ ಹಾಂವಾ ಹುಡುಕೊನಂತ ಸಮಾಧಾನ ಹೆಳಿ ಮೂವರು ಅಲ್ಲಿಂದ ಕಾಲಕಿತ್ತರು. ಗಿರಿಮಲ್ಲನಿಗು ಅದೇ ಸರಿ ಅನಿಸಿತು. ಹೆಂಡತಿ ತಂದ ಕೊಟ್ಟ ಊಟ ಉಂಡು ಕಂಬಳಿ ಮುಸುಕ ಹಾಕಿ ಕಟ್ಟಿಮ್ಯಾಲ ಒಂಟಿ ದೆವ್ವದ ತರಾ ನಿದ್ದಿ ಬರೋತನ ಕಾಯುತ್ತ ಕುಳಿತ. ಹಾಂವು ಯಾವ ಮೂಲೆಯಿಂದ .ಯಾವಾಗ..? ಹೊರಗ ಬರತೈತೊ ಅಂತ..
೦ ೦ ೦
ಸವ್ವಟ್ಟ ಸರಿ ರಾತ್ರಿ.
ಗಿರಿಮಲ್ಲನಿಗೆ ನಿದ್ದೆಯಿಲ್ಲ. ಆಕಾಶದಾಗ ಮಿಣಕ ಹುಳುವಿನಾಂಗ ನಕ್ಷತ್ರಗೊಳ ಮಿಂಚತಿದ್ದವು. ಫಾಲ್ಗುಣ ಮಾಸದ ಆಸ್ವಿನಿ ನಕ್ಷತ್ರ, ಜೇಷ್ಠಾ ಮಳಿಯ ಸನ್ನ ಗಾಳಿಗಿ ಮೈಯೆಲ್ಲ ಗದಗುಟ್ಟಿತು. ಕಣ್ಣರೆಪ್ಪಿಮ್ಯಾಲ ಗುಳೆ ಕುಂತ ಕನಸುಗಳು, ಹೊಟ್ಟ್ಯಾಗ ಮುಳ್ಳ ಹಿಡದಾಂಗ ಹಾವಿನ ಭಯ ಎದೆಯೊಳಗ, ಮೆತ್ತಾನ ಹಾಸಿಗಿ ಎಚ್ಚರ ತಪ್ಪಿದರ ಅನಾಹುತ ಎನ್ನುವಂತೆ ಹೆದರಿ ವಿಲ್ವಗೊಂಡ ಮನಸ್ಸು, ರಾತ್ರಿ ಊರೆಲ್ಲ ಸಂಪಾದಮ್ಯಾಲ ಹಾಂವ ಮನಿಯಿಂದ ಹೊರಗ ಬಂದ ಹಡಿಸಿಮಗನ್ದು ಹಾಸಿಗ್ಯಾಗ ಬಂದ ಕುಳಿತ್ರ.. ? ಯಪ್ಪಾ.. ಬೆಚ್ಚಿದ. ಸರ್ಕಾರದವರು ಹಾಂವಾ ಹಿಡಿವ ಮಷಿನ ಯಾಕ ಕಂಡ ಹಿಡದಿಲ್ಲೋ ಎನೋ.. ಕೆಲಸಕ್ಕ ಬಾರದ ಪೌಡರು, ಸ್ನೋ, ಚಾಕಲೆಟ್ ಸಾಬನಾ ಕಂಡ ಹಿಡಿತಾರು ಹಾಂವಾ ಹಿಡಿಯೊ ಮಷಿನ ಇದ್ರ ರೈತರಿಗಿ ಎಷ್ಟ ನೆರವ ಆಕೈತಿ ಅಂತ ಯಾಂವನೂ ಹೇಳೆ ಇಲ್ಲ ಥೋ ಎನ ಸರ್ಕಾರೊ ಮಂತ್ರಿಗೊಳೊ ಅಂತ ವ್ಯವಸ್ಥೆ ಬಗ್ಗೆ, ಆಡಳಿತದ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ. ಎನ ಅಂದರು ಆಡಿದರು ಮನಸ್ಸಿನ ಹಳಹಳಿ ಕಡಿಮಿಯಾಗಿರಲಿಲ್ಲ್ಲ. ತಾಸಿನಿಂದ ಎಡಗಣ್ಣ ಮತ್ತಷ್ಟು ಜೋರ ಹೊಡಕೊಳ್ಳಾಕತ್ತಿತ್ತು. ಮೈತುಂಬ ಚಾದರ ಮುಸುಗ ಹಾಕಿಕೊಂಡು ಕುಳಿತ. ಊರಾಗಿನ ಯಾವ ದೇವರು ಅವನ ಪರ ಇರಲಿಲ್ಲ ಇನ್ನೇನ ಬೇಡಿಕೊಳ್ಳೊದು..? ಅಂತ ನಿರಾಸೆ ಮನಸ್ಸಿನ ತುಂಬ ದಟ್ಟವಾಗುತ್ತ ಬಂದಿತ್ತು. ಒಂದ ಹಾವಿಗಿ ಹೆದರಿ ಮನಿ ಬಿಟ್ಟದ್ದು ಇದ ಮೊದಲ.
