ಹಾಗೊಂದು ವೇಳೆ ಉಸಿರಾಡುವುದಾದರೆ
ಗಳಿಗೆ ಗಳಿಗೆಗಳ ಲೆಕ್ಕವಿಡಬೇಕು
ರಾತ್ರಿಗಳ ಮಡಚಬೇಕು
ಹಗಲುಗಳ ನೇಯ್ದಿರಬೇಕು
ಹಾಗೊಂದು ವೇಳೆ ಕೊಂಡಾಡಬೇಕೆಂದರೆ
ಚಿತ್ರಗಳ ಪಟ್ಟಿಯಿಡಬೇಕು
ಅಂಗೀಕಾರದ ಮುದ್ರೆಯಿದ್ದರೆ
ಹಾಗೊಂದು ವೇಳೆ ಪ್ರೇಮವ ಅಪ್ಪಿಕೊಳ್ಳುವಂತಿದ್ದರೆ
ಕೀಳಿಸಿಕೊಳ್ಳಬೇಕು ಕಣ್ಣು
ಮಣ್ಣಿಗೂ ಹತ್ತಿರವಾಗಬೇಕು
ಹಾಗೊಂದು ವೇಳೆ ಆಕಾಶಕಾಯವಾಗುವಂತಿದ್ದರೆ
ಜೀವಕಾಯದ ಪೆಟ್ಟುಗಳಿಗೆ ಪಕ್ಕಾಗಬೇಕು
ಹಾಗೊಂದು ವೇಳೆ ಹಾಜರಾತಿಗೆ ಹಪಾಹಪಿಸುವಂತಿದ್ದರೆ
ಕತ್ತರಿಸಬೇಕು ದಾರಿಯನ್ನು
ಪ್ರೇಮವನ್ನೂ
ಕಪ್ಪು ಬಣ್ಣಕ್ಕೂ ಉಸಿರ ತುಂಬಬೇಕು
ಹಾಗೊಂದು ವೇಳೆ
ಗೆಳಯನಾಗುವಂತಿದ್ದರೆ
-ಅಶೋಕ ಹೊಸಮನಿ
ಅಶೋಕ ಹೊಸಮನಿ
ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು. 1983 ಜೂನ್ 01 ರಂದು ಜನನ ‘ಅಶೋಕವನ’ ಇವರ ಕಾವ್ಯನಾಮ. ತಂದೆ ಬಸವಂತಪ್ಪ, ತಾಯಿ ಮಲ್ಲವ್ವ. ಸಿಂಧನೂರಿನಲ್ಲಿ ಡಿ.ಇಡಿ ತರಬೇತಿ, ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಬಿ.ಎ. ಪದವಿ, ಹಾಗೂ ಎಂ.ಎ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಕರ್ನಾಟಕ ರಾಜ್ಯ ಮುಕ್ತ ವಿ.ವಿ.) ಪಡೆದಿದ್ದಾರೆ. ಸೂಫಿ ಸಾಹಿತ್ಯ ಅಚ್ಚು ಮೆಚ್ಚು. 'ಒಂಟಿ ಹೊಸ್ತಿಲು' ಮೊದಲ ಕವನ ಸಂಕಲನ. ‘ಅನಾಮಧೇಯ ಹೂ’ ಅವರ ಮತ್ತೊಂದು ಹನಿಗವನ ಸಂಕಲನ.
More About Author