Story

ಫ್ಯಾಷನ್ ಪರಮಾತ್ಮ

‘ಹಿಟ್ಟಿನ ಗಿರಣಿ ಕಿಟ್ಟಪ್ಪ, ತೊರೆದ ಗೂಡು , ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು, ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ’ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಲೇಖಕ ಶರಣಗೌಡ ಬಿ. ಪಾಟೀಲ ತಿಳಗೊಳ ಅವರ 'ಫ್ಯಾಷನ್ ಪರಮಾತ್ಮ' ಕತೆ ನಿಮ್ಮ ಓದಿಗಾಗಿ

ನಡು ಊರಿನ ಕಟ್ಟೆಯ ಮೇಲೆ ದೇಶಾವರಿ ಮಾತಾಡುತಿದ್ದವರು ಸೂಟ್ ಧರಿಸಿದ ವ್ಯಕ್ತಿಯನ್ನು ನೋಡಿ ಆಶ್ಚರ್ಯಚಕಿತರಾದರು. ಅರೇ ಅಲ್ಲಿ ನೋಡ್ರಿ ಪರಮಾತ್ಮ ಸೂಟ್ ಹಾಕಿಕೊಂಡು ಹೊಂಟಿದ್ದಾನೆ ಯಾವತ್ತೂ ಈ ವೇಷದಲ್ಲಿ ನಾವು ನೋಡೇ ಇಲ್ಲ ಅಂತ ಮಹೇಶ ಹೇಳಿದಾಗ ಎಲ್ಲರೂ ಆ ಕಡೆ ಗಮನ ಹರಿಸಿದರು. ಅವನು ಪರಮಾತ್ಮ ಇರ್ಲಿಕ್ಕಿಲ್ಲ ಬೇರೆ ಯಾರೋ ಇದ್ದಿರಬೇಕು ದೂರಿಂದ ನೋಡಿದಾಗ ಹಾಗೇ ಕಾಣಸ್ತಾನೆ ಅಂತ ಉಮೇಶ್ ಅನುಮಾನ ಹೊರ ಹಾಕಿದ. ನೂರಕ್ಕೆ ನೂರು ಸೂಟ್ ಧರಿಸಿದವನು ಪರಮಾತ್ಮನೇ ಇದ್ದಾನೆ ದಿನಾ ನಮ್ಮ ಜೊತೆನೇ ಕಾಲ ಕಳೆಯುತಿದ್ದವನಿಗೆ ನಾನು ಗುರುತು ಹಿಡಿಯಲು ಸಾಧ್ಯವಿಲ್ಲವೇ ? ಅಂತ ಮಹೇಶ ಮಾತು ಸಮರ್ಥಿಸಿಕೊಂಡ.

ನಮ್ಮ ಕಣ್ಣು ನಾವೇ ನಂಬದಂತಾಗುತ್ತಿವೆ ಪರಮಾತ್ಮ ಸೂಟ್ ಧರಿಸಿ ಬರೋದು ಒಂದೇ ಅಮವಾಸೆಯ ದಿನ ಚಂದ್ರ ಬರೋದು ಒಂದೇ ಅಂತ ಉಮೇಶ್ ತನ್ನ ಮಾತಿಗೆ ಅಂಟಿಕೊಂಡ. ಅವನು ಸೂಟ್ ಧರಿಸಬಾರದು ಅನ್ನುವ ನೀಯಮ ಏನಾದರೂ ಇದೆಯೇ? ಬರೀ ವಿದ್ಯಾವಂತರು, ದೊಡ್ಡ ವ್ಯಕ್ತಿಗಳೇ ಸೂಟ್ ಧರಿಸಬೇಕೆ? ಯಾರು ಯಾವ ಡ್ರೆಸ್ ಬೇಕಾದರು ಹಾಕಿಕೊಳ್ಳಬಹುದು ಅಂತ ಮಹೇಶ ಹೇಳಿದ. ಅವನು ಯಾವಾಗಲೂ ಲುಂಗಿ ಅಂಗಿ ತೊಡುತಿದ್ದನು ಎಲ್ಲಿಗೆ ಹೋದರೂ ಅವೇ ಅವನ ಪರಮನೆಂಟ ವೇಷ ಎಷ್ಟೋ ಸಲ ಪ್ಯಾಂಟ್ ಶರ್ಟ್ ಹಾಕಿಕೊಳ್ಳುವಂತೆ ನಾನೇ ಒತ್ತಾಯಿಸಿದ್ದೆ ಆದರೆ ಆತ ಒಪ್ಪಿಕೊಂಡಿರಲಿಲ್ಲ ನಮ್ಮ ಜೊತೆ ಇದ್ದು ನಮ್ಮೊಳಗೇ ಒಬ್ಬನಾಗಿದ್ದವನು ಈಗ ಸೂಟ್ ಧರಿಸಿದ್ದಾನೆಂದರೆ ಅನುಮಾನ ಪಡದೇ ಇನ್ನೇನು ಪಡಲು ಸಾಧ್ಯ ಅಂತ ಉಮೇಶ್ ಪುನರುಚ್ಛರಿಸಿದ.

