ಲೇಖಕ ಹಾಗೂ ವ್ಯಂಗ್ಯಚಿತ್ರ ಕಲಾವಿದ ಜಿ.ವಿ. ಗಣೇಶಯ್ಯ ಅವರ ಕೃತಿ-ಪ್ರಾಣಿಲೋಕದ ವಿಸ್ಮಯಗಳು. ಎಷ್ಟೊಂದು ವಿಧದ ಪ್ರಾಣಿ-ಪಕ್ಷಿ, ಕ್ರಿಮಿ-ಕೀಟಗಳಿಗೆ ಈ ಭೂಮಿಯು ಆಶ್ರಯ ನೀಡಿದೆ. ನಮ್ಮ ಕಣ್ಣಿಗೆ ಕಾಣಿಸದ ಇನ್ನೂ ಎಷ್ಟೋ ಸೂಕ್ಷ್ಮಜೀವಿಗಳಿಗೆ ಆಶ್ರಯತಾಣವಾಗಿದೆ. ಮೊದಲು ಏಕಕೋಶ ಜೀವಿಗಳಿದ್ದವು. ಅಮೀಬ ಅಥವಾ ಪ್ರೊಟೊಜೋವ. ಇದು ಆದಿಜೀವಿ ಎಂದು ಕರೆಯುತ್ತಾರೆ. ಅಮೀಬಕ್ಕೆ ಗ್ರೀಕ್ ಭಾಷೆಯಲ್ಲಿ ಬದಲಾಗು ಎಂಬರ್ಥವೂ ಇದೆ. ಮುಂದೆ ಮೀನು ಹಾಗೂ ಇತರ ಪ್ರಾಣಿಗಳು ಕಾಲಾಂತರದಲ್ಲಿ ಕಾಣಿಸಿಕೊಂಡವು. ಇಂದು ಭೂಮಂಡಲಕ್ಕೆ ತಾನೇ ಅಧಿಪತಿಯೆಂದು ಬೀಗುತ್ತಿರುವ ಮನುಷ್ಯ ಪ್ರಾಣಿಲೋಕಕ್ಕೆ ನಂತರದ ಸೇರ್ಪಡೆ. ಮಿದುಳೊಂದು ಹೆಚ್ಚಿನ ಬೆಳವಣಿಗೆ ಹೊಂದಿ ಬುದ್ಧಿವಂತ ಎನಿಸಿಕೊಂಡದ್ದು ಬಿಟ್ಟರೆ ಭೂಮಿ ಮತ್ತು ಪ್ರಕೃತಿಯ ದೃಷ್ಟಿಯಿಂದ ಮನುಷ್ಯನ ಹೆಚ್ಚುಗಾರಿಗೆ ಏನೂ ಇಲ್ಲ. ಭೂಮಿಯ ಮೇಲೆ ಬದುಕಲು ಎಲ್ಲ ಜೀವಿಗಳಿಗೂ ಹಕ್ಕಿದೆ. ಇಂದಿನ ಅಸಂಖ್ಯ ಜೀವಿಗಳು ತಮ್ಮ ಹಿಂದೆ ಸುದೀರ್ಘ ಚರಿತ್ರೆಯನ್ನೇ ಹೊಂದಿವೆ. ಇಂದಿನ ರೂಪ ಅವುಗಳಿಗೆ ವಿವಿಧ ಹಂತಗಳನ್ನು ದಾಟಿ ಬಂದ ನಂತರವೇ ದಕ್ಕಿದೆ. ಅದೂ ಮಿಲಿಯಾಂತರ ವರ್ಷಗಳಷ್ಟು ಸುದೀರ್ಘ! ಬದಲಾದ ಸನ್ನಿವೇಶಗಳಲ್ಲಿ ಪಲ್ಲಟಗೊಂಡ ಹವಾಮಾನಗಳಲ್ಲಿ ಪರಿಸರಕ್ಕೆ ತಕ್ಕಂತೆ ಬದುಕಲು ಕೆಲವು ಮಾರ್ಪಾಟುಗಳನ್ನು ಪ್ರತಿಯೊಂದು ಜೀವಿಯೂ ಮಾಡಿಕೊಳ್ಳುತ್ತದೆ. ಪ್ರಾಣಿಲೋಕದ ವಿಸ್ಮಯಗಳನ್ನು ಅರಿಯಲು ಹೋದಷ್ಟೂ ಅವು ನಿಗೂಢವಾಗಿ ನಮಗೆ ಸವಾಲೆಸೆಯುತ್ತಲೇ ಇವೆ. ಇಂತಹ ವಿಸ್ನೀಮಯಕಾರಿ ಸಂಗತಿಗಳ ಕುರಿತ ತುಂಬಾ ವಿವರವಾದ ಮಾಹಿತಿಯನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.