Poem

ಆಪಾದನೆ

ನನ್ನ ರೆಪ್ಪೆಯಲುಗುವ ಮುನ್ನ
ನೀ ಹೋಗಿ ಬಿಡು ಬೇಗ
ಮತ್ತೆಂದೂ ತಿರುಗಿ ನೋಡದೆ

ತುಂಬಿದ ಕಣ್ ಕೊಳವನ್ನು
ಹಿಂಗಿಸಿ ಬಿಡುವೆನು
ತಿರುಗಿಯೂ ನೋಡದೆ
ಹೋಗುತಿರುವ ನಿನ್ನ ನೆನೆನೆನೆದು

ನೀ ತಿರುಗಿ ನೋಡಿದೆಯಾದರೇ
ಕೊಚ್ಚಿಹೋಗಿ ಬಿಡಬಹುದು
ಗುರಿಯೆಡೆಗಿನ ಕನಸುಗಳು
ಕಣ್ಣ ಜಲಪಾತದಲಿ
ಬೇಡ ನನಗೆ ಆಪಾದನೆ

ರೆಪ್ಪೆಯಲಿ ಬಂಧಿಸಿಡುವೆನು
ನನ್ನೆಲ್ಲ ಸ್ವಪ್ನಗಳ
ಏರಿಸಲಾರೆ ಬೇಡದ
ಹೊರೆಯ ನಿನ್ನ ಹೆಗಲಿಗೆ

ಪ್ರೀತಿಯಲಿ ಬಿದ್ದವರನ್ನು
ಕಂಡಿದ್ದೇವೆ ಸಾವಿರ ಸಾವಿರ
ಕಂಡದ್ದನ್ನು ಅರಗಿಸಿಕೊಂಡು
ಕಲಿತಿದ್ದೇನೆ ಪಾಠ ನಾನೂ

ನಿನ್ನ ಪ್ರೇಮದಲೇ
ಅದರ ತಾಪದಲೇ
ಉರಿದುರಿದು ಕಮರಿದರೂ
ಮತ್ತೆದ್ದು ಬರುವೆನು ನಾನು
ನಿನ್ನ ಯಶವ ಕಣ್
ತುಂಬಿಕೊಳ್ಳಲೆಂದು

ನನ್ನ ಕುಡಿನೋಟದೊಳಗೆ
ಸಿಕ್ಕಿ ನರಳಬೇಡ ನೀನು
ಗುರಿಯೆಡೆಗಿನ ದಾರಿಯ
ತಪ್ಪಿಸುವ ತಿರುವು ನಾನಾಗಲಾರೆ
ಬೇಡ ನನಗಾವ ಆಪಾದನೆ

(ಸೌಜನ್ಯ ದತ್ತರಾಜ)

May be an image of 1 person

 

ಸೌಜನ್ಯ ದತ್ತರಾಜ

ಲೇಖಕಿ ಸೌಜನ್ಯ ದತ್ತರಾಜ ಅವರು ಹದಿನೇಳು ವರ್ಷಗಳ ಕಾಲ ವೃತ್ತಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆಪ್ತ ಸಮಾಲೋಚನಾ ತರಬೇತಿಯನ್ನೂ ಪಡೆದಿರುತ್ತಾರೆ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಫ್ರಿಲಾನ್ಸರ್ ಬರಹಗಾರರೂ ಆಗಿದ್ದಾರೆ. ಸಿನಿಮಾ, ನಾಟಕ ಮತ್ತು ಪುಸ್ತಕಗಳ ಕುರಿತು ಪರಿಚಯಾತ್ಮಕ ಲೇಖನಗಳನ್ನು ಬರೆಯುತ್ತಿರುತ್ತಾರೆ. ಇವರು ಬರೆದ ಕಥೆಗಳು 'ತರಂಗ', 'ಮಂಗಳ', 'ವಿಶ್ವವಾಣಿ' ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 2014ರ 'ಕನ್ನಡಪ್ರಭ' ದೀಪಾವಳಿ ವಿಶೇಷಾಂಕದ ಸಣ್ಣ ಕಥಾ ಸ್ಪರ್ಧೆಯಲ್ಲಿ ಬಹುಮಾನವನ್ನೂ ಗಳಿಸಿದ್ದಾರೆ. ಕಥೆ, ಕವಿತೆ, ಮಕ್ಕಳಿಗಾಗಿ ನಾಟಕಗಳನ್ನೂ ಬರೆದಿರುವ ಇವರು, ಇತ್ತೀಚಿನ ದಿನಗಳಲ್ಲಿ ವಿಷುವಲ್ ಮೀಡಿಯಾದಲ್ಲಿ ಚಿತ್ರಕಥೆ, ಸಂಭಾಷಣೆಗಳನ್ನು ಬರೆಯುವುದರಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕೃತಿಗಳು: ಭಾವನೌಕೆಯನೇರಿ(ಕವನಸಂಕಲನ)

More About Author