ಈಗ ಆತ ನಮ್ಮ ಜೊತೆ ಇಲ್ಲವಲ್ಲ ಮುಂಬೈದಾಗ ಕೆಲಸಾ ಮಾಡ್ತಿದ್ದಾನೆ ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಬದಲಾದರು ಆಗಿರಬಹುದು ಅಲ್ಲಿಯೂ ಅವೇ ಲುಂಗಿ ಅಂಗಿ ತೊಟ್ಟು ಕೆಲಸಾ ಮಾಡು ಅಂದರೆ ಹೇಗೆ ಅಂತ ಮಹೇಶ ಪ್ರಶ್ನಿಸಿದ. ಪರಮಾತ್ಮ ಮುಂಬೈಗೆ ಹೋಗಿ ಒಂದು ವರ್ಷ ಕೂಡ ಆಗಿಲ್ಲ ಇಷ್ಟೊಂದು ಬದಲಾಗಲು ಹೇಗೆ ಸಾಧ್ಯ ನಂಬೋಕ್ಕಾಗ್ತಿಲ್ಲ ಅಂತ ಉಮೇಶ್ ಮತ್ತೆ ತನ್ನ ವಾದ ಮುಂದುವರೆಸಿದ. ಮನುಷ್ಯನ ಅದೃಷ್ಟ ಖುಲಾಯಿಸಿದರೆ ಬದಲಾಗಲು ಜಾಸ್ತಿ ಟೈಮ ಬೇಕಾಗುವದಿಲ್ಲ ಒಂದೇ ಕ್ಷಣದಲ್ಲಿ ಬದಲಾಗಬಹುದು ಪರಮಾತ್ಮನ ವಿಷಯದಲ್ಲೂ ಹಾಗೇ ಆಗಿರಬಹುದಲ್ಲ ಅಂತ ಹೇಳಿದಾಗ ನಿನ್ನ ಮಾತು ಸರಿಯಾಗಿದೆ ಅದೃಷ್ಟದ ಮುಂದೆ ಯಾವುದೂ ಇಲ್ಲ ಅಂತ ನಾಗರಾಜ್ ದನಿಗೂಡಿಸಿದ.

ಸೂಟ್ ಧರಿಸಿದ ಆ ವ್ಯಕ್ತಿ ಯಾರ ಕಡೆಗೂ ಗಮನ ಕೊಡದೆ ಕೈಯಲ್ಲೊಂದು ಬ್ಯಾಗ್ ಹಿಡಿದು ತನ್ನಷ್ಟಕ್ಕೆ ತಾನೇ ಹೊರಟು ಹೋದ.. ಆತ ಎಲ್ಲಿಗೆ ಹೋಗ್ತಾನೆ ಅನ್ನುವುದು ತಿಳಿದುಕೊಂಡರೆ ನಮ್ಮ ಪ್ರಶ್ನೆಗೆ ಉತ್ತರ ತಂತಾನೇ ಸಿಗ್ತಾದೆ ಅಂತ ಶ್ರೀಕಾಂತ ಸಲಹೆ ನೀಡಿದಾಗ ಆತನ ಮಾತಿಗೆ ಎಲ್ಲರೂ ಸಮ್ಮತಿಸಿದರು.

