ಲೇಖಕ ಚಂದ್ರಗೌಡ ಕುಲಕರ್ಣಿ ಅವರು ಮಕ್ಕಳಿಗಾಗಿ ರಚಿಸಿದ ಕೃತಿ-ಒಗಟು ಬಿಡಿಸೋ ಜಾಣ. ಬಹಳ ಕುತೂಹಲಕಾರಿಯಾದ ಒಗಟು ಪದ್ಯಗಳಿವೆ. ಶಾಬ್ದಿಕ ಮಾಯಾಜಾಲದ ವಿನೂತನ ರಚನೆಗಳು. ಮೂರಕ್ಷರದ ಒಂದು ಶಬ್ದ, ಆ ಶಬ್ದದ ಮೊದಲೆರಡು ಅಕ್ಷರಕೆ ಈ ಅರ್ಥ, ಕೊನೆಯೆರಡು ಅಕ್ಷರಕೆ ಈ ಅರ್ಥ ಹಾಗೂ ಮೊದಲ- ಕೊನೆ ಅಕ್ಷರಕೆ ಈ ಅರ್ಥ...ಎಂದು ಪದ್ಯ ಒಗಟಿನ ಸುಳುಹು ಕೊಡುತ್ತದೆ..ಯಾವುದೆ ಒಂದು ಶಬ್ದ ಹೊಳೆದರೆ ಅದನ್ನು ಮೂರು ರೀತಿಯಲ್ಲಿ ಪರೀಕ್ಷಿಸಿ ಸರಿ ಎಂದು ಗುರುತಿಸಬೇಕು. ಸರಳ ಪದಗಳ ಈ ಆಟ ಮಗುವಿನ ಶಬ್ದ ವಿಕಸನಕ್ಕೆ,ಭಾಷಾ ಕುಶಲತೆಗೆ, ಶೋಧ ಪ್ರವೃತ್ತಿಗೆ ಪ್ರೇರಣೆ ನೀಡುತ್ತದೆ. ಮಗುವಿನ ಊಹೆ, ಕಲ್ಪನೆ, ಸಂಭಾವ್ಯಗಳು ಸತ್ಯವಾದಾಗ ಅವರ್ಣನೀಯ ಆನಂದ ನೀಡುತ್ತದೆ.. ಇಂತಹ ಒಟ್ಟು 24 ಒಗಟು ಪದ್ಯಗಳು ಇಲ್ಲಿವೆ..
ಈ ಪದ್ಯಗಳು ತರಂಗ ವಾರ ಪತ್ರಿಕೆಯಲ್ಲಿ ವಾರವಾರವೂ ಪ್ರಕಟವಾದವು. ಮುಂದಿನ ವಾರದ ಉತ್ತರಕ್ಕಾಗಿ ಕಾಯುವಂತೆ ಮಾಡಿದ್ದವು. ಆಬಾಲವೃದ್ಧರು ಈ ಶಬ್ದ ಜಗತ್ತಿನ ವಿಸ್ಮಯದ ಪಲಕುಗಳನ್ನು ಸವಿದಿದ್ದಾರೆ. ಒಂದು ಒಗಟಿಗೆ ಹತ್ತಿಪ್ಪತ್ತು ಪದಗಳನ್ನು ತಕ್ಕಡಿಯಲ್ಲಿಟ್ಟು ತೂಗಹಚ್ಚುವ ಈ ಆಟ ಮಕ್ಕಳ ಮನಸ್ಸಿಗೆ,ಜಾಣ್ಮೆಗೆ ಒರೆಗಲ್ಲಾಗಿದೆ..
ನಮ್ಮ ಪರಂಪರೆಯಲ್ಲಿ ಒಗಟುಗಳಿವೆ. ರೂಪಕ ಉಪಮೆಗಳ ಮೂಲಕ ಹೊಸ ಲೋಕವನ್ನೇ ಸೃಜಿಸುತ್ತವೆ. ಆ ಜನಪದ ಒಗಟುಗಳ ತಂತ್ರವನ್ನೇ ಈ ಶಾಬ್ದಿಕ ಒಗಟುಗಳಿಗೆ ಬಳಸಿ ಹೊಸ ಸೃಷ್ಟಿಯನ್ನು ಮಾಡಲಾಗಿದೆ. ಈ ರಚನೆಗಳು ಲಯಬದ್ಧ ಪದ್ಯಗಳಾಗಿರುವುದರಿಂದ ಮಕ್ಕಳು ಆಡುತ್ತ, ಹಾಡುತ್ತ ಒಗಟು ಬಿಡಿಸಲು ಯತ್ನಿಸುವುದು ಈ ಕೃತಿಯ ಹೆಚ್ಚುಗಾರಿಕೆ. .ಗ್ರಂಥಾಲಯದ ಕಪ್ಪು ಹಲಗೆ ಯೋಜನೆಯಡಿ..ರಾಜ್ಯದ ಎಲ್ಲ ಸರಕಾರಿ ಪ್ರಾಥಮಿಕ ಶಾಲೆಗಳಿಗೂ ತಲುಪಿದ
ಈ ಕೃತಿಯು 8 ಮುದ್ರಣಗಳನ್ನು ಕಂಡಿದೆ.
©2024 Book Brahma Private Limited.