ರಾತ್ರಿ. ಒಂಭತ್ತ ಆಯ್ತ......
ಹತ್ತ ಆಯ್ತ......
ಹತ್ತುವರೀ..ಆತ..... ಮಂದಿ ಮಕ್ಕಳೆಲ್ಲ ಮುಸುಗ ಹಾಕಿ ಕೌಂದಿ ಸೇರಿದರು.
ಸಾಡೇ ಅಕರಾ..
ಕಣ್ಣ ಕಿತ್ತ ಹೋಗುವಷ್ಟ ನಿದ್ದಿ ಎಳೆದು ಬಂತು. ಚಾದರ ಮುಸಗ ಹಾಕಿ ಕುಂತವ ಹಾಂಗ.. ಕಣ್ಣ ಮುಚ್ಚಿದ್ದ...... ಮಲಗೊಕ್ಕಿನ ಮೊದಲ ಇನ್ನೊಮ್ಮಿ ಉಚ್ಚಿ ಹೊಯ್ದ ಬಂದ ಮಲಗಬೇಕು ಅಂದಕೊಂಡಿದ್ದ, ಆದರ ನಿದ್ದಿ ಎಳಕೊಂಡ ಹೋಗಿತ್ತು ನಿದ್ದಿಗಣ್ಣಾಗ ಚಾದರದೊಳಗ ಯಾವಾಗ ಉಚ್ಚಿ ಹೊಯ್ಕಂಡಿದ್ದನೊ ಗೊತ್ತಿಲ್ಲ ಕಟ್ಟಿ ಕೆಳಗ ಡಮಾ ನಿಂತದ್ದು ಕಬರಿಲ್ಲದ ಗೊರಕಿ ಹೊಡೆಯುತ್ತಿದ್ದ.
...............................
ಸಿದರಾಯಿ, ನೀರ‍್ಯಾ, ಗುಡುಸಾಬ ಹಿತ್ತಲಮನಿ ಬಾಗಿಲಿನಿಂದ ಗಿರಿಮಲ್ಲನ ಮನಿಯೊಳಗ ಬಂದರು. ಕಾಲಿಗಿ ಅಲ್ಲಲ್ಲಿ ಅಡ್ಡವಾಗಿ ಇಟ್ಟಿದ್ದ ಪಾತ್ರೆ, ವಸ್ತುಗಳು ಹೆಂಗ ಬೇಕೊ ಹಾಂಗ ಅಡ್ಡಾದಿಡ್ಡಿಯಾಗಿ ಬಿದ್ದಿದ್ದವು. ಹಾವಿನ ಹೆಡಿಮ್ಯಾಲ ಹೆಜ್ಜೆ ಇಡುವವರಂತೆ ಗಿರಿಮಲ್ಲನ ಮನಿಯೊಳಗ ಕದ ತೆರೆದು ಕಳ್ಳ ಹೆಜ್ಜೆ ಇಡುತ ಒಳ ಬಂದರು. ನೋಕಿಯಾ ಹ್ಯಾಂಡಸೆಟ್ಟ ಪೋನಿನ ಸಣ್ಣ ಟಾರ್ಚ ಬೆಳಕ ಹಿಡಿದು ಸಿದರಾಯಿ, ಮೂರ ಕಡ್ಡಿಪೆಟ್ಟಿಗಿ ಹಿಡಿದು ಆವಾಗಾಗ ಯಾವ ಬೆಳಕ ಕೈ ಕೊಟ್ಟರು ಬೆಂಕಿ ಹಿಂಬಾಲ ಇರಲಿ ಅಂತ ನಿರ‍್ಯಾ, ಎರಡ ಸೆಲ್ಲಿನ ನಿಪ್ಪೊ ಬ್ಯಾಟರಿಯೊಂದಿಗೆ ಗಿರಿಮಲ್ಲನ ಮನಿಯ ಕಳ್ಳತನಕ ಹೊಂಚು ಹಾಕಿದಾಗ ರಾತ್ರಿ ಒಂದು ಗಂಟೆ. ಧನು ಸಂಕ್ರಾಂತಿ ಮುಗಿದು ಎಕಾದಶಿ ಶುರುವಾಗಿತ್ತು. ದೇವರ ಜಗಲಿಯ ಮೇಲಿರುವ ಗಣಪತಿ, ಬೆಳ್ಳಿ ಲಕ್ಷ್ಮೀ ಮೂರ್ತಿ, ಗಂಟೆ, ಅದರ ಬಾಜೂಕ ಇರುವ ಮಾಡ್ನಿ,, ಟ್ರಂಕ್ ನಿಧಾನಕ ಒಂದೊಂದೆ ಕೈಯಾಡಿಸುತ್ತ ತಡಕಾಡಿದರು. ಕೈಗೆ ಸಿಕ್ಕಿದನ್ನು ಹಿತ್ತಲ್ಲಿ ನಿಲ್ಲಿಸಿದ ಬಂಡಿಗೆ ಸಾಗಿಸಿದರು. ಅಷ್ಟರಲ್ಲಿ ಬಗ್ಗಿ ಸೀರೆ, ರವಿಕೆ, ಕೊಡಲಿ, ತೆಗೆದುಕೊಳ್ಳುವಾಗ ಸಿದರಾಯಿ ಪುಯಿಂಕ್..ಅಂತ ಹೂಸ ಬಿಟ್ಟ ಆ ನಿಶಬ್ದದಲ್ಲಿ ಅದು ಎಷ್ಟು ಸದ್ದು ಮಾಡಿತೆಂದರೆ ಒಂದು ಕ್ಷಣ ಅರೇ ಎಚ್ಚರಾಗಿ ಗಿರಿಮಲ್ಲ ಮಗ್ಗು ಬದಲಿಸಿದ. ಸದ್ಯ ಏಳಲಿಲ್ಲ ಪುಣ್ಯ. ಆಮೇಲೆ ರಂಟೆ, ಗುದ್ಲಿ, ಸನಕಿ, ಹಾರೇ, ಕೊಡಲಿ ಬಾಗುದ್ಲಿ, ಕೈಗ ಸಿಕ್ಕ ರೊಕ್ಕದ ಗಂಟು, ಹಿಡಿದುಕೊಂಡು ಹೊರಬಂದು ಬಂಡಿ ಏರಿದಾಗ ಮೂರುವರೆ ಆಗಿತ್ತು.
