ಜಾನಪದ ಭೀಷ್ಮ ಹಾಗೂ, ನಡೆದಾಡುವ ಜಾನಪದ ವಿಶ್ವಕೋಶ ಎಂದೇ ಖ್ಯಾತಿಯ ಡಾ.ಎಲ್.ಆರ್. ಹೆಗಡೆ ಅವರು ಜನಿಸಿದ್ದು1923ರಲ್ಲಿ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಅವರ ಹುಟ್ಟೂರು. ತಂದೆ ರಾಮಕೃಷ್ಣ ಹೆಗಡೆ, ತಾಯಿ ಮಹಾಲಕ್ಷ್ಮಿ. ಹೊಲನಗದ್ದೆಯಲ್ಲಿ ಪ್ರಾಥಮಿಕ ಶಿಕ್ಷಣ, ಗುಡೆ ಅಂಗಡಿಗಳಲ್ಲಿ ಹಾಗೂ ಕುಮಟಾದ ಗಿಬ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಪಡೆದರು. 1946ರಲ್ಲಿ , ಮುಂಬಯಿ ವಿಶ್ವ ವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. 1949ರಲ್ಲಿ ಬಿ.ಟಿ.ಪರೀಕ್ಷೆ ಉತ್ತೀರ್ಣರಾದರು ಹಾಗೂ 1950ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಕುಮಾರವ್ಯಾಸನ ಕಾವ್ಯ ಸೃಷ್ಟಿ’ ವಿಷಯದಲ್ಲಿ ಪ್ರೌಢ ಪ್ರಬಂಧ ರಚಿಸಿ, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ ಪಡೆದರು. ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಾಗೂ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಶಿಕ್ಷಕರಾದರು. 1951ರಲ್ಲಿ ಕುಮಟಾದ ಕೆನರಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ (1978) ನಿವೃತ್ತರಾದರು.
ವಿವಿಧ ಜನಾಂಗಗಳ ಉಪಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ಅನೇಕ ಕೃತಿಗಳನ್ನು ಹೊರತಂದಿದ್ದಾರೆ. 1958ರಲ್ಲಿ ‘ಬಾಳ ದೀಪಾವಳಿ’ ಕವನ ಸಂಕಲನ ಹಾಗೂ 1963ರಲ್ಲಿ ‘ಹಕ್ಕಿನರಸಣ್ಣನ ಕತೆಗಳು’ ಎಂಬ ಕಥಾ ಸಂಕಲನ, ‘ಕಾವ್ಯವ್ಯಾಸಂಗ’ - ವಿಮರ್ಶಾ ಲೇಖನ ಪ್ರಕಟವಾದವು. ‘ಜನ್ನನ ಅಮೃತಮತಿ’ ಎಂಬ ಸಾಹಿತ್ಯ ವಿಮರ್ಶೆ, ‘ರಾಘವಾಂಕನ ವಿಶ್ವಾಮಿತ್ರ’ ಎಂಬ ಕನ್ನಡ ನವ್ಯವಿಮರ್ಶೆಯಾಗಿ ಹೆಸರು ಗಳಿಸಿದೆ. ಮೂಢನಂಬಿಕೆಗಳು, ಜಾನಪದ ಕಥೆಗಳು(1968), ಪುರಾಣ ಜಿಜ್ಞಾಸೆ (1968), ನಮ್ಮ ಜನಪದ ಕಥೆಗಳು(1968), ತಿಮ್ಮಕ್ಕನ ಪದಗಳು(1969), ಸುವ್ವೀ ಸುವ್ವಿ ಸುವ್ವಾಲೆ(1971), ಬೆಳ್ಳಿಯಮ್ಮನ ಹಾಡುಗಳು(1972), ಮಕ್ಕಳಲ್ಲಿ ಮೂಢನಂಬಿಕೆಗಳ ಬೆಳವಣಿಗೆ, ಪರಮೇಶ್ವರಿಯ ಪದಗಳು(1972), ಗುಮ್ಮನ ಪದಗಳು(1973), ಜೈನ ಭಾರತ ಕಥೆಗಳು, ಗೊಂಡರ ಪದಗಳು(1973), ಉತ್ತರ ಕನ್ನಡ ಜನಪದ ಕಥೆಗಳು(1975), ಮಲೆನಾಡಿನ ಸೆರಗಿನ ಕಥೆಗಳು, ಹಾಡುಂಟೇ ನನ್ನ ಮಡಿಲಲ್ಲಿ (1976), ಕರ್ನಾಟಕ ಕರಾವಳಿಯ ಜನಪದ ಗೀತೆಗಳು(1976), ಹಾಲಿನ ತೆನೆ (1977), ಜನಪದ ಜೀವನ ಮತ್ತು ಕಲೆ(1977), ಕರ್ನಾಟಕ ಕರಾವಳಿಯ ಜನಪದ ಕಥೆಗಳು, ಉತ್ತರ ಕನ್ನಡದ ಗೊಂಡರು, ಉತ್ತರ ಕನ್ನಡದ ಸಿದ್ಧಿಯರು, ಜನಪದ ಸಾಹಿತ್ಯ, ಲಂಕಾದಹನ, ಸಿದ್ದಿಯರ ಕಥೆಗಳು(1978), ಗುಮಟೆಯ ಪದಗಳು, ಮುಕ್ರಿ ಮತ್ತು ಹೊಲೆಯರ ಪದಗಳು(1979), ಜನಪದ ಭಾರತ ಕಥೆಗಳು, ಕುಮರಿ ಮಾರಾಟಿಗರ ಕಥೆಗಳು(1981), ಜನಪದ ಸಾಹಿತ್ಯದಲ್ಲಿ ಮದುವೆ, ಬತ್ತಲೇಶ್ವರನ ರಾಮಾಯಣ (1986), ಕೆಲವು ಲಾವಣಿಗಳು(1993) ಇವರ ಹೆಸರಾಂತ ಜಾನಪದ ಕೃತಿಗಳು.ಎಲ್.ಆರ್ ಹೆಗಡೆ ಅವರ ವೈದ್ಯ ಗ್ರಂಥಗಳನ್ನು ನೋಡುವುದಾದರೆ ಅನುಭವ ಚಿಕಿತ್ಸೆ, ಆರೋಗ್ಯ ಧರ್ಮಪಾಲನೆ, ದನಗಳ ವೈದ್ಯ, ರೂಢಿಯ ಚಿಕಿತ್ಸೆ, ಆರೋಗ್ಯವೇ ಭಾಗ್ಯ, ಜನಪದ ವೈದ್ಯ-1981, ನಾಡಮದ್ದು, ಊರೌಷಧಿಗಳ ಚಿಕಿತ್ಸೆ, ಪಶುವೈದ್ಯ ರತ್ನಾಕರ, ಗಾಂವಠಿ ಚಿಕಿತ್ಸೆ, ಹೋಮಿಯೋಪಥಿ ಚಿಕಿತ್ಸೆ ಪ್ರಮುಖವಾದವು. ಜಾನಪದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಅವರು 2005ರಲ್ಲಿ ಇಹಲೋಕ ತ್ಯಜಿಸಿದರು.