ಲೇಖಕಿ ಡಾ. ಅನುರಾಧಾ ಕಾಮತ್ ಅವರ ಕೃತಿ-ಋತು ದರ್ಶನ ಭಾಗ-1. ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಹೀಗೆ ಒಟ್ಟು 6 ಋತುಗಳು. ಈ ಕೃತಿಯಲ್ಲಿ ವಸಂತ, ಗ್ರೀಷ್ಮ ಹಾಗೂ ವರ್ಷ ಋತುಗಳ ಬಗ್ಗೆ ಚರ್ಚಿಸಲಾಗಿದೆ. ಮನುಷ್ಯ ಮಾತ್ರವಲ್ಲ; ಸಕಲ ಜೀವರಾಶಿಗಳಿಗೂ ಅನುಕೂಲಕರವಾಗುವಂತೆ ಇವುಗಳ ಸ್ವಭಾವವಿದೆ. ಈ ಎಲ್ಲ ಋತುಗಳ ಪ್ರಧಾನ ಗುಣಲಕ್ಷಣಗಳನ್ನು, ವೈಶಿಷ್ಟ್ಯಗಳನ್ನು ಗುರುತಿಸಿ, ಭಾರತೀಯ ಜೀವನ ಶೈಲಿಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದು ಈ ಕೃತಿಯ ವಿಶೇಷತೆ. ಅಸ್ವಾಸ್ಥ್ಯವನ್ನು ನಿವಾರಿಸಿ, ಆರೋಗ್ಯ ಪೋಷಕ ಗುಣವನ್ನು ವಿಶ್ಲೇಷಿಸುತ್ತದೆ. ಪ್ರತಿ ಋತುವಿಗೂ ವಿಶಿಷ್ಟ ಗುಣವಿದೆ. ಇದು ನಿಸರ್ಗದ ಲೀಲೆಯ ಆಕರ್ಷಣೀಯ ರೀತಿಯೂ ಹೌದು. ಈ ಎಲ್ಲ ಋತುಗಳ ರಸಾನುಭವವನ್ನು ಅನುಭವಿಸುವ ಬಗೆಯನ್ನು ತಿಳಿಸಲೂ ಈ ಕೃತಿ ಪ್ರಯತ್ನಿಸುತ್ತದೆ. ಕೃತಿಯ ಮಹತ್ವವನ್ನು ಬೆನ್ನುಡಿಯಲ್ಲಿ ಹೀಗೆ ಕಾಣಿಸಲಾಗಿದೆ; ‘ವರ್ಷ ಋತುವಿನ ನೀರಾಟದ ಮೋಜು ನಿಲುಗಡೆಗೊಳ್ಳುತ್ತಾ ಬರುತ್ತಿದೆ. ಚಳಿ ಎಂಬ ಕೋಳಿ ತನ್ನ ಮೊದಲ ಕೂಗನ್ನು ಮೊಳಗಿಸುವ ಹೊತ್ತು ಬಂದಿದೆ. ‘ಪ್ರಕೃತಿ’ ಸಿಂಗರಿಸಿದ ವಧುವಿನಂತೆ ತೋರುತ್ತಿದೆ. ಇದು ಶರದೃತುವಿನ ಪುನರುಜ್ಜೀವನ ಗೀತೆಯ ಸಮಯ. ಭೂದೇವಿಯು ಸ್ತ್ರೀಶಕ್ತಿಯ ವಿವಿಧ ರೂಪಗಳಲ್ಲಿ ಪ್ರಕಟವಾಗುವ ಕಾಲ. ಇಲ್ಲಿ, ಫಲವತ್ತತೆಯು ಪುಳಕವೂ, ವಿಕಸನದ ಸಂಕಲ್ಪವೂ ಯುಗಳಗೀತೆ ಹಾಡುತ್ತಿವೆ. ಒಗ್ಗೂಡಿ ದುಡಿದು ಕಲೆ ಹಾಕಿದ್ದನ್ನು ಹಂಚಿ ಉಣಿರೆಂದು ಪ್ರಕೃತಿ ಮಣ್ಣು ಮಕ್ಕಳಿಗೆ ಕರೆ ನೀಡುತ್ತಿರುವ ಈ ಋತುವಿನಲ್ಲಿ ಬರುವ ಅಶ್ವಯುಜ-ಕಾರ್ತಿಕ ಮಾಸಗಳ ಮಹತ್ವವೇನು? ಆಹಾರ-ವಿಹಾರಗಳ ಕ್ರಮಗಳೇನು? ಈ ಋತುವಿನಲ್ಲಿ ಪಾಲಿಸಬೇಕಾದ ಸ್ವಾಸ್ಥ್ಯ ಸಂಹಿತೆಗಳೇನು? ಆರೋಗ್ಯ ಕಾಪಿಡಲು ನೆರವಾಗುವ ಪಾಕ ಪ್ರಕಾರಗಳು ಹೇಗಿವೆ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ’ ಹೀಗೆ ಕೃತಿಯ ಸ್ವರೂಪವನ್ನು ವಿವರಿಸಲಾಗಿದೆ.
©2024 Book Brahma Private Limited.