ಮಕ್ಕಳ ಜಾನಪದ ಆಟಗಳು- ಲಕ್ಷ್ಮಣ ಎಸ್. ಚೌರಿ ಅವರು ಮಕ್ಕಳ ಆಟಗಳನ್ನು ಪರಿಚಯಿಸುವ ಕೃತಿಯನ್ನು ರಚಿಸಿದ್ದಾರೆ. ಮೊಬೈಲ್ ಯುಗದಲ್ಲಿ ಮಕ್ಕಳಿಂದ ದೂರವೇ ಉಳಿದು ಕಳೆದು ಹೋಗುತ್ತಿರುವ ನಮ್ಮ ನಡುವಿನ ಮಕ್ಕಳ ಜಾನಪದ ಆಟಗಳನ್ನು ಪರಿಚಯಿಸುವ ಕೃತಿ ಇದು. ಆಟಗಳ ಬಗ್ಗೆ ಸಂಕ್ಷಿಪ್ತ ವಿವರ ಹಾಗೂ ಆಟಗಳನ್ನು ಹೇಗೆ ಆಡಬೇಕು ಎನ್ನುವುದನ್ನು ಪರಿಚಯಿಸುವ ಪುಟ್ಟ ಲೇಖನಗಳಿವೆ. ಪ್ರತೀ ಆಟಗಳನ್ನು ಮಕ್ಕಳಿಗೆ ಪರಿಚಯಿಸಲು ಅನುಕೂಲವಾಗುವಂತೆ ಕು.ಮೋನಿಕಾ ಹಲವಾಯಿ ಬರೆದ ಚಿತ್ರಗಳು ಪುಸ್ತಕದ ಚೆಲುವನ್ನು ಹೆಚ್ಚಿಸಿದೆ ಹಾಗೂ ಮಕ್ಕಳನ್ನೂ ಸೆಳೆಯುವಂತಿದೆ.
ಮುನ್ನುಡಿ
ಸದೃಢ ದೇಹದಲ್ಲಿ ಸದೃಢ ಮನಸ್ಸು ನಿರ್ಮಾಣವಾಗುತ್ತದೆ ಎಂಬ ಪ್ಲೇಟೋನ ಮಾತು ದೈಹಿಕ ಸದೃಢತೆಯ ಮಹತ್ವವನ್ನು ತಿಳಿಸುತ್ತದೆ. ದೈಹಿಕ ಸಾಮರ್ಥ್ಯ ಹೊಂದಲು ಆಟಗಳು ತುಂಬಾ ಅಗತ್ಯ. ನಮ್ಮ ಜನಪದರು ಕೆಲಸದ ನಡುವೆ ಮನರಂಜನೆ ಪಡೆಯಲು ಆಟಗಳನ್ನು ಆಡಲು ಆರಂಭಿಸಿದರು. ಎಳೆವಯಸ್ಸಿನಿಂದ ಇಳಿವಯಸ್ಸಿನವರೆಗೆ ಹಲವು ಪ್ರಕಾರದ ಆಟಗಳನ್ನು ಆಡುತ್ತಿದ್ದರು. ಇಂದು ತಾಂತ್ರಿಕತೆಯ ಪ್ರಭಾವದಿಂದ ಹೊಸ ಬಗೆಯ ಆಟಗಳನ್ನು ಆಡುತ್ತಿದ್ದರೂ ಕೂಡಾ ನಮ್ಮ ಜನಪದ ಆಟಗಳು ಇಂದಿಗೂ ವಿಶಿಷ್ಟವಾಗಿವೆ. ಜನಪದರು ಸಾಮುದಾಯಿಕ ನೆಲೆಯಲ್ಲಿ ಸ್ನೇಹ ಸಾಮರಸ್ಯದ ವಾತಾವರಣವನ್ನು ಹೊಂದುವುದಲ್ಲದೆ ವೈಯಕ್ತಿಕ ನೆಲೆಯಲ್ಲಿ ವ್ಯಕ್ತಿಯ ದೈಹಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಭಾಷಿಕ ಸಾಮರ್ಥ್ಯವನ್ನು ಹೆಚ್ಚಿಸುವ, ಚುರುಕುಗೊಳಿಸುವ ಕೆಲಸವನ್ನು ಜಾನಪದ ಆಟಗಳು ಮಾಡುತ್ತವೆ. ಜಾನಪದ ಆಟಗಳಲ್ಲಿ ನಿರ್ದಿಷ್ಟವಾಗಿ ಮಕ್ಕಳ ಆಟಗಳನ್ನು ಕುರಿತು ಡಾ. ಲಕ್ಷ್ಮಣ ಎಸ್.ಚೌರಿ ಅವರು ಮಕ್ಕಳ ಜಾನಪದ ಆಟಗಳು’ ಎಂಬ ಕೃತಿ ರಚಿಸಿದ್ದಾರೆ.