ನಾನೇ ಹೋಗಿ ಸತ್ಯ ತಿಳಿದುಕೊಂಡು ಬರ್ತೀನಿ ಅಂತ ವಿಶ್ವನಾಥ ಕಟ್ಟೆಯ ಮೇಲಿನಿಂದ ಎದ್ದು ಆತನಿಗೆ ಹಿಂಬಾಲಿಸಿದ. ಆ ವ್ಯಕ್ತಿ ಸೀದಾ ನಿಂಬೆವ್ವಳ ಮನೆಗೆ ಹೋದಾಗ ಅವನೇ ಪರಮಾತ್ಮ ಅಂತ ಖಾತ್ರಿಯಾಯಿತು. ಪರಮಾತ್ಮ ಸೂಟ್ ಧರಿಸಿಕೊಂಡು ಬಂದ ರಹಸ್ಯ ಮಾತ್ರ ಯಾರಿಗೂ ತಿಳಿಯದೇ ಪ್ರಶ್ನಾರ್ಥಕವಾಗಿ ಉಳಿಯಿತು. ಅವನ ಸೂಟ್ ಬಗ್ಗೆ ತಿಳಿಯಬೇಕಾದರೆ ಅವನನ್ನೇ ವಿಚಾರಿಸಬೇಕು ಅಂದಾಗಲೇ ಗೊತ್ತಾಗುತ್ತದೆ ಅಂತ ಸೂರ್ಯನಾಥ ಹೇಳಿದ.

ಈಗ ತಾನೇ ಪರಮಾತ್ಮ ಊರಿಂದ ಬಂದಿದ್ದಾನೆ ಇನ್ನೂ ಸ್ವಲ್ಪ ಹೊತ್ತಿನ ನಂತರ ಕೈಕಾಲು ಮುಖ ತೊಳೆದು ಬಟ್ಟೆ ಬದಲಾಯಿಸಿ ಇಲ್ಲಿಗೆ ಬರ್ತಾನೆ ಆವಾಗ ವಿಚಾರಿಸೋಣ ಅಂತ ರವೀಂದ್ರ ಸಲಹೆ ನೀಡಿದ ಅವನ ಮಾತಿಗೆ ಎಲ್ಲರೂ ತಲೆಯಾಡಿಸಿದರು. ಆತನಿಗೆ ಪರಮಾತ್ಮ ಅಂತ ಕರೆದಾಗ ಅಪರಿಚಿತರಿಗೆ ಆಶ್ಚರ್ಯ ತರಿಸುತಿತ್ತು. ಹೆಸರಿನ ಬಗ್ಗೆ ಕುತೂಹಲ ಮೂಡುತಿತ್ತು. ಪರಮಾತ್ಮ ತಂದೆ ತಾಯಿಗೆ ಏಕೈಕ ಮಗ ಸಣ್ಣವನಿರುವಾಗಲೇ ತಂದೆ ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದಿದ್ದ. ನಿಂಬೆವ್ವ ಮಗನಿಗೆ ದಷ್ಟ ಪುಷ್ಟವಾಗಿ ಬೆಳೆಸಿದ್ದಳು. ನನ್ನ ಮಗ ಹುಟ್ಟಿದ ಮೇಲೆ ಆರೋಗ್ಯವಂತನಾಗಿರಲಿಲ್ಲ ಕೂಸು ಬದುಕುವದೇ ಕಷ್ಟ ಅಂತ ಎಲ್ಲರೂ ಹೇಳುತಿದ್ದರು. ನಾನು ಮಾತ್ರ ಮಗನಿಗೆ ಬದುಕಿಸಿಕೊಳ್ಳಬೇಕು ಅಂತ ಆ ದೇವರಿಗೆ ಬೇಡಿಕೊಂಡೆ ಆ ದೇವರು ನನ್ನ ಕೋರಿಕೆ ಈಡೇರಿಸಿದ ಮಗನಿಗೆ ಆ ಪರಮಾತ್ಮನ ಹೆಸರಿಟ್ಟೆ ಅಂತ ಹೆಮ್ಮೆಯಿಂದ ಹೇಳುತಿದ್ದಳು. ನಿಂಬೆವ್ವಳ ಮಾತು ಎಲ್ಲರಿಗೂ ಹುಬ್ಬೇರಿಸುವಂತೆ ಮಾಡುತಿತ್ತು.

