Poem

ದಾಸವಾಳ

ಮುಂಜಾನೆಯ ಇಬ್ಬನಿಯ ಮಬ್ಬನಲಿ
ತೂಕಡಿಸುವ ನಿದ್ದಿ ಮಂಪರಿನಲ್ಲಿ
ಕೆಂಪಗೆ ನಳನಳಿಸುವ ದಾಸವಾಳದ ಹೂವು
ತಾಯ ಗರ್ಭದಿಂದ ಈಗಷ್ಟೇ ಹೊರಬಂದ
ರಕ್ತ ಸಿಕ್ತ ಹಸುಳೆಯಂತೆ ಕಾಣುತ್ತಿದೆ.
ಕಾಣ್ಕೆ ಬಲ್ಲ ಕವಿ ಅಕ್ಷರಗಳ ದಿಗ್ಭಂದನದಲ್ಲಿ
ಕಣ್ಕಟ್ಟಿನ ಜಾದು ನಡೆದಿದಂತೆ!

ದಳ ದಳ ತೆರೆದು ನಾಲ್ಕು- ಎಂಟು- ಹದಿನಾರರ
ಗುಣಿತದಲಿ ಅರಳುತ್ತಿದೆ ಹೂವು.
ಅದರ ಬೇರು ಹರಡುತ್ತಿದೆ
ಬ್ರಹ್ಮಾಂಡದ ಕರುಳ ಬಗೆಯುವಂತೆ
ಒಳಗದವರ ಬೇರು ಕುಡಿಯುವ ನೀರು ಹರಿಯುತ್ತಿದೆ
ಅತಳ-ವಿತಳ -ಸುತಳ ಪಾತಾಳ-ತಾಳತಳ
ರಸಾತಳಗಳ ಜಲದ ಜಲಕಣ್ಣ ದಾರಿಗಳ
ಹುಡುಕಿ ದಿಕ್ಕುಕಾಣದೆ ದಿಕ್ಕು ತಪ್ಪಿದ್ದಾಳೆ ಆಕಾಶಗಂಗೆ
ಜಲಪ್ರಳಯಕ್ಕೇ ಮುಹೂರ್ತವಿಟ್ಟಂತೆ
ಅವಳೊಡನೆ ಕೈ ಜೋಡಿಸಿದಂತಿದೆ ಕದೀಮರ ಅಂತರ್ದಂಗೆ

ಹೊರಗಿಲ್ಲಿ ನಡೆದೇ ಇದೆ, ಭೂತಾಯ ಭೋಗಿಪ
ತಾಯಿಗಂಡರ ಬಹಿರ್ದಂಗೆ!
ದಾಸವಾಳವು ಈಗ ಸಹಸ್ರದಳ ತೆರೆದು
ಬ್ರಹ್ಮಾಂಡ ಭಾಷ್ಯವ ಬರೆಯುತ್ತಿದೆ
ನೆತ್ತರ ಕತ್ತಿಯಂತಿರುವ ಅದರ ಪರಾಗದಂಟಿಗೆ
ಅಂಟಿರುವ ಉನ್ನತ್ತ ದುಂಬಿ ದಂಡು
ಮಧುಬಟ್ಟಲ ಮುಗುಚಿ ಮಧುಪಾನ ಮಾಡುತ್ತಿವೆ
ಹೊಕ್ಕುಳಬಳ್ಳಿ ಕತ್ತರಿಸಿಕೊಂಡ ನೋವಲ್ಲೂ
ಮೈಮರೆತ ಕೂಸು ತಾಯ ಎದೆಗೆ ತುಟಿಯಿಟ್ಟು
ಹಸಿವ ನೀಗಿಕೊಳ್ಳುವಂತೆ....

ದೇಶ-ಕೋಶ-ಭಾಷೆ-ಬ್ರಹ್ಮಾಂಡವೆಲ್ಲಾ ಅಳಿದು
ಕರಗಿ ನೀರಾಗಿ ಹರಿದು: ಆಡು, ಹಸು, ಕುರಿ ಕೋಳಿ
ನರ, ನಾಯಿ ನರಿಗಳ ಜೀವ ಶವವಾಗಿ ತೇಲುತ್ತಿವೆ
ನೀರು, ನೆತ್ತರು, ಕಂಬಿಗಳೊಂದಿಗೆ ಬೆರೆತು
ಸಾವಿನಲ್ಲೂ ಸಮತೆಯ ಸಂಕರಗೀತೆ ಮೊಳಗುತ್ತಿವೆ!

ಮತ್ತದೇ ದಾಸವಾಳದ ಆಳಬೇರಿನ
ಮೂಲದಿಂದೊಂದು ಗೆಣ್ಣು ಕೊನರುತ್ತಿದೆ
ಅದರ ಹೊಕ್ಕುಳ ಬಳಿಯಲ್ಲೊಂದು ಮೊಗ್ಗು
ಈಗಷ್ಟೇ ದಳತೆರೆದು ಅರಳುತ್ತಾ
ಬ್ರಹ್ಮಾಂಡ ಭಾಷ್ಯವ ಬರೆಯುತ್ತಿದೆ
ಮಣ್ಣ ತಬ್ಬಿರುವ ಮಬ್ಬು ಸರಿದೀತು ದೂರ
ಕಣ್ಣ ಕವಿದಿರುವ ಮಬ್ಬು ಸರಿಯಲಾರದೆ ದೂರ
ಬೆಳಕು ಕಂಡೀತು ಹೇಗೆ?