ಶಿಕ್ಷಕ ವೃತ್ತಿಯಲ್ಲಿದ್ದು ಮಕ್ಕಳಿಗೆ ಔಪಚಾರಿಕ ಶಿಕ್ಷಣ ಕೊಡುತ್ತಿರುವ ಚೌರಿಯವರು ಜಾನಪದ ಆಟಗಳನ್ನು ಪರಿಚಯಿಸುವುದರ ಮೂಲಕ ಅನೌಪಚಾರಿಕ ಶಿಕ್ಷಣದ ಅರಿವು ಮೂಡಿಸಿದ್ದಾರೆ. ಇಬ್ಬರು ಮಕ್ಕಳಿಂದ ಹಿಡಿದು ಹತ್ತು ಮಕ್ಕಳು ಸೇರಿ ಆಡಬಹುದಾದ ಆಟಗಳು ಈ ಪುಸ್ತಕದಲ್ಲಿವೆ. ಕತ್ತೆಗೆ ಬಾಲ ಹಚ್ಚುವ ಆಟ’ದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರವನ್ನು ಪೂರ್ಣಗೊಳಿಸುವಲ್ಲಿ ಮಗುವಿನ ಬುದ್ಧಿ ಚುರುಕುಗೊಳಿಸಿದರೆ ಮಡಿಕೆ ಒಡೆಯುವ ಆಟದಲ್ಲಿ ಒಬ್ಬರಿಗೊಬ್ಬರಲ್ಲಿ ಸಹಕಾರ, ಸಾಮರಸ್ಯವಿದ್ದಾಗ ಯಶಸ್ಸು ಗಳಿಸಲು ಸಾಧ್ಯ ಎಂಬುದು ಗೊತ್ತಾಗುತ್ತದೆ. ಭಾಯಿ ತುಮ್ ಕಹಾಂ ಹೈ? ಆಟ’ದಲ್ಲಿ ಸುತ್ತಲೂ ಕುಳಿತವರು ಧ್ವನಿಯ ಮೇಲೆ ಹುಡುಕಾಟ ಮಾಡುವಲ್ಲಿ ಗ್ರಹಣ ಶಕ್ತಿ ಹೆಚ್ಚುತ್ತದೆ. ಕುರಿ ಮರಿ ಆಟ’, ಹಣಗಿ ಲಟ ಲಟ ಮುರಿ ಆಟ’ದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಎತ್ತುವಲ್ಲಿ ದೇಹಕ್ಕೆ ವ್ಯಾಯಾಮವಾದಂತಾಗಿ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಲಗೋರಿ ಆಟ’, ಒಟ್ಟೆ ಆಟ’ಗಳಲ್ಲಿ ಗುರಿಯಿಟ್ಟು ಕಣ್ಣಳತೆಯ ದೂರದಲ್ಲಿರುವ ಕಲ್ಲಿಗೆ ಹೊಡೆಯುವುದು ಮಗುವಿನ ಏಕಾಗ್ರತೆ ಹೆಚ್ಚಿಸುತ್ತದೆ. ಕೊರಕೊಂಚಿ ಆಟ’, ಹತ್ತಂಬಳ್ಳಿ ಆಟ’ಗಳು ಸಮೂಹ ಸಂಖ್ಯೆಯಲ್ಲಿ ಆಡುವಾಗ ಜಗಳವಾಡದೆ ಸಾಮರಸ್ಯಪೂರ್ಣವಾಗಿ ಆಡುವುದನ್ನು ಕಲಿಸುತ್ತವೆ. ಅಲ್ಲದೇ ಮಕ್ಕಳಲ್ಲಿ ಆರೋಗ್ಯಪೂರ್ಣ ಸ್ಪರ್ಧೆಯನ್ನು ಏರ್ಪಡಿಸಲು ಕಾರಣವಾಗುತ್ತದೆ. ಮಕ್ಕಳಲ್ಲಿ ಹೆಣ್ಣು - ಗಂಡು ಎಂಬ ಭೇದಭಾವವಿಲ್ಲದೆ, ಜಗಳವಿಲ್ಲದೆ ಆಡಲು ಈ ಆಟಗಳು ಪ್ರೇರೇಪಿಸುತ್ತವೆ. ಆಧುನಿಕ ಜೀವನ ಶೈಲಿಯಲ್ಲಿ ಹೊಸ ಶಿಕ್ಷಣದ ಕ್ರಮಗಳು ಇಂದಿನ ಮಕ್ಕಳ ವರ್ತನೆಗಳಲ್ಲಿ ಅನಿವಾರ್ಯ ಪರಿವರ್ತನೆಗಳನ್ನು ಉಂಟುಮಾಡುತ್ತದೆ. ಬದಲಾದ ಸನ್ನಿವೇಶದಲ್ಲಿ ಮಕ್ಕಳು ಹೋಮ್‌ವರ್ಕ್ ಒತ್ತಡಕ್ಕೆ ಸಿಲುಕಿ ನಿದ್ದೆಯಲ್ಲಿಯೂ ಅದೇ ವಿಷಯಕ್ಕೆ ಸಂಬಂಧಿಸಿ ಕನವರಿಸುವಂತಾಗಿದೆ. ಮಕ್ಕಳು ತಮ್ಮ ನೆರೆಹೊರೆಯ ಮಕ್ಕಳೊಂದಿಗೆ, ಓಣಿಯ ಮಕ್ಕಳೊಂದಿಗೆ ಆಟವಾಡಲು ಸಮಯ ಸಿಗದಂತಾಗಿದೆ. ಇಂದಿನ ಮಕ್ಕಳಿಗೆ ನಮ್ಮ ಪರಂಪರೆಯನ್ನು ಪರಿಚಯಿಸುವಲ್ಲಿ ಆಟಗಳು ಒಂದು ಬಹುಮುಖ್ಯ ಭಾಗವಾಗಿದೆ.