ಮರುದಿನ ಗಿರಿಮಲ್ಲನಿಗೆ ಎಚ್ಚರಾದಾಗ ಗುಡಿಶ್ಯಾರ ಸತ್ತೇವ್ವಳ ಮನಿಯೊಳಗಿನ ಫಿಲಿಪ್ಸ್ ರೇಡಿಯೊದಿಂದ ಆಕಾಶವಾಣಿ ಧಾರವಾಡ ಕೇಂದ್ರದ ಬೆಳಗಿನ ಸಂಸ್ಕೃತ ವಾರ್ತಾ, ಪ್ರದೇಶ ಸಮಾಚಾರ ಮುಗಿದು, ಚಲನಚಿತ್ರ ಗೀತೆಗಳ ಪೈಕಿ ಒಂದ ಹಾಡ ಮುಗಿದು ವಾಶಿಂಗ ಪಾವಡರ ನಿರ್ಮಾ ಜಾಹಿರಾತು ಬಿತ್ತರಗೊಳ್ಳುತ್ತಿತ್ತು. ಬೆಳಕ ಹರಿದು ಎರಡ-ಮೂರ ತಾಸ ಕಳೆದಿತ್ತು. ಗಿರಿಮಲ್ಲ ದಿಗಲ್ಲನೇ ಮ್ಯಾಲೆದ್ದ ಏಟಿಗೆ ಮೊದಲಿಗೆ ಕಂಡವಳೆ ಹೆಂಡತಿ ಗಿರಿಜಾ, ಸ್ಟೀಲ್ ಗ್ಲಾಸಿನ ಮ್ಯಾಲೊಂದು ಕಾಗದ ಮುಚಗೊಂಡ ಚಹಾ ಹಿಡಿದು ಬಂದಳು. ಗಿರಿಮಲ್ಲ ದಡಬಡಿಸಿದ ಏಟಿಗೆ ಐದೂವರೆ ಅಡಿ ಅಳತೆಯ ನೀಲಿ ಬಣ್ಣದ ಚಾದರ ಅಂಗಳದೊಳಗ ನಿನ್ನೆ ಸೇರಿದ ಜನರ ಚಪ್ಪಲಿಗಂಟಿ ಬಿದ್ದ ಮಣ್ಣು, ಉಗುಳು, ಸೇದಿ ಒಗೆದ ಮೊಟು ಬಿಡಿ ಚೂರುಗಳು, ಎಲೆ ಅಡಿಕೆ, ಪಾನಪರಾಗ ತಿಂದು ಕ್ಯಾಕರಿಸಿ ಉಗುಳಿದ ಎಂಜಿಲಿನ ಘನರೂಪದ ಮೇಲೆ ದೊಪ್ಪಂತ ಬಿತ್ತು. ಬೆಳಗಿನಿಂದ ತಡೆದುಕೊಂಡಿದ್ದ ಉಚ್ಚೆ ಹೊಯ್ಯಲು ನೆನಪಾಗಲಿಲ್ಲ, ಹೆಂಡತಿ ತಂದ ಚಹಾದ ಗ್ಲಾಸು ಗಮನಿಸದೆ, ಚರಿಗಿ ಹಿಡಿದು ಬೈಲ ಕಡಿಗೆ ಹೊರಟಿದ್ದ ಕುರುಬರ ಲಸಮನ ಬೆಳಗಿನ ನಮಸ್ಕಾರಕ್ಕೂ ಪ್ರತಿಕ್ರಿಯಿಸದೆ ಬಾಗಿಲ ತೆಗೆದು ಮನೆ ಒಳಗೆ ಬಂದ. ಮೈ ಮೇಲೆ ಹಾವು ಹರಿದಾಡಿದಂತೆ ಸನ್ನ ಸೆಳೆತ. ಮೈಮೇಲಿನ ಕೂದಲುಗಳು ಕತ್ತಿ ಗುರಾಣಿಯಂತೆ ಸೆಟೆದು ನಿಂತವು. ಹಿತ್ತಲಮನೆ ಬಾಗಿಲು ತೆರೆದಿತ್ತು. ದೇವರ ಮುಂದಿನ ಗಣಪತಿ, ಬೆಳ್ಳಿ ಲಕ್ಷ್ಮೀಮೂರ್ತಿ, ಹೆಂಡತಿ ಸೀರಿ, ಕುಂಟಿ, ಕುಡಾ, ಸಣಿಕಿ, ಬಾಗುದ್ಲಿ, ಹಾರಿ, ಟ್ರಂಕ್, ರೊಕ್ಕದ ಚಟಿಗಿ, ಮೂರ ತಿಂಗಳ ಹಿಂದ ತಂದಿದ್ದ ಎರಡ ಪಿವಿಸಿ ಪೈಪಗೊಳು ಕಳ್ಳತನ ಆಗಿದ್ದವು. ತನ್ನನ್ನು ಯಾರೋ ಹುತ್ತದೊಳಗ ಕೈಕಾಲ ಕಟ್ಟಿ ಇಳಿಬಿಡ್ತಿದ್ದಾರೆ ಅಂತನಿಸಿತವನಿಗೆ. ಮನಿಮುಂದ ಕಾವಲ ಕುಂತರ ಮನಿ ಕಳ್ಳತನ ಮಾಡಿದ್ದ ನೊಡಿ ಕೆಂಡವ ಕಣ್ಣು ಗುಡ್ಡೆಗಳ ಮೇಲೆ ಇಟ್ಟವರಂತೆ ಸಿಡಿದ.
