ಕನ್ನಡ ಪುಸ್ತಕ ಲೋಕದಲ್ಲಿ ಅಪರೂಪದ ಪ್ರಕಟಣೆಗಳ ಮೂಲಕ ಗಮನ ಸೆಳೆದಿರುವ ಸಂಸ್ಥೆ ಬೆಂಗಳೂರಿನ ವಸಂತ ಪ್ರಕಾಶನ. ಪುಸ್ತಕ ಪ್ರಿಯರಿಗೆ ಆಪ್ತವೆನ್ನಿಸುವ ನಿಲ್ದಾಣದಂತಿರುವ ವಸಂತ ಪ್ರಕಾಶನ, ನಾಲ್ಕು ದಶಕಗಳಿಂದ ಸದಭಿರುಚಿಯನ್ನು ಬೆಳೆಸುವ ಕೆಲಸ ಮಾಡಿಕೊಂಡು ಬಂದಿದೆ.
ಕಥನ ಮತ್ತು ಕಥನೇತರ ಪ್ರಕಾರದ ಪ್ರಕಟಣೆಗಳು ಮಾತ್ರವಲ್ಲದೆ, ಕನ್ನಡ ಸಾಹಿತ್ಯದ ಸೊಗಸನ್ನು ಮರಳಿ ಉಣಬಡಿಸುವಂಥ ಪ್ರಕಟಣೆಗಳ ಮೂಲಕವೂ ವಸಂತ ಪ್ರಕಾಶನದ್ದು ದಾಖಲೆ. ಬೆಲೆಬಾಳುವ ಬರಹಗಳು ಮಾಲಿಕೆಯಲ್ಲಿ ಡಿವಿಜಿ, ಶಿವರಾಮ ಕಾರಂತ, ವಿ.ಸೀ., ಎ ಆರ್ ಕೃಷ್ಣಶಾಸ್ತ್ರಿ, ಗೌರೀಶ ಕಾಯ್ಕಿಣಿ, ಡಿ ಆರ್ ನಾಗರಾಜ್ ಅಂಥ ಮಹತ್ವದ ಲೇಖಕರ ಆಯ್ದ ಬರಹಗಳ ಸಂಕಲನಗಳನ್ನು ಪ್ರಕಟಿಸಿರುವುದು ಈ ನಿಟ್ಟಿನಲ್ಲಿ ವಸಂತ ಪ್ರಕಾಶನ ಮಾಡಿರುವ ಸಾಧನೆ. ‘ವ್ಯಕ್ತಿ ಚಿತ್ರ ಮಾಲೆ’ಯು ವಸಂತ ಪ್ರಕಾಶನದ ಇನ್ನೊಂದು ಸಾಧನಗುಚ್ಛವಾಗಿದೆ. ದೇಶ ವಿದೇಶಗಳ ಮಹಾನ್ ಸಾಧಕರ ಜೀವನ ಚರಿತ್ರೆಯನ್ನು ಅವರುಗಳ ಸಾಧನೆಯ ಮೂಲಕ ಚಿತ್ರಿಸುವ ಈ ಮಾಲೆಯ ಪುಸ್ತಕಗಳು ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ಹದಿಯರೆಯದ ಮಕ್ಕಳಿಗೆ ಬಹು ಉಪಯುಕ್ತವಾದುವು. ಇನ್ನು ‘ಆರೋಗ್ಯ ಚಿಂತನ ಮಾಲಿಕೆ’ಯು ಜನರನ್ನು ಕಾಡುವ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ತೋರುವ ಕೃತಿಗಳನ್ನು ಒಳಗೊಂಡಿರುವಂತಹುದು, ವಿಷಯ ತಜ್ಞರುಗಳೇ ಬರೆದಿರುವ ಈ ಪುಸ್ತಕಗಳು ನಿಜಕ್ಕೂ ಎಲ್ಲರ ಮನೆಯಲ್ಲಿ ಇರುವಂತಹವುಗಳಾಗಿವೆ. ಮಕ್ಕಳ ಸಾಹಿತ್ಯದಲ್ಲೂ ಕಾರ್ಯೋನ್ಮುಖವಾಗಿರುವ ವಸಂತ ಪ್ರಕಾಶನ ಮಕ್ಕಳ ಮನಸ್ಸನ್ನು ಗೆಲ್ಲುವ, ಅವರ ಜ್ಞಾನವನ್ನು ಹೆಚ್ಚಿಸುವ ಕಾಯಕವನ್ನೂ ಆಪ್ತವಾಗಿ ಮಾಡುತ್ತ ಬಂದಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ 2016ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಕೂಡ ವಸಂತ ಪ್ರಕಾಶನಕ್ಕೆ ಬಂದಿದೆ.
©2024 Book Brahma Private Limited.