ಪ್ರಸ್ತುತದಲ್ಲಿ ಸರಕಾರಿ ಶಿಕ್ಷಕ ವೃತ್ತಿಯಲ್ಲಿರುವ ಡಾ.ಲಕ್ಷ್ಮಣ ಚೌರಿ ಅವರು ಕವಿ, ಕಥೆಗಾರರು ಆಗಿದ್ದು, ಉತ್ತಮ ಓದುಗರೂ ಕೂಡ ಆಗಿದ್ದು; ಗೆಳೆಯರ ಬಳಗ, ಯುವವಾಣಿ, ಗಿಳಿವಿಂಡುದಂತಹ ಸಾಹಿತ್ಯ ಬಳಗದಲ್ಲಿ ಕ್ರಿಯಾಶೀಲರಾಗಿ ಸಾಹಿತ್ಯದ ಕೆಲಸ ಮಾಡಿದವರು. ಕನ್ನಡದ ಬಗ್ಗೆ ಅತಿಯಾದ ಪ್ರೀತಿ ಕಾಳಜಿಗಳಿರುವ ಚೌರಿಯವರು ಒತ್ತಕ್ಷರಗಳಿಲ್ಲದ ಕಥೆಗಳನ್ನು ಬರೆದು ಸಂಕಲನ ಪ್ರಕಟ ಮಾಡಿದವರು. ಪ್ರಶಸ್ತಿ-ಪುರಸ್ಕಾರಗಳನ್ನು ಅಪೇಕ್ಷಿಸದ ಚೌರಿಯವರ ಹೆಸರು ವಿಶ್ವದಾಖಲೆ ಪಟ್ಟಿಯಲ್ಲಿ ಸೇರಿದ್ದು ನಮ್ಮ ಕನ್ನಡ ಸಾಹಿತ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ಮಕ್ಕಳ ಜಾನಪದ ಆಟಗಳು’ ಕೃತಿ ಇಂದಿನ ಸಂದರ್ಭಕ್ಕೆ ತುಂಬಾ ಪ್ರಸ್ತುತಗೊಳ್ಳುತ್ತದೆ. ಶ್ರೀಯುತ ಡಾ.ಲಕ್ಷ್ಮಣ ಚೌರಿಯವರ ಮಕ್ಕಳ ಜಾನಪದ ಆಟಗಳು’ ಕೃತಿ ಮುಂದಿನ ದಿನಮಾನಗಳಲ್ಲಿ ಮಾಹಿತಿಪೂರ್ಣ ಆಕಾರವಾಗಿ ನಿಲ್ಲುತ್ತದೆ. ತಾಂತ್ರಿಕ ಹಾಗೂ ವೈಜ್ಞಾನಿಕ ಯುಗದಲ್ಲಿ ವೇಗವಾಗಿ ಸಾಗುತ್ತಿರುವ ಈ ಹಂತದಲ್ಲಿ ಮಗುವಿನ ಸೂಕ್ಷ್ಮಗ್ರಹಿಕೆ ಸಾಮರ್ಥ್ಯ, ಲಾಜಿಕಲ್ ಥಿಂಕಿಂಗ್ ಸಾಮರ್ಥ್ಯ, ಭಾಷಾ ಕೌಶಲ್ಯ ಹಾಗೂ ಶಬ್ದ ಭಂಡಾರವನ್ನು ಉತ್ತಮಗೊಳಿಸುವಲ್ಲಿ ಈ ಆಟಗಳು ಅಗತ್ಯವಾಗಿವೆ. ಈ ಪುಸ್ತಕ ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಕೃತಿ ಗಾತ್ರದಲ್ಲಿ ಚಿಕ್ಕದಾದರೂ ಕೂಡ ವಿಶೇಷತೆಯಲ್ಲಿ ಹಿರಿಯದಾಗಿದೆ. ಚೌರಿ ಸರ್ ಅವರ ಸಾಹಿತ್ಯ ಪ್ರೀತಿಗೆ ಈ ಕೃತಿ ಸಾಕ್ಷಿಯಾಗಿದೆ.
-ಡಾ. ವೀಣಾ ಕಲ್ಮಠ, ಬಾಗಲಕೋಟೆ
©2024 Book Brahma Private Limited.