ಎಲ್ಲ ರಾಜಕಾರಣಿಗಳೂ ತಮ್ಮನ್ನು ತಾವು ಗಾಂಧೀವಾದಿಗಳು ಎಂದೇ ಕರೆದುಕೊಳ್ಳುತ್ತಾರೆ. ಇವರ ಗದ್ದಲದಲ್ಲಿ ನಮ್ಮ ನಾಡಿನ ಯಾವುದೇ ಮೂಲೆಯಲ್ಲಿ ಗಾಂಧೀಜಿಯ ನಿಜವಾದ ಆದರ್ಶಗಳನ್ನಿಟ್ಟು ಬದುಕುತ್ತಾ ಬಂದಿರುವ, ಗಾಂಧಿಯ ಮೌಲ್ಯಗಳನ್ನು ಸಮಾಜದಲ್ಲಿ ಹರಡುತ್ತಾ ಬಂದಿರುವ ಸರಳ ಜೀವಿಗಳು ಬದಿಗೆ ಸರಿಯುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅನಾಮಧೇಯರಾಗಿ ಬಾಳಿ ಬದುಕಿದ ನಿಜವಾದ ಅರ್ಥದ ಗಾಂಧಿವಾದಿಗಳನ್ನು ಗುರುತಿಸಿ ಅವರ ಬದುಕನ್ನು ಜನರಿಗೆ ಪರಿಚಯಿಸುವ ಉದ್ದೇಶವನ್ನು ಈ ಕೃತಿಯೂ ಹೊಂದಿದೆ. ಸುಬ್ರಹ್ಮಣ್ಯ ಶೆಟ್ಟರು ಗಾಂಧೀಜಿಯವರು ಅಜ್ಜಂಪುರದ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ಕೊಡುವ ಮೊದಲೇ ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿದ್ದರು. ಗಾಂಧೀಜಿಯ ಬಗೆಗಿನ ಗೌರವದಿಂದ ಅವರ ಮೊದಲ ಹೆಸರನ್ನೇ ತಮ್ಮ ಮಗನಿಗೂ ಇಟ್ಟಿದ್ದರು. ಮುಂದೆ ಸ್ವಾತಂತ್ರ ಚಳುಳಿಯಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದು ಕೊಟ್ಟು ಮನೆಗೆ ಹೋಗಿ' ಎಂದು ಬ್ರಿಟಿಷರು ಔದಾರ್ಯ ತೋರಿದಾಗ ಅದನ್ನು ನಿರಾಕರಿಸಿದವರು ಶೆಟ್ಟರು. ಇಂತಹ ಹೊತ್ತಿನಲ್ಲಿ, ಬ್ರಿಟಿಷರ ಜೊತೆಗೆ ರಾಜಿ ಮಾಡಿ ಕ್ಷಮೆಯಾಚನೆ ಮಾಡಿದ ಸಾರ್ವಕರ್ ರಂತಹ ನಾಯಕರು ನೆನಪಾಗುತ್ತಾರೆ. ಶೆಟ್ಟರಂತಹ ಸ್ವಾತಂತ್ರ ಹೋರಾಟಗಾರರ ಮುಂದೆ ಸಾರ್ವಕರಂತವರು ಸಣ್ಣವರಾಗುತ್ತಾರೆ. ವೈಯಕ್ತಿಕವಾಗಿಯೇ ತುಂಬಾ ಉದಾರಿಯಾಗಿರುವ ಶೆಟ್ಟರ ಮೇಲೆ ಗಾಂಧೀಜಿಯ ಪ್ರಭಾವ ತೀವ್ರವಾದ ಮೇಲೆ ಅವರು ಸಾಮಾಜಿಕ ಸುಧಾರಣೆಯಲ್ಲೂ ಭಾಗವಹಿಸಿದರು. ಶೆಟ್ಟರ ಕಾಲಘಟ್ಟದ ಹಲವು ಕುತೂಹಲಕರವಾದ ವಿಷಯಗಳನ್ನು ಅತ್ಯಂತ ಸರಳವಾಗಿ ಬಿ. ಚಂದ್ರೇಗೌಡ ಅವರು ನಿರೂಪಿಸುತ್ತಾ ಹೋಗುತ್ತಾರೆ. ಹಾಗೆಯೇ ನಾಡಿನ ಬೇರೆ ಬೇರೆ ಲೇಖಕರು, ನಾಯಕರು ಶೆಟ್ಟರ ಕುರಿತಂತೆ ಹೊಂದಿದ್ದ ಅಭಿಪ್ರಾಯಗಳನ್ನೂ ಈ ಕೃತಿಯಲ್ಲಿ ದಾಖಲಿಸಿದ್ದಾರೆ
©2024 Book Brahma Private Limited.