1957ರಲ್ಲಿ ಕೆ.ವಿ.ಸುಬ್ಬಣ್ಣ ಅವರು ಪ್ರಾರಂಭಿಸಿದ ಅಕ್ಷರ ಪ್ರಕಾಶನ ಕನ್ನಡದ ಮತ್ತೊಂದು ಅಸ್ಮಿತೆಯಾಗಿಯೇ ಬೆಳೆದುಬಂದಿದೆ. ಅಕ್ಷರ ಪ್ರಕಾಶನ ಕನ್ನಡ ಪುಸ್ತಕ ಪ್ರಕಟಣೆಯಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಯ್ತು. ತನ್ನ ಪುಸ್ತಕಗಳ ವಿಶಿಷ್ಟತೆಗಾಗಿ, ತಾನು ಪ್ರತಿಪಾದಿಸುವ ಮೌಲ್ಯಗಳಿಗಾಗಿ ಕನ್ನಡ ಪ್ರಕಾಶನ ಕ್ಷೇತ್ರದಲ್ಲಿ ಗಮನಾರ್ಹವಾಗಿ ಬೆಳೆದ ಅಕ್ಷರ ಪ್ರಕಾಶನ, ಅಭಿರುಚಿಗಳನ್ನು ಬೆಳೆಸುವುದರ ಜೊತೆಗೆ ಹೊಸ ಚಿಂತನ ಮಾರ್ಗವನ್ನು ಹುಟ್ಟುಹಾಕಿತು.
ರಂಗಭೂಮಿಯ ಕುರಿತಾದ ಸಂಸ್ಕೃತದ ಅಭಿಜಾತ ಕೃತಿಗಳ ಅನುವಾದವಿರಲಿ, ಷೇಕ್ಕ್ಸ್‌ಪಿಯರ್‌ನಂಥ ಅಪ್ರತಿಮ ನಾಟಕಕಾರನ ನಾಟಕಗಳ ಅನುವಾದವಿರಲಿ, ಆಧುನಿಕ ಕನ್ನಡದ ಮಹತ್ವದ ಲೇಖಕರ ಕೃತಿಗಳಿರಲಿ, ಸಮಕಾಲೀನ ವಿಷಯಗಳ ಕುರಿತ ಗಂಭೀರ ಲೇಖನಗಳ ಸಂಕಲನ ಸೇರಿದಂತೆ ಮಹತ್ವದ ಕೃತಿಗಳನ್ನು ಪ್ರಕಟಿಸುವ ಮೂಲಕ ಕನ್ನಡ ಪುಸ್ತಕಲೋಕದಲ್ಲಿ ಅಕ್ಷರ ಪ್ರಕಾಶನದ್ದು ವಿಶೇಷ ಛಾಪು.
ಸುಬ್ಬಣ್ಣನವರ ಪುತ್ರ ಮತ್ತು ರಂಗಕರ್ಮಿ ಕೆ.ವಿ ಅಕ್ಷರ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಅಕ್ಷರ ಪ್ರಕಾಶನವು, ಅಭಿರುಚಿ ನಿರ್ಮಾಣ ಕೂಡ ಮುಖ್ಯವೆಂದು ಮನಗಂಡೇ ಓದುಗ ವರ್ಗವನ್ನು ವಿಸ್ತರಿಸುತ್ತಾ ಬಂದಿದೆ. ಅಕ್ಷರ ಚಿಂತನಮಾಲಿಕೆಯ ಮೂಲಕ ತಂದ ಪುಸ್ತಕಗಳಿರಬಹುದು, ಈಚೆಗೆ ಮೊದಲ ಓದು ಮಾಲಿಕೆಯ ಪುಸ್ತಕಗಳಿರಬಹುದು, ಹೊಸ ಓದುಗರನ್ನು ಸೃಷ್ಟಿಸಿವೆ. ಪರಿಸರ, ಶಿಕ್ಷಣ, ಜಾನಪದ, ಮಹಿಳಾ ಸಂವೇದನೆ, ಸಿನೆಮಾ, ವೈದ್ಯಕೀಯ ಹೀಗೆ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಗುಲಬರ್ಗಾದಿಂದ ಕೊಡಗಿನವರೆಗೆ - ಧಾರವಾಡದಿಂದ ಮಂಗಳೂರಿನವರೆಗೆ ಇರುವ ಲೇಖಕರ ಪುಸ್ತಕಗಳನ್ನು ಅಕ್ಷರ ಪ್ರಕಾಶನ ಪ್ರಕಟಿಸಿರುವುದು ಸಾಹಸವೇ ಸರಿ.
©2025 Book Brahma Private Limited.