ಪರಮಾತ್ಮ ಊರವರ ಪಾಲಿಗೂ ಆಪದ್ಭಾಂದವನಾಗಿ ಕೆಲಸ ಮಾಡುತಿದ್ದ. ಯಾರೇ ಏನೇ ಕೆಲಸಾ ಹೇಳಿದರು ಒಲ್ಲೆ ಅನ್ನುತಿರಲಿಲ್ಲ ನೀನು ನಿಜವಾಗಿ ನಮ್ಮ ಪಾಲಿಗೆ ಪರಮಾತ್ಮ ಅಂತ ಹೇಳಿದಾಗ ಖುಷಿಯಾಗುತಿತ್ತು. ಇನ್ನೂ ಜಾಸ್ತಿ ಕೆಲಸಾ ಮಾಡಿ ಭೇಷ್ ಅನಿಸಿಕೊಳ್ಳುತಿದ್ದ. ಮಗ ವಯಸ್ಸಿಗೆ ಬಂದಿದ್ದಾನೆ ಮದುವೆ ಮಾಡಿ ಬಿಡಬೇಕು ನನಗೂ ವಯಸ್ಸಾಯಿತು ಅಂತ ನಿಂಬೆವ್ವ ಯೋಚಿಸಿದಳು. ಇವನ ಗುಣ ಸ್ವಭಾವ ಛೊಲೊ ಇದೆ ಅಂತ ಸಂಬಂಧಿಕರು ಇವನಿಗೆ ಹೆಣ್ಣು ಕೊಡಲು ಮುಂದೆ ಬಂದರು ಆದರೆ ಪರಮಾತ್ಮ ಸಧ್ಯ ಮದುವೆ ಮಾಡಿಕೊಳ್ಳಲು ತಯಾರಾಗದೆ ನಾನು ಇನ್ನೂ ಸ್ವಲ್ಪ ದಿನ ಮದುವೆ ಆಗೋಲ್ಲ ಮೊದಲು ಹಣ ಗಳಿಸಬೇಕು ನನ್ನ ಕಾಲಮೇಲೆ ನಿಂತುಕೊಂಡು ಆಮೇಲೆ ಮದುವೆ ಆಗತೀನಿ ಅಂತ ಹೇಳಿದಾಗ ಮಗನ ಮಾತಿಗೆ ನಿಂಬೆವ್ವ ದೂಸರಾ ಮಾತಾಡದೆ ಸಮ್ಮತಿಸಿದಳು.

ಊರು ಮೊದಲೇ ಚಿಕ್ಕದಾಗಿತ್ತು ಇಲ್ಲಿ ಕೃಷಿ ಕೆಲಸದ ಹೊರತು ಬೇರೆ ಯಾವ ಕೆಲಸವೂ ಇರಲಿಲ್ಲ. ವರ್ಷ ಪೂರ್ತಿ ಕೆಲಸ ಇರದೆ ವಾರದಲ್ಲಿ ಒಂದೆರಡು ಬಾರಿ ಮಾತ್ರ ಇವನಿಗೆ ಕೆಲಸಾ ಸಿಗುತಿತ್ತು ಇದರಿಂದ ಜಾಸ್ತಿ ಹಣ ಸಂಪಾದನೆ ಮಾಡಲು ಸಾಧ್ಯವಾಗುತಿರಲಿಲ್ಲ ಯಾವುದಾದರು ದೊಡ್ಡ ನಗರಕ್ಕೆ ಹೋಗಿ ಕೆಲಸ ಮಾಡಬೇಕು ಅಲ್ಲಿ ನಿರಂತರ ಕೆಲಸ ಸಿಗುತ್ತದೆ ಹಣ ಕೂಡ ಜಾಸ್ತಿ ಸಂಪಾದನೆ ಮಾಡಬಹುದು ಅಂತ ಪರಮಾತ್ಮ ಯೋಚಿಸಿದ.

