Poem

ಬೆತ್ತಲೆ ಭಾವಕೆ

ಬೆತ್ತಲೆ ಭಾವಕೆ ಅಟ್ಟಾಡಿಸಿ
ಬಟ್ಟೆ ತೊಡಿಸುವುದದೆಂಥ ಶೌರ್ಯ
ಸಾಕ ಕವಿತೆ ಬರೆಯಲು ಪಾಂಡಿತ್ಯ,
ಶಬ್ಧ ಸಾಗರ, ಅಂದದಕ್ಷರ
ಬರೆದೇ ತೀರುವೆನೆಂಬ ಮೊಂಡು ಧೈರ್ಯ?
ಮುಂಗಾರು ಮಳೆಗೆ ಮೈದುಂಬಿ
ಹಿಗ್ಗಿ ಹರಿವ ಹಿರಿಹೊಳೆಗೆ ಪಾತ್ರ ಹಂಗೇಕೆ?
ಜೀವ ಜೀವದ ಕೊಂಡಿ ಕಳಚಿ
ಹಾಡಾಡಿಕೊಂಡಳುವುದಕೆ ಛಂದದ ಬೇಡಿಯಾಕೆ
ಪುಂಗಿ ನಾದಕೆ ಉಬ್ಬಿ ತಲೆಯೆತ್ತಿ
ತೂಗುವಾದಿಶೇಷನಿಗೆ ಸ್ಟ್ರಿಂಗು ಬೇಕೆ?
ಹಾಡೊ ಹಕ್ಕಿಗೆ, ನರ್ತಿಸೊ ನವಿಲಿಗೆ, ಬೀಸೊ ಗಾಳಿಗೆ
ತೇಕೊ ಹಂಸಕೆ, ಸಾಯುವಾಗಿನ ಮೌನಕೆ
ದೊಣ್ಣೆನಾಯಕನಪ್ಪಣೆ ಬೇಕೆ?
ನಿತ್ಯಮುಕ್ತ ಕವಿತೆಯ ನಡೆಗೆ
ಬಡಿಗೆಯಾಸರೆಯೇಕೆ!
ಆನಂದಮಯ ಈ ಜಗಹೃದಯ!!
ಮಿಳಿತವಾದರೆ ನಾದ-ಲಯ
ಕಾವ್ಯ ಶಿವಾಲಯ!
ಕುಂಠಿತವಾಯಿತೊ ಲಯ
ಬದುಕೆ ಶವಾಲಯ,
ಬರಬೇಕು ಕವಿತೆ ತೊರೆವಾಲಿನಂತೆ
ಹಸುಗೂಸ ನಸುನಗೆಯಂತೆ
ನೀಗೆ ಯುಗ ಯುಗದ ಚಿಂತೆ
ಶಬ್ಧ ಕವಿತೆಯ ದೇಹ, ಛಂದವದರ ಮೂಗು
ಭಾವ ಹೃದಯ, ಧ್ವನಿ ದರ್ಶನ
ಲಯವೆ ಕವಿತೆಯ ಆತ್ಮ
ಆದೀತೆ ಇದು ಕಾವ್ಯದ ಆತ್ಮಕತೆ?
ಭಾವಗರ್ಭಕೆ ದಿನ ತುಂಬಲು
ತಿಣುಕದೆ ಜನ್ಮತಳೆದುದೇ ಭಾವಗೀತೆ!

- ಬಿ.ಆರ್. ಪೊಲೀಸ್ ಪಾಟೀಲ

ವಿಡಿಯೋ
ವಿಡಿಯೋ

ಬಿ.ಆರ್‌. ಪೊಲೀಸ್‌ ಪಾಟೀಲ

ಲಾವಣಿ, ತತ್ವಪದ, ಬಯಲಾಟಗಳನ್ನು ಬರೆದು ತಂಡ ಕಟ್ಟಿಕೊಂಡು ಕಳೆದ ನಾಲ್ಕುವರೆ ದಶಕಗಳಿಂದಲೂ ಪ್ರಯೋಗಿಸುತ್ತಾ ಬಂದಿರುವ ಪೊಲೀಸ್‌ ಪಾಟೀಲ ಅವರ ಹಾಡಿನ ಮೋಡಿಗೆ ತಲೆಬಾಗದವರಿಲ್ಲ. ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನೂರಿಪ್ಪತ್ತು ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. 93 ನಾಟಕಗಳನ್ನು ಇವರು ರಚಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ವಿಶೇಷ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

More About Author