‘ಛಂದಸ್ಸಿನ ಮಡಿಲು’ ಕೃತಿಯು ಕೆ.ಪಿ. ಚೋಂದಮ್ಮ ಅವರ ಛಂದಸ್ಸಿನ ಕುರಿತ ಸಂಕಲನವಾಗಿದೆ. ಈ ಕೃತಿಯ ಕುರಿತು ಲೇಖಕಿ ಹೀಗೆ ಹೇಳುತ್ತಾರೆ; ಏಳನೇ ತರಗತಿಯಲ್ಲಿದ್ದಾಗ ನಾನು ಮೊತ್ತ ಮೊದಲು ಭಾಮಿನಿ ಷಟ್ಪದಿಯನ್ನು ಬರೆದು ಕನ್ನಡ ಗುರುಗಳಾದ ಪದ್ಮನಾಭರ ಮೆಚ್ಚುಗೆಗೆ ಪಾತ್ರಳಾಗಿದ್ದೆ. ಅಲ್ಲಿಂದ ಪ್ರಾರಂಭವಾದ ನನ್ನ ಬರವಣಿಗೆ ಸತತವಾಗಿ ಸಾಗಿದ್ದರೂ ಪ್ರಕಟಣೆಗೆ ಕಳುಹಿಸಲಿಲ್ಲ. ಪ್ರೌಢ ಶಾಲೆಯಲ್ಲಿ ವಾಸುದೇವ ಶಾಸ್ತ್ರಿಗಳು ಕನ್ನಡ ಪಂಡಿತರಾಗಿ ದೊರೆತಿದ್ದು ನನ್ನ ಭಾಗ್ಯ. ಅವರಿಂದ ಕಲಿತ ವ್ಯಾಕರಣ, ಗಮಕ ವಾಚನ ಇಂದಿಗೂ ನನ್ನಲ್ಲಿ ಸಚೇತನವಾಗಿದೆ. ಶಾಲೆಯ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುತಿದ್ದೆ. ಭಾಷಣ, ಹಾಡುಗಾರಿಕೆ, ಡಿಬೇಟ್ ಮುಂತಾದವುಗಳಲ್ಲಿ ಬಹುಮಾನಗಳು ಬರುತಿದ್ದವು. ಆಟೋಟದಲ್ಲಿ ಮಾತ್ರ ನಾನು ಹಿಂದೆಯೆ. ಪದವಿ ಕಾಲೇಜು ಆಚಾರ್ಯ ಪಾಠಶಾಲೆ ಬೆಂಗಳೂರಿನಲ್ಲಾಯಿತು. ಅಂದಿನಿಂದ ನನ್ನ ವಾಸ ಸ್ಥಳ ಬೆಂಗಳೂರಾಯಿತು. ಬಿ.ಎ ಪದವಿ ಮುಗಿದ ನಂತರ ವೈವಾಹಿಕ ಜೀವನ. ಜೊತೆಗೆ ಸ್ವಂತ ಉದ್ಯೋಗ. ನನಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬಳು ಮೊಮ್ಮಗಳು ಇದ್ದಾಳೆ. ಈ ಕಾಲಘಟ್ಟದಲ್ಲಿ "ಕೊಡಗು ಸಂಗಾತಿ" ಎಂಬ ಪಾಕ್ಷಿಕ ಪತ್ರಿಕೆಯಲ್ಲಿ ನನ್ನ ಬರವಣಿಗೆ ಕಥೆ, ಕವನ, ಲೇಖನಗಳು ಹಾಗು ಮಕ್ಕಳ ಅಂಕಣ ಬರೆಹದಲ್ಲಿ ಕಥೆ ಮತ್ತು ಪ್ರಾಚೀನ ಋಷಿ ಮುನಿಗಳ ಸಾಧನೆಗಳ ಬಗ್ಗೆ, ನಮ್ಮ ಸನಾತನ ಧರ್ಮ, ಸಂಸ್ಕೃತಿ ಹಾಗು ಋಷಿ ಮುನಿಗಳಿಂದ ವಿಜ್ಞಾನ ಗಣಿತಕ್ಕೆ ಸಿಕ್ಕ ಕೊಡುಗೆಗಳ ಬಗ್ಗೆ ಅರಿವು ಮೂಡಿಸುತಿದ್ದೆ ಎಂದಿದ್ದಾರೆ.
©2024 Book Brahma Private Limited.