ಮುಂಬೈಯಲ್ಲಿ ಕೆಲಸ ಮಾಡುತಿದ್ದ ಗೆಳಯ ಮಂಜುನಾಥನಿಗೆ ಫೋನ್ ಮಾಡಿ ನಾನೂ ಮುಂಬೈಗೆ ಬರುತ್ತೇನೆ ಕೆಲಸಾ ಕೊಡಸ್ತಿಯಾ ಅಂತ ಕೇಳಿದ. ಆದರಾಯಿತು ಬಂದುಬಿಡು ನಿನಗೆ ಕೆಲಸಾ ಕೊಡಿಸುವ ಜವಾಬ್ದಾರಿ ನನ್ನದು ಅಂತ ಆತ ಭರವಸೆ ನೀಡಿದ ಅವನಿಂದ ವಿಳಾಸ ಪಡೆದು ಮರುದಿನ ಪರಮಾತ್ಮ ಮುಂಬೈಗೆ ಹೋಗುವ ರೈಲು ಹತ್ತಿದ. ಮಂಜುನಾಥ ತಾನು ಕೊಟ್ಟ ಮಾತಿನಂತೆ ಇವನಿಗೆ ಆಯಿಲ್ ಮಿಲನಲ್ಲಿ ಕೆಲಸ ಕೊಡಿಸಿದ. ಪರಮಾತ್ಮ ಮೊದಲೇ ಓದು ಬರಹ ಕಲಿತವನಲ್ಲ ಇವನ ಯೋಗ್ಯತೆಗೆ ತಕ್ಕಂತೆ ಕಾರ್ಮಿಕ ಕೆಲಸ ದೊರೆಯಿತು. ಕೆಲಸ ಯಾವುದಾದರೇನು ಅಂತ ಸಂತೋಷವಾಗಿ ಸ್ವೀಕರಿಸಿ ಕೆಲಸದಲ್ಲಿ ನಿರತನಾದ. ಮಿಲ್ಲಿನಲ್ಲಿ ಆಯಿಲ್ ಪಾಕೇಟಿಗೆ ಹಾಕಿ ಪ್ಯಾಕ್ ಮಾಡುವದು. ಪ್ಯಾಕ್ ಮಾಡಿದ ಪಾಕೇಟುಗಳೆಲ್ಲ ಬಾಕ್ಸ್ ತುಂಬಿ ಸೀಲ್ ಮಾಡುವದು ಇವನ ಕೆಲಸವಾಗಿತ್ತು. ಪರಮಾತ್ಮ ಅಲ್ಲಿನ ಎಲ್ಲ ಕಾರ್ಮಿಕರಿಗಿಂತ ಜಾಸ್ತಿ ಕೆಲಸಾ ಮಾಡಿ ಬಾಕ್ಸ್ ತುಂಬುತಿದ್ದ ಇವನ ಶ್ರಮ ನೋಡಿ ಮ್ಯಾನೇಜರಿಗೆ ತುಂಬಾ ಖುಷಿಯಾಗುತಿತ್ತು ಇಲ್ಲಿ ಎಲ್ಲರಿಗಿಂತ ನೀನೇ ಭೇಷ್ ಅಂತ ಮ್ಯಾನೇಜರ್ ಭುಜ ತಟ್ಟಿ ಹೊಗಳುತಿದ್ದ ಆಗ ಖುಷಿಯಾಗುತಿತ್ತು. ಪರಮಾತ್ಮ ಬಹುಬೇಗ ಎಲ್ಲರ ಪ್ರೀತಿ ವಿಶ್ವಾಸಕ್ಕೂ ಪಾತ್ರನಾದ. ಪರಮಾತ್ಮನ ಊಟ ತಿಂಡಿ ಎಲ್ಲಾ ಆ ಮಿಲ್ಲಿನವರೇ ನೋಡಿಕೊಳ್ಳುತಿದ್ದರು. ರಾತ್ರಿ ಮಲಗಿಕೊಳ್ಳಲು ಇವನೇ ಒಂದು ಪ್ರತ್ಯೇಕ ರೂಮ ಬಾಡಿಗೆಗೆ ಪಡೆದಿದ್ದ ಅದು ಮಿಲ್ಲಿನಿಂದ ಸ್ವಲ್ಪ ದೂರದಲ್ಲಿತ್ತು. ಮ್ಯಾನೇಜರ ಇವನಿಗೆ ಆಗಾಗ ಮನೆಗೆ ಕರೆದುಕೊಂಡು ಹೋಗಿ ಊಟ ತಿಂಡಿಯೂ ಮಾಡಿಸುತಿದ್ದ. ಪರಮಾತ್ಮ ಕೂಡ ಅವರ ಸಣ್ಣ ಪುಟ್ಟ ಕೆಲಸ ಕಾರ್ಯ ಮಾಡಿ ಅವರಿಗೆ ಸಹಾಯ ಮಾಡುತಿದ್ದ.

