ಜಗಳೂರು ರಾಘವೇಂದ್ರರಾವ್ ಲಕ್ಷ್ಮಣರಾವ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜೆ.ಆರ್. ಲಕ್ಷ್ಮಣರಾವ್ ಎಂದೇ ಚಿರಪರಿಚಿತರು. 1921 ಜನವರಿ 21 ರಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು. ತಂದೆ ರಾಘವೇಂದ್ರ ರಾವ್ ಮತ್ತು ತಾಯಿ ನಾಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಜಗಳೂರಿನಲ್ಲಿ ನಡೆಸಿದ ಅವರು ಪ್ರೌಢ ಶಾಲೆಯ ಅಭ್ಯಾಸ ದಾವಣಗೆರೆಯಲ್ಲಿ ಪೂರ್ಣಗೊಳಿಸಿದರು. ಈಗ ಯುವರಾಜ ಕಾಲೇಜು ಎಂದು ಕರೆಯಲಾಗುವ ’ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಕಾಲೇಜ್’ ಅಧ್ಯಯನ ಮುಂದುವರೆಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ರಸಾಯನ ಶಾಸ್ತ್ರದಲ್ಲಿ ಎಮ್ಮೆಸ್ಸಿ ಪದವಿ ಪಡೆದರು. ತುಮಕೂರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯಾರಂಭ ಮಾಡಿದ ಅವರು ಬೆಂಗಳೂರಿನ ಸೇಂಟ್ರಲ್ ಕಾಲೇಜ್, ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜ್, ಮೈಸೂರು ಮಹಾರಾಣಿ ಕಾಲೇಜ್ ಹಾಗೂ ಯುವರಾಜ ಕಾಲೇಜುಗಳಲ್ಲಿ ಉಪನ್ಯಾಸಕ- ಪ್ರಾಧ್ಯಾಪಕರಾಗಿದ್ದರು.
ರಾಷ್ಟ್ರಕವಿ ಕುವೆಂಪು ರವರ ಪ್ರಭಾವ, ಪ್ರೊ.ಜಿ.ಪಿ.ರಾಜರತ್ನಂ ಪ್ರೇರಣೆಯಿಂದ ಸಾಹಿತ್ಯ ಕ್ಷೇತ್ರದತ್ತ ಮುಖ ಮಾಡಿದ ಅವರಿಗೆ ತತ್ವಶಾಸ್ತ್ರ,ಇಂಗ್ಲಿಷ್,ಕನ್ನಡ, ವೈಜ್ಞಾನಿಕ ಆತ್ಮಕಥೆಗಳಲ್ಲಿ ವಿಶೇಷ ಆಸಕ್ತಿ. ಆಹಾರ -(1944 ರಲ್ಲಿ ಪ್ರಕಟಿತ ಮೊದಲ ಪುಸ್ತಕ), ಪರಮಾಣು ಚರಿತ್ರೆ, ಗೆಲಿಲಿಯೋ, ವಿಜ್ಞಾನ ವಿಚಾರ, ಲೂಯಿ ಪ್ಯಾಶ್ಚರ್, ಚಕ್ರ, ವಿಜ್ಞಾನಿಗಳೊಡನೆ ರಸನಿಮಿಷಗಳು ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಅವರಿಗೆ ಮೂಡಬಿದರೆಯ ಡಾ. ಶಿವರಾಮ ಕಾರಂತ ಪ್ರತಿಷ್ಠಾನ್ ಪ್ರಶಸ್ತಿ (1977), ಕೇಂದ್ರ ಸರ್ಕಾರದ ನ್ಯಾಷನ ಕೌನ್ಸಿಲ್ ಆಫ್ ಫಾರ್ ಸೈನ್ಸ್ ಕಮ್ಯುನಿಕೇಷನ್ ನ ನ್ಯಾಷನಲ್ ಅವಾರ್ಡ್ ಫ಼ಾರ್ ಕಮ್ಯುನಿಕೇಶನ್ ಇನ್ ಸೈನ್ಸ್ (1992), ರಾಜ್ಯೋತ್ಸವ ಪ್ರಶಸ್ತಿ (2006), ಎನ್. ಸಿ. ಇ. ಆರ್. ಟಿ. ಪ್ರಶಸ್ತಿ ಸಂದಿವೆ.
ರಾವ್ ಅವರು 2017ರ ಡಿಸೆಂಬರ್ 29ರಂದು ಮೈಸೂರಿನಲ್ಲಿ ನಿಧನರಾದರು.