ಹುಣ್ಣಿಮೆಯ ರಾತ್ರಿ
ನೇತಾಡುತ್ತಿದ್ದ ನೆರಳು
ಗೋಡೆ ಮೇಲೆ ಚಿತ್ರ ಬಿಡಿಸಿದಂತೆ
ಕೈಯಲ್ಲಿ ಭಾರತದ ಭೂಪಟ
ಮತ್ತೊಂದರಲ್ಲಿ ಬುದ್ಧನ ವಿಗ್ರಹ
ಕಣ್ಣಲ್ಲಿ ನೆಲದ ಪ್ರೀತಿ
ಬಾಯಲ್ಲಿ ಸಮತೆ ಹಾಡು
ನನ್ನೊಳಗಿನ ಕುತೂಹಲದ ನಡಿಗೆ
ನಿಂತು ನೋಡಿತು
ಯಾವುದೀ ನೆರಳು..?
ಅದು ನನ್ನದೇ ಗೋಡೆಯ ಮೇಲೆ
ನಿದ್ದೆ ಹತ್ತದೆ ನಿಂತ ಭಂಗಿಯಲಿ
ಕಾವ್ಯದ ವಾಸನೆ
ನೆಲ ಮುಟ್ಟಿದೆ
ಹೆಜ್ಜೆಗಳ ನಡೆತದ ಸದ್ದು
ಯಾರು ಯಾರಿಗಾಗಿ ನಡೆಯುತಿಹರು
ಮಲಗುವ ಈ ಹೊತ್ತಲ್ಲಿ
ಗೂಬೆಯ ಕಣ್ಣಲ್ಲಿ ಬೆಳಕು
ವಿಷವಿಡಿದು ನಿಂತ ಅಪಶಕುನದ ಹಕ್ಕಿ
ಏನು ನಡಿಯುತಿಹದೀ ರಾತ್ರಿ
ಎಚ್ಚರದ ಕಣ್ಣಲ್ಲಿ ರಾತ್ರಿಯ ನಡಿಗೆ...!
ನೆರಳಿನ ಬೆತ್ತಲ ಚಿತ್ರದಲ್ಲಿ
ಜೀವಂತ ಹಾಡು
ಸಂದೂಕಿನಲಿ ಹೆಪ್ಪುಗಟ್ಟಿದ ನೋವು
ಚದುರದ ಬೆವರದ
ಕಣ್ಣ ಹಕ್ಕಿಯ ಚಿತ್ರ
ನಡೆಯಲೋದರೆ ನಡಿಗೆಯಲಿ ಆಯಸ್ಕಾಂತ
ಸಾವಿನ ಬಿತ್ತಿ ಭೀತಿಯಲಿ
ಅರಳಿದ ಸಾವಿನ ನೆರಳೇ
ಒಡಲು ನುಂಗಿ ತಿಂದು ತೇಗಿ
ಕಚ್ಚಿ ಗುರುತು ಮಾಡಿದ
ತುಟಿಗಳ ವಿರಹದ ಬಟ್ಟಲಲಿ
ವಿಷದ ಹನಿಯ ಗುರುತು?
ನನ್ನ ನಾನು ಚಿವುಟಿಕೊಂಡೆ
ಜಡವಾದ ಕೈ ಕಾಲು
ಚಿತ್ರದ ನೆರಳ ಮೇಲೆ ಇರುವೆಯ ಸಾಲು
ಹಿಡಿದ ಕೋಲಿಗೆ ಕೊನರುವ ಕನಸು
ಗುಡಿಸಲ ದೀಪಗಳು
ನೆವೆಯುವ ಚಿತ್ರ ಕಣ್ಣ ಮುಂದೆ
ತಡವರಿಸುತ್ತಲೇ ಮುಟ್ಟಲೋದೆ
ನೆರಳ ಕಾಂತಿಯ ಬೆಳಕ
ಯಾರೋ ಅಪ್ಪಿದ ಭಾವ
ಬೆನ್ನ ತಡವಿದ ಸ್ಪರ್ಶ
ಪಾದಗಳಲ್ಲಿ ಸೂರ್ಯನ ಬೆಳಕು
ನಮಸ್ಕರಿಸಿ ಒಳಹೋದೆ
ಹೊರಗೆ ನೆರಳ ಚಿತ್ರ ಕ್ರಾಂತಿಗೀತೆ
ಮೊಳಗುತ್ತಲೇ ಇತ್ತು
ಕಣ್ಣು ಜೋಲತ್ತಿ ಎದ್ದ ಕಣ್ಣಿಗೆ
ಗೋಡೆಯ ಮೇಲಿನ ಚಿತ್ರದ ನೆರಳಿಲ್ಲ
ದಿನ ಪತ್ರಿಕೆ ತಿರುವಿದರೇ
ಬಾಬ ಸಾಹೇಬರ ಸಾವು.!
ಉಸಿರಾಡುವ ನ್ಯಾಯ ಕರಗುವ ಆತಂಕ
ಬಾಯಾರಿದ ಬಯಲಲಿ
ನೆರಳಾದ ಉಸಿರು
ಕೊಂದವರ ಕೈಯಲ್ಲಿ ಜಾತಿಯ ಗೆರೆಗಳ ಚಿತ್ರ.
ಆಡಿಯೋ
ವಿಡಿಯೋ
ಬಿದಲೋಟಿ ರಂಗನಾಥ್
ಕವಿ ರಂಗನಾಥ ಬಿ.ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ 'ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ' ಹಾಗೂ 'ಶಾಲೀನಿ ಪುರಸ್ಕಾರ' ಲಭಿಸಿವೆ.