ಪರಮಾತ್ಮ ಕೆಲಸಕ್ಕೆ ಸೇರಿ ಆಗಲೇ ಒಂದು ವರ್ಷ ಕಳೆದು ಹೋಯಿತು. ಇವನು ಆಗಾಗ ಊರಿಗೆ ಫೋನ್ ಮಾಡಿ ಅವ್ವನ ಯೋಗಕ್ಷೇಮ ವಿಚಾರಿಸಿ ಅವಳ ಖರ್ಚಿಗೆ ಹಣ ಕಳಿಸುತಿದ್ದ. ನಿಂಬೆವ್ವ ಮಗ ಕಳಿಸಿದ ಹಣದಲ್ಲೇ ಜೀವನ ಸಾಗಿಸುತಿದ್ದಳು. ಊರಿನ ತನ್ನೆಲ್ಲ ಗೆಳಯರಿಗೆ ಆಗಾಗ ಫೋನ ಮಾಡಿ ಯೋಗಕ್ಷೇಮವೂ ವಿಚಾರಿಸುತಿದ್ದ. ಅವತ್ತು ಇದ್ದಕ್ಕಿದ್ದಂತೆ ಗೆಳಯ ಹಣಮಂತು ಊರಿನಿಂದ ಫೋನ್ ಮಾಡಿ ಬಸವಣ್ಣ ದೇವರ ಜಾತ್ರೆ ನಾಳೆ ಇದೆ ನೀನು ಊರಿಗೆ ಬರದೆ ಬಹಳ ದಿನ ಆಯಿತು ಈ ಸಲ ಜಾತ್ರೆ ತಪ್ಪಿಸಬೇಡ ಯಾರೂ ಕೂಡ ಜಾತ್ರೆ ತಪ್ಪಿಸುವದಿಲ್ಲ ಎಲ್ಲೇ ಇದ್ದರೂ ಬಂದು ಹೋಗುತ್ತಾರೆ ಅಂತ ಹೇಳಿದಾಗ ಆತನ ಮಾತಿಗೆ ಪರಮಾತ್ಮ ಒಪ್ಪಿಗೆ ಸೂಚಿಸಿದ . ತಾನು ಊರಿಗೆ ಹೋಗುವ ವಿಷಯ ಮ್ಯಾನೇಜರ್ ಮುಂದೆ ಹೇಳಿದಾಗ ಮ್ಯಾನೇಜರ್ ತಕ್ಷಣ ಒಪ್ಪಿಗೆ ನೀಡಿ ನೀನು ಒಮ್ಮೆಯೂ ಊರಿಗೆ ಹೋಗಿಲ್ಲ ಆರಾಮಾಗಿ ಹೋಗಿ ಒಂದೆರಡು ದಿನ ಇದ್ದು ಜಾತ್ರೆ ಮುಗಿಸಿ ವಾಪಸ್ ಬಂದು ಬಿಡು ಅಂತ ಖರ್ಚಿಗೆ ಒಂದಿಷ್ಟು ಹಣ ನೀಡಿದ್ದಲ್ಲದೆ ಹೋಗಿ ಬರುವ ರೈಲ್ವೆ ಟಿಕೇಟ್ ಕೂಡ ರಿಸರ್ವೇಶನ್ ಮಾಡಿಸಿ ಕೊಟ್ಟ ಪರಮಾತ್ಮ ಖುಷಿಯಿಂದ ಊರಿಗೆ ಬಂದಾಗ ಇವನ ಸೂಟ್ ಬಗ್ಗೆ ಹಲವು ಪ್ರಶ್ನೆಗಳು ಅನುಮಾನಗಳು ಗರಿಗೆದರಿದವು ಎಲ್ಲದಕ್ಕೂ ಇವನೇ ಉತ್ತರವಾಗಿರುವದರಿಂದ ಎಲ್ಲರೂ ಇವನು ಬರುವ ದಾರಿಯನ್ನೇ ಕಾಯುತ್ತಿದ್ದರು.