ಕಾಣ್ಕೆ ಕಣ್ಕಟ್ಟುಗಳ ಕಣ್ಣಪಟ್ಟಿಯ ಕಳಚಿ
ದಾಸವಾಳದ ಬೇರು ಹೊಕ್ಕುಗಳ ಬಗೆಯದೆ
ಲೋಕ ಬರಿದೇ ಕವಿ-ಕವಿತೆಗಳು ಬಗೆವ
ವಿಸ್ಮಯವನ್ನೇ ಕಂಡು ಮೂಕವಿಸ್ಮಿತಗೊಂಡ ಪರಿಗೆ
ದಾಸವಾಳವು ನಾಚಿ ಕೆಂಪಾಗಿದೆ

ವಿಷ್ಣನಾಭಿ ಸಂಜಾತ ಬ್ರಹ್ಮಕಮಲದ ಮುಖ
ಕೆಂಪಾದ ದಿನ, ಶಂಖ, ಚಕ್ರಗದೆಗಳೆಲ್ಲಾ ಭೂಮಿಗಿಳಿದು
ರಾಮ ರಹೀಮರ ಗುತ್ತಿಗೆದಾರರ ಕೈಯ್ಯ ಕೈದುಗಳಾಗಿ
ಬಡಬಗ್ಗುರ ರುಂಡ ಚೆಂಡಾಡಿ ಭೂಮಿಯೇ ಕೆಂಪಾದ ದಿನ
ದೆಹಲಿಯ ಕೆಂಪುಕೋಟೆ, ಕರುನಾಡ ಹೈಕೋರ್ಟುಗಳು
ಕೆಂಪುಕೋಟೆ, ಕರುನಾಡ ಹೈಕೋರ್ಟುಗಳು
ಕೆಂಪಾದ ದಿನ, ಕಂಬಾಲಪಲ್ಲಿ, ಕೈರ್ಲಾಂಜೆಯ
ದಲಿತರ ನೆತ್ತರು ಭೂಮಿಗೆ ಬಿದ್ದು ಕೆಂಪಾದ ದಿನ.

ಗೂಡ್ಸೆಯ ಗುಂಡೇಟಿಗೆ ಗಾಂಧಿಯ ಎದೆಬಿರಿದು
ಕೆಂಪಾದ ದಿನ, ಕಲ್ಬುರ್ಗಿ, ಗೌರಿಯರ ಎದೆಬಗೆದ
ನೆತ್ತರು ಕುಡಿದು ಕೆಂಪಾದ ದಾಸವಾಳದ ಗಿಡಕೆ

ಶ್ವೇತಭವನದ ಮೇಲೆ ಹಾರಿಬಿಟ್ಟ
ಶ್ವೇತವರ್ಣದ ಪಾರಿವಾಳವು ಬಂದು
ಗೂಡು ಕಟ್ಟಲು ತಾವು ಹುಡುಕುವೆಂದು
ಬ್ರಾಹ್ಮಂಡಗುರುಗಳು ಬೆಳ್ಳಂಬೆಳ್ಳಿಗೆ
ಆತ್ಮದರ್ಶನ ವಾಹಿನಿಯಲ್ಲಿ ಉವಾಚಿರುವಲ್ಲಿಗೆ
‘ದೇಶಕೋಶ ದಾಸವಾಳ’ ಪುರಾಣವು ಸಮಾಪ್ತಿಯಾದುದು

-ಟಿ. ಯಲ್ಲಪ್ಪ

ಟಿ. ಯಲ್ಲಪ್ಪ

ಟಿ. ಯಲ್ಲಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣಪುರದಲ್ಲಿ  02-10-1970 ರಂದು ಜನಿಸಿದರು. ಕೃಷಿ ಕಾರ್ಮಿಕರ ಮನೆಯಲ್ಲಿ ಹುಟ್ಟಿದ ಯಲ್ಲಪ್ಪನವರು ಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಶಾಲಾ ಕಾಲೇಜುಗಳ ಅನೇಕ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತರು. ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇಪ್ಪತ್ತೆರಡರ ಅಳಲು(ಲಲಿತಾ ಪ್ರಬಂಧ), ಕಡಲಿಗೆ ಕಲಿಸಿದ ದೀಪ ಚಿಟ್ಟೆಮತ್ತು ಜೀವಯಾನ, ನವಿಲಿಗೆ ಬಿದ್ದ ಕತ್ತಲ ಕನಸು, ಇವರ ಕಡಲಿಗೆ ಕಳಿಸಿದ ದೀಪ ಕೃತಿಯು ANKLETS ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೆ ಭಾಷಾಂತರಗೊಂಡಿದೆ, ಕಣ್ಣ ಪಾಪೆಯ ಬೆಳಕು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರ ಸಾಹಿತ್ಯ ಸೇವೆಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿ, ವೀಚಿ ಕಾವ್ಯ ಪುರಸ್ಕಾರ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಲಭಿಸಿವೆ. 

More About Author