ಅ.ರಾ. ಮಿತ್ರ ಅವರ ಕೃತಿ ಛಂದೋಮಿತ್ರ . ರಾ. ಗಣೇಶ್ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಹನ್ನೊಂದನೆಯ ಶತಮಾನದ ಕೊನೆಯಲ್ಲಿದ್ದ ಕಾಶ್ಮೀರದ ಕವಿ ಕ್ಷೇಮೇಂದ್ರನು ತನ್ನ ವಿದ್ಯಾರ್ಥಿಗಳ ಸೌಕಯ್ಯಕ್ಕಾಗಿ ಲಲಿತ ಶೈಲಿಯಲ್ಲಿ ಸೊಗಸಾದ ವೃತ್ತ ಪ್ರಭೇದಗಳನ್ನು ಪ್ರಯೋಗಿಸುವ ಬಗೆಯನ್ನು ತಿಳಿಸಿದ್ದ ಸುವೃತ್ತತಿಲಕವೆಂಬ ಚಿಕ್ಕಚೊಕ್ಕ ಕೃತಿಯ ಬಳಿಕ ಇಂದು ಪ್ರೊ| ಅ.ರಾ. ಮಿತ್ರ ಅಂಥದ್ದೇ ಪ್ರಯತ್ನ ವನ್ನು “ಛಂದೋಮಿತ್ರ'ದ ಮೂಲಕ ಮಾಡಿ ಸಫಲರಾಗಿದ್ದಾರೆ. ಇದು ಕನ್ನಡಕ್ಕೆ ಹೆಮ್ಮೆತರುವ ವಿಷಯ.ಛಂದೋಮಿತ್ರದ ವೈಶಿಷ್ಟ್ಯ ಹಲವು ಬಗೆಯದು. ಆಧುನಿಕ ವಿದ್ವಾಂಸರ ಸಂಶೋಧನೆಯಂತೆ ತಿಳಿಸಬೇಕಾದ ವಸ್ತುವಿಗೆ ಆ ವಸ್ತುವನ್ನೇ ಬೋಧನ ಮಾಧ್ಯಮವನ್ನಾಗಿ ಮಾಡಿಕೊಂಡರೆ ಪರಿಣಾಮಕಾರಿಯಾದ ಸಂವಹನ ಸಾಧ್ಯ. ಇದನ್ನು ಮನಗಂಡುದರ ಸೊಗಸೇ ಛಂದೋಮಿತ್ರದ ಶರೀರ ವಿನ್ಯಾಸ, ಪೂರ್ಣವಾಗಿ ತಿಳಿಗನ್ನಡದ ಬಗೆಬಗೆ ಛಂದಸ್ಸಿನ ಪದ್ಯಗಳಲ್ಲಿಯೇ ಸಮಸ್ತ ವಿಚಾರವನ್ನೂ ಅಭ್ಯಾಸಿಗಳ ಆಳವರಿತು ಹೇಳುವ ಕಲೆ ಅನನ್ಯ. ಇದರಿಂದಾಗಿ ಓದುತ್ತಲೇ ಪದ್ಯ ರಚಿಸುವ ಯಾರಿಗಾದರೂ ಆಗುತ್ತದೆ. ಆಶ್ಚರ್ಯಕರವಲ್ಲದಿದ್ದರೂ ವಿಸ್ಮಯಾವಹವಾದ ಮನವರಿಕೆಯೂ ಆಗುತ್ತದೆ. ಓಹ್! ಛಂದಸ್ಸು ಇಷ್ಟು ಸುಲಭವೇ! ಇಷ್ಟು ಸೊಗಸೇ!! ಎಂದು ಹೇಳಿದ್ದಾರೆ.
©2025 Book Brahma Private Limited.