ಪರಮಾತ್ಮ ಮನೆಗೆ ಹೋಗಿ ಸೂಟ ಕಳೆದು ಅವ್ವನ ಯೋಗಕ್ಷೇಮ ವಿಚಾರಿಸಿ. ಎಂದಿನಂತೆ ಅಂಗಿ ಲುಂಗಿ ತೊಟ್ಟು ಗೆಳೆಯರಿಗೆ ಭೇಟಿಯಾಗಲು ನಡು ಊರ ಕಟ್ಟೆಗೆ ಬಂದ. ಅವರೆಲ್ಲ ಇವನಿಗೆ ಸುತ್ತುವರೆದು ಕೆಲಸ ಕಾರ್ಯದ ಬಗ್ಗೆ ವಿಚಾರಿಸಿದರು. ನೀನು ಮುಂಬೈಗೆ ಹೋದ ಮೇಲೆ ನಿನ್ನ ಅದೃಷ್ಟ ಖುಲಾಯಿಸಿತು ಇಲ್ಲೇ ನಮ್ಮ ಜೊತೆ ಇದ್ದಿದ್ದರೆ ನಮ್ಮ ಹಾಗೇ ಲುಂಗಿ ಅಂಗಿ ತೊಟ್ಟು ಇರಬೇಕಾಗಿರುತಿತ್ತು ನಿನ್ನಲ್ಲಿ ಯಾವ ಸುಧಾರಣೆ ಆಗುತಿರಲಿಲ್ಲ ಅಂತ ಉಮೇಶ್ ಮಾತು ಆರಂಭಿಸಿದ. ಅಲ್ಲಿ ಕೆಲಸ ಇದ್ದರೆ ಹೇಳು ನಾನೂ ನಿನ್ನ ಜೊತೆ ಬರ್ತೀನಿ ಅಂತ ರವೀಂದ್ರ ಕೇಳಿಕೊಂಡ. ನೀನು ಸೂಟ್ ಹಾಕಿಕೊಂಡು ಬಂದಾಗಲೇ ನಮಗೆ ಖುಷಿ ಆಯಿತು ನಮ್ಮ ಪರಮಾತ್ಮ ಎಷ್ಟು ದೊಡ್ಡ ವ್ಯಕ್ತಿಯಾಗಿದ್ದಾನೆ ಅಂತ ಮಾತಾಡಿಕೊಂಡೇವು ಅಂತ ವಿಶ್ವನಾಥ ಹೇಳಿದ. ನಮ್ಮ ಪರಮಾತ್ಮ ಬೆಳೆದರೆ ಅದೇ ನಮಗೆ ಹೆಮ್ಮೆ ಅಂತ ಉಮೇಶ್ ದನಿಗೂಡಿಸಿದ.

