ಲೇಖಕ, ವ್ಯಂಗ್ಯಚಿತ್ರಕಾರ ಜಿ.ವಿ. ಗಣೇಶಯ್ಯ ಸದ್ಯ ಮೈಸೂರು ನಿವಾಸಿಗಳು. ಆದರೆ, ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸಮೀಪದ ಅಗಳಗಂಡಿ ಗ್ರಾಮದವರು. (ಜನನ: 1947ರಲ್ಲಿ) ಹುಟ್ಟೂರಿನಲ್ಲಿ ಹತ್ತನೇ ತರಗತಿ ಮುಗಿಸಿದ ನಂತರ ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಚಿತ್ರಕಲಾ ವ್ಯಾಸಂಗ ಹಾಗೂ ಸರ್ಕಾರಿ ಡಿಪ್ಲೊಮಾ ಪಡೆದರು. ಫೋಟೋಗ್ರಫಿ, ವ್ಯಂಗ್ಯ ಚಿತ್ರ ಕಲೆ,ಕರ್ನಾಟಕ ಸಂಗೀತ ಕಲಿತರು. ಮೈಸೂರಿನ ‘ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿ, 2007 ರಲ್ಲಿ ನಿವೃತ್ತರಾದರು. ವೈಚಾರಿಕ, ವೈಜ್ಞಾನಿಕ, ಆಧ್ಯಾತ್ಮ, ಯೋಗ,ಸಂಗೀತ, ಭಾಷೆ, ಲಿಪಿ,ಚಿತ್ರಕಲೆ,ವ್ಯಕ್ತಿ ಚಿತ್ರ,ಪ್ರವಾಸ,ಚಾರಣ,ಯಕ್ಷಗಾನ- ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿ 300ಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದಾರೆ. ಇವರು ಉತ್ತಮ ಛಾಯಾಗ್ರಾಹಕರೂ ಹೌದು.
ಕೃತಿಗಳು: ‘ಶಿಲ್ಪಿ ಸಿಂಗಣ್ಣಾಚಾರ್ಯ’, ವ್ಯಂಗ್ಯಚಿತ್ರ ರಚಿಸುವುದು ಹೇಗೆ’,ಬೈಸಿಕಲ್ ಕಥೆ,ರಾಕೆಟ್,ವಿಮಾನ,ಕಂಪ್ಯೂಟರ್ ಲೋಕ,ಇಲೆಕ್ಟ್ರಾನಿಕ್ಸ್, ವಿದ್ಯುತ್ ಶಕ್ತಿ,ಚಿಪ್-ಏನಿದರ ಒಳಗುಟ್ಟು,ಗಾಳಿ,ಸರಳ ಯಂತ್ರಗಳು,ಶ್ರವಣ ದೋಷ ಮತ್ತು ಪರಿಹಾರ,ವಿಚಿತ್ರ ಸಸ್ಯಗಳು-ಕುತೂಹಲಕರ ಕತೆಗಳು,ಕಿವಿ ಕೇಳಿಸದೇ? ಕಳವಳ ಬೇಡ,ಪ್ರಾಣಿ ಲೋಕದ ವಿಸ್ಮಯಗಳು, ಬಿಸಿಲು ಒಲೆ., ಕಾಲಜ್ಞಾನ (ಸಂಪಾದಿತ ಕೃತಿ), ಶೃಂಗೇರಿ ಉಪಚಾರ (ಲಘು ಹಾಸ್ಯ ಬರಹಗಳ ಸಂಕಲನ), ನಗದಿದ್ದರೆ ನಷ್ಟ ಯಾರಿಗೆ(ನಗೆ ಲೇಖನಗಳ ಸಂಗ್ರಹ)
ಪ್ರಶಸ್ತಿ-ಪುರಸ್ಕಾರಗಳು: ಇವರ ಕಲಾಸಾಧನೆ ಪರಿಗಣಿಸಿ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘವು ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬಹುಮಾನ, ಮೈಸೂರು ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಸನ್ಮಾನ, ಸಾಹಿತ್ಯ ಮತ್ತು ವ್ಯಂಗ್ಯಚಿತ್ರ ಕ್ಷೇತ್ರದಲ್ಲಿಯ ಸಾಧನೆಗಾಗಿ ‘ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ’, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಕನ್ನಡ ಸೇವಾರತ್ನ’ ಪ್ರಶಸ್ತಿಗಳು ಪ್ರಮುಖವಾಗಿವೆ.