ಶಂಕರಾನಂದಯೋಗಿ ಮತ್ತು ಇತರ ತತ್ವಪದಕಾರರ ವಾಚಿಕೆ-ಕೃತಿಯು ಎಸ್. ನಟರಾಜ ಬೂದಾಳು ಅವರ ಸಂಪಾದಿತ ಕೃತಿ. ಕನ್ನಡದ ಜನಮಾನಸವನ್ನು ತುಂಬಿಕೊಂಡಿರುವ ಇಬ್ಬರು ಕವಿಗಳೆಂದರೆ ಚಿದಾನಂದಾವಧೂತ ಮತ್ತು ಶಂಕರಾನಂದಯೋಗಿ. ಮಹಾಕವಿಯಾದ ಚಿದಾನಂದಾವಧೂತನ ದೇವಿಮಹಾತ್ಮೆ ಈವರೆಗೆ ಕನ್ನಡದಲ್ಲಿ ಅತ್ಯಂತ ಹೆಚ್ಚು ಮುದ್ರಣಗಳನ್ನು ಕಂಡ ಮಹಾಕಾವ್ಯ. ಇದಕ್ಕಿಂತ ಹೆಚ್ಚು ಜನರಿಂದ ಈ ಹೊತ್ತಿನವರೆಗೆ ಓದಿಸಿಕೊಳ್ಳುತ್ತಿರುವ ಕನ್ನಡದ ಕಾವ್ಯವೆಂದರೆ ಶನಿಮಹಾತ್ಮೆ. ಈವರೆಗೆ ಅತ್ಯಂತ ಹೆಚ್ಚು ಜನರಿಂದ ಹಾಡಿಸಿಕೊಳ್ಳುತ್ತಿರುವ ಮತ್ತು ಆಚರಣೆಗೊಳ್ಳುತ್ತಿರುವ ಕವಿಯೆಂದರೆ ಶಂಕರಾನಂದಯೋಗಿ. ಉತ್ತರ ಕರ್ನಾಟಕದ ಪಾಲಿಗೆ ಈ ಜಾಗವನ್ನು ತುಂಬಿರುವವನೆಂದರೆ ಕಡಕೋಳ ಮಡಿವಾಳಪ್ಪ. ಈ ಮಾಹಿತಿ ಕನ್ನಡದ ಓದುಗ ವಲಯಕ್ಕೆ ಆಶ್ಚರ್ಯದ ಸಂಗತಿ ಎನ್ನಿಸಬಹುದು. ಇವೆಲ್ಲ ಇಷ್ಟು ಪ್ರಚಲಿತದಲ್ಲಿದ್ದರೂ ಶೈಕ್ಷಣಿಕ ಓದುಗ ವಲಯದಿಂದ ಏಕೆ ದೂರ ಇವೆ? ಈ ಪ್ರಶ್ನೆಗೆ ಒಂದೇ ಉತ್ತರವೆಂದರೆ ಇವು ತಾವಾಗಿ ದೂರ ಇಲ್ಲ; ಬದಲಿಗೆ ದೂರ ಇಡಲಾಗಿದೆ.
ಗಮನಿಸಬೇಕಾದ ಸಂಗತಿ ಎಂದರೆ ಇವೆಲ್ಲ ಕೇವಲ ಓದು/ಹಾಡು ಪಠ್ಯಗಳಲ್ಲ; ಬದಲಿಗೆ ಸಾಧಕ ಪಠ್ಯಗಳು. ಈ ನೆಲದ ಬಯಲುಸೀಮೆಯ ಪ್ರಮುಖ ತತ್ವಪದಕಾರ ಶಂಕರಾನಂದಯೋಗಿ ಮತ್ತು ಇತರ ತತ್ವಪದಕಾರರ ಆಯ್ದ ತತ್ವಪದಗಳ ಸಂಕಲನ ಈ ವಾಚಿಕೆ. ಶಂಕರಾನಂದ ಯೋಗಿಯ ಕೈವಲ್ಯ ನವನೀತ ಕೃತಿ ಟಿ ಎನ್ ಕೃಷ್ಣಯ್ಯಶೆಟ್ಟರಿಂದ ನೂರಾರು ಬಾರಿ ಪ್ರಕಟಗೊಂಡಿರಬಹುದು. ಇನ್ನು ಶಂಕರಾರ್ಯರ ‘ಶಂಕರಾನಂದ ತತ್ವ ಮತ್ತು ಪದ್ಧತಿ’ ಕೃತಿಗೆ ಹೊದಿಸಿರುವ ಮೇಲುಹೊದಿಕೆಗೆ ನನಗಿಂತ ಹೆಚ್ಚು ವಯಸ್ಸಾಗಿರುವುದನ್ನು ಅನೇಕ ಕಡೆ ಕಂಡಿದ್ದೇನೆ ಎನ್ನತ್ತಾರೆ ಲೇಖಕರು.
