Poem

ಅನಿವಾರ್ಯತೆಯ ನೀಗಿಕೊಂಡ ಮೇಲೆ 

ಅನಿವಾರ್ಯತೆಯ ನೀಗಿಕೊಂಡ ಮೇಲೆ ಅನುಭವದ ಜಾಡು ಸರಾಗವಾಗುತ್ತದೆ ಎನ್ನುತ್ತಾರೆ ಕವಿ ಎಚ್.ಎನ್. ಈಶಕುಮಾರ್. ಪ್ರಾಧ್ಯಾಪಕರಾಗಿರುವ ಈಶಕುಮಾರ್ ಕವಿತೆಯನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡಿದ್ದಾರೆ. ಅವರ ‘ಅನಿವಾರ್ಯತೆಯ ನೀಗಿಕೊಂಡ ಮೇಲೆ’ ಕವಿತೆ ಇಲ್ಲಿದೆ.

ಅನಿವಾರ್ಯತೆಯ ನೀಗಿಕೊಂಡ ಮೇಲೆ
ಅನುಭವದ ಜಾಡು ಸರಾಗವಾಗಿ
ಬಣ್ಣದ ಚಿಟ್ಟೆ ಹಾರಿದಂತೆ ಹಗುರ ಯಾನ

ಒಲವ‌ ಭಾವದ ವಿನಿಮಯಕೆ ಅಣಿಯಾಗಿ
ಕೂತು ಕಾಲದ ಜಾಲವ ಅರಿವಂತೆ ಸುತ್ತಲೂ
ಸುಳಿದಾಡುವ ರಂಗು ರಂಗಿನ ಬೆಡಗನು
ಬಗೆ ಬಗೆಯಾಗಿ ಸೆಳೆವ ಕಾತುರ ಹೂವಿಗೂ

ಪಾಚಿತುಂಬಿದ ಕೊಳದ ಬಳಿಗೆ ಆಡಲು
ಊರ ಒಣಿಯಲಿ ನಲಿಯುತ ಓಡುವ
ಪುಟ್ಟ ಪೋರಿ ಚಿಟ್ಟೆಯ ಜಾಡಲಿ ಉದುರಿದ
ಒಂದೊಂದೇ ಪಾರಿಜಾತವ ಆಯುತ ತುಂಬಿದ
ಬೊಗಸೆಗೆ ಮಡಿಲ ನೀಡುತ ನಡೆವಳು

ಕಳೆದ ಇರುಳ ಕನಸಲಿ ನಕ್ಷತ್ರದ ಹಾಗೇ
ಕೋಣೆಯ ತುಂಬೆಲ್ಲ ಹಾರಿದ ಚಿಟ್ಟೆಗಳ
ಹಾದಿಯಲಿ ಕಂಡು ಕರೆವಳು ಮಡಿಲಿಗೆ
ಇನ್ನೂ ಕೊಂಚ‌ ಬಣ್ಣವ ಸೋಕಿಸು ಬಾ ಎಂದು

ಮಡಿಲಲಿ ತುಂಬಿದ ಬಣ್ಣಕೆ ಕಂಗಳಲಿ
ಕಾಮನಬಿಲ್ಲಿನ ಸೆಳೆವು ಮೂಡಲು ಚಿಟ್ಟೆಯು
ಸೋಕಿಸಿ ಹಚ್ಚಿದ ಬಣ್ಣಕ್ಕೆ ಎದೆಯ ಕನಸನೇ
ಅಡವಿಟ್ಟಳು ಮಾಯಾದ ಊರಲಿ ಉಳಿಯಲು

ಜೀವದ ಸೆಲೆಯಾಗಿ ಮೋಹದ ಬಣ್ಣವನೇ ಕಾಡುವ
ಚೆಲುವಾಗಿ..ಒಲವಾಗಿ....ಹೂವ ಕಂಪನವಾಗಿ...

ಎಚ್‌.ಎನ್‌. ಈಶಕುಮಾರ್

ಕವಿ ಎಚ್. ಎನ್. ಈಶಕುಮಾರ್ ಅವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹುಲಿಕೆರೆಯಲ್ಲಿ 1983 ಫೆಬ್ರುವರಿ 20ರಂದು ಜನಿಸಿದರು. ತಮ್ಮ ಶಾಲಾ ದಿನಗಳಲ್ಲೇ ಸಾಹಿತ್ಯದ ಬಗ್ಗೆ ಒಲವು ಮೂಡಿದ್ದರಿಂದ ಮುಂದೆ ಸ್ನಾತಕೋತ್ತರ ಪದವಿಗೆ ಸಾಹಿತ್ಯ ವಿಭಾಗವನ್ನೇ ಆಯ್ಕೆ ಮಾಡಿಕೊಂಡರು. ಕಾವ್ಯ ಪ್ರಕಾರದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ಪ್ರಸ್ತುತ ಸರ್ಕಾರಿ‌ ಪ್ರಥಮ ದರ್ಜೆ ಕಾಲೇಜು ಕೆ. ಆರ್. ನಗರದಲ್ಲಿ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ‘ದಡವ ಹಡೆದ ನದಿ’ ಕವನ ಸಂಕಲನ 2018ರಲ್ಲಿ ಪ್ರಕಟವಾಗಿದೆ.

More About Author