ಎಲ್ಲರೂ ಪರಮಾತ್ಮನ ಉತ್ತರಕ್ಕಾಗಿ ಕಾಯುತ್ತಿದ್ದರು. ಅವರ ಮಾತಿಗೆ ಪರಮಾತ್ಮ ಮುಗ್ಳನಗೆ ಬೀರಿ ನೀವು ತಿಳಿದುಕೊಂಡಂತೆ ನಾನು ಯಾವ ದೊಡ್ಡ ವ್ಯಕ್ತಿಯೂ ಆಗಿಲ್ಲ ನನ್ನ ಅದೃಷ್ಟವೂ ಖುಲಾಯಿಸಿಲ್ಲ ಈಗಲೂ ನಿಮ್ಮ ಹಾಗೆ ಸಾಮಾನ್ಯ ಮನುಷ್ಯ ಅಂತ ಹೇಳಿದ. ಹಾಗಾದರೆ ಸೂಟ್ ಹಾಕಿಕೊಂಡು ಬಂದಿಯಲ್ಲ ನೀನು ಸಾಮಾನ್ಯನಾಗಿದ್ದರೆ ಅವ್ಯಾಕೆ ಹಾಕಿಕೊಂಡು ಬರ್ತಿದ್ದೆ ಅಂತ ಉಮೇಶ್ ಪ್ರಶ್ನಿಸಿದ. ನಾನು ಊರಿಗೆ ಬರುವ ದಿನ ಆಯಿಲ್ ಮಿಲ್ಲಿನಲ್ಲಿ ದಿನವಿಡೀ ಕೆಲಸಾ ಮಾಡಿದೆ ಅಚಾನಕ ನನ್ನ ಅಂಗಿಯ ಮೇಲೆ ಆಯಿಲ್ ಸೋರಿ ಇಡೀ ಅಂಗಿ ಎಣ್ಣೆಯ ಕಲೆಯಿಂದ ಮುಳುಗಿ ಹೋಯಿತು ಊರಿಗೆ ಹೋಗಲು ತಯಾರಾದಾಗ ಇದೇನಾಯಿತಲ್ಲ ಅಂತ ಯೋಚಿಸಿದೆ. ಬಟ್ಟೆ ಬದಲಾಯಿಸಿಕೊಂಡು ಊರಿಗೆ ಹೋಗಲು ನನ್ನ ಜೊತೆ ಕೆಲಸ ಮಾಡುವವರು ಸಲಹೆ ನೀಡಿದರು. ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬಂದರೆ ತಡಾ ಆಗ್ತಾದೆ ರೈಲು ಹೊರಟು ಹೋಗುತ್ತದೆ ಏನು ಮಾಡಲಿ ಅಂತ ಯೋಚಿಸಿದೆ ಅಷ್ಟರಲ್ಲಿ ನಮ್ಮ ಮ್ಯಾನೇಜರ ಸಾಹೇಬರಿಗೆ ವಿಷಯ ಗೊತ್ತಾಗಿ ಅವರು ನನ್ನ ಹತ್ತಿರ ಬಂದು ನೀನು ಈ ಬಟ್ಟೆಯ ಮೇಲೆ ಊರಿಗೆ ಹೋಗುವದು ಸರಿ ಕಾಣೋದಿಲ್ಲ ನನ್ನ ಹತ್ತಿರ ಒಂದು ಜೊತೆ ಹೆಚ್ಚಿನ ಬಟ್ಟೆ ಇವೆ ಅವೇ ಹಾಕಿಕೊಂಡು ಹೋಗು ಅಂತ ಹೇಳಿದರು ನಾನು ಒಲ್ಲೆ ಅಂತ ಎಷ್ಟೇ ಕೇಳಿಕೊಂಡರೂ ಅವರು ಕೇಳದೆ ನನಗೆ ಆ ಬಟ್ಟೆ ಹಾಕಿ ಕಳಿಸಿದರು ಅವು ಸೂಟ್ ಅನ್ನುವದು ನನಗೆ ಆಗಲೇ ಗೊತ್ತಾಯಿತು ಅಂತ ಹೇಳಿದ. ಪರಮಾತ್ಮನ ಮಾತಿನಿಂದ ಎಲ್ಲರೂ ತಬ್ಬಿಬ್ಬಾಗಿ ಪರಸ್ಪರ ಒಬ್ಬರ ಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡತೊಡತೊಡಗಿದರು.

ಶರಣಗೌಡ ಬಿ.ಪಾಟೀಲ ತಿಳಗೂಳ

ಲೇಖಕ ಶರಣಗೌಡ ಪಾಟೀಲ ಅವರು  ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಹಿಟ್ಟಿನ ಗಿರಣಿ ಕಿಟ್ಟಪ್ಪ (ಲಲಿತ ಪ್ರಬಂಧಗಳ ಸಂಕಲನ)’, ತೊರೆದ ’ಗೂಡು (ಕಾದಂಬರಿ), ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು (ಕಥಾ ಸಂಕಲನ), ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ (ಕಾದಂಬರಿಗಳು)  

ಪ್ರಶಸ್ತಿ-ಪುರಸ್ಕಾರಗಳು:  ಇವರ ‘ಹಿಟ್ಟಿನ ಗಿರಣಿ ಕಿಟ್ಟಪ್ಪ  ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ. ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಮಟ್ಟದ ಪ್ರಬಂಧ  ಸ್ಪರ್ಧೆಯ ಪ್ರಶಸ್ತಿ. ಸಾಧಕ ಶಿಕ್ಷಕ ಪ್ರಶಸ್ತಿ, ಕನ್ನಡ ನಾಡು ಲೇಖಕರ ಓದುಗರ ಸ ಸಂಘದಿಂದ ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಪುಸ್ತಕ  ಪ್ರಶಸ್ತಿ  ಗುರುಕುಲ ಪ್ರತಿಷ್ಠಾನದಿಂದ ಸಾಹಿತ್ಯ ಶರಭ ಪ್ರಶಸ್ತಿಗಳು ಲಭಿಸಿವೆ. 
 

More About Author