Poem

ಓ ವಿಮರ್ಶಕ

ಭಾವನೆಗಳು ಮಾರುತ್ತವೆ ಎದೆಪೇಟೆಯ ಒಳಗೆ
ಬೀದಿಯಬದಿ ಬಿಕರಿಗಾಗಿ ಕಾಯುತ್ತಿವೆ ತಮಗೆ ॥ಪ॥

ಬರೆದವನೆದೆ ಬರಿದಾಯಿತೆ? ವರತೆಯಝರಿ ಜಿನುಗು
ಮಾತಿಲ್ಲದೆ ಮಗುಹುಟ್ಟಿತು ಜನರುಲಿದರು ಗುನುಗು
ವೇದಿಕೆಯಲಿ ಹರಿಬಿಟ್ಟರು ವಾಗ್ಝರಿಗಳ ಬಾಣ
ಪರಿವೀಕ್ಷಕ ಉಚ್ಛರಿಸಿದ ತಾಮಾಡಿದ ಯಾನ ೧

ಕೃತಿಯಾಳಕೆ ಕೃತಿಯಗಲಕೆ ಶೃತಿಹೊಂದದೊ ಮೂಢ
ಕುರುಡರಪರಿ ಕರಿವರ್ಣನೆ ಬರಿಮಗ್ಗಲು ನೋಡ
ಅಪರಂಜಿಗೆ ತಾಮ್ರಬೆರೆತ ಕಸಕಡ್ಡಿಯ ಹೆಕ್ಕಿ
ಅಕ್ಕಸಾಲಿ ಪುಟವಿಕ್ಕಿದ ಕಟುಮಾತಲಿ ತಿಕ್ಕಿ ೨

ಆಭರಣವು ಎದೆಗಿಳಿದರೆ ನಿನ್ನಿಂದದು ಗೊತ್ತು
ವ್ಯಾಪಾರದಿ ಜನಕೊಂಡರೆ ಬೆಲ್ಲಕಿರುವೆ ಮುತ್ತು
ಚಕ್ರವರ್ತಿ ಅತುಲಬಲವ ಹೊಗಳುಭಟ್ಟ ಹಾಡಿ
ಕೇಳಿದಕಿವಿ ನಿಮಿರುತ್ತಿವೆ ಕೊಳ್ಳುತ್ತಿವೆ ಮೋಡಿ ೩

ಪೂರ್ವಾಗ್ರಹ ಗಡಿಕಟ್ಟಳೆ ಈರ್ಷೆಗಳನು ಮೀರಿ
ಈಜಿಮುಳುಗಿ ದಾಖಲಿಸುತ ಅಂತರಾಳ ತೂರಿ
ಹಲಕೋನದಿ ಮಥಿಸಲಿಮನ ನವನೀತವ ತೆಗೆದು
ಓದುಗನೆದೆ ಬಿಸ್ತಾರಕೆ ರಸಗವಳವ ಮೊಗೆದು ೪

- ಜೀವರಾಜ ಹ ಛತ್ರದ

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)

More About Author