ಲೇಖಕ ಡಾ. ಕಲ್ಯಾಣರಾವ್ ಜಿ. ಪಾಟೀಲ್ ಹಾಗೂ ಅವರ ವಿದ್ಯಾರ್ಥಿ ಲಕ್ಷ್ಮಿಕಾಂತ ಪಂಚಾಳ ಅವರು ಜಂಟಿಯಾಗಿ ರಚಿಸಿದ ಕೃತಿ-ಸರಳ ಛಂದಸ್ಸು. 2012ರಲ್ಲಿ ಈ ಕೃತಿಯು ಮೊದಲ ಮುದ್ರಣ ಕಂಡಿತ್ತು. ಕೃತಿಗೆ ಮುನ್ನುಡಿ ಬರೆದ ಡಾ. ಮೀನಾಕ್ಷಿ ಬಾಳಿ ಅವರು ‘ಲೇಖಕರು ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗಾಗಿ ತುಂಬಾ ಸರಳ ಮತ್ತು ಆಕರ್ಷಕವಾಗುವಂತೆ ಶಬ್ದಮಣಿದರ್ಪಣ ದೀಪಿಕೆ ಕೃತಿಯನ್ನು ಬರೆದು ಈಗಾಗಲೆ ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ. ಅವರು ಕನ್ನಡ ಛಂದಸ್ಸು ಕುರಿತು ಸಂಕ್ಷಿಪ್ತವಾದರೂ ಕರಿಯನ್ನು ಕನ್ನಡಿಯಲ್ಲಿ ಹಿಡಿದಿಟ್ಟಂತೆ, ಛಂದಸ್ಸು ಶಾಸ್ತ್ರದ ಸ್ವರೂಪ, ಇತಿಹಾಸ, ಪ್ರಕಾರ, ಪ್ರಯೋಗ ಇತ್ಯಾದಿ ವಿವರಗಳನ್ನು ಈ ಕೃತಿಯಲ್ಲಿ ಸಿದ್ಧಪಡಿಸಿದ್ದಾರೆ. ಕನ್ನಡ ಛಂದಸ್ಸನ್ನು ಕುರಿತು ಅಧ್ಯಯನ, ಅಧ್ಯಾಪನ ಮಾಡುವವರಿಬ್ಬರಿಗೂ ಆಕರವಾಗಬಲ್ಲ ಕ್ಷಮತೆ ಹೊಂದಿದೆ. ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗಂತೂ ಇದು ಅಂಗೈ ಮಾಣಿಕ್ಯದಂತಿದೆ. ಸುಲಿದ ಬಾಳೆಹಣ್ಣಿನಂತೆ ಛಂದಸ್ಸು ಶಾಸ್ತ್ರದ ಬುಲೆಟ್ ಪಾಯಿಂಟ್ಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿ ಇದಾಗಿದೆ. ಕೃತಿಯ ಗಾತ್ರ ಚಿಕ್ಕದಾದರೂ ಪಾತ್ರ ಹಿರಿದು ಎಂಬುದರಲ್ಲಿ ಎರಡು ಮಾತಿಲ್ಲ .ಅಪಾರ ಪಾಂಡಿತ್ಯ ಮತ್ತು ಪರಿಶ್ರಮದ ಫಲವಾಗಿ ಮೂಡಿಬರುವ ಶಾಸ್ತ್ರ ಕೃತಿಗಳನ್ನು ತಯಾರಿಸುವಲ್ಲಿ ನಮ್ಮ ಭಾಗದಲ್ಲಿದ್ದ ಕೊರತೆಯನ್ನು ನೀಗಿಸುವಲ್ಲಿ ಕಲ್ಯಾಣರಾವ ಜಿ. ಪಾಟೀಲರವರ ದುಡಿಮೆ ತುಂಬಾ ಮೌಲಿಕವಾಗಿದೆ. ಈ ಹೊತ್ತಿಗೆಯಲ್ಲಿ ಛಂದಸ್ಸು ಶಾಸ್ತ್ರದ ಸ್ವರೂಪ, ಛಂದಸ್ಸಿನ ಅಧ್ಯಯನದ ಅಗತ್ಯತೆ, ಕನ್ನಡ ಛಂದೋಗ್ರಂಥಗಳ ಸಂಕ್ಷಿಪ್ತ ಪರಿಚಯ, ಛಂದಸ್ಸಿನ ಮೂಲಭೂತ ತತ್ವಗಳು, ಪ್ರಾಸ, ಯತಿ, ಲಯ, ವಡಿ, ಖ್ಯಾತ ಕರ್ನಾಟಕ ವೃತ್ತಗಳು, ಕಂದ, ರಗಳೆ, ಷಟ್ಪದಿ, ತ್ರಿಪದಿ, ಸಾಂಗತ್ಯ, ಅಕ್ಕರಗಳ ಸ್ವರೂಪ ಮತ್ತು ಪ್ರಕಾರಗಳನ್ನು ಉದಾಹರಣೆ ಸಹಿತ ವಿಶ್ಲೇಷಿಸಲಾಗಿದೆ. ಹೊಸಗನ್ನಡ ಛಂದಸ್ಸಿನ ಸಾಮಾನ್ಯ ತತ್ವಗಳು, ಪರಿಭಾಷೆಗಳು, ಛಂದೋಲಯಗಳು ಮತ್ತು ರೂಪಗಳನ್ನು ಪರಿಚಯಿಸಲಾಗಿದೆ. ಕೊನೆಯಲ್ಲಿ ಛಂದಸ್ಸಿಗೆ ಸಂಬಂಧಿಸಿದ ವಸ್ತುನಿಷ್ಠ ಪ್ರಶ್ನೋತ್ತರ ಮಾಲಿಕೆ ಇದೆ. ಗ್ರಂಥಋಣದಲ್ಲಿ ಛಂದಸ್ಶಾಸ್ತ್ರ ಕುರಿತು ಅಧ್ಯಯನಕ್ಕೆ ನೆರವಾಗುವ ಮಹತ್ವದ ಸಾಂದರ್ಭಿಕ ಕೃತಿಗಳ ಯಾದಿಯನ್ನು ಕೊಡಲಾಗಿದೆ. ಕಲ್ಯಾಣರಾವ ಪಾಟೀಲ ಅವರು ಪಾಠ ಮಾಡಿದ ಟಿಪ್ಪಣಿಗಳನ್ನು ಬರೆದು, ಫೇರ್ ಮಾಡಿ, ಡಿ.ಟಿ.ಪಿ ಮಾಡುವಲ್ಲಿ ನೆರವಾಗಿರುವ ಅವರ ವಿದ್ಯಾರ್ಥಿ ಮಿತ್ರ ಶ್ರೀ ಲಕ್ಷ್ಮೀಕಾಂತ ಪಂಚಾಳ ಅವರ ಹೆಸರನ್ನೂ ಸಹ ಪುಸ್ತಕದಲ್ಲಿ ತಮ್ಮ ಹೆಸರಿನ ಜೊತೆ ಸೇರಿಸಿರುವುದು, ಅವರು ವಿದ್ಯಾರ್ಥಿಗಳ ಬಗೆಗೆ ತೋರಿದ ನಿವ್ರ್ಯಾಜ ಪ್ರೀತಿಗೆ ನಿದರ್ಶನವಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.