ಈ ಮಹಾನ್ ಸಾಧಕರ ‘ಜನಪ್ರಿಯ’ ತತ್ವಗಳನ್ನು ಆಯ್ಕೆ ಮಾಡಿ ಈ ವಾಚಿಕೆಯಲ್ಲಿ ಕೊಡಲಾಗಿದೆ. ಇವುಗಳ ಬಿಡಿ ಬಿಡಿ ಪ್ರಕಟಣೆಗಳನ್ನು ತಮ್ಮ ಬಟ್ಟೆಯ ಬ್ಯಾಗಿನಿಂದ ತೆಗೆದು ಹಾಡುವ ಅವರಿಗೆ ಈ ಸಂಕಲವನ್ನು ಅರ್ಪಿಸಿದಾಗ ಆದ ಸಾರ್ಥಕತೆಗೆ ಸಮನಿಲ್ಲ. ಬಿಡು ಬಿಡಿನ್ಯಾತರ ಜ್ಞಾನ | ನಿನ್ನ ನಡೆನುಡಿ ಒಂದಾಗದಿಹುದೆ ಅಜ್ಞಾನ || ಇಂತಹ ತತ್ವಗಳನ್ನು ಬರೀ ಓದಬಾರದು. ಏಕತಾರಿ ಹಿಡಿದು ಹಾಡಬೇಕು ಇಲ್ಲ ಧ್ಯಾನಸ್ಥನಾಗಿ ಕೇಳಬೇಕು. ---
ಜಾತಿ ಸೂತಕವೆಂಬ ಮಾತಿಲ್ಲ | ಜಾತಿ ಸೂತಕವೆಂಬ ಮಾತಿಲ್ಲ | ಸುಜ್ಞಾನ ಮಾರ್ಗದಿ | ಜಾತಿಕರ್ಮಾದಿಗಳು ಮೊದಲಿಲ್ಲ ||ಜಾತಿ|| || ಪ || ಜಾತಿಗೋತ್ರಕೆ ಬದ್ಧರಾಗುತ | ಆತ್ಮನರಿಯದ ಕರ್ಮಿಗಲ್ಲದೆ | ಜಾತಿ ಕಲ್ಪನೆಯಳಿದು ಆತ್ಮ | ಜ್ಯೋತಿಯಲಿ ಮುಳುಗಿದ ಮಹಾತ್ಮಗೆ ||ಜಾತಿ|| || ಅ.ಪ || (ಶಂಕರಾನಂದಯೋಗಿ) ನೋಡಿದೇನೆ ಪ್ರೌಢ ಸುಂದರೀ ನೋಡಿದೇನೆ ಪ್ರೌಢ ಸುಂದರೀ | ಆ | ಜಾಡ ತಿಳಿದು | ನೋಡಿದೇನೆ ಪ್ರೌಢ ಸುಂದರೀ ||ಪ|| ರೂಢಮಾಗಿ ಮೂರು ನದಿಯು | ಕೂಡಿಯಿರುವ ಠಾವಿನಲ್ಲಿ | ಆಡಿ ಬಂದು ಜೋಡು ಗಿಳಿಯು | ಕೂಡಿ ಮಾತಾಡುವದನು || ನೋಡಿದೇನೆ|| ||ಅ|| ವುರಿವ ಗಿರಿಯ ತುದಿಯ ಮೆರದು | ಸುರಿವ ಸುಧೆಯ ಭರದಿ ಸವಿದು | ಗುರುತನರಿತು ಶರಿರ ಮರತು | ಹರಿಹರ ಗುರುವರನ ಬೆರÉತು || ನೋಡಿದೇನೆ ||3|| (ಹರಿಹರಗುರು) ಮುಟ್ಟು ಮುಟ್ಟೆನ್ನುತ ಮುಟ್ಟು ಮುಟ್ಟೆನ್ನುತ ಮೂರ್ನಾರು ಹೊರಳುವೆ ಮುಟ್ಟೆಲ್ಲಿ ಬಂತೆ ಬಿಕನಾಶಿ ||ಪ|| ಮುಟ್ಟೋ ನೀನೇ ಮಡಿಯೂ ನೀನೇ ಕೆಟ್ಟಿತು ನಿನ ಮಡಿ ಬಿಕನಾಶಿ ||ಮುಟ್ಟು|| ||ಅಪ|| (ಚಿದಾನಂದಾವಧೂತ) ಕುಣಿಯುತ್ತಲಿರುವಂಥ ನವಿಲೇ ಕುಣಿಯುತ್ತಲಿರುವಂಥ ನವಿಲೇ | ನಿನ್ನ | ಕುಣಿತಕ್ಕೆ ಸಾಲದು ಬ್ರಹ್ಮಾಂಡ ಬಯಲೇ ||ಕುಣಿಯುತ್ತಲಿರುವಂಥ|| ||ಪ|| ದಣಿವಿಲ್ಲದೊಲು ಕುಣಿವ ಲೀಲೆ | ನೋಡಿ | ಮಣಿದಿತ್ತು ಜಗವೆಲ್ಲ ಬೆರಗಾದ ಮೇಲೆ ||ಕುಣಿಯುತ್ತಲಿರುವಂಥ|| ||ಅ.ಪ|| (ತುರುವನೂರು ಲಿಂಗಾರ್ಯ)
©2024 Book Brahma Private Limited.