“ಯಾ ಸೂ ಮಕ್ಳ ನನ್ನ ಮನಿಗಿ ಕಣ್ಣ ಹಾಕಿದ್ರೊ....... ಅವರೌವ್ವನ....... ಅಂತ ಕೂಗಿದ. ಈ ಘನ ಶಬುದಕ್ಕೆ, ಬೆಳಿಗ್ಗೆದ್ದು ಬಯಲಕಡೆಗೆ ಹೊಂಟವರು, ನೀರು ತರಲು ಹೊಂಟವರು, ಸ್ನಾನಕ್ಕೆಂದು ನದಿಗೆ ಹೊರಟವರು, ಗದ್ದೇ ಕಡೆಗೆ ಹೊಂಟವರು ತಿರುಗಿ ಒಂದು ಕ್ಷಣ ಇತ್ತ ನೋಡಿದರು. ಗಿರಿಮಲ್ಲನಿಗೆ ಹುಚ್ಚು ಹಿಡಿಯುವದೊಂದೆ ಬಾಕಿ ಇತ್ತು. ಎನು ಮಾಡಲಿ ಅಂತ ತಹತಹಿಸಿದ. ಅವನ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಮೈಯೊಳಗೆ ರಕ್ತ ಕುದಿಯುತ್ತಿತ್ತು. ಸಿಟ್ಟು, ಅಸಹನೆ, ಮತ್ಸರ, ದ್ವೇಷ, ಕೊತಕೊತನೆ ಕುದಿಯುತಿತ್ತು. ಯಾರನ್ನ ನೋಡಿದರು ಕೊಂದ ಹಾಕಬೇಕೆನ್ನುವಷು ರೋಷ. ಮನೆ ಹೆಂಚು ಕಿತ್ತು ಹೋಗುವ ಹಾಗೇ ಕಿರುಚಿದ. ಓಣಿಯ ಸಮಸ್ತ ಹೆಣ್ಣು ಗಂಡುಗಳೆಲ್ಲ ಕಿಂಚತ್ತು ಮನೋವಿಕಾರಗೊಳ್ಳದೆ ಸಬ್ದಚಿತ್ರದಂತೆ ಇದ್ದರು. ಕೆಲವು ಪೋಲಿ ಹುಡುಗರು ಕಳ್ಳತನವಾಗಿರುವದಕ್ಕೆ ವಿಷಾದ ವ್ಯಕ್ತಪಡಿಸಿದರು. ಗಿರಿಮಲ್ಲನ ಎದೆಯಲ್ಲಿ ಭೀಕರ ಸ್ಪೋಟವೆ ಎದ್ದಿತ್ತು. ಪಕ್ಕದಲ್ಲಿ ಅರ್ಧ ಸುಟ್ಟು ಬಿದ್ದಿದ್ದ ಸೈಕಲ್ ಟೈರನ್ನು ಎತ್ತಿಕೊಂಡ ಬೆಂಕಿ ತಗುಲಿಸಿದ. ಅಟ್ಟದ ಮೇಲೆ ಹೋಗಿ ಜೋಳದ ಕಣಿಕಿ, ಭತ್ತದ ಹೊಟ್ಟು, ಒಣಗಿದ ಹುಲ್ಲು, ಕುರುಳು, ತೊಗರಿ ಕಟ್ಟಿಗೆಗಳನ್ನು ಒಪ್ಪವಾಗಿ ಜೊಡಿಸಿಡಲಾಗಿತ್ತು. ಭತ್ತದ ಹುಲ್ಲಿಗೆ ಬೆಂಕಿ ತಗುಲಿಸಿ ಕೆಳಗಿಳಿದು ಬಂದ. ಕ್ಷಣಮಾತ್ರದಲ್ಲೆ ಜ್ವಾಲೆ ಬುಗಿಲೆದ್ದಿತು. ಗಿರಿಮಲ್ಲನಿಗೆ ನಿಜವಾಗಿಯು ಹುಚ್ಚು ಹಿಡಿದಿತ್ತು. ಹೆಂಡತಿ ಗಿರಿಜಾ ಗಂಡನ ವರ್ತನೆ ನೋಡಿ ತಲೆ ತಲೆ ಚಚ್ಚಿಕೊಂಡಳು. ಅಷ್ಟೊತ್ತಿಗಾಗಲೆ ಮನೆಗೆ ಹತ್ತಿದ ಬೆಂಕಿ ಜ್ವಾಲೆ ಅದನ್ನು ದಾಟಿ ಮುಗಿಲು ಚುಂಬಿಸಲು ಹವನಿಸುತ್ತಿದ್ದ ಕಪ್ಪುಹೊಗೆ ಗ್ರಾಮದ ಸಮಸ್ತ ಜನಗಳಿಗೆ ಅವರ ಮನೆಯಿಂದಲೆ ಕಾಣುವಂತೆ ಲೈವ್ ಟೆಲಿಕಾಸ್ಟವಾಗುತಿತ್ತು. ಯಾಕೋ ಎನೊ ನಿನ್ನೆ ಗಿರಿಮಲ್ಲನ ಮನೆಗೆ ಹೋಗಿದ್ದ ಹಾವಿಗೆ ಒಂದೇ ಮನೆಲಿ ಇದ್ದು ಬೇಸರವಾಯ್ತೇನೊ ಬಾಗಿಲ ಸಂದಿನಿಂದ ದಾಟಿ ಪಕ್ಕದ ಮನೆ ಗೋಡೆಗುಂಟ ದಾಟಿ ಮುಂದಿನ ಮನೆಯತ್ತ ನುಸುಳಿತು ಪಾಪ. ಅದನ್ನು ಯಾರು ನೋಡಲಿಲ್ಲ. ಜನರಿಗೆ ಆ ಬೆಂಕಿ ಬಿಟ್ಟು ಇನ್ನೆನು ಕಾಣುತ್ತಿರಲಿಲ್ಲ.. ಆದರೆ ಪಕ್ಕದ ಮನೆಯವರು ವಿನಾಕಾರಣ ತಮ್ಮ ಮನೆಗೆ ಹೊತ್ತಿಕೊಳ್ಳುವ ಬೆಂಕಿಗೆ ಹೆದರಿ ಅದನ್ನು ಆರಿಸಲು ಹರಸಾಹಸ ಪಡುತಿದ್ದರೆ ಗಿರಿಮಲ್ಲನಿಗೆ ಯಾಕೊ ನಗಬೇಕೆನಿಸಿತು.. ಸುಮ್ನೆ ನಕ್ಕ ಅದನ್ನು ಯಾರು ನೋಡಲಿಲ್ಲ..
ಬೆಳಗಾವಿ ಜಿಲ್ಲೆಯ ಘೋಡಗೇರಿಯವರಾದ ಬಸವಣ್ಣೆಪ್ಪ ಕಂಬಾರ ಅವರು ಕನ್ನಡದ ಭರವಸೆಯ ಕತೆಗಾರರಲ್ಲಿ ಒಬ್ಬರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಸವಣ್ಣೆಪ್ಪಾ ಅವರು ’ಆಟಿಕೆ’, ’ಗಾಂಧಿ ಪ್ರಸಂಗ’ ಮತ್ತು ಗರ್ದಿ ಗಮ್ಮತ್ ಎಂಬ ಮೂರು ಕತಾ ಸಂಕಲನ ಪ್ರಕಟಿಸಿದ್ದಾರೆ. ಅವರ ಆಟಿಕೆ’ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್. ಅನಂತಮೂರ್ತಿ ಕತಾ ಪ್ರಶಸ್ತಿ, ಧಾರವಾಡದ ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಬೇಂದ್ರೆ ಪುಸ್ತಕ ಬಹುಮಾನ ಸಂದಿವೆ.
More About Author