ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿ ಗೋದಾವರಿ ಪರುಳೇಕರ್ ಅವರ ʻಜುವಾ ಮನುಸ್ ಜಗಾ ಹೋಟೊʼ ಅನ್ನುವ ಮರಾಠಿ ಕೃತಿಯ ಕನ್ನಡ ಅನುವಾದ ʻಮಾನವ ಎಚ್ಚೆತ್ತಾಗʼ. ಸರಸ್ವತಿ ರಿಸಬುಡ್ ಅವರು ರೂಪಾಂತರಿಸಿದ್ದಾರೆ. 1970ರಲ್ಲಿ ಬಿಡುಗಡೆಯಾದ ಮೂಲ ಕೃತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದೆ. ಪ್ರಸ್ತುತ ಪುಸ್ತಕ ಏಳು ದಶಕಗಳ ಹಿಂದೆ ಜೀತ ಪದ್ಧತಿಯನ್ನು ನಿರ್ಮೂಲನೆ ಗೊಳಿಸುವಲ್ಲಿ ಯಶಸ್ವಿಯಾದ ವಾರಲೀ ಆದಿವಾಸಿ ಜನಗಳ ಹೋರಾಟದ ಕಥೆಯನ್ನು ಹೇಳುತ್ತದೆ. ನೂರಾರು ವರ್ಷಗಳಿಂದ ಜಮೀನ್ದಾರ್, ಭೂಮಾಲೀಕರ ಕ್ರೌರ್ಯವನ್ನು ಬಾಯಿ ಮುಚ್ಚಿ ಒಪ್ಪಿಕೊಂಡು ಶೋಚನೀಯ ಹಾಗೂ ಅಸಹ್ಯಕರ ಬದುಕು ನಡೆಸುತ್ತಿದ್ದ ಆಗಿನ ಮುಂಬೈ ಪ್ರಾಂತದ ಠಾಣೆ ಜಿಲ್ಲೆಯ ವಾರಲೀ ಆದಿವಾಸಿ ಸಮುದಾಯ ಎಚ್ಚರಗೊಳ್ಳುವವರೆಗಿನ ಹೋರಾಟದ ಚರಿತ್ರೆಯ ಕುರಿತು ಗೋದಾವರಿ ಪರುಳೇಕರ್ ವಿವರಿಸುತ್ತಾರೆ. ಹೀಗೆ ತಮಗೆ ಹಾಕಿದ ಗಡಿಯನ್ನು ಕಿತ್ತೆಸೆಯಬಲ್ಲ, ಜೀವ ಹಿಂಡುವ ವ್ಯವಸ್ಥೆಯನ್ನು ಬದಲಿಸಬಲ್ಲ, ಗುಲಾಮಗಿರಿಗೆ ಕೊನೆ ಹಾಡಬೇಕೆಂದು ಹಾತೊರೆಯುತ್ತಿದ್ದ ಈ ಬಡಪಾಯಿಗಳ ನೋವಿನ, ಕಿಚ್ಚಿನ ಕತೆ ಚರಿತ್ರೆಯುದ್ದಕ್ಕೂ ಮೈಲುಗಲ್ಲಾಗಿ ನಿಂತಿದೆ. ಮೂಲ ಕೃತಿ ಇಂಗ್ಲೀಷ್, ಜಪಾನೀಸ್ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ.
©2025 Book Brahma Private Limited.