ಬರಹಗಾರ ಗುರುಮೂರ್ತಿ ಪೆಂಡಕೂರು ಅವರು ಜನಿಸಿದ್ದು 1938 ಜೂನ್ 9ರಂದು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದ ಇವರು ಪ್ರವೃತ್ತಿಯಲ್ಲಿ ಬರಹಗಾರರು. ಸಾಹಿತ್ಯ ಪ್ರಿಯರಾಗಿದ್ದ ಇವರ ಹುಟ್ಟೂರು ಬಳ್ಳಾರಿ ಜಿಲ್ಲೆ ದೇವರಕೆರೆ. ತಾಯಿ ರಾಮಕ್ಕ, ತಂದೆ ವಿರೂಪಣ್ಣ. ಬಳ್ಳಾರಿಯಲ್ಲಿ ಪ್ರೌಢಶಾಲೆ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರವಾಸಿ ಪ್ರಿಯರಾಗಿರುವ ಇವರು ವಿಶ್ವದ ಹಲವಾರು ದೇಶಗಳನ್ನು ಸುತ್ತಿದ್ದಾರೆ.
ಗುರುಮೂರ್ತಿ ಅವರ ಪ್ರಮುಖ ಕೃತಿಗಳೆಂದರೆ ಬಹುರೂಪಿ ವಸುಂಧರಾ, ಆಂಧ್ರ ಪ್ರಪಂಚ, ಅಮರನಾಥ ಪ್ರವಾಸ, ಥಾಯ್‌ಲ್ಯಾಂಡ್-ಇಂಡೋನೇಷಿಯಾ ತಿರುಗಾಟ, ಓ ! ಕೆನಡಾ, ಅವಕಾಶಗಳ ಅಮರಾವತಿ ಅಮೆರಿಕಾ (ಪ್ರವಾಸ ಸಾಹಿತ್ಯ), ಕಂಠಿ ಸರ, ಪಂಪಾತುಂತುರು, ಜಾನಪದ ಸಂಚಯ, ಮುತ್ತು ಹವಳ, ಹೆಜ್ಜೆಗಳು(ಸಂಪಾದಿತ), ವಿನಾಯಕರ ಕಾವ್ಯ ವಿಮರ್ಶೆ. ವಚನ ಸಾಹಿತ್ಯ-ನೂರಾರು ಕಂಬದ ಮಂಟಪ ಮುಂತಾದವು. ಇವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ರನ್ನ ಪ್ರಶಸ್ತಿ, ಗೋರೂರು ಸಾಹಿತ್ಯ ಪ್ರಶಸ್ತಿ, ಭಾರ್ಗವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.