ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು.
1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು.
ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ಪರಿಸ್ಥಿತಿ ವಿರೋಧಿ ಲೇಖಕರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅವರಿಗೆ 1986ರಲ್ಲಿ ಶೂದ್ರದ ಅಂಕಣ ಬರಹದ 'ಕನಸಿಗೊಂದು ಕಣ್ಣು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ. 1995ರಲ್ಲಿ ರಾಷ್ಟ್ರೀಯ ಸಾಮರಸ್ಯ ಪ್ರಶಸ್ತಿ, 2012ರ ಪ್ರೊ. ಕಿ.ರಂ. ನಾಗರಾಜ ಸಾಂಸ್ಕೃತಿಕ ಪ್ರಶಸ್ತಿ, 2013 'ಮುರುಘಶ್ರೀ' ಪ್ರಶಸ್ತಿ, 2013ರ ಕನ್ನಡ ಪುಸ್ತಕ ಪ್ರಾಧಿಕಾರದ ಜಿ.ಪಿ. ರಾಜರತ್ನಂ ಸಾಹಿತ್ಯ ಪ್ರಶಸ್ತಿ, 2014ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿವೆ.
1996-97ರಲ್ಲಿ ಎರಡು ವರ್ಷ ಮಾನವ ಹಕ್ಕುಗಳ ಸಂಘಟಣೆಯಾದ ’ಸಿಟಿಝನ್ ಫಾರ್ ಡೆಮಾಕ್ರಸಿ' ಸಂಸ್ಥೆಯ ಉಪಾಧ್ಯಕ್ಷರಾಗಿ, 1997-98ರಲ್ಲಿ ಎರಡು ವರ್ಷ ಮಾನವ ಹಕ್ಕುಗಳ ಸಂಘಟನೆಯಾದ ’ಪಿ.ಯು. ಸಿ.ಯಲ್'ನ ಕಾರ್ಯದರ್ಶಿಯಾಗಿ, ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, 2004-05ರಲ್ಲಿ ಎರಡು ವರ್ಷ ಕರ್ನಾಟಕ ಗ್ರಂಥಾಲಯ ಇಲಾಖೆ ಪುಸ್ತಕ ಆಯ್ಕೆ ಸಮಿತಿಗೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈವರೆಗೆ ಅವರು 25 ಕೃತಿಗಳನ್ನು ಪ್ರಕಟಿಸಿದ್ದಾರೆ.