ಮಂಗಳೂರಿನವರಾದ ಸುರೇಶ ಭಟ್ ಬಾಕ್ರಬೈಲ್ ಅವರು ಸುರತ್ಕಲ್ ನ ಕೆ.ಆರ್.ಇ.ಸಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದವರು. ಮುಂಬಯಿಯಲ್ಲಿ ವಾಣಿಜ್ಯ ನೌಕೆ, ನೌಕಾ ನಿರ್ಮಾಣ, ಡೀಸಲ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅವರು 2006ರಲ್ಲಿ ನಿವೃತ್ತರಾದರು. ನಿವೃತ್ತರಾದ ನಂತರ ಅವರು ಬರಹ ಹಾಗೂ ಮಾನವ ಹಕ್ಕು, ಕೋಮು ಸೌಹಾರ್ದ ಚಳವಳಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಕಾಲೀನ ವಿಷಯಗಳ ಬಗ್ಗೆ ಬರೆಯುವದರ ಜೊತೆಗೆ ಕೋಮುವಾದದ ವಿರುದ್ಧ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಕೇಸರಿ ಭಯೋತ್ಪಾದನೆ, ಮಂಕು ಬೂ(ಮೋ)ದಿ ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆಯೇ ಕರ್ಕರೆಯನ್ನು ಕೊಂದವರು ಯಾರು?, ಜೈಲಿನ ದಿನಗಳು, ಆರ್.ಎಸ್.ಎಸ್ ಅನ್ನು ಅರಿಯಿರಿ, ಸಾವರ್ಕರ್: ಸತ್ಯ ಎಷ್ಟು, ಮಿಥ್ಯೆ ಎಷ್ಟು, ಸರ್ಕಾರದಿಂದಲೇ ಭಯೋತ್ಪಾದನೆ, ಪ್ರಜಾಪೀಡನೆ, ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು ಎಂಬ ಅನುವಾದ ಕೃತಿ ಪ್ರಕಟಿಸಿದ್ದಾರೆ.